ಬೆಂಗಳೂರು
ಬೆಂಗಳೂರು ನಗರದಲ್ಲಿ ಏರಿಕೆಯಾಗುತ್ತಿರುವ ತಾಪಮಾನದಿಂದ ಜನರು ಕಂಗೆಟ್ಟು ಹೋಗಿದ್ದಾರೆ. ಒಂದು ಕಡೆ ನೀರಿನ ಕೊರತೆ, ಮತ್ತೊಂದು ಕಡೆ 38 ಡಿಗ್ರಿಗೆ ಉಷ್ಣಾಂಶ ತಲುಪಿದ್ದರಿಂದ ಹೋಟೆಲ್‌ಗಳ ಮಾಲೀಕರು ಕಂಗಾಲಾಗಿದ್ದಾರೆ.
ನಗರಕ್ಕೆ ನೀರು ಪೂರೈಕೆ ಮಾಡುವ ಜಲ ಮಂಡಳಿ ವಿವಿಧ ಮೂಲಗಳ ಮೂಲಕ ಟ್ಯಾಂಕರ್‌ಗಳಿಂದ ನಗರಕ್ಕೆ ನೀರು ಪೂರೈಕೆ ಮಾಡುತ್ತಿದೆ. ಆದರೆ ಬೇಡಿಕೆಯಷ್ಟು ಪೂರೈಕೆ ಮಾಡಲು ಸಾಧ್ಯವಾಗುತ್ತಿಲ್ಲ.
ನೀರಿನ ಕೊರತೆಯಿಂದ ಜನರು ಮಾತ್ರವಲ್ಲ, ಬೆಂಗಳೂರು ನಗರದ ಹೋಟೆಲ್‌ಗಳ ಮಾಲೀಕರು ಆತಂಕಗೊಂಡಿದ್ದಾರೆ. ಬೋರ್ ವೆಲ್, ಟ್ಯಾಂಕರ್ ನೀರಿನ ಮೇಲೆ ಹೋಟೆಲ್‌ಗಳು ಅವಲಂಬಿತವಾಗಿದ್ದವು. ಈಗ ಬೋರ್ ವೆಲ್ ಬತ್ತಿ ಹೋಗಿದೆ, ಟ್ಯಾಂಕರ್ ನೀರು ತರಿಸುವುದು ಕಷ್ಟದ ಜೊತೆ ದುಬಾರಿಯೂ ಆಗುತ್ತಿದೆ.
ಹೊಸ ಐಡಿಯಾಗಳ ಮೊರೆ ಹೋದ ಮಾಲೀಕರು:
ಕೆಲಸಗಾರರು ಮತ್ತು ನೀರಿನ ಕೊರತೆ ಎದುರಿಸುತ್ತಿರುವ ಬೆಂಗಳೂರು ನಗರದ ಹೋಟೆಲ್ ಮಾಲೀಕರು ಹೊಸ ಹೊಸ ಐಡಿಯಾಗಳ ಮೊರೆ ಹೋಗಿದ್ದಾರೆ. ಪಾತ್ರೆ, ತಟ್ಟೆ ತೊಳೆಯಲು ಹೆಚ್ಚು ನೀರು ಬೇಕಿರುವ ಕಾರಣ ಬಳಕೆ ಮಾಡಿ ಬಿಸಾಡಬಹುದಾದ ಕಪ್, ತಟ್ಟೆಗಳ ಮೊರೆ ಹೋಗಿದ್ದಾರೆ.
ಬೆಂಗಳೂರು ಹೋಟೆಲ್ ಮಾಲೀಕರ ಸಂಘದ ಅಧ್ಯಕ್ಷ ಪಿ. ಸಿ. ರಾವ್ ಮಾತನಾಡಿ, “ರೆಸ್ಟೋರೆಂಟ್, ಹೋಟೆಲ್‌ಗಳು ಬೋರ್‌ವೆಲ್, ಜಲಮಂಡಳಿ ನೀರಿನ ಮೇಲೆ ಅವಲಂಬಿತವಾಗಿದ್ದವು. ಈಗ ನೀರಿನ ಸಮಸ್ಯೆ ಉಂಟಾಗಿದೆ. ಕೆಲವು ಮಾಲೀಕರು ಖಾಸಗಿ ಟ್ಯಾಂಕರ್‌ಗಳ ಮೊರೆ ಹೋಗಿದ್ದಾರೆ” ಎಂದರು.
“ಕೆಲವು ತಿಂಗಳುಳಿಂದ ಬೋರ್ ವೆಲ್ ಬತ್ತಿ ಹೋಗಿದೆ. ಟ್ಯಾಂಕರ್ ನೀರಿಗೆ ಸಹ ಭಾರೀ ಬೇಡಿಕೆ ಬಂದಿದೆ. ಆದ್ದರಿಂದ ಸರಿಯಾದ ಸಮಯಕ್ಕೆ ನೀರು ಸಿಗುತ್ತಿಲ್ಲ. ಟ್ಯಾಂಕರ್ ನೀರಿಗೆ 900 ರಿಂದ 1,200 ರೂ. ತನಕ ಪಾವತಿ ಮಾಡಬೇಕಿದೆ. ಇದು ಮಾಲೀಕರಿಗೆ ಹೊರೆಯಾಗುತ್ತಿದೆ” ಎಂದು ಹೇಳಿದ್ದಾರೆ.
ದಿನಕ್ಕೆ ಸಾವಿರಾರು ಲೀಟರ್ ನೀರು ಬಳಕೆ ಮಾಡುವ ಹೋಟೆಲ್‌ಗಳು, ಚಿಕ್ಕ ಪುಟ್ಟ ವ್ಯಾಪಾರ ಮಾಡುವ ಫುಟ್‌ಪಾತ್ ವ್ಯಾಪಾರಿಗಳು ಬಳಕೆ ಮಾಡಿ ಬಿಸಾಡುವ ಪ್ಲೇಟ್, ಲೋಟಗಳ ಮೊರೆ ಹೋಗಿದ್ದಾರೆ. ಗ್ರಾಹಕರು ಬೇಡಿಕೆ ಇಟ್ಟರೆ ಮಾತ್ರ ಸ್ಟೀಲ್, ಗಾಜಿನ ಲೋಟದಲ್ಲಿ ಕಾಫಿ, ಟೀಗಳನ್ನು ನೀಡುತ್ತಿದ್ದಾರೆ.
ಬಳಕೆ ಮಾಡಿ ಬಿಸಾಡುವ ಪ್ಲೇಟ್, ಕಪ್‌ಗಳು ಸ್ವಲ್ಪ ದುಬಾರಿ. ಆದರೆ ನೀರಿನ ಟ್ಯಾಂಕರ್‌ಗಳಿಗೆ ಕೊಡುವ ಹಣಕ್ಕಿಂತ ಇದರಲ್ಲಿ ಉಳಿತಾಯವಾಗುತ್ತದೆ ಎಂಬುದು ಮಾಲೀಕರ ಮಾತು. ಇವುಗಳನ್ನು ಸರಿಯಾದ ರೀತಿಯಲ್ಲಿ ವಿಲೇವಾರಿ ಮಾಡುವುದು ಬಿಬಿಎಂಪಿಗೆ ಸವಾಲಿನ ಕೆಲಸವಾಗಿದೆ.
ಹಲವು ಹೋಟೆಲ್‌ಗಳ ಮಾಲೀಕರು ಕೋವಿಡ್ ಸಂದರ್ಭದಲ್ಲಿ ಬಳಕೆ ಮಾಡಿ ಬಿಸಾಡುವ ಪ್ಲೇಟ್, ಕಪ್‌ಗಳನ್ನು ಬಳಕೆ ಮಾಡಿದ್ದಾರೆ. ಬಳಿಕ ಪರಿಸ್ಥಿತಿ ಸಹಜ ಸ್ಥಿತಿಗೆ ಬಂದ ಬಳಿಕ ಸ್ಟೀಲ್ ತಟ್ಟೆ, ಲೋಟಗಳನ್ನು ಉಪಯೋಗ ಮಾಡುತ್ತಿದ್ದರು.
ಈಗ ನೀರಿನ ಕೊರತೆಯ ಕಾರಣ ಮತ್ತೆ ಬಳಕೆ ಮಾಡಿ ಬಿಸಾಡಬಹುದಾದ ಪ್ಲೇಟ್‌ಗಳ ಮೊರೆ ಹೋಗಿದ್ದಾರೆ. ಮತ್ತೊಂದು ಕಡೆ ಪಾತ್ರೆಗಳನ್ನು ಸ್ವಚ್ಛ ಮಾಡಲು ಕಾರ್ಮಿಕರು ಸಿಗುತ್ತಿಲ್ಲ. ದೊಡ್ಡ ದೊಡ್ಡ ಹೋಟೆಲ್‌ಗಳು ನಿರ್ವಹಣೆ ಮಾಡುತ್ತಿವೆ. ಆದರೆ ಚಿಕ್ಕಪುಟ್ಟ ಹೋಟೆಲ್‌ಗಳಿಗೆ ಬಳಸಿ ಬಿಸಾಡುವ ಪ್ಲೇಟ್‌ಗಳೇ ಹೆಚ್ಚು ಅನುಕೂಲವಾಗಿವೆ.
ಬೆಂಗಳೂರಿನ ಹಲವು ಹೋಟೆಲ್‌ಗಳು ವಾರಾಂತ್ಯದ ರಜಾ ದಿನಗಳಲ್ಲಿ ವಿಶೇಷ ಥಾಲಿಗಳನ್ನು ಪರಿಚಯಿಸಿದ್ದವು. ಈಗ ನೀರಿನ ಕೊರತೆ ಕಾರಣ ಅವುಗಳನ್ನು ಬದಲಾವಣೆ ಮಾಡಿ ಬಾಳೆ ಎಳೆ ಊಟವನ್ನು ಆರಂಭಿಸಿವೆ. ಬೇಗ ಮುಂಗಾರು ಆರಂಭಗೊಂಡು ಬೆಂಗಳೂರು ನಗರದ ಮೇಲೆ ವರುಣ ದೇವ ಕೃಪೆ ತೋರಲಿ ಎಂದು ಜನರು ಕಾದು ಕುಳಿತಿದ್ದಾರೆ.