ಮಧುಗಿರಿ
ತಾಲ್ಲೂಕಿನ ಮಿಡಿಗೇಶಿ ಹೋಬಳಿಯ ಚಿನ್ನೇನಹಳ್ಳಿಯ ಸಮೀಪದ ವೀರಣ್ಣನ ಬೆಟ್ಟವು ಕರಡಿಗಳ ವಾಸದ ತಾಣವಾಗಿ ಮಾರ್ಪಟ್ಟಿದೆ. ಈಗ ಮತ್ತೊಮ್ಮೆ ಐಡಿಹಳ್ಳಿ ಹೋಬಳಿಯ ನಲ್ಲಹಳ್ಳಿ ಕಾವಲ್ ಬಳಿಯ ಜಮೀನುಗಳಲ್ಲಿ ಮತ್ತೆ ಕರಡಿಗಳ ಹಿಂಡು ಸೋಮವಾರ ಮಧ್ಯಾಹ್ನ ಸಮಯದಲ್ಲಿ ಪ್ರತ್ಯಕ್ಷ ವಾಗಿದ್ದು, ಯಾವುದೇ ರೀತಿಯ ಅಹಿತಕರ ಘಟನೆ ಸಂಭವಿಸಿಲ್ಲ.
ಈ ಹಿಂದೆ ಮಿಡಿಗೇಶಿ ಹೋಬಳಿ ವ್ಯಾಪ್ತಿಯಲ್ಲಿ ಕರಡಿಯೊಂದು ಮನುಷ್ಯನನ್ನೇ ಕಚ್ಚಿ ಸಾಯಿಸಿದ್ದ ವಿಷಯ ಇಡೀ ರಾಜ್ಯದಲ್ಲೆಡೆ ಸುದ್ದಿಯಾಗಿತ್ತು. ಈ ಘಟನೆ ಮಾಸುವ ಮುನ್ನವೇ ಈ ಭಾಗದಲ್ಲಿ ಮತ್ತೆ ಕರಡಿಗಳು ಪ್ರತ್ಯಕ್ಷವಾಗುತ್ತಿರುವುದನ್ನು ಕಂಡ ಜನತೆ ಭಯಬೀತರಾಗಿದ್ದಾರೆ. ರಾತ್ರಿ ಹಾಗೂ ಬೆಳಗಿನ ಜಾವ ಆಹಾರ ಅರಸಿ ಸುತ್ತಮುತ್ತಲಿನ ಗ್ರಾಮಗಳಿಗೆ ಹಿಂಡು ಹಿಂಡಾಗಿ ಕರಡಿಗಳು ಲಗ್ಗೆ ಇಡುತ್ತಿವೆ.
ರಸ್ತೆ, ಹೊಲ, ಕೆರೆ, ಗಿಡಗಳ ಪೊದೆ ಸೇರಿದಂತೆ ಎಲ್ಲೆಂದರಲ್ಲಿ ಕರಡಿಗಳು ಪ್ರತ್ಯಕ್ಷವಾಗುತ್ತಿವೆ. ಇದರಿಂದ ಗ್ರಾಮಸ್ಥರು ಆತಂಕದಲ್ಲಿ ಮನೆಯಿಂದ ಆಚೆಗೆ ಬರಲು ಸಹ ಹೆದರುವ ಪರಿಸ್ಥಿತಿ ಉಂಟಾಗಿದೆ. ಬೇರೆ ಕಡೆ ಹಿಡಿದ ಕರಡಿಗಳನ್ನು ಇಲ್ಲಿ ತಂದು ಬಿಟ್ಟು ಹೋಗುತ್ತಿದ್ದಾರೆಂಬುದು ಗ್ರಾಮಸ್ಥರ ಆರೋಪವಾಗಿದೆ.
ಇನ್ನೂ ಉದ್ಯೋಗಸ್ಥರು ಕೆಲಸ ಮುಗಿಸಿ ರಾತ್ರಿ ಸಮಯ ಊರುಗಳಿಗೆ ತೆರಳಲು ಹೆದರುತ್ತಿದ್ದು, ಅರಣ್ಯ ಇಲಾಖೆ ಅಧಿಕಾರಿಗಳು ಇತ್ತ ಗಮನಹರಿಸಿ ಸಮಸ್ಯಯನ್ನು ಶೀಘ್ರ ಬಗೆಹರಿಸಬೇಕೆಂದು ಸ್ಥಳೀಯರು ಆಗ್ರಹಿಸಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
