ನವದೆಹಲಿ
ಭಾರತೀಯ ರೈಲ್ವೇ ಆಹಾರ ಹಾಗೂ ಪ್ರವಾಸೋದ್ಯಮ ಸಹಕಾರ (ಐಆರ್ ಸಿಟಿಸಿ) ಹಗರಣಕ್ಕೆ ಸಂಬಂಧಿಸಿದಂತೆ ಬಿಹಾರದ ಮಾಜಿ ಮುಖ್ಯಮಂತ್ರಿ ಹಾಗೂ ಆರ್ ಜೆಡಿ ಮುಖ್ಯಸ್ಥ ಲಾಲು ಪ್ರಸಾದ್ ಯಾದವ್ ಹಾಗೂ ಇತರ ಆರೋಪಿಗಳ ಮಧ್ಯಂತರ ಜಾಮೀನು ವಿಸ್ತರಿಸಿ ದೆಹಲಿ ಹೈಕೋರ್ಟ್ ಇಂದು ಆದೇಶ ನೀಡಿದೆ.
ಲಾಲು ಮತ್ತಿತರರು ಸಲ್ಲಿಸಿದ್ದ ಜಾಮೀನು ಅರ್ಜಿ ವಿಚಾರಣೆ ನಡೆಸಿದ ಸಿಬಿಐ ವಿಶೇಷ ನ್ಯಾಯಾಧೀಶ ಅರುಣ್ ಭಾರದ್ವಾಜ್ ಇಂದು ಆರೋಪಿಗಳ ಜಾಮೀನು ಅವಧಿ ವಿಸ್ತರಿಸಿ, ವಿಚಾರಣೆಯನ್ನು ಫೆ.11ಕ್ಕೆ ಮುಂದೂಡಿದರು.
ಹಗರಣಕ್ಕೆ ಸಂಬಂಧಿಸಿದಂತೆ 2018ರ ಜುಲೈನಲ್ಲಿ ಲಾಲು, ಪತ್ನಿ ರಾಬ್ಡಿ ದೇವಿ, ಪುತ್ರ ತೇಜಸ್ವಿ, ಮಾಜಿ ಕೇಂದ್ರ ಸಚಿವ ಪ್ರೇಮ್ ಚಂದ್ ಗುಪ್ತ ಅವರ ಪತ್ನಿ ಸರಳಾ ಗುಪ್ತ, ಸುಜಾತಾ ಹೋಟೆಲ್ ನಿರ್ದೇಶಕರು, ಚಾಣಕ್ಯ ಹೋಟೆಲ್ ಮಾಲೀಕರಾದ ವಿನಯ್ ಹಾಗೂ ವಿಜಯ್ ಕೋಚ್ಚರ್ ಹಾಗೂ ಐಆರ್ ಸಿಟಿಸಿ ಮಾಜಿ ವ್ಯವಸ್ಥಾಪಕ ನಿರ್ದೇಶಕ ಪಿ.ಕೆ ಗೋಯಲ್ ವಿರುದ್ಧ ಸಿಬಿಐ ಪ್ರಕರಣ ದಾಖಲಿಸಿತ್ತು.
ಲಾಲು ಹಾಗೂ ಇತರರು ತಮ್ಮ ಅಧಿಕಾರ ದುರುಪಯೋಗಪಡಿಸಿಕೊಂಡು ವಿನಯ್ ಹಾಗೂ ವಿಜಯ್ ಕೋಚ್ಚರ್ ಗೆ ಕಾನೂನುಬಾಹಿರವಾಗಿ ಎರಡು ಐಆರ್ ಸಿಟಿಸಿ ಹೋಟೆಲ್‍ಗಳ ಗುತ್ತಿಗೆಗಳನ್ನು ನೀಡಿದ್ದಾರೆ ಎಂದು ಪ್ರಕರಣ ದಾಖಲಿಸಲಾಗಿತ್ತು.
ಹಗರಣವೇನು?
ಲಾಲು ಪ್ರಸಾದ್ ಅವರು ರೈಲ್ವೇ ಸಚಿವರಾಗಿದ್ದ ಅವಧಿಯಲ್ಲಿ ರಾಂಚಿ ಹಾಗೂ ಪುರಿಯಲ್ಲಿನ ಭಾರತೀಯ ರೈಲ್ವೆಯ ಅಂಗಸಂಸ್ಥೆ ಐಆರ್ ಸಿಟಿಸಿಯ ಎರಡು ಹೋಟೆಲ್‍ಗಳ ನಿರ್ವಹಣೆಯ ಗುತ್ತಿಗೆಯನ್ನು ವಿನಯ್ ಹಾಗೂ ವಿಜಯ್ ಕೋಚ್ಚರ್ ಎಂಬ ಉದ್ಯಮಿಗಳಿಗೆ ಕಾನೂನು ಬಾಹಿರವಾಗಿ ನೀಡಲಾಗಿತ್ತು. ಇದಕ್ಕೆ ಪ್ರತಿಫಲವಾಗಿ ಈ ಉದ್ಯಮಿಗಳು ಬೇನಾಮಿ ಸಂಸ್ಥೆ ಡಿಲೈಟ್ ಮಾರ್ಕೆಟಿಂಗ್ ಹೆಸರಿನಲ್ಲಿ 3 ಎಕರೆ ಜಮೀನು ಹಸ್ತಾಂತರಿಸಿದ್ದಾರೆ. ನಂತರ, 2010ರಿಂದ 2014ರವರೆಗೆ ಡಿಲೈಟ್ ಮಾರ್ಕೆಟಿಂಗ್ ಸಂಸ್ಥೆಯ ಮಾಲಿಕತ್ವವನ್ನು ರಾಬ್ಡಿ ದೇವಿ ಹಾಗೂ ತೇಜಸ್ವಿ ಯಾದವ್ ಅವರ ಹೆಸರಿಗೆ ಬದಲಿಸಲಾಗಿದೆ ಎಂದು ಸಿಬಿಐ ದೂರಿನಲ್ಲಿ ಆರೋಪಿಸಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ