ನವದೆಹಲಿ
ಪ್ರತಿ ಜಿಲ್ಲೆಯಲ್ಲೂ ಕನಿಷ್ಠ ಒಂದು ರಕ್ತ ನಿಧಿ ಸ್ಥಾಪಿಸಬೇಕೆಂದು ರಾಜ್ಯ ಸರ್ಕಾರಗಳಿಗೆ ಕೇಂದ್ರ ಆದೇಶಿಸಿದೆ.ಸಾರ್ವಜನಿಕರ ಆರೋಗ್ಯವು ರಾಜ್ಯದ ವಿಷಯವಾಗಿರುವುದರಿಂದ, ಅವರ ಅಗತ್ಯಕ್ಕೆ ಅನುಗುಣವಾಗಿ ರಕ್ತ ನಿಧಿ ಸ್ಥಾಪಿಸುವುದು ಹಾಗೂ ಅದನ್ನು ಖಚಿತಪಡಿಸಿಕೊಳ್ಳುವುದು ರಾಜ್ಯ ಸರ್ಕಾರದ ಪ್ರಾಥಮಿಕ ಜವಾಬ್ದಾರಿಯಾಗಿದೆ ಎಂದು ಕೇಂದ್ರದ ಅಧಿಕೃತ ಮೂಲಗಳು ತಿಳಿಸಿವೆ.
ಆದಾಗ್ಯೂ, ರಾಷ್ಟ್ರೀಯ ಆರೋಗ್ಯ ಮಿಷನ್ ಮೂಲಕ ರಾಜ್ಯಗಳು ಸಲ್ಲಿಸಿದ ಪ್ರಸ್ತಾವನೆಗಳ ಆಧಾರದ ಮೇಲೆ ಅಸ್ತಿತ್ವದಲ್ಲಿರುವ ರಕ್ತ ನಿಧಿಗಳನ್ನು ಬಲಪಡಿಸುವುದು, ಹೊಸ ರಕ್ತ ನಿಧಿಗಳನ್ನು ಸ್ಥಾಪಿಸುವುದು ಸೇರಿದಂತೆ ತಮ್ಮ ಆರೋಗ್ಯ ವ್ಯವಸ್ಥೆಯನ್ನು ಬಲಪಡಿಸಿಕೊಳ್ಳಲು ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಿಗೆ ಬೆಂಬಲ ನೀಡಲಾಗುತ್ತದೆ. ಇದು ಜಾರ್ಖಂಡ್ ನ ಸರಾಯ್ ಕೇಲಾ, ಖುಂಟಿ, ಜಮ್ತರ, ಗೊಡ್ಡ, ರಾಮ್ ಘರ್ ಮತ್ತು ಬೊಕಾರೋ ಜಿಲ್ಲೆಗಳನ್ನು ಒಳಗೊಂಡಿದೆ.
ಈಗಾಗಲೇ ಜಾರ್ಖಂಡ್ ನಲ್ಲಿ, ಸಿಎಚ್ ಸಿ ಮತ್ತು ರೆಫರಲ್ ಆಸ್ಪತ್ರೆಯಲ್ಲಿ ದೂರದ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ರಕ್ತ ಸಂಗ್ರಹಣಾ ಘಟಕಗಳು ಕಾರ್ಯ ನಿರ್ವಹಿಸುತ್ತಿವೆ. ಪ್ರತಿ ರಾಜ್ಯಗಳಲ್ಲಿನ ರಾಷ್ಟ್ರೀಯ ರಕ್ತ ವರ್ಗಾವಣೆ ಮಂಡಳಿ ಮತ್ತು ರಕ್ತ ವರ್ಗಾವಣಾ ಮಂಡಳಿಗಳು, ಸರ್ಕಾರಿ, ಸಾರ್ವಜನಿಕ ವಲಯದ ಸ್ವಯಂ ಸೇವಾ ಸಂಸ್ಥೆಗಳು ಮತ್ತು ಖಾಸಗಿ ವಲಯದ ನಡುವೆ ಸಮನ್ವಯ ಸಾಧಿಸುವ ಕಾರ್ಯ ನಿರ್ವಹಿಸುತ್ತಿವೆ ಎಂದು ತಿಳಿಸಿದೆ.
ರಾಷ್ಟ್ರೀಯ ರಕ್ತ ವರ್ಗಾವಣೆ ಮಂಡಳಿ ಹಾಗೂ ರಾಜ್ಯ ರಕ್ತ ವರ್ಗಾವಣೆ ಮಂಡಳಿಗಳು ಸಾರ್ವಜನಿಕ ವಲಯದ ಸ್ವಯಂ ಸೇವಾ ಸಂಸ್ಥೆಗಳ ಸಹಯೋಗದೊಂದಿಗೆ, ವೃತ್ತಿಪರ ಸಂಘಟನೆಗಳು ಮತ್ತು ಖಾಸಗಿ ಸಂಸ್ಥೆಗಳು ಇತ್ಯಾದಿ ಸ್ವಯಂಪ್ರೇರಿತ ರಕ್ತದಾನಕ್ಕಾಗಿ ಶಿಫಾರಸ್ಸು ಮಾಡುತ್ತವೆ.
ರಕ್ತದ ಮಾರಾಟ ಮತ್ತು ಖರೀದಿಯನ್ನು ರಾಷ್ಟ್ರೀಯ ರಕ್ತ ನೀತಿಯು ನಿಷೇಧಿಸುತ್ತದೆ. ರಕ್ತವು ವ್ಯಕ್ತಿಗಳು ಸ್ವಯಂ ಪ್ರೇರಣೆಯಿಂದ ದಾನ ಮಾಡಿದ ಉಪಯುಕ್ತ ವಸ್ತುವಾಗಿದೆ. ರಕ್ತ ಮತ್ತು ರಕ್ತದ ಘಟಕಗಳ ಸಂಗ್ರಹಣೆ, ಸಂಸ್ಕರಣೆ, ಸಂಗ್ರಹಣೆ ಮತ್ತು ಸಾಗಣೆಗೆ ಪರವಾನಗಿ ಪಡೆದ ರಕ್ತ ನಿಧಿಗಳಿಗೆ ಮಾತ್ರ ಅನುಮತಿ ಇದೆ. ಪರವಾನಗಿ ಪಡೆದ ರಕ್ತ ನಿಧಿಗಳಲ್ಲಿ, ರಕ್ತ ಮತ್ತು ರಕ್ತ ಘಟಕಗಳ ಸುರಕ್ಷತೆ ಮತ್ತು ಗುಣಮಟ್ಟವನ್ನು ಆಹಾರ ಮತ್ತು ಔಷಧ ಪ್ರಾಧಿಕಾರವು ರಾಜ್ಯ ಹಾಗೂ ರಾಷ್ಟ್ರ ಮಟ್ಟದಲ್ಲಿ ಪರವಾನಗಿ ಮತ್ತು ನಿಯಮಿತ ತಪಾಸಣೆ ಮೂಲಕ ಖಚಿತಪಡಿಸುತ್ತದೆ.
ಪರವಾನಗಿ ಪಡೆದ ಎಲ್ಲಾ ರಕ್ತ ನಿಧಿಗಳಿಗೆ ರಕ್ತ ಮತ್ತು ರಕ್ತದ ಘಟಕಗಳಿಗೆ ಶುಲ್ಕವನ್ನು ನಿಗದಿಪಡಿಸುವ ಮಾರ್ಗಸೂಚಿ ಅನುಸರಿಸಲು ಸೂಚಿಸಲಾಗಿದ್ದು, ಹೆಚ್ಚುವರಿ ಶುಲ್ಕವನ್ನು ವಿಧಿಸಬಾರದು. ರಕ್ತ ನಿಧಿಯ ಆವರಣದಲ್ಲಿ ಸಾರ್ವಜನಿಕರಿಗೆ ತಿಳಿಯುವಂತೆ ರಕ್ತದ ಶುಲ್ಕವನ್ನು ಪ್ರದರ್ಶಿಸಲು ನಿರ್ದೇಶಿಸಲಾಗಿದೆ.
ಅನುಮೋದಿತ ಸಂಸ್ಕರಣಾ ಶುಲ್ಕಗಳ ಪರವಾನಗಿ ಪಡೆದ ರಕ್ತ ನಿಧಿಗಳಿಂದ ಮಾತ್ರ ರಕ್ತವನ್ನು ಪಡೆಯಲು ಎಲ್ಲಾ ಆಸ್ಪತ್ರೆಗಳಿಗೆ ಸೂಚನೆ ನೀಡಲಾಗಿದೆ. ಒಂದು ವೇಳೆ ನಿಯಮ ಉಲ್ಲಂಘಿಸಿದ್ದಲ್ಲಿ ಕಠಿಣ ಶಿಕ್ಷೆ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಸಿದೆ.








