ನಿಮ್ಮ ಮನೆ ಬಾಗಿಲಿಗೆ ಪಾಸ್ ಪೋರ್ಟ್ ಸೇವೆ! …..!

ಬೆಂಗಳೂರು:

  ಪಾಸ್‌ಪೋರ್ಟ್ ಅರ್ಜಿ ಸಂಗ್ರಹಿಸಲು ರಾಜ್ಯದ ದೂರದ ಪ್ರದೇಶಗಳಿಗೆ ತಲುಪಬಹುದಾದ ‘ ಸಂಚಾರಿ ಪಾಸ್ ಪೋರ್ಟ್ ವ್ಯಾನ್ ವೊಂದನ್ನು ವಿದೇಶಾಂಗ ಸಚಿವಾಲಯ ಮಂಗಳವಾರ ಬೆಂಗಳೂರಿನ ಪ್ರಾದೇಶಿಕ ಪಾಸ್‌ಪೋರ್ಟ್ ಕಚೇರಿಗೆ ಹಸ್ತಾಂತರಿಸಿದೆ. ಈ ವ್ಯಾನ್ ತೆರಳುವ ಸ್ಥಳಗಳ ಕುರಿತು ಚರ್ಚಿಸಲಾಗುತ್ತಿದ್ದು, ಶೀಘ್ರದಲ್ಲಿಯೇ ಇದನ್ನು ಸೇವೆಗೆ ಬಳಸಿಕೊಳ್ಳಲಾಗುತ್ತಿದೆ.

    ಇದು ತಾತ್ಕಾಲಿಕ ಪಾಸ್‌ಪೋರ್ಟ್ ಸೇವಾ ಕೇಂದ್ರದಂತಿರುತ್ತದೆ. ಇದು ಪಾಸ್‌ಪೋರ್ಟ್ ಸೇವಾ ಕೇಂದ್ರ (ಪಿಎಸ್‌ಕೆ) ಅಥವಾ ಅಂಚೆ ಕಚೇರಿ ಪಾಸ್‌ಪೋರ್ಟ್ ಸೇವಾ ಕೇಂದ್ರ (POPSK) ಹೊಂದಿರದ ಪ್ರದೇಶಗಳ ಮೇಲೆ ಗಮನ ಕೇಂದ್ರೀಕರಿಸುತ್ತದೆ.

   ಪಾಸ್ ಪೋರ್ಟ್ ಮಾಡಿಸಲು ಎಲ್ಲಾ ದಾಖಲೆ ಹಿಡಿದುಕೊಂಡು ದೂರದ ಪ್ರದೇಶಗಳಿಂದ ಬೆಂಗಳೂರಿಗೆ ಬಾರದಂತೆ ಜನರಿಗೆ ಈ ವ್ಯಾನ್ ಅನುಕೂಲ ಮಾಡಿಕೊಡಲಿದೆ ಎಂದು ಬೆಂಗಳೂರಿನ ಪ್ರಾದೇಶಿಕ ಪಾಸ್‌ಪೋರ್ಟ್ ಅಧಿಕಾರಿ ಕೆ ಕೃಷ್ಣ ಅವರು  ತಿಳಿಸಿದರು. ಇದನ್ನು ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ ಸಹಭಾಗಿತ್ವದಲ್ಲಿ ಮಾಡಲಾಗುತ್ತಿದೆ.

   ಈ ವ್ಯಾನ್ ದಿನಕ್ಕೆ ಗರಿಷ್ಠ 40 ಅರ್ಜಿಗಳನ್ನು ಸ್ವೀಕರಿಸುತ್ತದೆ. ನಿರ್ದಿಷ್ಟ ಪ್ರದೇಶಕ್ಕೆ ಭೇಟಿ ನೀಡುವ ವ್ಯಾನ್‌ನ ದಿನಾಂಕಗಳನ್ನು ಮುಂಚಿತವಾಗಿ ಪ್ರಚಾರ ಮಾಡಲಾಗುತ್ತದೆ. ಇದರಿಂದ ವೆಬ್‌ಸೈಟ್‌ನ ನಿರ್ದಿಷ್ಟ ವಿಭಾಗದಲ್ಲಿ ಮುಂಗಡ ಅಪಾಯಿಂಟ್ಮೆಂಟ್ ಕಾಯ್ದಿರಿಸಬಹುದಾಗಿದೆ. 

   ಈ ವ್ಯಾನ್‌ನಲ್ಲಿ ಹೊಸ ಪಾಸ್‌ಪೋರ್ಟ್‌ಗಳು ಅಥವಾ ಸಾಮಾನ್ಯ ಪ್ರಕ್ರಿಯೆಯಲ್ಲಿ ಪಾಸ್‌ಪೋರ್ಟ್‌ಗಳ ನವೀಕರಣವನ್ನು ಮಾತ್ರ ಮಾಡಬಹುದು. ತತ್ಕಾಲ್, ಪೊಲೀಸ್ ಕ್ಲಿಯರೆನ್ಸ್ ಪ್ರಮಾಣಪತ್ರಗಳು ಅಥವಾ ಪಾಸ್‌ಪೋರ್ಟ್ ಕಚೇರಿಗೆ ಇತರ ವಿವಿಧ ಅರ್ಜಿಗಳನ್ನು ಇಲ್ಲಿ ಸ್ವೀಕರಿಸಲಾಗುವುದಿಲ್ಲ ಎಂದು ಅವರು ಹೇಳಿದರು.