ಕೊಲೆಯಾದವನೆ ಕೊಲೆಗಾರ…!!!!

ಭೋಪಾಲ್:
         ಕೆಲ ದಿನಗಳ ಹಿಂದೆ ಆರ್ ಎಸ್ ಎಸ್ ಕಾರ್ಯಕರ್ತನ ಹತ್ಯೆ ಪ್ರಕರಣಕ್ಕೆ ಈಗ ಬಹುದೊಡ್ಡ ಟ್ವಿಸ್ಟ್ ಸಿಕ್ಕಿದೆ, ಕೊಲೆಯಾದವನೆ  ಕೊಲೆಗಾರ ಎಂದು ಪೊಲೀಸರು ತಿಳಿಸಿದ್ದಾರೆ .
         ಮಧ್ಯ ಪ್ರದೇಶದಲ್ಲಿ ಭಾರಿ ಸುದ್ದಿಗೆ ಗ್ರಾಸವಾಗಿದ್ದ ಹಿಮ್ಮತ್ ಪಾಟೀದಾರ್​ ಹತ್ಯೆ ಪ್ರಕರಣವನ್ನು ಭೇದಿಸುವಲ್ಲಿ ಕೊನೆಗೂ ಪೊಲೀಸರು ಯಶಸ್ವಿಯಾಗಿದ್ದಾರೆ ಎಂದು ವರದಿಯಾಗಿದೆ. 
        ಪೊಲೀಸರು ತನಿಖೆ ಆರಂಭಿಸಿದ ಬಳಿಕ ಕೊಲೆಯಾಗಿದ್ದಾನೆ ಎಂದು ತಿಳಿದಿದ್ದ ಮಧ್ಯಪ್ರದೇಶದ ರತ್ಲಮ್ ಜಿಲ್ಲೆಯ 36 ವರ್ಷದ ಹಿಮ್ಮತ್ ಪಾಟಿದಾರ್ ಜೀವಂತವಾಗಿರುವ ವಿಷಯ ಬೆಳಕಿಗೆ ಬಂದಿದೆ. ವಾಸ್ತವವಾಗಿ ನಡೆದಿರುವುದೇ ಬೇರೆ ಅಲ್ಲಿ ಕೊಲೆಯಾದವನು ಬೇರೆ ಎಂದು ಪೊಲೀಸರು ತಿಳಿಸಿದ್ದಾರೆ .  
 
        ಇದು ಇನ್ಷೂರೆನ್ಸ್ ಹಣಕ್ಕಾಗಿ ಹಿಮ್ಮತ್ ಪಾಟೀದಾರ್ ಸೃಷ್ಟಿಸಿದ ಮಹಾ ನಾಟಕ ಎಂಬುದು ಬೆಳಕಿಗೆ ಬಂದಿದೆ. ತನ್ನ ತೋಟದಲ್ಲಿ ಕೆಲಸ ಮಾಡುತ್ತಿದ್ದ ಮದನ್ ಮಾಳವೀಯ(32 ವರ್ಷ) ಎಂಬಾತನನ್ನು ಹತ್ಯೆ ಮಾಡಿ, ಆ ಶವ ತನ್ನದೆಂದು ಹಿಮ್ಮತ್ ಪಾಟಿದಾರ್ ಬಿಂಬಿಸಿದ್ದನೆಂದು ಪೊಲೀಸರು ಹೇಳಿದ್ದಾರೆ. ತನಿಖೆ ವೇಳೆ ಶವದ ಡಿಎನ್​ಎ ಪರೀಕ್ಷೆ ನಡೆಸಿದ್ದ ಪೊಲೀಸರಿಗೆ ಈ ಮಾಹಿತಿ ದೊರೆತಿದ್ದು, ಪ್ರಸ್ತುತ ಪರಾರಿಯಾಗಿರುವ ಹಿಮ್ಮತ್ ಪಾಟೀದಾರ್ ನನ್ನು ಪೊಲೀಸರು ಸದ್ಯ ಹುಡುಕುತ್ತಿದ್ದಾರೆ.
ಏನಿದು ಪ್ರಕರಣ?
        ಜನವರಿ 23ರಂದು ರತ್ಲಮ್ ಜಿಲ್ಲೆಯ ಕಾಮೆದ್ ಎಂಬ ಗ್ರಾಮದ ಹೊಲದಲ್ಲಿ ಶವವೊಂದು ಪತ್ತೆಯಾಗಿತ್ತು. ಓರ್ವ ವ್ಯಕ್ತಿಯನ್ನು ಕತ್ತು ಸೀಳಿ ಭೀಕರವಾಗಿ ಕೊಲೆ ಮಾಡಲಾಗಿತ್ತು.ಅಲ್ಲದೆ ಮುಖವನ್ನು ಗುರುತು ಸಿಗದಂತೆ ಸುಟ್ಟುಹಾಕಲಾಗಿತ್ತು. ಆದರೆ, ದೇಹದ ಆಕಾರ, ಬಟ್ಟೆ ಎಲ್ಲವೂ ಹಿಮ್ಮತ್ ಪಾಟೀದಾರ್ ಗೆ ಹೋಲಿಕೆಯಾಗುತ್ತಿತ್ತು. ಹಿಮ್ಮತ್  ಪಾಟೀದಾರ್ ಅವರ ತಂದೆಯು ತಮ್ಮ ಮಗ ಕೊಲೆಯಾಗಿದ್ಧಾನೆಂದು ಪೊಲೀಸರಿಗೆ ದೂರು ಕೊಡುತ್ತಾರೆ.
        ಆದರೆ, ಕೆಲವೇ ದಿನಗಳಲ್ಲಿ ಪೊಲೀಸರಿಗೆ ಈ ಪ್ರಕರಣದಲ್ಲಿ ಸಂಶಯಗಳು ಕಾಣತೊಡಗುತ್ತವೆ. ಶವದ ಸಮೀಪದಲ್ಲಿ ದೊರೆತಿದ್ದ ಡೈರಿಯೊಂದು ಹಲವು ಸುಳಿವನ್ನು ಬಿಟ್ಟುಕೊಡುತ್ತದೆ. ಆ ಡೈರಿಯಲ್ಲಿ ಪಾಟೀದಾರ್ ನ ಇನ್ಷೂರೆನ್ಸ್ ಪಾಲಿಸಿ ನಂಬರ್, ಬ್ಯಾಂಕ್ ನ ಫಿಕ್ಸೆಡ್ ಡೆಪಾಸಿಟ್, ಪಿನ್ ನಂಬರ್ ಇತ್ಯಾದಿ ವಿವರಗಳಿರುತ್ತವೆ. ಅಷ್ಟೇ ಅಲ್ಲದೆ, ಶವದಲ್ಲಿದ್ದ ಮೊಬೈಲ್ ಫೋನ್ ನಲ್ಲಿ ದೂರವಾಣಿ ಕರೆಯ ವಿವರವನ್ನೆಲ್ಲಾ ಅಳಿಸಿಹಾಕಲಾಗಿರುತ್ತದೆ. ಇದು ಪೊಲೀಸರಿಗೆ ಸಂಶಯದ ವಾಸನೆ ಬಿತ್ತಿ, ಶವದ ಡಿಎನ್​ಎ ಪರೀಕ್ಷೆಗೆ ದಾರಿ ಮಾಡಿಕೊಡುತ್ತದೆ.
          ಶವದ ಡಿಎನ್​ಎಗೂ ಹಿಮ್ಮತ್ ಪಾಟೀದಾರ್​ನ ತಂದೆಯ ಡಿಎನ್​ಎಗೂ ಹೊಂದಿಕೆಯಾಗುವುದಿಲ್ಲ. ಆಗ ಪೊಲೀಸರಿಗೆ ಪ್ರಕರಣದಲ್ಲಿ ಹೊಸ ಟ್ವಿಸ್ಟ್ ಸಿಕ್ಕಂತಾಗುತ್ತದೆ. ಈ ಹತ್ಯೆ ಘಟನೆ ನಡೆಯುವ ಒಂದು ದಿನ ಮೊದಲಷ್ಟೇ ಪಾಟೀದಾರ್ ನ ತೋಟದಲ್ಲಿ ಕೆಲಸ ಮಾಡುವ ಕೂಲಿ ಮದನ್ ಮಾಳವೀಯ ಎಂಬಾತ ನಾಪತ್ತೆಯಾಗಿರುತ್ತಾನೆ. ಈ ಕೂಲಿಕಾರನ ಸಂಬಂಧಿಕರ ಡಿಎನ್​ಎ ಜೊತೆ ತಾಳೆ ಮಾಡುತ್ತಾರೆ. ಆಗ ಎರಡೂ ಡಿಎನ್​ಎ ಹೊಂದಿಕೆಯಾಗುವುದರೊಂದಿಗೆ ಪೊಲೀಸರಿಗೆ ಸ್ಪಷ್ಟ ಸುಳಿವು ಸಿಕ್ಕುತ್ತದೆ. ನಂತರ, ಮದನ್​ ಹೆಂಡತಿ ಕೂಡ ಶವದ ಗುರುತು ಹಿಡಿದು ಅದು ತನ್ನ ಗಂಡನದೇ ಎಂದು ಪತ್ತೆ ಹಚ್ಚುತ್ತಾರೆ.
ಇನ್ಷೂರೆನ್ಸ್​ಗಾಗಿ ನಡೆದ ಕೊಲೆ
 
         ತೀವ್ರ ಆರ್ಥಿಕ ಸಂಕಷ್ಟದಲ್ಲಿದ್ದ ಹಿಮ್ಮತ್ ಪಾಟೀದಾರ್, ಈ ಸಮಸ್ಯೆಯಿಂದ ಹೊರಬರಲು ಮಹಾ ಷಡ್ಯಂತ್ರ ರಚಿಸುತ್ತಾನೆ. 20 ಲಕ್ಷ ಮೊತ್ತದ ಇನ್ಷೂರೆನ್ಸ್ ಪಡೆಯಲು ತನ್ನ ಸಾವಿನ ನಾಟಕ ಆಡಿದ್ದಾನೆಂಬುದು ಪೊಲೀಸರ ಶಂಕೆ. ಅದಕ್ಕಾಗಿ ತನ್ನ ತೋಟದಲ್ಲಿ ಕೆಲಸ ಮಾಡುವ ಮದನ್ ನನ್ನು ಹತ್ಯೆ ಮಾಡಿ, ಅದು ತನ್ನದೇ ಶವ ಎಂದು ಬಿಂಬಿಸುವ ಪ್ರಯತ್ನ ಮಾಡುತ್ತಾನೆ. ತನ್ನ ಕೆಲ ವಸ್ತುಗಳನ್ನ ಶವದ ಬಳಿ ಬೇಕಂತಲೇ ಬಿಟ್ಟು ಹೋಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. 
 
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ