ಪಾವಗಡ :
ತುಮಕೂರು ಜಿಲ್ಲೆಯಲ್ಲೆ ಈ ಬಾರಿ ಗ್ರಾಮ ಪಂಚಾಯ್ತಿ ಚುನಾವಣೆಯಲ್ಲಿ ಜೆಡಿಎಸ್ ಮೇಲುಗೈ ಸಾಧಿಸಿದ್ದು ಪಕ್ಷದ ಕಾರ್ಯಕರ್ತರ ಹಾಗೂ ಮುಖಂಡರ ಪರಿಶ್ರಮಕ್ಕೆ ತಕ್ಕ ಪ್ರತಿಫಲ ಸಿಕ್ಕಿದೆ ಎಂದು ಜಿಲ್ಲಾ ಜೆಡಿಎಸ್ ಅಧ್ಯಕ್ಷ ಆರ್.ಸಿ.ಅಂಜಿನಪ್ಪ ತಿಳಿಸಿದರು.
ಅವರು ಪಟ್ಟಣದ ಗಾಯತ್ರಿ ಕಂಫರ್ಟ್‍ನಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದರು. ರಾಜ್ಯದಲ್ಲಿ ಸಮ್ಮಿಶ್ರ ಸರ್ಕಾರ ಅಧಿಕಾರಕ್ಕೆ ಬಂದ ನಂತರದ 14 ತಿಂಗಳಲ್ಲಿ ರೈತರ ಸಾಲಮನ್ನಾ ಸೇರಿದಂತೆ ದೀನದಲಿತರ ಏಳ್ಗೆಗೆ ಶ್ರಮಿಸಿದ್ದು. ಕರ್ನಾಟಕದಲ್ಲಿ ಮೊಟ್ಟ ಮೊದಲ ಬಾರಿಗೆ ಮಾಜಿ ಪ್ರಧಾನಿ ದೇವೇಗೌಡರು ಹಲವು ಸಮುದಾಯಗಳಿಗೆ ಮೀಸಲಾತಿಯನ್ನು ನೀಡಿದ್ದು, ಜೆಡಿಎಸ್ ಬೆಂಬಲಿತರು ಹೆಚ್ಚು ಚುನಾಯಿತರಾಗಲು ಸಾಧ್ಯವಾಯಿತು. ಜೆಡಿಎಸ್ ರಾಜ್ಯದಲ್ಲಿ ಪ್ರಬಲ ಶಕ್ತಿಯಾಗಿ ಬೆಳೆದಿದ್ದು, ಗ್ರಾಪಂ ಚುನಾವಣೆಯಲ್ಲಿ ಜಿಲ್ಲೆಯಲ್ಲಿ ಜೆಡಿಎಸ್ ಹೆಚ್ಚು ಗ್ರಾಪಂಗಳಲ್ಲಿ ಗೆಲ್ಲಲು ಸಹಕಾರಿಯಾಯಿತೆಂದರು.
ಮಾಜಿ ಶಾಸಕ ಕೆ.ಎಂ.ತಿಮ್ಮರಾಯಪ್ಪ ಮಾತನಾಡಿ, ತಾಲ್ಲೂಕಿನಲ್ಲಿ ಗ್ರಾಪಂನಲ್ಲಿ ಜೆಡಿಎಸ್ ಶಕ್ತಿ ಪ್ರದರ್ಶನ ಮಾಡಿ 16 ಗ್ರಾಪಂಗಳಲ್ಲಿ ಹಿಡಿತ ಸಾಧಿಸಿ, 5 ಗ್ರಾಪಂಗಳಲ್ಲಿ ಸಮಬಲ ಸಾಧಿಸಿದೆ. ಇದು ನಮ್ಮ ಪಕ್ಷದ ಕಾರ್ಯಕರ್ತರ, ಮುಖಂಡರ ಕಠಿಣ ಶ್ರಮಕ್ಕೆ ಸಂದ ಜಯವಾಗಿದೆ. ಹನುಮಯ್ಯನ ಪಾಳ್ಯ ಗ್ರಾಮದ ಪರಾಜಿತ ಜೆಡಿಎಸ್ ಪಕ್ಷದ ಅಭ್ಯರ್ಥಿಯ ಮೇಲೆ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಮತ್ತು ಇತರರು ಮಾರಾಂತಿಕ ಹಲ್ಲೆ ನಡೆಸಿದ್ದು, ಘಟನೆಯ ಬಗ್ಗೆ ಪಾವಗಡ ಪೊಲೀಸ್ ಠಾಣೆಯಲ್ಲಿ ದೂರು ಕೂಡ ದಾಖಲಾಗಿದೆ. ಪೊಲೀಸರು ಕಠಿಣ ಕ್ರಮಕ್ಕೆ ಮುಂದಾಗದಿದ್ದಲ್ಲಿ ಪಕ್ಷದ ವತಿಯಿಂದ ಹೋರಾಟ ನಡೆಸಲಾಗುತ್ತದೆ ಎಂದರು.
ಈ ಸಂದರ್ಭದಲ್ಲಿ ತಾಲ್ಲೂಕು ಅಧ್ಯಕ್ಷ ಬಲರಾಮ ರೆಡ್ಡಿ, ಪುರಸಭಾ ಮಾಜಿ ಅಧ್ಯಕ್ಷ ಮಾನಂ ವೆಂಕಟ ಸ್ವಾಮಿ, ಮುಖಂಡರಾದ ಮನುಮಹೇಶ್, ವಸಂತಕುಮಾರ್, ಅಕ್ಕಲಪ್ಪ ನಾಯ್ಡ್, ಎ.ಗೋಪಿ, ಯುನೀಸ್, ಗಂಗಾಧರ ನಾಯ್ಡ್ ಉಪಸ್ಥಿತರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
