ಬೆಂಗಳೂರು:
ಕರ್ನಾಟಕ ರಾಜ್ಯಕ್ಕಾಗಿ ಅಧಿಸೂಚಿತ ಎಲ್ಲ 101 ಪರಿಶಿಷ್ಟ ಜಾತಿಗಳಲ್ಲಿನ ಪ್ರತಿ ಜಾತಿಯ ಪ್ರತಿ ವ್ಯಕ್ತಿಗೆ, ನಮ್ಮ ಸಂವಿಧಾನದ ಆಶಯದಂತೆ ಸಾಮಾಜಿಕ ಮತ್ತು ಆರ್ಥಿಕ ನ್ಯಾಯ ಖಾತರಿ ಮಾಡಲು, ಆತನ ಕುಟುಂಬದ ಆರ್ಥಿಕ ಸ್ಥಿತಿಗತಿ ಆಧಾರದಲ್ಲೇ ಒಳಮೀಸಲಾತಿ ವರ್ಗೀಕರಣಕ್ಕೆ ಸೂಕ್ತ ಮಾನದಂಡಗಳನ್ನು ರೂಪಿಸಬೇಕು ಎಂದು ಮಂಗಳೂರು ಮೂಲದ ಪರಿಶಿಷ್ಟ ಜಾತಿಗಳು ಮತ್ತು ಬುಡಕಟ್ಟುಗಳ ಸಂಘ ಸಂಸ್ಥೆಗಳ ಮಹಾಒಕ್ಕೂಟದ ಅಧ್ಯಕ್ಷ ಲೋಲಾಕ್ಷ ಆಗ್ರಹಿಸಿದ್ದಾರೆ.
ನಗರದಲ್ಲಿ ಇಂದು ಪತ್ರಿಕಾಗೋಷ್ಠಿ ಯಲ್ಲಿ ಮಾತನಾಡಿದ ಅವರು, ಪರಿಶಿಷ್ಟ ಜಾತಿಗಳ ಒಳಮೀಸಲಾತಿ ಗೆ ಅಗತ್ಯವಾದ ವರ್ಗೀಕರಣದ ಕರಡು ಮಾದರಿಯೊಂದನ್ನು ಮಹಾಒಕ್ಕೂಟವು ನ್ಯಾ. ಹೆಚ್ ಎನ್ ನಾಗಮೋಹನ್ ದಾಸ್ ಏಕ ಸದಸ್ಯ ವಿಚಾರಣಾ ಆಯೋಗಕ್ಕೆ ಈಗಾಗಲೇ ಸಲ್ಲಿಸಿದೆ ಎಂದು ತಿಳಿಸಿದರು.
ಕರ್ನಾಟಕ ರಾಜ್ಯದಲ್ಲಿರುವ 101 ಪರಿಶಿಷ್ಟ ಜಾತಿಗಳ ಪ್ರತಿ ಸದಸ್ಯರಿಗೆ ಸಂವಿಧಾನದ ವಿಧಿ 15(4) ಮತ್ತು 16(4) ರ ಅನ್ವಯ ಶಿಕ್ಷಣ ಸಂಸ್ಥೆಗಳಿಗೆ ಸೇರ್ಪಡೆ ಮತ್ತು ಸಾರ್ವಜನಿಕ ಸೇವೆಗಳಲ್ಲಿ ಸಮಾನ ಅವಕಾಶಗಳನ್ನು ಖಾತರಿ ಪಡಿಸಲು ಉದ್ದೇಶಿಸಲಾಗಿರುವ ಒಳ ಮೀಸಲಾತಿ ನೀತಿಗೆ ಅಗತ್ಯವಾದ ನ್ಯಾಯೋಚಿತವಾದ ವರ್ಗೀಕರಣವನ್ನು ಈ 101 ಜಾತಿಗಳಿಗೆ ಸೇರಿರುವ ಪ್ರತಿಯೊಬ್ಬರ ಕುಟುಂಬದ ಆರ್ಥಿಕ ಸ್ಥಿತಿ ಗತಿ / ವಾರ್ಷಿಕ ಆದಾಯದ ಆಧಾರದ ಮಾನದಂಡದಲ್ಲಿ ಮಾಡಬೇಕೇ ಹೊರತು, ಜಾತೀಯ ನೆಲೆಗಟ್ಟಿನಲ್ಲಿ ಅಲ್ಲ. ಮಾತ್ರವಲ್ಲ, ಇದು ಯಾವ ಕಾರಣಕ್ಕೂ ಪ್ರಬಲರನ್ನು ಮೀಸಲಾತಿ ನೀತಿಯಿಂದಲೇ ಹೊರಗಿಡುವ ಕೆನೆ ಪದರ ನೀತಿಯಂತಿರಲೂ ಬಾರದು, ಇದು ಎಲ್ಲ ಪರಿಶಿಷ್ಟ ಜಾತಿಗಳಿಗೆ ಸೇರಿದ ಎಲ್ಲ ವ್ಯಕ್ತಿಗಳನ್ನು ಒಳಗೊಳ್ಳುವಂತಿರಬೇಕು ಎಂದು ಅವರು ಸ್ಪಷ್ಟಪಡಿಸಿದರು.
ರಾಜ್ಯದ 101 ಪರಿಶಿಷ್ಟ ಜಾತಿಗಳ ಒಳಗೆ ಒಳಮೀಸಲಾತಿ ಕಲ್ಪಿಸಲು ಅಗತ್ಯ ಶಿಫಾರಸ್ಸುಗಳನ್ನು ಮಾಡಲು ರಚಿಸಲಾಗಿರುವ ನ್ಯಾಯಮೂರ್ತಿ ಹೆಚ್ ಎನ್ ನಾಗಮೋಹನ್ ದಾಸ್ ಏಕ ಸದಸ್ಯ ವಿಚಾರಣಾ ಆಯೋಗಕ್ಕೆ ಬರೆದಿರುವ ಸುಧೀರ್ಘ ಪತ್ರದಲ್ಲಿ, ಈ ವಿಷಯವನ್ನು ಸ್ಪಷ್ಟ ಪಡಿಸಿರುವ ಮಹಾಒಕ್ಕೂಟವು, ಈಗಾಗಲೇ ಜಾತೀಯ ನೆಲೆಗಟ್ಟಿನಲ್ಲಿ ನಿಂತ ಅಸ್ಪೃಶ್ಯತೆ ಮತ್ತು ಸಾಮಾಜಿಕ ಹಿಂದುಳಿದಿರುವಿಕೆಯ ಆಧಾರದಲ್ಲೇ ಸಂವಿಧಾನದ ವಿಧಿ 341 ರ ಅಡಿಯಲ್ಲಿ ಕರ್ನಾಟಕ ರಾಜ್ಯಕ್ಕಾಗಿ 101 ಜಾತಿಗಳನ್ನು ಪರಿಶಿಷ್ಟ ಜಾತಿಗಳು ಎಂಬ ಹೆಸರಿನಲ್ಲಿ ಪ್ರವರ್ಗ ರಚಿಸಿ ಅಧಿಸೂಚಿಸಲಾಗಿದೆ.
ಈ 101 ಜಾತಿಗಳಿಗೆ ಸೇರಿದ ಪ್ರತಿ ವ್ಯಕ್ತಿಗೆ ಸಂವಿಧಾನದ ವಿಧಿ 14 ರಲ್ಲಿ ಪ್ರತಿಪಾದಿಸಲಾದ ಸಮಾನತೆಯ ತತ್ವಕ್ಕೆ ಚ್ಯುತಿ ಬಾರದಂತೆ, ವಿಧಿ 15(1)ರಲ್ಲಿ ಸ್ಪಷ್ಟ ಪಡಿಸಿರುವಂತೆ ಜಾತಿ ಮತ್ತು ಲಿಂಗ ಆಧಾರಿತ ತಾರತಮ್ಯ ಇಲ್ಲದಂತೆ, ವಿಧಿ 15(4) ರಲ್ಲಿ ಶಿಕ್ಷಣ ಸಂಸ್ಥೆಗಳಿಗೆ ಸೇರ್ಪಡೆಯಲ್ಲಿ ಮೀಸಲಾತಿ ಕಲ್ಪಿಸಲು ಮತ್ತು ಸಂವಿಧಾನದ ವಿಧಿ 16(1) ರಲ್ಲಿ ಎಲ್ಲಾ ಪ್ರಜೆಗಳಿಗೆ ಸಾರ್ವಜನಿಕ ಸೇವೆಗಳಲ್ಲಿ ಸಮಾನ ಅವಕಾಶವನ್ನು ಖಾತರಿಮಾಡುವ ಆಶಯಕ್ಕೆ ಚ್ಯುತಿ ಬಾರದಂತೆ, ವಿಧಿ 16(4) ರಲ್ಲಿ ನ್ಯಾಯೋಚಿತ ರೀತಿಯಲ್ಲಿ ಮೀಸಲಾತಿ ಕಲ್ಪಿಸಬೇಕಾದರೆ ಒಳಮೀಸಲಾತಿ ವರ್ಗೀಕರಣವು ಕುಟುಂಬದ ಆರ್ಥಿಕ ಸ್ಥಿತಿಗತಿ /ವಾರ್ಷಿಕ ಆದಾಯದ ನೆಲೆಗಟ್ಟಿನಲ್ಲಿಯೇ ನಡೆಯ ಬೇಕು ಎಂದು ಮಹಾ ಒಕ್ಕೂಟ ಪ್ರತಿಪಾದಿಸಿದೆ ಎಂದು ಹೇಳಿದರು.
*ಮಾಧುಸ್ವಾಮಿ ಶಿಫಾರಸ್ಸು ತಿರಸ್ಕರಿಸಿ:*
ಆದ್ದರಿಂದಲೇ 101 ಪರಿಶಿಷ್ಟ ಜಾತಿಗಳನ್ನು ನಾಲ್ಕು ಗುಂಪುಗಳಲ್ಲಿ, ಒಂದನೇ ಗುಂಪಿನಲ್ಲಿ ನಾಲ್ಕು ಜಾತಿಗಳಿಗೆ 6% ಮೀಸಲಾತಿ, ಎರಡನೇ ಗುಂಪಿನಲ್ಲಿ ನಾಲ್ಕು ಜಾತಿಗಳಿಗೆ 5.5% ಮೀಸಲಾತಿ, ಮೂರನೇ ಗುಂಪಿನಲ್ಲಿ 4 ಜಾತಿಗಳಿಗೆ 4.5% ಮೀಸಲಾತಿ ಮತ್ತು 89 ಸಣ್ಣ ಪುಟ್ಟ ಜಾತಿಗಳಿಗೆ 01% ಮೀಸಲಾತಿ, ಹೀಗೆ ಅತ್ಯಂತ ಅವೈಜ್ಞಾನಿಕವಾಗಿ ವರ್ಗೀಕರಣ ಮಾಡಿ, ಸಂವಿಧಾನದ ಆಶಯಕ್ಕೆ ವ್ಯತಿರಿಕ್ತವಾಗಿ ಭಾರತ ಸರಕಾರಕ್ಕೆ ಶಿಫಾರಸ್ಸು ಮಾಡಿರುವ 2023 ರಲ್ಲಿ ಆಗಿನ ಕಾನೂನು ಸಚಿವ ಜೆ ಸಿ ಮಾಧುಸ್ವಾಮಿ ನೇತೃತ್ವದ ಸಚಿವ ಸಂಪುಟದ ಉಪ ಸಮಿತಿಯ ಶಿಫಾರಸ್ಸುಗಳನ್ನು ನ್ಯಾ. ಹೆಚ್ ಎನ್ ನಾಗಮೋಹನ್ ದಾಸ್ ವಿಚಾರಣಾ ಆಯೋಗ ತಿರಸ್ಕರಿಸಬೇಕು ಎಂದು ಅವರು ಆಗ್ರಹಿಸಿದರು.
*ಆಯೋಗವೇ ಹೊಸತಾಗಿ ಡೇಟಾ ಸಂಗ್ರಹಿಸಲಿ*
ಆಗಸ್ಟ್ 1, 2024 ರಂದು ಸುಪ್ರೀಂ ಕೋರ್ಟ್ ನ ಏಳು ಸದಸ್ಯರ ಪೀಠ ನೀಡಿದ ತೀರ್ಪಿನಂತೆ ಪರಿಶಿಷ್ಟ ಜಾತಿಗಳ ಒಳಗೆ ಒಳಮೀಸಲಾತಿ ನೀತಿ ರೂಪಿಸಲು ಪ್ರಸಕ್ತ ಇರುವ ವಾಸ್ತವ ಸಾಮಾಜಿಕ – ಆರ್ಥಿಕ ಪರಿಸ್ಥಿತಿಯ ಬಗ್ಗೆ ಅಧಿಕೃತ ದತ್ತಾಮ್ಶ (Empirical Data) ಅತ್ಯಗತ್ಯ. ಆದರೆ, ಕರ್ನಾಟಕದಲ್ಲಿ ಪ್ರಸಕ್ತ ಅಂತಹ ಡೇಟಾ ಲಭ್ಯಇಲ್ಲ ಎಂದು ಅವರು ಪ್ರತಿಪಾದಿಸಿದರು.
2001 ರ ಜನಗಣತಿ ಆಧಾರವಾಗಿಟ್ಟು 2005 ರ ನಂತರ ನಡೆಸಲಾದ ನ್ಯಾ. ಎ ಜೆ ಸದಾಶಿವ ಆಯೋಗದ ವರದಿಯನ್ನು ‘ಅದು ಅಪ್ರಸ್ತುತ’ ಎಂದು ಜೆ ಸಿ ಮಾಧುಸ್ವಾಮಿ ನೇತೃತ್ವದ ಸಂಪುಟ ಉಪ ಸಮಿತಿ 2023ರಲ್ಲೇ ತಿರಸ್ಕರಿಸಿದೆ. ಆ ಶಿಫಾರಸ್ಸನ್ನು ಬಸವರಾಜ್ ಬೊಮ್ಮಾಯಿ ನೇತೃತ್ವದ ರಾಜ್ಯ ಸರಕಾರ ಒಪ್ಪಿದೆ ಎಂದು ಅವರು ತಿಳಿಸಿದರು.
ತದನಂತರ 2015 ರಲ್ಲಿ ಆಗಿನ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಹೆಚ್. ಕಾಂತರಾಜ್ ನೇತೃತ್ವದಲ್ಲಿ ಮತ್ತು ನಂತರ ಕೆ. ಜಯಪ್ರಕಾಶ್ ಹೆಗ್ಡೆ ನೇತೃತ್ವದಲ್ಲಿ ಸಿದ್ಧಪಡಿಸಿ ಸಲ್ಲಿಸಲಾದ ಸಾಮಾಜಿಕ ಆರ್ಥಿಕ ಸಮೀಕ್ಷಾ ವರದಿಯನ್ನು ರಾಜ್ಯ ಸರಕಾರ ಇನ್ನೂ ಅಂಗೀಕರಿಸಿಲ್ಲ.
ಈ ಹಿನ್ನೆಲೆಯಲ್ಲಿ ನೋಡಿದರೆ, ನ್ಯಾ. ನಾಗಮೋಹನ್ ದಾಸ್ ಆಯೋಗದ ಮುಂದೆ ರಾಜ್ಯದಲ್ಲಿರುವ 101 ಪರಿಶಿಷ್ಟ ಜಾತಿಗಳ ಜನರ ಸಾಮಾಜಿಕ – ಆರ್ಥಿಕ ಸ್ಥಿತಿ ಗತಿ ಬಗ್ಗೆ ನಿಖರವಾದ ಯಾವುದೇ ಡೇಟಾ ಇಲ್ಲ. ಆದ್ದರಿಂದ ಈ ಏಕ ಸದಸ್ಯ ವಿಚಾರಣಾ ಆಯೋಗವು 101 ಜಾತಿಗಳಿಗೆ ಸೇರಿದ ಜನರಲ್ಲಿ, ಯಾವ್ಯಾವ ವೃತಿಗಳಲ್ಲಿ ಎಷ್ಟೆಷ್ಟು ಶೇಖಡಾ ಜನರು ಕೆಲಸ ಮಾಡುತ್ತಿದ್ದಾರೆ, ಅವರ ಕೌಟುಂಬಿಕ ಆರ್ಥಿಕ ಹಿನ್ನೆಲೆ ಏನು?, ಯಾವ್ಯಾವ ಆರ್ಥಿಕ ಹಿನ್ನೆಲೆಯ ಮಕ್ಕಳು ಯಾವ್ಯಾವ ಶಿಕ್ಷಣ ಸಂಸ್ಥೆಗಳಲ್ಲಿ, ಎಂತಹ ಶಿಕ್ಷಣ ಪಡೆಯುತ್ತಿದ್ದಾರೆ? ಎಂಬ ಅಂಶಗಳನ್ನು ಒಳಗೊಂಡು 101 ಪರಿಶಿಷ್ಟ ಜಾತಿಗಳಿಗೆ ಸೇರಿದ ಎಲ್ಲಾ ವರ್ಗಗಳ (Classes) ಬದುಕಿನ ಎಲ್ಲ ಅಂಶಗಳ ಬಗ್ಗೆ ಸ್ವತಃ ಡೇಟಾ ಸಂಗ್ರಹಿಸಲು ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಅವರು ಆಗ್ರಹಿಸಿದರು.
*ಆಯೋಗ ಸಂಗ್ರಹಿಸಿದ ಡೇಟಾವನ್ನು ಬಹಿರಂಗ ಪಡಿಸಲೇ ಬೇಕು*
ತಮ್ಮ ಜಾತಿಗಳ ಪ್ರಸಕ್ತ ಸಾಮಾಜಿಕ, ಆರ್ಥಿಕ, ಶೈಕ್ಷಣಿಕ ಮತ್ತಿತರ ಪರಿಸ್ಥಿತಿಗಳನ್ನು 101 ಜಾತಿಗಳ ಜನರೂ ಸ್ವತಃ ಅರಿತುಕೊಂಡು, ತಮ್ಮೊಳಗೇ ಯಾವ್ಯಾವ ರೀತಿಯಲ್ಲಿ ಒಳ ಮೀಸಲಾತಿಯ ವರ್ಗೀಕರಣ ಜಾರಿಗೆ ತಂದರೆ ಸೂಕ್ತ ಎಂಬ ರೀತಿಯಲ್ಲಿ ಆಯೋಗಕ್ಕೆ ಪ್ರಸ್ತಾವನೆ ಸಲ್ಲಿಸಲು ಅನುವು ಮಾಡಿಕೊಡಲು, ಆಯೋಗವು ಹೊಸತಾಗಿ ಸಂಗ್ರಹಿಸಿದ ಡೇಟಾವನ್ನು ಬಹಿರಂಗ ಪಡಿಸಲೇ ಬೇಕು ಎಂದು ಅವರು ಒತ್ತಾಯಿಸಿದರು.
ಇದಾದ ಬಳಿಕ, ಆಯೋಗವು ಕನಿಷ್ಠ ಪ್ರತಿ ಜಿಲ್ಲೆಯಲ್ಲಿ ಒಂದು ಕಡೆ, ಜಿಲ್ಲಾ ಕೇಂದ್ರದಲ್ಲಿ, ಸಾರ್ವಜನಿಕರಿಂದ ಅಹವಾಲು ಸ್ವೀಕರಿಸುವ ಕಾರ್ಯಕ್ರಮ ನಡೆಸಿ, ಇನ್ನಷ್ಟು ಮಾಹಿತಿ ಮತ್ತು ಡೇಟಾವನ್ನು ಸಂಗ್ರಹಿಸಬೇಕು ಎಂದು ಪ್ರತಿಪಾದಿಸಿದರು.
ಈ ರೀತಿಯಲ್ಲಿ ಸಂಗ್ರಹಿಸಿದ ವಾಸ್ತವ ಅಂಶಗಳ ಡೇಟಾ (empirical data)ದ ಆಧಾರದಲ್ಲಿಯೇ ನ್ಯಾಯೋಚಿತ ವರ್ಗೀಕರಣದ ಮೂಲಕ ಸಂವಿಧಾನದ ವಿಧಿ 15(4) ಮತ್ತು 16(4) ರಲ್ಲಿ ಒಳ ಮೀಸಲಾತಿ ನೀತಿಗೆ ಸಂಬಂಧಪಟ್ಟ ಶಿಫಾರಸ್ಸನ್ನು ಸರಕಾರಕ್ಕೆ ಸಲ್ಲಿಸಬೇಕು ಎಂದು ಆಗ್ರಹಿಸಿದರು.
*ಕರಡು ಮಾದರಿ ವರ್ಗೀಕರಣ*
ವಾಸ್ತವ ಸ್ಥಿತಿ ಗತಿಯನ್ನು ತಿಳಿಸುವ ಯಾವುದೇ ನಿಖರ ಡೇಟಾ ಇಲ್ಲದೆ ಯಾವುದೇ ರೀತಿಯಲ್ಲಿ ಒಳ ಮೀಸಲಾತಿಗಾಗಿ ವರ್ಗೀಕರಣದ ಮಾದರಿಯನ್ನು ಪ್ರಸ್ತಾಪಿಸುವುದು ಸಮಂಜಸ ಅಲ್ಲವಾದರೂ, ಜಾತಿಗಳ ಆಧಾರದಲ್ಲೇ ವರ್ಗೀಕರಣಕ್ಕೆ ಸಂಘಟಿತವಾದ ಒತ್ತಡ ಹೆಚ್ಚುತ್ತಿರುವ ಈ ಸಂದರ್ಭದಲ್ಲಿ, ಕರ್ನಾಟಕ ರಾಜ್ಯಕ್ಕೆ ಅಧಿಸೂಚಿತ ವಾಗಿರುವ ಪರಿಶಿಷ್ಟ ಜಾತಿಗಳು ಎಂಬ ಪ್ರವರ್ಗಕ್ಕೆ ಸೇರಿರುವ 101 ಜಾತಿಗಳನ್ನು, ಜಾತೀಯ ನೆಲೆಯಲ್ಲಿ ಒಡೆಯದೆ, ಅವುಗಳ ಏಕತೆಯನ್ನು ಕಾಯ್ದುಕೊಂಡೇ, ಈ ಎಲ್ಲ ಜಾತಿಗಳಲ್ಲಿರುವ ವಿವಿಧ ಕಸುಬುಗಳಲ್ಲಿರುವ ಜನರನ್ನು
ಅವರ ಕುಟುಂಬದ ಆರ್ಥಿಕ ಸ್ಥಿತಿ ಗತಿಯ ಆಧಾರದಲ್ಲಿ ಈ ಕೆಳಗಿನಂತೆ 3 ಗುಂಪುಗಳಲ್ಲಿ ವರ್ಗೀಕರಣ ಮಾಡಬಹುದಾಗಿದೆ ಎಂದು ಮಹಾಒಕ್ಕೂಟ ಆಯೋಗಕ್ಕೆ ಸಲ್ಲಿಸಿರುವ ಪ್ರಸ್ತಾವನೆಯಲ್ಲಿ ಹೇಳಿದೆ ಎಂದು ತಿಳಿಸಿದರು.
ಆ ಮೂರು ಗುಂಪುಗಳನ್ನು ಈ ರೀತಿ ವರ್ಗೀಕರಿಸಲಾಗಿದೆ.
(1). ಪರಿಶಿಷ್ಟ ಜಾತಿಗಳು – ಎ: (ಅತ್ಯಂತ ದುರ್ಬಲರು), (2). ಪರಿಶಿಷ್ಟ ಜಾತಿಗಳು – ಬಿ: (ದುರ್ಬಲರು) ಮತ್ತು (3). ಪರಿಶಿಷ್ಟ ಜಾತಿಗಳು – ಸಿ: (ಸಾಮಾನ್ಯ)
ಒಂದನೇ ಗುಂಪಿನಲ್ಲಿ, (ಅತ್ಯಂತ ದುರ್ಬಲರು) ಸಫಾಯ್ ಕರ್ಮಚಾರಿಗಳು, ಪೌರ ಕಾರ್ಮಿಕರು, ಅಶುಚಿತ್ವ ಕೆಲಸ ಕಾರ್ಯಗಳಲ್ಲಿ ನಿರತರಾಗಿರುವ ಕೆಲಸಗಾರರು, ಸ್ಲಮ್ ನಿವಾಸಿಗಳು, ಕಾರ್ಮಿಕರು, ಚರ್ಮ ಕುಟೀರ ಮತ್ತು ಸಣ್ಣ ಪುಟ್ಟ ಅಂಗಡಿಗಳ ಮಾಲೀಕರು, ಸಣ್ಣ ರೈತರು, ಕುಶಲ ಕರ್ಮಿಗಳು, ಶಾಲಾ ಶಿಕ್ಷಕರು, ಸರಕಾರದ ಡಿ ಮತ್ತು ಸಿ ದರ್ಜೆ ನೌಕರರು ಹಾಗೂ ಆಯೋಗ ನಿರ್ಧರಿಸುವ ಇತರರು. ಇವರ ಕುಟುಂಬದ ವಾರ್ಷಿಕ ವರಮಾನ ರೂ. 08 ಲಕ್ಷ ಗಿಂತ ಕಡಿಮೆ ಇರಬೇಕು.
ಪರಿಶಿಷ್ಟ ಜಾತಿಗಳಿಗೆ ಮೀಸಲಿಟ್ಟ 17% ಮೀಸಲಾತಿಯ ಪೈಕಿ ಈ ಗುಂಪಿಗೇ 9% ಪ್ರತ್ಯೇಕವಾಗಿ ಮೀಸಲು. ಆದರೆ, ಈ ಗುಂಪಿನ ವ್ಯಾಪ್ತಿಗೆ ಒಳಪಡುವ ವ್ಯಕ್ತಿಗಳು, ಎರಡನೇ ಗುಂಪು (ದುರ್ಬಲರು) ಮತ್ತು ಮೂರನೇ ಗುಂಪು (ಸಮಾನ್ಯ) ಗಳಲ್ಲಿಯೂ ಮುಕ್ತವಾಗಿ ಸ್ಪರ್ಧಿಸ ಬಹುದಾಗಿದೆ. ಅಂದರೆ ಈ ಗುಂಪಿನ ಅತ್ಯಂತ ದುರ್ಬಲರಿಗೆ 9% ಹುದ್ದೆಗಳು/ ಸ್ಥಾನಗಳು ಕಡ್ಡಾಯವಾಗಿ ಅವರಿಗೇ ಮೀಸಲಿಡ ಲಾಗಿದೆ. ಮಾತ್ರವಲ್ಲ, ಒಟ್ಟು ಲಭ್ಯವಿರುವ 17% ಮೀಸಲು ಹುದ್ದೆ/ ಸ್ಥಾನಗಳಿಗೂ ಸ್ಪರ್ಧಿಸಲು ಇವರಿಗೆ ಮುಕ್ತ ಅವಕಾಶ ಕಲ್ಪಿಸಲಾಗಿದೆ.
ಎರಡನೇ ಗುಂಪು (ದುರ್ಬಲರು) ನಲ್ಲಿ ದೊಡ್ಡ ರೈತರು, ತೋಟಗಳ ಮಾಲೀಕರು, ವೃತ್ತಿಪರರು, ಕಾಲೇಜುಗಳ ಉಪನ್ಯಾಸಕರು, ಸಣ್ಣ ವ್ಯಾಪಾರ/ ವಾಣಿಜ್ಯ /ಕೈಗಾರಿಕೆ ಸಂಸ್ಥೆಗಳ ಮಾಲೀಕರು, ಸರಕಾರದ ಕೆಳ ಹಂತದ ಎ ಮತ್ತು ಬಿ ಕೇಡರ್ ಗಳಿಗೆ ಸೇರಿದ ಅಧಿಕಾರಿಗಳು ಮತ್ತು ಆಯೋಗ ನಿರ್ಧರಿಸುವ ಇತರೆ ಗುಂಪುಗಳು. ಇವರ ಕುಟುಂಬದ ವಾರ್ಷಿಕ ವರಮಾನ ರೂ. 15 ಲಕ್ಷ ಕ್ಕಿಂತ ಕಡಿಮೆ ಇರಬೇಕು. 17% ಮೀಸಲಾತಿಯಲ್ಲಿ ಈ ಎರಡನೇ ಗುಂಪಿಗೆ 4% ಮೀಸಲು. ಗುಂಪಿನ ವ್ಯಕ್ತಿಗಳಿಗೆ ಒಂದನೇ ಗುಂಪಿನಲ್ಲಿ ಸ್ಪರ್ಧೆ ಮಾಡಲು ಅವಕಾಶ ಇಲ್ಲ. ಆದರೆ, ಇವರು ಮೂರನೇ ಗುಂಪಿನಲ್ಲಿ (ಸಾಮಾನ್ಯ) ಸ್ಪರ್ಧೆ ಮಾಡಲು ಅವಕಾಶ ಇದೆ. ಅಂದರೆ ಈ ಗುಂಪಿನಲ್ಲಿ 4% ಹುದ್ದೆ/ಸ್ಥಾನಗಳಲ್ಲಿ ಮತ್ತು ಮೂರನೇ ಗುಂಪಿನ (ಸಾಮಾನ್ಯ) 4% ಹುದ್ದೆ/ಸ್ಥಾನಗಳಲ್ಲಿ ಸ್ಪರ್ಧಿಸಲು, ಅಂದರೆ ಒಟ್ಟು 8% ಮೀಸಲು ಸ್ಥಾನಗಳಲ್ಲಿ ಸ್ಪರ್ಧಿಸಲು ಅವಕಾಶ ಕಲ್ಪಿಸಲಾಗಿದೆ ಎಂದು ವಿವರಿಸಿದರು.
ಮೂರನೇ ಗುಂಪಿನಲ್ಲಿ (ಸಾಮಾನ್ಯ) ವಿಶ್ವವಿದ್ಯಾನಿಲಯಗಳ ಪ್ರಾಧ್ಯಾಪಕರುಗಳು, ಸರಕಾರದ ಹಿರಿಯ ಎ ಕೇಡರ್ ಅಧಿಕಾರಿಗಳು, ದೊಡ್ಡ ವ್ಯಾಪಾರಸ್ಥರು ಸೇರಿದಂತೆ ಪರಿಶಿಷ್ಟ ಜಾತಿಗಳಿಗೆ ಸೇರಿದ ಎಲ್ಲಾ ವ್ಯಕ್ತಿಗಳು, ಯಾವುದೇ ಆದಾಯಮಿತಿ ಇಲ್ಲದೆ, ಎಲ್ಲರೂ ಈ ಗುಂಪಿನಲ್ಲಿ 4% ಮೀಸಲಾತಿಗೆ ಅರ್ಹರು. ಇದು ಕೆನೆ ಪದರ ನೀತಿಗೆ ಸಂಪೂರ್ಣ ಭಿನ್ನ ಎಂದು ವಿನೂತನ ಮೀಸಲಾತಿ ಮಾದರಿ ಯೊಂದನ್ನು ಅನಾವರಣ ಮಾಡಿದರು.
ಈ ರೀತಿಯಲ್ಲಿ 101 ಪರಿಶಿಷ್ಟ ಜಾತಿಗಳಿಗೆ ಸೇರಿದ ಎಲ್ಲಾ ಜಾತಿಯ ವಿವಿಧ ವರ್ಗಗಳ/ಸ್ತರಗಳ ಜನರಿಗೆ, ಸಂವಿಧಾನದ ಆಶಯದಂತೆ ಒಳ ಮೀಸಲಾತಿಗೆ ಅಗತ್ಯವಾದ ನ್ಯಾಯೋಚಿತ ವರ್ಗೀಕರಣವನ್ನು ಪ್ರಸ್ತಾಪಿಸಲಾಗಿದೆ ಎಂದು ತಿಳಿಸಿದರು.
*ಷಡ್ಯಂತ್ರಕ್ಕೆ ಬಲಿ ಬೀಳದಿರಿ:*
ಒಳ ಮೀಸಲಾತಿಗಾಗಿ ಒತ್ತಾಯಿಸುತ್ತಿರುವ ನಮ್ಮ ಕೆಲವು ರಾಜಕೀಯ ನೇತಾರರು, ಪರಿಶಿಷ್ಟ ಜಾತಿಗಳಿಗೆ ರಾಜಕೀಯ ಮೀಸಲಾತಿ ಕಲ್ಪಿಸುವ ಸಂವಿಧಾನದ ವಿಧಿ 330, 332 ಮತ್ತು 243 ರಲ್ಲೂ ಒಳಮೀಸಲಾತಿ ಜಾರಿಗೆ ತರಬೇಕು ಎಂದು ಆಗ್ರಹಿಸುತ್ತಿಲ್ಲ ಏಕೆ ಎಂಬ ಸತ್ಯವನ್ನು ಸಮಾಜದ ಎಲ್ಲರೂ ಅರಿಯುವ ಪ್ರಯತ್ನ ಮಾಡಬೇಕು.
ರಾಜ್ಯದ 101 ಪರಿಶಿಷ್ಟ ಜಾತಿಗಳನ್ನು ಜಾತಿಯ ನೆಲೆಯಲ್ಲಿಯೇ ಕೆಲವು ಸಣ್ಣ ಪುಟ್ಟ ಗುಂಪುಗಳನ್ನಾಗಿ ಒಡೆದು, ಈ ಶೋಷಿತ – ವಂಚಿತ ಸಮುದಾಯಗಳನ್ನು ಎಲ್ಲ ಕ್ಷೇತ್ರಗಳಲ್ಲಿ ಇನ್ನಷ್ಟು ದುರ್ಬಲ ಗೊಳಿಸುವ ಸ್ಥಾಪಿತ ಹಿತಾಸಕ್ತಿಗಳ ವ್ಯವಸ್ಥಿತ ಷಡ್ಯಂತ್ರವನ್ನು ಇನ್ನಾದರೂ ಚಳವಳಿ ನಿರತ ನಮ್ಮ ಸಹೋದರರು, ಮಂತ್ರಿಗಳು, ಸಂಸದರು, ಶಾಸಕರು, ಹಿರಿಯ ಅಧಿಕಾರಿಗಳು, ಚುನಾಯಿತ ಜನಪ್ರತಿನಿಧಿಗಳು ಅರ್ಥ ಮಾಡಿಕೊಳ್ಳಬೇಕು ಎಂದು ಅವರು ವಿನಂತಿಸಿದರು.
ಈ ಹಿನ್ನೆಲೆಯಲ್ಲಿ ಮಹಾಒಕ್ಕೂಟದ ಪ್ರಸ್ತಾವನೆಯನ್ನು, ಆಯೋಗವು ಹೊಸತಾಗಿ ಸಂಗ್ರಹಿಸುವ ವಾಸ್ತವತೆಯ ಎಂಪಿರಿಕಲ್ ಡೇಟಾ ಆಧಾರದಲ್ಲಿ, ಇನ್ನಷ್ಟು ಸದೃಢಗೊಳಿಸಿ ಒಳಮೀಸಲಾತಿಗೆ ನ್ಯಾಯೋಚಿತ ವರ್ಗೀಕರಣವನ್ನು ಶಿಫಾರಸ್ಸು ಮಾಡಬೇಕು ಎಂದು ನ್ಯಾ. ಹೆಚ್ ಎನ್ ನಾಗಮೋಹನ್ ದಾಸ್ ಅವರನ್ನು ಆಗ್ರಹಿಸುತ್ತೇವೆ ಎಂದರು.
ರಾಜ್ಯದ ಮುಖ್ಯ ಮಂತ್ರಿ ಮಾನ್ಯ ಸಿದ್ದರಾಮಯ್ಯ, ಸಮಾಜ ಕಲ್ಯಾಣ ಸಚಿವರಾದ ಡಾ. ಹೆಚ್ ಸಿ ಮಹಾದೇವಪ್ಪ ಮತ್ತು ಪರಿಶಿಷ್ಟ ಜಾತಿಗಳ ಎಲ್ಲಾ ಸಚಿವರು ಮತ್ತು ಶಾಸಕರು, ಸಂಸದರು ಈ ನಿಟ್ಟಿನಲ್ಲಿ ಮುಕ್ತ ಮನಸ್ಸಿನಿಂದ ಪರಿಶಿಷ್ಟ ಜಾತಿಗಲ್ಲಿರುವ ಅತ್ಯಂತ ದುರ್ಬಲರಿಗೆ ಮತ್ತು ದುರ್ಬಲರಿಗೆ ಹೆಚ್ಚಿನ ಆದ್ಯತೆಯಲ್ಲಿ ನ್ಯಾಯ ಖಾತರಿ ಮಾಡಲು ದಿಟ್ಟ ಹಾಗೂ ದೃಢ ಹೆಜ್ಜೆ ಇರಿಸಬೇಕು ಎಂದು ಆಗ್ರಹಪಡಿಸಿದರು.
ಸುದ್ಧಿಗೋಷ್ಠಿಯಲ್ಲಿ ಪರಿಶಿಷ್ಟ ಜಾತಿಗಳು ಮತ್ತು ಬುಡಕಟ್ಟುಗಳ ಸಂಘ-ಸಂಸ್ಥೆಗಳ ಮಹಾಒಕ್ಕೂಟ ಅಧ್ಯಕ್ಷರಾದ ಲೋಲಾಕ್ಷ , ಪ್ರಧಾನ ಕಾರ್ಯದರ್ಶಿ ಕಾಂತಪ್ಪಅಲಂಗಾರ್ , ಕಾರ್ಯದರ್ಶಿ
ಪದ್ಮನಾಭ ಮೂಡಬಿದ್ರಿ ಸೇರಿದಂತೆ ಅನೇಕ ಗಣ್ಯರು ಭಾಗಿ
