ಟಿಬಿ ಡ್ಯಾಮ್‌ ಗೆ ಹೊಸ ಗೇಟ್ ಅಳವಡಿಕೆಗೆ ಚಿಂತನೆ….!

ಕೊಪ್ಪಳ

    ತುಂಗಭದ್ರಾ ಜಲಾಶಯ  ರಾಜ್ಯದ ಹಳೆಯ ಜಲಾಶಯಗಳಲ್ಲೊಂದು. ಈ ಜಲಾಶಯದ ಕ್ರಸ್ಟ್ ಗೇಟ್  ಕೊಚ್ಚಿಕೊಂಡು ಹೋಗಿದ್ದು ದೊಡ್ಡ ಸುದ್ದಿಯಾಗಿತ್ತು. ಜೊತೆಗೆ ಅಧಿಕಾರಿಗಳ ನಿರ್ಲಕ್ಷ್ಯದಿಂದಲೇ ಇಂತಹದೊಂದು ಘಟನೆ ನಡೆದಿದೆ ಎಂಬ ಆರೋಪ ಕೂಡ ಕೇಳಿ ಬಂದಿತ್ತು. ಯಾವುದೇ ಜಲಾಶಯದ ಗೇಟ್​ಗಳನ್ನು ಐವತ್ತು ವರ್ಷದ ನಂತರ ಬದಲಾವಣೆ ಮಾಡಬೇಕು. ಆದರೆ ತುಂಗಭದ್ರಾ ಜಲಾಶಯದ ಗೇಟ್ ಬದಲಾವಣೆ ಮಾಡಿಲ್ಲ. ಕೆಟ್ಟ ಮೇಲೆ ಬುದ್ದಿ ಬಂತು ಅನ್ನುವ ಹಾಗೆ ಟಿಬಿ ಡ್ಯಾಂ ಬೋರ್ಡ್, ಹೊಸ ಗೇಟ್ ಅಳವಡಿಕೆಗೆ ಪರಿಶೀಲನೆ ಆರಂಭಿಸಿದೆ.

   ಕೊಪ್ಪಳ ತಾಲೂಕಿನ ಮುನಿರಾಬಾದ ಬಳಿಯಿ ಇರುವ ತುಂಗಭದ್ರಾ ಜಲಾಶಯ, ಕರ್ನಾಟಕದ ನಾಲ್ಕು ಜಿಲ್ಲೆಗಳು, ನೆರೆಯ ತೆಲಂಗಾಣ, ಆಂದ್ರಪ್ರದೇಶದ ಲಕ್ಷಾಂತರ ಜನರ ಜೀವನಾಡಿಯಾಗಿದೆ. ಜನರಿಗೆ ಕುಡಿಯುವ ನೀರು ಮತ್ತು ಕೃಷಿಗೆ ತುಂಗಭದ್ರಾ ಆಧಾರವಾಗಿದೆ. ಆದರೆ, 2024 ರ ಆಗಸ್ಟ್ 10 ರಂದು ರಾತ್ರಿ ಸಮಯದಲ್ಲಿ ಡ್ಯಾಂನ 19ನೇ ಕ್ರಸ್ಟಗೇಟ್ ಕೊಚ್ಚಿಕೊಂಡು ಹೋಗಿತ್ತು. ಹೀಗಾಗಿ ಅಪಾರ ಪ್ರಮಾಣದ ನೀರು ವ್ಯರ್ಥವಾಗಿ ಹೋಗಿತ್ತು. ಜೊತೆಗೆ ದೊಡ್ಡ ಮಟ್ಟದ ಆತಂಕವನ್ನೂ ಉಂಟುಮಾಡಿತ್ತು.

   ಗೇಟ್ ಕೊಚ್ಚಿಕೊಂಡು ಹೋಗಲು ತುಂಗಭದ್ರಾ ಡ್ಯಾಂ ಬೋರ್ಡ್ ಅಧಿಕಾರಿಗಳ ನಿರ್ಲಕ್ಷ್ಯವೇ ಕಾರಣವಾಯ್ತಾ ಎಂಬ ಪ್ರಶ್ನೆ ಉದ್ಬವಿಸಿತ್ತು. ಇದಕ್ಕೆ ಕಾರಣ, ಯಾವುದೇ ಜಲಾಶಯದ ಕ್ರಸ್ಟಗೇಟ್ ಗಳು, ಚೈನ್ ಲಿಂಕ್​ಗಳನ್ನು ಬದಲಾಯಿಸದೇ ಇರುವುದು. ತುಂಗಭದ್ರಾ ಜಲಾಶಯಕ್ಕೆ ಎಪ್ಪತ್ತು ವರ್ಷಗಳ ಹಿಂದೆ ಕ್ರಸ್ಟಗೇಟ್, ಚೈನ್ ಲಿಂಕ್​ಗಳನ್ನು ಅಳವಡಿಸಿದ್ದು, ಇಲ್ಲಿಯವರಗೆ ಒಮ್ಮೆಯೂ ಬದಲಾಯಿಸಿಲ್ಲ. ಬದಲಾವಣೆ ಮಾಡಬೇಕು ಅನ್ನೋ ತಜ್ಞರ ಸೂಚನೆಯನ್ನು ಕೂಡಾ ಡ್ಯಾಂ ನಿರ್ವಹಣೆ ಮಾಡುವ ಅಧಿಕಾರಿಗಳು ನಿರ್ಲಕ್ಷ್ಯ ಮಾಡಿದ್ದಕ್ಕೆ ಇಂತಹದೊಂದು ಘಟನೆ ನಡೆಯಿತು ಅಂತ ತಜ್ಞರು ಹೇಳಿದ್ದರು.

  ಮೇಲಿಂದ ಮೇಲೆ ಜಲಾಶಯಕ್ಕೆ ಆಗಮಿಸುತ್ತಿರೋ ಟಿಬಿ ಡ್ಯಾಂ ಬೋರ್ಡ್​ನ ಅಧಿಕಾರಿಗಳು, ಜಲಾಶಯದ 33 ಗೇಟ್ ಗಳನ್ನು ಯಾವಾಗ ಬದಲಾವಣೆ ಮಾಡಬೇಕು, ಗೇಟ್​ಗಳನ್ನು ಎಲ್ಲಿ ತಯಾರು ಮಾಡಿಸಬೇಕು, ಹೊಸ ಮಾದರಿ ಗೇಟ್​ಗಳು ಯಾವ ರೀತಿ ಇರಬೇಕು ಅನ್ನೋ ಬಗ್ಗೆ ಮಾಹಿತಿ ಸಂಗ್ರಹಿಸುತ್ತಿದ್ದಾರೆ. ಸದ್ಯ ಜಲಾಶಯ ತುಂಬಿದ್ದರಿಂದ, ಬರುವ ಬೇಸಿಗೆ ಸಮಯದಲ್ಲಿ ನೀರಿನ ಪ್ರಮಾಣ ಕಡಿಮೆಯಾಗುವುದರಿಂದ, ಆಗ ಗೇಟ್​ಗಳ ಬದಲಾವಣೆಗೆ ಪ್ಲ್ಯಾನ್ ಮಾಡುತ್ತಿದ್ದಾರೆ.
  ತುಂಗಭದ್ರಾ ಜಲಾಶಯದ ನಿರ್ಮಾಣ ಕಾರ್ಯ 1949 ರಲ್ಲಿ ಆರಂಭವಾಗಿತ್ತು. 1954 ರಲ್ಲಿ ಡ್ಯಾಂ ಲೋಕಾರ್ಪಣೆಗೊಂಡಿದೆ. ಅಂದರೇ, ತುಂಗಭದ್ರಾ ಜಲಾಶಯ ನಿರ್ಮಾಣವಾಗಿ ಬರೋಬ್ಬರಿ 70 ವರ್ಷವಾಗಿದೆ. ಅದರ ಆಯಸ್ಸುನ್ನು ನೋಡಿದಾಗ, ಡ್ಯಾಂಗೆ ಇರೋದು ಕೇವಲ ಮೂವತ್ತು ವರ್ಷ ಆಯಸ್ಸು ಮಾತ್ರ. ಮೂವತ್ತು ವರ್ಷದ ನಂತರ ಡ್ಯಾಂನ್ನು ನಿಷ್ಕ್ರೀಯಗೊಳಿಸಿ ಹೊಸದನ್ನು ನಿರ್ಮಾಣ ಮಾಡಬೇಕಾಗುತ್ತದೆ. ಈ ಬಗ್ಗೆ ಮೂರು ಸರ್ಕಾರಗಳು ನಿರ್ಧಾರ ಕೈಗೊಳ್ಳಬೇಕು ಎಂದು ಅಣೆಕಟ್ಟು ಕ್ರಸ್ಟ್‌ ಗೇಟ್ಸ್‌ ತಜ್ಞ ಕನ್ನಯ್ಯ ನಾಯ್ಡು ಕೂಡ ಹೇಳಿದ್ದರು. ಹೀಗಾಗಿ ಪರ್ಯಾಯ ಜಲಾಶಯ ನಿರ್ಮಾಣದ ಸಾಧಕ-ಬಾಧಕಗಳ ಬಗ್ಗೆ ಕೂಡ ಅಧಿಕಾರಿಗಳು ಮಾಹಿತಿ ಸಂಗ್ರಹಿಸುತ್ತಿದ್ದಾರೆ.
   ಸದ್ಯ ಜಲಾಶಯಕ್ಕೆ ಅಧಿಕಾರಿಗಳ ತಂಡ ಬೇಟಿ ನೀಡಿ ಪರಿಶೀಲನೆ ಆರಂಭಿಸಿದೆ. ಆದರೆ, ಇನ್ನಾದರೂ ನಿರ್ಲಕ್ಷ್ಯ ವಹಿಸದೆ, ಬೇಸಿಗೆ ಸಮಯದಲ್ಲಿ ಹೊಸ ಗೇಟ್​ಗಳ ಅಳವಡಿಕೆ ಕಾರ್ಯ ಆರಂಭಿಸಲು ಬೇಕಾದ ಸಿದ್ದತೆಯನ್ನು ಈಗನಿಂದಲೇ ಆರಂಭಿಸಬೇಕಿದೆ. 33 ಗೇಟ್ ಗಳ ಅಳವಡಿಕೆಗೆ ಸಾಕಷ್ಟು ಸಮಯ ಬೇಕಾಗುತ್ತದೆ.

Recent Articles

spot_img

Related Stories

Share via
Copy link