ನವಣೆ ಬೆಳೆದ ರೈತನ ಬವಣೆ !

ಬ್ಯಾಲ್ಯ  :

     ಇತ್ತೀಚಿನ ದಿನಗಳಲ್ಲಿ ಹೆಚ್ಚಾದ ಸಕ್ಕರೆ ಕಾಯಿಲೆಯಂತಹ ನೂತನ ಕಾಯಿಲೆಗಳಿಂದ ಜನ ಬಳಲತೊಡಗಿದಾಗ ಔಷಧೋಪಚಾರದ ಜೊತೆಗೆ ಆಹಾರ ಧಾನ್ಯಗಳನ್ನು ಬಳಸುವ ವಿಧಾನವೂ ಬದಲಾಗುತ್ತಾ ಹೋಯಿತು. ಅದರಲ್ಲೂ ಸಿರಿಧಾನ್ಯಗಳ ಹೆಸರುಗಳು ಮುಂಚೂಣಿಗೆ ಬಂದವು.

      ಪತ್ರಿಕೆಗಳಲ್ಲಿ, ವಾಹಿನಿಗಳಲ್ಲಿ, ಸಾಮಾಜಿಕ ಜಾಲ ತಾಣಗಳಲ್ಲಿ ‘ಸಿರಿ ಧಾನ್ಯ’ ಬಳಕೆ ಮತ್ತು ಪ್ರಯೋಜನಗಳ ಕುರಿತು ಹೆಚ್ಚು ಹೆಚ್ಚು ಕಾರ್ಯಕ್ರಮಗಳ ಮೂಲಕ ಜನರಲ್ಲಿ ಜಾಗೃತಿ ಮೂಡಿಸುವ ಪ್ರಯತ್ನಗಳಾದವು. ಅದರಲ್ಲೂ ಸಿರಿಧಾನ್ಯಗಳ ಸಂತ ಡಾ.ಖಾದರ್ ರವರಂತೂ ಹೆಚ್ಚು ಜನರನ್ನು ತಲುಪಿದರು. ಮಧುಗಿರಿ ತಾಲ್ಲೂಕು ಪುರವರ ಹೋಬಳಿ ವ್ಯಾಪ್ತಿಯ ಬಟ್ಟಗೆರೆ ಗ್ರಾಮದ ಯುವಕ ರಾಮಾಂಜನೇಯ, ಬೆಂಗಳೂರಿನ ಖಾಸಗಿ ಉದ್ಯೋಗದಲ್ಲಿದ್ದು, ಅಲ್ಲಿ ಕೆ.ಜಿ ಒಂದಕ್ಕೆ ನೂರಾ ಮುವ್ವತ್ತು ರೂಪಾಯಿ ಕೊಟ್ಟು ನವಣೆ ಬಳಸುವುದನ್ನು ಅಭ್ಯಾಸ ಮಾಡಿಕೊಂಡಿದ್ದನು.

     “ಲಾಕ್ ಡೌನ್” ನಿಂದಾಗಿ ಮರಳಿ ಊರಿಗೆ ಬಂದವನು, ತನ್ನ ಸ್ವಂತಕ್ಕೂ ಆಗುತ್ತದೆ ಮತ್ತು ಎರಡು ಕಾಸು ಹೆಚ್ಚಾಗಿ ನೋಡಬಹುದೆಂದು, ಕಳೆದ ಮುಂಗಾರಿನಲ್ಲಿ ಅರ್ಧ ಎಕರೆಯಲ್ಲಿ ನವಣೆ ಚೆಲ್ಲಿದನು. ಹೆಚ್ಚೇನೂ ಖರ್ಚಿಲ್ಲದೆ ಬೆಳೆ ಕೈ ತುಂಬಾ ಬಂದು ಸುಮಾರು ಐದು ಕ್ವಿಂಟಾಲ್ ನವಣೆ ಕೈಗೆ ಬಂತು. ಸ್ಥಳೀಯರು ಯಾರೂ ಚಿಲ್ಲರೆ ಲೆಕ್ಕದಲ್ಲೂ ಕೊಳ್ಳಲು ಬರಲಿಲ್ಲ. ಸುತ್ತ ಮುತ್ತಲ ಮಂಡಿಗಳವರು ಕ್ವಿಂಟಾಲ್ ಸಾವಿರದ ಎಂಟು ನೂರು ರೂಪಾಯಿಗಳಿಗೆ ಕೇಳಲಾರಂಭಿಸಿದರು. ಆಗ ರೈತ ರಾಮಾಂಜನೇಯನಿಗೆ ದಿಕ್ಕು ತೋಚದಂತಾಗಿ ಈಗಲೂ ಮನೆಯಲ್ಲೇ ಇಟ್ಟುಕೊಂಡಿದ್ದಾನೆ ಮತ್ತು ಬೆಳೆಯುವುದೇ ಬೇಡ ಎನ್ನುತ್ತಾನೆ.

     ಕಡಿಮೆ ಖರ್ಚಿನಲ್ಲಿ ಕೈಗೆ ಸಿಗುವ ಬೆಳೆಯೇನೋ ಸರಿ, ಸಂಸ್ಕರಣೆಯ ಜಾಗಗಳು ಮತ್ತು ಮಾರುಕಟ್ಟೆ ವಿವರಗಳ ಸೂಕ್ತ ಮಾಹಿತಿ ಸಿಕ್ಕರೆ ಬೆಳೆಯಬಹುದು, ನಾವೇ ಸಂಸ್ಕರಿಸಿ ಮಾಲ್‍ಗಳಿಗಿಂತ ಹತ್ತು ರೂಪಾಯಿ ಕಡಿಮೆ ಇಟ್ಟು ನೂರಾ ಇಪ್ಪತ್ತು ಎಂದರೂ ಸ್ಥಳೀಯ ಜನ ಯಾರೂ ಕೊಳ್ಳುವುದಿಲ್ಲ. ಸಂಸ್ಕರಣೆ ಮತ್ತು ಮಾರುಕಟ್ಟೆಯ ವ್ಯವಸ್ಥೆಯಾದರೆ ರೋಗಮುಕ್ತ ಸಮಾಜ ನಿರ್ಮಾಣಕ್ಕೆ ರೈತರ ಕೊಡುಗೆಯೂ ಅಪಾರವಾಗುತ್ತದೆ ಎನ್ನುತ್ತಾರೆ ರೈತ ರಾಮಾಂಜನೇಯ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap