ನವದೆಹಲಿ:
ಬಹು ನಿರೀಕ್ಷಿತ ಚೆನ್ನೈ-ಅಂಡಮಾನ್ ಸಬ್ ಮರೈನ್ ಆಪ್ಟಿಕಲ್ ಫೈಬರ್ ಕನೆಕ್ಟಿವಿಟಿಗೆ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಇಂದು ಚಾಲನೆ ನೀಡಿದ್ದಾರೆ. 2018ರ ಡಿಸೆಂಬರ್ 30 ರಂದು ಯೋಜನೆಗೆ ಪ್ರಧಾನಮಂತ್ರಿ ನರೇಂದ್ರ ಮೋದಿಯವರೇ ಪೋರ್ಟ್ ಬ್ಲೈರ್ ನಲ್ಲಿ ಭೂಮಿಪೂಜೆ ನೆರವೇರಿಸಿದ್ದರು. ಇದರಂತೆ ಯೋಜನೆ ಇದೀಗ ಪೂರ್ಣಗೊಂಡ ಹಿನ್ನೆಲೆಯಲ್ಲಿ ವಿಡಿಯೋ ಕಾನ್ಫರೆನ್ಸ್ ಮೂಲಕ ಚಾಲನೆ ನೀಡಿದ್ದಾರೆ.
ವಿಡಿಯೋ ಕಾನ್ಫರೆನ್ಸ್ ಮೂಲಕ ಚಾಲನೆ ನೀಡಿದ ಬಳಿಕ ಮಾತನಾಡಿರುವ ಅವರು, ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳು ಅತ್ಯಂತ ಮಹತ್ವದ ಆಯಕಟ್ಟಿನ ಪ್ರದೇಶಗಳಾಗಿದ್ದು, ಅಲ್ಲಿಗೆ ಸಂಪರ್ಕ ಕಲ್ಪಿಸುವುದು ದೇಶದ ಪ್ರಮುಖ ಕರ್ತವ್ಯವಾಗಿದೆ. ನಿಗದಿತ ಅವಧಿಯಲ್ಲಿ 2,300 ಕಿ.ಮೀ. ಉದ್ದದ ಕೇಬಲ್ ಅನ್ನು ಸಮುದ್ರದಡಿಯಲ್ಲಿ ಅಳವಡಿಸುವ ಕಾರ್ಯವನ್ನು ಯಶಸ್ವಿಯಾಗಿ ಪೂರ್ಣಗೊಳಿಸಲಾಗಿದೆ. ಆಳ ಸಮುದ್ರ ಸಮೀಕ್ಷೆ, ಕೇಬಲ್ ಗುಣಮಟ್ಟ ಮತ್ತು ವಿಶೇಷ ನೌಕೆಗಳನ್ನು ಉಪಯೋಗಿ ಕೇಬಲ್ ಅಳವಡಿಸುವ ಕಷ್ಟಕರ ಕೆಲಸವನ್ನು ಮಾಡಲಾಗಿದೆ ಎಂದು ಹೇಳಿದ್ದಾರೆ.
ಹೈ ಇಂಪ್ಯಾಕ್ಟ್ ಪ್ರಾಜೆಕ್ಟ್ಗಳು ಅಂಡಮಾನ್ ಮತ್ತು ನಿಕೋಬಾರ್ನ 12 ದ್ವೀಪಗಳಿಗೆ ವಿಸ್ತರಣೆಯಾಗಲಿದ್ದು, ಅಲ್ಲಿ ಬಹುದೊಡ್ಡ ಸಮಸ್ಯೆಯಾಗಿದ್ದ ಮೊಬೈಲ್ ಮತ್ತು ಇಂಟರ್ನೆಟ್ ಸಂಪರ್ಕ ಸಮಸ್ಯೆಯನ್ನು ಇಂದು ನಿವಾರಣೆಗೊಂಡಿದೆ. ಇದರ ಹೊರತಾಗಿ ರಸ್ತೆ, ವಾಯು ಮತ್ತು ಜಲ ಸಾರಿಗೆ ಮೂಲಕ ಆ ದ್ವೀಪಗಳಿಗೆ ಸಂಪರ್ಕ ಕಲ್ಪಿಸುವ ಕಾರ್ಯವೂ ಶೀಘ್ರವೇ ಆರಂಭಗೊಳ್ಳಳಿದೆ.
ಈ ಆಪ್ಟಿಕಲ್ ಫೈಬರ್ ಕೇಬಲ್ ಪ್ರಾಜೆಕ್ಟ್ ಯೋಜನೆಯು ಬದುಕನ್ನು ಸರಳಗೊಳಿಸುವ ದೇಶದ ಬದ್ಧತೆಯ ಭಾಗವಾಗಿದೆ. ಅದು ಆನ್ಲೈನ್ ಕ್ಲಾಸ್ಗಳಿರಬಹುದು, ಟೂರಿಸಂ, ಬ್ಯಾಂಕಿಂಗ್, ಶಾಪಿಂಗ್ ಅಥವಾ ಟೆಲಿಮೆಡಿಸಿನ್ ಇರಬಹುದು ಇವೆಲ್ಲವೂ ಇನ್ನು ಅಂಡಮಾನ್ – ನಿಕೋಬಾರ್ನಲ್ಲಿರುವ ಸಾವಿರಾರು ಕುಟುಂಬಗಳಿಗೆ ಸುಲಭವಾಗಿ ಸಿಗಲಿದೆ. ಅಂಡಮಾನ್ಗೆ ಹೋಗುವ ಪ್ರವಾಸಿಗಳಿಗೂ ಈ ಸೌಲಭ್ಯ ಸಿಗಲಿದೆ. ನೆಟ್ ಕನೆಕ್ಟಿವಿಟಿ ಸಿಗುವ ಕಾರಣ ಇನ್ನು ಅಂಡಮಾನ್ ನಿಕೋಬಾರ್ ದ್ವೀಪಗಳು ಪ್ರವಾಸಿಗರ ನಂ. 1 ಪ್ರವಾಸಿ ಸ್ಥಳವಾಗಲಿದೆ ಎಂದು ತಿಳಿಸಿದ್ದಾರೆ.