ನೆಹರು ಯುವ ಕೇಂದ್ರದಿಂದ ಕನ್ನಡ ಕಡೆಗಣನೆ…!

ತುಮಕೂರು :


  ಇಂಗ್ಲೀಷ್-ಹಿಂದಿಯಲ್ಲಿ ಮಾತ್ರ ಭಾಷಣ ಸ್ಪರ್ಧೆ | ಮಾತಾಡ್, ಮಾತಾಡ್ ಕನ್ನಡ ಅಭಿಯಾನಕ್ಕೆ ಹಿನ್ನಡೆ

ಕೇಂದ್ರ ಸರಕಾರಿ ಸ್ವಾಮ್ಯದ ಬ್ಯಾಂಕುಗಳು, ಸಂಸ್ಥೆಗಳು, ಇಲಾಖೆಗಳಲ್ಲಿ ಕನ್ನಡ ವಿರೋಧಿ ಧೋರಣೆ ಅನುಸರಿಸಲಾಗುತ್ತಿದೆ ಎಂದು ಈವರೆಗೆ ದೂಷಿಸಲಾಗುತ್ತಿತ್ತು. ಈ ದೂಷಣೆಗೆ ಪ್ರಸ್ತುತ ನೆಹರು ಯುವ ಕೇಂದ್ರವೂ ಗುರಿಯಾಗಿದ್ದು, ಯುವ ಕೇಂದ್ರದಿಂದ ಕನ್ನಡ ಭಾಷೆ ಕಡೆಗಣನೆಗೆ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ.


ಕೇಂದ್ರ ಸರಕಾರದ ಯುವಜನ, ಕ್ರೀಡಾ ಸಚಿವಾಲಯವು ದೇಶಭಕ್ತಿ ಮತ್ತು ರಾಷ್ಟ್ರ ನಿರ್ಮಾಣದಲ್ಲಿ ಯುವಜನರು ಪಾತ್ರ ಕುರಿತು ಜಿಲ್ಲಾ, ರಾಜ್ಯ ಹಾಗೂ ರಾಷ್ಟ್ರಮಟ್ಟದಲ್ಲಿ ಭಾಷಣ ಸ್ಪರ್ಧೆಯನ್ನು ಆಯೋಜಿಸಿದ್ದು, ಸ್ಪರ್ಧೆ ಸಂಘಟಿಸುವ ಜವಾಬ್ದಾರಿಯನ್ನು ಇಲಾಖೆ ಅಧೀನದ ನೆಹರು ಯುವ ಕೇಂದ್ರಕ್ಕೆ ವಹಿಸಲಾಗಿದೆ. ಈ ಸಂಬಂಧ ಅ.30ರಂದೇ ತುಮಕೂರು ಜಿಲ್ಲೆಯ ನೆಹರು ಯುವ ಕೇಂದ್ರ ಪತ್ರಿಕಾ ಪ್ರಕಟಣೆ ಹೊರಡಿಸಿ ಹಿಂದಿ ಅಥವಾ ಇಂಗ್ಲೀಷ್ ಭಾಷೆಯಲ್ಲಿ ಮಾತ್ರ ಭಾಷಣ ಸ್ಪರ್ಧೆ ನಡೆಯಲಿದೆ. 18 ರಿಂದ 29 ವರ್ಷದ ವಯೋಮಾನದವರು ಸ್ಪರ್ಧೆಗೆ ಅರ್ಹರಾಗಿದ್ದು, ನೋಂದಾಯಿಸಿಕೊಳ್ಳಲು ನ.18 ಕಡೆ ದಿನ ಎಂದು ಪ್ರಚುರಪಡಿಸಿದೆ.

ಆದರೆ ರಾಜ್ಯದಭಾಷೆಯಾದ ಕನ್ನಡವನ್ನು ಕಡೆಗಣಿಸಿ ಕೇವಲ ಇಂಗ್ಲೀಷ್, ಹಿಂದಿಗೆ ಮಾತ್ರ ಅವಕಾಶ ಕೊಟ್ಟಿರುವುದಕ್ಕೆ ಕನ್ನಡಿಗರಿಂದ ವ್ಯಾಪಕ ಆಕ್ರೋಶ ವ್ಯಕ್ತವಾಗಿದ್ದು, ನೆಹರು ಯುವಕೇಂದ್ರದಿಂದ ಕನ್ನಡ ಕಡೆಗಣಿಸಲಾಗುತ್ತಿದೆ ಎಂಬ ಟೀಕೆಗಳು ಜಾಲತಾಣಗಳು, ಸಾಹಿತ್ಯಿಕ, ಕನ್ನಡ ಪರ ಹೋರಾಟಗಾರರ ವಲಯದಿಂದ ವ್ಯಕ್ತವಾಗಿವೆ.

ನಮ್ಮ ಸಂವಿಧಾನದ 8ನೇ ಷೆಡ್ಯೂಲ್‍ನಲ್ಲಿ ಕನ್ನಡ, ಹಿಂದಿ, ಮಠಾಠಿ, ತೆಲುಗು ತಮಿಳು, ಪಂಜಾಬಿ, ಕಾಶ್ಮೀರಿ, ಉರ್ದು, ಮಣಿಪುರಿ, ಗುಜರಾತಿ ಸೇರಿ ದೇಶದ 22 ಪ್ರಾದೇಶಿಕ ಭಾಷೆಗಳಿಗೆ ಅಧಿಕೃತ ಭಾಷಾ ಸ್ಥಾನಮಾನ ಕೊಟ್ಟಿದ್ದು, ರಾಷ್ಟ್ರಭಾಷೆಯಾಗಿ ಯಾವುದು ಘೋಷಿತವಾಗಿಲ್ಲ. ಹಿಂದಿ ಸೇರಿದಂತೆ ಎಲ್ಲಾ ಭಾಷೆಯೂ ಸಮಾನವೇ. ವಸ್ತುಸ್ಥಿತಿ ಹೀಗಿದ್ದರೂ ನೆಹರು ಯುವ ಕೇಂದ್ರ ಜಿಲ್ಲಾ, ರಾಜ್ಯ, ರಾಷ್ಟ್ರ ಮೂರು ಹಂತಗಳಲ್ಲಿ ಆಯೋಜಿಸಿರುವ ಸ್ಪರ್ಧೆಯಲ್ಲಿ ಇಂಗ್ಲೀಷ್ ಮತ್ತು ಹಿಂದಿಗೆ ಮಾತ್ರ ಅವಕಾಶ ಕಲ್ಪಿಸಿರುವುದು ಸಂವಿಧಾನ ವಿರೋಧಿ ಕ್ರಮವಲ್ಲವೇ? ಪರೋಕ್ಷವಾಗಿ ಹಿಂದಿ ಹೇರಿಕೆ ಹುನ್ನಾರ ಇದರಲ್ಲಿ ಅಡಗಿದೆ ಎಂಬಆರೋಪಕ್ಕೀಡುಮಾಡಿದೆ.

ಸ್ಪರ್ಧೆ ಬಹಿಷ್ಕರಿಸಿ ಕನ್ನಡ ವಿರೋಧಿ ಧೋರಣೆ ಖಂಡಿಸಿ : ಇಂಗ್ಲೀಷ್ ನಮ್ಮ ಸಂವಿಧಾನದ ಅಧಿಕೃತ ಭಾಷಾ ಪಟ್ಟಿಯಲ್ಲೇ ಇಲ್ಲ. ರಾಷ್ಟ್ರಮಟ್ಟದ ಸ್ಪರ್ಧೆಯಲ್ಲಿ ಬೇಕಾದರೆ ಹಿಂದಿ, ಇಂಗ್ಲೀಷ್‍ನಲ್ಲಿ ನಡೆಸಲಿ, ರಾಜ್ಯ ಮತ್ತು ಜಿಲ್ಲಾಮಟ್ಟದಲ್ಲಿ ಆಯಾ ಪ್ರಾದೇಶಿಕ ಭಾಷೆಯಲ್ಲಿ ನಡೆಸಬೇಕು. ಅದರಲ್ಲೂ ಕರ್ನಾಟಕದಲ್ಲಿ ಕನ್ನಡಕ್ಕೆ ಮನ್ನಣೆ ಸಿಗಬೇಕೆಂಬ ಒತ್ತಾಯಗಳು ಯುವ ಕೇಂದ್ರದ ಈ ಪ್ರಕಟಣೆ ಬೆನ್ನಲ್ಲೆ ಕೇಳಿಬಂದಿದ್ದು, ಯುವಕೇಂದ್ರದ ಕನ್ನಡ ವಿರೋಧಿ ಧೋರಣೆ ಖಂಡಿಸುವ ಜೊತೆಗೆ ಯುವ ಕನ್ನಡಿಗರು ಈ ಸ್ಪರ್ಧೆಯನ್ನೇ ಬಹಿಷ್ಕರಿಸಬೇಕೆಂದು ಜಿಲ್ಲಾ ಕಸಾಪ ನಿಕಟಪೂರ್ವ ಅಧ್ಯಕ್ಷೆ ಬಾ.ಹ.ರಮಾಕುಮಾರಿ ಆಗ್ರಹಿಸಿದ್ದಾರೆ.

ಭಾಷಾ ಸಮಾನತೆಗೆ ಕೊಳ್ಳಿ: ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿ ಮಾತೃಭಾಷೆಗೆ ಹೆಚ್ಚು ಪ್ರಾತಿನಿಧ್ಯ ಸಿಗುತ್ತಿದೆ. ಕನ್ನಡ ಮಾಧ್ಯಮದಲ್ಲಿ ತಾಂತ್ರಿಕ ಕಲಿಕೆಗೂ ಅವಕಾಶ ಕಲ್ಪಿಸಲಾಗಿದೆ ಎಂದು ರಾಜ್ಯ ಸರಕಾರದ ಮಂತ್ರಿಗಳು ಸಾರುತ್ತಿರುವ ಈ ಹೊತ್ತಿನಲ್ಲಿ, ಇದಕ್ಕೆ ವ್ಯತಿರಿಕ್ತವೆಂಬಂತೆ ಕೇಂದ್ರ ಸರಕಾರದ ಅಧೀನ ಸಂಸ್ಥೆಗಳು ನಡೆದುಕೊಳ್ಳುತ್ತಿರುವುದು ಭಾಷಾ ಸಮಾನತೆಗೆ ಕೊಳ್ಳಿ ಇಟ್ಟಂತಾಗಿದೆ. ಅದರಲ್ಲೂ ರಾಜ್ಯೋತ್ಸವ ಮಾಸಪೂರ್ತಿ ಕನ್ನಡ ಚಿತ್ರಗಳೇ ಪ್ರದರ್ಶನವಾಗಬೇಕೆಂದು ಆದೇಶ ಹೊರಡಿಸುವ ರಾಜ್ಯ ಸರಕಾರ, ಕರುನಾಡಿನ ನೆಲದಲ್ಲಿ ಶಾಖೆಗಳನ್ನು ತೆರೆದಿರುವ ಕೇಂದ್ರದ ಸಂಸ್ಥೆಗಳಲ್ಲಿ ಕನ್ನಡ ಭಾಷೆಯನ್ನು ಸ್ಪರ್ಧೆಗಳಿಂದಲೇ ಹೊರಗಿಟ್ಟಿದ್ದರೂ ಗಮನಹರಿಸದಿರುವುದು ಅಚ್ಚರಿಗೆ ಕಾರಣವಾಗಿದೆ.

ಪ್ರಾಧಿಕಾರ, ಸಂಸದರು ಪ್ರಶ್ನಿಸುತ್ತಿಲ್ಲವೇಕೆ?
ಕನ್ನಡ ನಿತ್ಯೋತ್ಸವವಾಗಬೇಕು, ಕನ್ನಡದ ನೆಲದಲ್ಲಿ ಕನ್ನಡಕ್ಕೆ ಮನ್ನಣೆ ಸಿಗಬೇಕು ಎಂದೆಲ್ಲ ಸಾರುವ ಜೊತೆಗೆ ಈ ಬಾರಿ ರಾಜ್ಯೋತ್ಸವದ ವಿಶೇಷವಾಗಿ ಮಾತಾಡ್ ಮಾತಾಡ್ ಕನ್ನಡ ಎಂದು ಅಭಿಯಾನವನ್ನು ಕರ್ನಾಟಕ ಸರಕಾರ ನಡೆಸಿತು. ಆದರೆ ಈ ಅಭಿಯಾನದ ಉದ್ದೇಶಕ್ಕೆ ತೀಲಾಂಜಲಿ ನೀಡುವಂತೆ ಕೇಂದ್ರ ಸರಕಾರದ ಅಧೀನ ಸಂಸ್ಥೆಗಳು ನಡೆದುಕೊಳ್ಳುತ್ತಿವೆ. ಈ ಬಗ್ಗೆ ರಾಜ್ಯ ಸರಕಾರವಾಗಲೀ, ಕನ್ನಡ ಅಭಿವೃದ್ಧಿ ಪ್ರಾಧಿಕಾರ ಮತ್ತಿತರ ಕನ್ನಡಪರಸಂಸ್ಥೆಗಳು ಏನು ಮಾಡುತ್ತಿವೆ ಎಂದು ಸಾಮಾನ್ಯ ಕನ್ನಡಿಗರು ಪ್ರಶ್ನಿಸುತ್ತಿದ್ದಾರೆ. ಅದರಲ್ಲೂ ಕೇಂದ್ರದಲ್ಲಿ ರಾಜ್ಯವನ್ನು ಪ್ರತಿನಿಧಿಸುವ ಸಂಸದರು ಈ ಬಗ್ಗೆ ಧ್ವನಿ ಎತ್ತಬೇಕಿದೆ ಎಂಬ ಆಗ್ರಹ ವ್ಯಕ್ತವಾಗಿದೆ.
ಕೋಟ್

ನೆಹರು ಯುವ ಕೇಂದ್ರವಾಗಲೀ, ಕೇಂದ್ರದ ಇನ್ಯಾವುದೇ ಸಂಸ್ಥೆಯಾಗಲೀ ಸಾಂವಿಧಾನಿಕ ಮಾನ್ಯತೆ ಇರುವ ಪ್ರಾದೇಶಿಕ ಭಾಷೆಗಳನ್ನು ಉಪೇಕ್ಷಿಸಬಾರದು. ಯುವಕೇಂದ್ರ ಸಂಘಟಿಸಿರುವ ಭಾಷಣ ಸ್ಪರ್ಧೆಯಲ್ಲಿ ಕನ್ನಡಕ್ಕೆ ಅವಕಾಶ ಸಿಗಬೇಕು. ಇಲ್ಲದಿದ್ದರೆ ಹೋರಾಟ ಮಾಡುವ ಜೊತೆಗೆ ಸಂಸತ್‍ನಲ್ಲಿ ಧ್ವನಿ ಎತ್ತುವೆ.

-ಡಾ.ಎಲ್.ಹನುಮಂತಯ್ಯ, ರಾಜ್ಯಸಭಾ ಸದಸ್ಯರು ಹಾಗೂ ಮಾಜಿ ಅಧ್ಯಕ್ಷರು ಕನ್ನಡ ಅಭಿವೃದ್ಧಿ ಪ್ರಾಧಿಕಾರ.

ಕರುನಾಡಿನಲ್ಲಿ ಸ್ಪರ್ಧೆ ನಡೆಯಬೇಕಾದರೆ ಅದು ಕನ್ನಡದಲ್ಲೇ ನಡೆಯಬೇಕು. ರಾಷ್ಟ್ರಮಟ್ಟದಲ್ಲಿ ಬೇಕಾದರೆ ಹಿಂದಿ-ಇಂಗ್ಲೀಷ್ ಬಳಸಲಿ. ಮಾತಾಡ್ ಮಾತಾಡ್ ಕನ್ನಡ ಅಭಿಯಾನ ನಡೆಸುತ್ತಿರುವ ಈ ಸಂದರ್ಭದಲ್ಲಿ ನೆಹರು ಯುವ ಕೇಂದ್ರ ಸ್ಪರ್ಧೆಗೆ ಕನ್ನಡ ಭಾಷೆಯನ್ನೆ ಕೈ ಬಿಟ್ಟಿರುವುದು ಸರಿಯಲ್ಲ. ಯುವ ಕನ್ನಡಿಗರು ಸ್ಪರ್ಧೆಯನ್ನೇ ಬಹಿಷ್ಕರಿಸಿ ಸಂದೇಶ ರವಾನಿಸಬೇಕು.
-ಬಾ.ಹ.ರಮಾಕುಮಾರಿ, ಕಸಾಪ ನಿಕಟಪೂರ್ವ ಅಧ್ಯಕ್ಷೆ.

  ಎಸ್.ಹರೀಶ್ ಆಚಾರ್ಯ ತುಮಕೂರು

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap