ನವದೆಹಲಿ:
ರದ್ದಾಗಿರುವ ದೆಹಲಿ ಅಬಕಾರಿ ನೀತಿ ಪ್ರಕರಣಕ್ಕೆ ಸಂಬಂಧಿಸಿದ ಅಕ್ರಮ ಹಣ ವರ್ಗಾವಣೆ ತನಿಖೆಯ ಭಾಗವಾಗಿ ಹಲವು ಬಾರಿ ಸಮನ್ಸ್ ನೀಡಿದರೂ ವಿಚಾರಣೆಗೆ ಹಾಜರಾಗದ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರ ವಿರುದ್ಧ ಕಾನೂನು ಕ್ರಮ ಜರುಗಿಸುವಂತೆ ಜಾರಿ ನಿರ್ದೇಶನಾಲಯ(ಇಡಿ) ದೆಹಲಿ ನ್ಯಾಯಾಲಯಕ್ಕೆ ಹೊಸ ದೂರು ಸಲ್ಲಿಸಿದೆ ಎಂದು ಅಧಿಕೃತ ಮೂಲಗಳು ಬುಧವಾರ ತಿಳಿಸಿವೆ.
ಈ ಹೊಸ ದೂರಿನಲ್ಲಿ ಆಮ್ ಆದ್ಮಿ ಪಕ್ಷದ(ಎಎಪಿ) ರಾಷ್ಟ್ರೀಯ ಸಂಚಾಲಕರಾಗಿರುವ ಅರವಿಂದ್ ಕೇಜ್ರಿವಾಲ್ ಅವರು 4 ರಿಂದ 8 ರವರೆಗಿನ ಸಮನ್ಸ್‌ಗಳನ್ನು ಗೌರವಿಸಿಲ್ಲ ಎಂದು ಇಡಿ ಆರೋಪಿಸಿದೆ.
ದೆಹಲಿ ಅಬಕಾರಿ ನೀತಿಗೆ ಸಂಬಂಧಿಸಿದ ಮನಿ ಲಾಂಡರಿಂಗ್ ತನಿಖೆಯಲ್ಲಿ ಕೇಜ್ರಿವಾಲ್ ಅವರಿಗೆ ನೀಡಲಾದ ಮೊದಲ ಮೂರು ಸಮನ್ಸ್‌ಗಳಿಗೆ ಹಾಜರಾಗದ ದೆಹಲಿ ಸಿಎಂ ವಿರುದ್ಧ ಪ್ರಾಸಿಕ್ಯೂಷನ್ ಕೋರಿ ಇಡಿ ಈ ಹಿಂದೆ ಸ್ಥಳೀಯ ನ್ಯಾಯಾಲಯದ ಮೊರೆ ಹೋಗಿತ್ತು. ನ್ಯಾಯಾಲಯ ಮಾರ್ಚ್ 16 ರಂದು ಈ ಪ್ರಕರಣದ ವಿಚಾರಣೆಗೆ ಪಟ್ಟಿ ಮಾಡಿದೆ.
55 ವರ್ಷದ ಕೇಜ್ರಿವಾಲ್ ಅವರು ಇಡಿ ತಮಗೆ ನೀಡಿದ ಎಂಟೂ ಸಮನ್ಸ್‌ಗಳು ‘ಅಕ್ರಮ’ ಎಂದು ಹೇಳಿದ್ದಾರೆ ಮತ್ತು ಮಾರ್ಚ್ 12 ರ ನಂತರ ವಿಡಿಯೋ ಕಾನ್ಫರೆನ್ಸ್ ಮೂಲಕ ತಮ್ಮ ವಿಚಾರಣೆ ನಡೆಸಬಹುದು ಎಂದು ಕೇಂದ್ರ ತನಿಖಾ ಸಂಸ್ಥೆಗೆ ತಿಳಿಸಿದ್ದಾರೆ.