ನವದೆಹಲಿ:
ಇನ್ನು ಮುಂದೆ ದಾರಿಯಲ್ಲಿ ನಡೆದುಕೊಂಡು ಹೋಗುವಾಗ ಪಕ್ಕದಲ್ಲಿ ಕೊಳಲು, ತಬಲಾ, ಪಿಟೀಲು ಮತ್ತು ಹಾರ್ಮೋನಿಯಂನ ಸದ್ದು ಕೇಳಿದರೆ ಅಕ್ಕಪಕ್ಕ ಸಂಗೀತ ಕಾರ್ಯಕ್ರಮ ನಡೆಯುತ್ತಿದೆ ಎಂದು ಹುಡುಕಲು ಹೋಗಬೇಡಿ. ಯಾಕೆಂದರೆ ಇದು ಪಕ್ಕದಲ್ಲಿ ನಿಂತಿರುವ ಅಥವಾ ಹಾದು ಹೋದ ವಾಹನದಿಂದ ಬಂದ ಹಾರ್ನ್ ಸದ್ದು ಆಗಿರಬಹುದು. ಇನ್ನು ಮುಂದೆ ವಾಹನಗಳು ಈ ಸುಮಧುರ ವಾದ್ಯ ಸಂಗೀತವನ್ನು ನುಡಿಸುತ್ತದೆ.
ಇದಕ್ಕಾಗಿ ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ ಯೋಜನೆಯನ್ನು ಹಾಕಿಕೊಂಡಿದೆ. ಈ ಕುರಿತು ಸೋಮವಾರ ನವಭಾರತ್ ಟೈಮ್ಸ್‌ನ 78 ನೇ ಸಂಸ್ಥಾಪನಾ ವರ್ಷಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಭಾರತೀಯ ಸಂಗೀತ ವಾದ್ಯಗಳ ಶಬ್ದಗಳನ್ನು ವಾಹನಗಳ ಹಾರ್ನ್‌ಗಳಾಗಿ ಬಳಸುವುದನ್ನು ಕಡ್ಡಾಯಗೊಳಿಸುವ ಕಾನೂನನ್ನು ಪರಿಚಯಿಸುವುದಾಗಿ ಘೋಷಿಸಿದ್ದಾರೆ.
ದೇಶಾದ್ಯಂತ ಕೊಳಲು, ತಬಲಾ, ಪಿಟೀಲು ಮತ್ತು ಹಾರ್ಮೋನಿಯಂನಂತಹ ಶಬ್ದಗಳನ್ನು ಬಳಸುವ ಮೂಲಕ ವಾಹನಗಳ ಹಾರ್ನ್‌ಗಳನ್ನು ಕೇಳಲು ಹೆಚ್ಚು ಆಹ್ಲಾದಕರವಾಗಿಸುವುದು ಗುರಿಯನ್ನು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ ಹೊಂದಿದೆ. ಇದಕ್ಕಾಗಿ ಶೀಘ್ರದಲ್ಲೇ ಹೊಸ ಕಾನೂನು ಪರಿಚಯಿಸಲು ಯೋಜನೆ ರೂಪಿಸುತ್ತಿರುವುದಾಗಿ ಅವರು ಹೇಳಿದರು. ದೇಶದಲ್ಲಿ ಶೇ. 40ರಷ್ಟು ವಾಯುಮಾಲಿನ್ಯಕ್ಕೆ ಸಾರಿಗೆ ವಲಯ ಕಾರಣವಾಗಿದೆ ಎಂದು ಅವರು, ಇದನ್ನು ಎದುರಿಸಲು ಕೇಂದ್ರ ಸರ್ಕಾರವು ವಾಹನಗಳಿಗೆ ಹಸಿರು ಮತ್ತು ಜೈವಿಕ ಇಂಧನಗಳಾದ ಮೆಥನಾಲ್ ಮತ್ತು ಎಥೆನಾಲ್ ಅನ್ನು ಅಳವಡಿಸಿಕೊಳ್ಳಲು ಉತ್ತೇಜಿಸುತ್ತಿದೆ ಎಂದು ಅವರು ತಿಳಿಸಿದರು.
ಭಾರತದಲ್ಲಿ ಆಟೋಮೊಬೈಲ್ ಉದ್ಯಮ ಬೆಳೆಯುತ್ತಿರುವ ಬಗ್ಗೆ ಮಾತನಾಡಿದ ಅವರು, ದ್ವಿಚಕ್ರ ವಾಹನ, ಕಾರುಗಳ ರಫ್ತಿನಿಂದ ದೇಶವು ಗಣನೀಯ ಪ್ರಮಾಣದಲ್ಲಿ ಆದಾಯವನ್ನು ಗಳಿಸುತ್ತದೆ. 2014 ರಲ್ಲಿ 14 ಲಕ್ಷ ಕೋಟಿ ರೂ. ಮೌಲ್ಯದ ಉದ್ಯಮವು ಇಂದು 22 ಲಕ್ಷ ಕೋಟಿ ರೂ. ಗೆ ಏರಿಕೆಯಾಗಿದೆ ಎಂದು ತಿಳಿಸಿದರು. ಅಲ್ಲದೇ ಭಾರತವು ಇಂದು ಜಪಾನ್ ಅನ್ನು ಹಿಂದಿಕ್ಕಿ ಜಾಗತಿಕವಾಗಿ ಮೂರನೇ ಅತಿದೊಡ್ಡ ಆಟೋಮೊಬೈಲ್ ಮಾರುಕಟ್ಟೆಯಾಗಿದೆ. ಯುನೈಟೆಡ್ ಸ್ಟೇಟ್ಸ್ ಮತ್ತು ಚೀನಾದ ಬಳಿಕ ಭಾರತ ಸ್ಥಾನ ಪಡೆದಿದೆ ಎಂದು ಅವರು ಹೇಳಿದರು.
