ನಿಮ್ಹಾನ್ಸ್‌ ನಲ್ಲಿ 300 ಹಾಸಿಗೆಗಳ ಪಾಲಿಟ್ರಾಮಾ ಕೇಂದ್ರಕ್ಕೆ ಮನವಿ : ಡಾ ಸಿ ಎನ್‌ ಮಂಜುನಾಥ್

ಬೆಂಗಳೂರು:

    ನಿಮ್ಹಾನ್ಸ್‌ನ ಬೆಂಗಳೂರು ಉತ್ತರ ಕ್ಯಾಂಪಸ್‌ನಲ್ಲಿ 300 ಹಾಸಿಗೆಗಳ ಪಾಲಿಟ್ರಾಮಾ ಕೇಂದ್ರ ಮತ್ತು ಸ್ನಾತಕೋತ್ತರ ಸಂಸ್ಥೆ ಸ್ಥಾಪನೆಗೆ ಶೀಘ್ರವೇ ಅನುಮೋದನೆ ನೀಡುವಂತೆ ಕೋರಿ ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಜೆಪಿ ನಡ್ಡಾ ಅವರಿಗೆ ಬೆಂಗಳೂರು ಗ್ರಾಮಾಂತರ ಸಂಸದ ಡಾ.ಸಿ.ಎನ್.ಮಂಜುನಾಥ್ ಮನವಿ ಮಾಡಿದ್ದಾರೆ.

   ದೆಹಲಿಯಲ್ಲಿ ಈಚೆಗೆ ನಡ್ಡಾ ಅವರನ್ನು ಭೇಟಿ ಮಾಡಿದ್ದ ಸಂಸದರು, ಈ ಸಂಬಂಧ ಮನವಿ ಪತ್ರ ಸಲ್ಲಿಸಿದ್ದಾರೆ. ‘ನಿಮ್ಹಾನ್ಸ್‌ ಆರಂಭವಾದಾಗ ಪ್ರತಿದಿನ ಅಲ್ಲಿಗೆ ಬರುವ ರೋಗಿಗಳ ಸಂಖ್ಯೆ 250ರಷ್ಟು ಇತ್ತು. ಆದರೆ, ಈಗ ಆ ಸಂಖ್ಯೆ 2,500ಕ್ಕಿಂತಲೂ ಹೆಚ್ಚು. ದೇಶದಲ್ಲಿ ಸಂಭವಿಸುವ ಸಾವುಗಳಿಗೆ ರಸ್ತೆ ಅಪಘಾತವು ಐದನೇ ಅತಿದೊಡ್ಡ ಕಾರಣವಾಗಿದೆ. ಅಪಘಾತಗಳಲ್ಲಿ ತೀವ್ರವಾಗಿ ಗಾಯಗೊಂಡವರಿಗೆ ‘ಗೋಲ್ಡನ್‌ ಅವರ್‌’ನಲ್ಲಿ ಚಿಕಿತ್ಸೆ ನೀಡಿದರಷ್ಟೇ ಅವರನ್ನು ಉಳಿಸಿಕೊಳ್ಳಲು ಸಾಧ್ಯವಾಗುತ್ತದೆ. ಆದರೆ, ಜಾಗದ ಕೊರತೆ ಮತ್ತು ಪಾಲಿಟ್ರಾಮಾ ಕೇಂದ್ರ ಇಲ್ಲದೇ ಇರುವುದರಿಂದ ಹಲವು ರೋಗಿಗಳನ್ನು ಬೇರೆ ಆಸ್ಪತ್ರೆಗೆ ಕಳುಹಿಸಲಾಗುತ್ತಿದೆ’ ಎಂದು ಅವರು ಪತ್ರದಲ್ಲಿ ವಿವರಿಸಿದ್ದಾರೆ.

   ಹೀಗೆ ರೋಗಿಗಳನ್ನು ನಿಮ್ಹಾನ್ಸ್‌ನಿಂದ ಬೇರೆ ಆಸ್ಪತ್ರೆಗಳಿಗೆ ಸಾಗಿಸುವಾಗ ದಾರಿ ಮಧ್ಯೆಯೇ ಹಲವರು ಮೃತಪಡುತ್ತಾರೆ. ಇದು ಸಂಸ್ಥೆಗೂ ಕಳಂಕ. ಇನ್ನು ನಿಮ್ಹಾನ್ಸ್‌ಗೆ ಬರುವ ರೋಗಿಗಳಲ್ಲಿ ಬಹುತೇಕ ಮಂದಿ ಬಡವರು. ಖಾಸಗಿ ಆಸ್ಪತ್ರೆಗಳಲ್ಲಿ ದುಬಾರಿ ಚಿಕಿತ್ಸೆಯನ್ನು ಪಡೆಯಲು ಅವರಿಗೆ ಸಾಧ್ಯವಿಲ್ಲ. ಹೀಗಾಗಿಯೇ ನಿಮ್ಹಾನ್ಸ್‌ನ ಉತ್ತರ ಕ್ಯಾಂಪಸ್‌ನಲ್ಲಿ ಪಾಲಿಟ್ರಾಮಾ ಕೇಂದ್ರವನ್ನು ಆರಂಭಿಸುವ ಯೋಜನೆ ರೂಪಿಸಲಾಗಿತ್ತು.

   ಆದರೆ, ಸುಮಾರು 11 ವರ್ಷಗಳಿಂದಲೂ ಇದು ನನೆಗುದಿಗೆ ಬಿದ್ದಿದೆ ಎಂದು ಅವರು ಹೇಳಿದ್ದಾರೆ. ಈ ಕೇಂದ್ರದ ಸ್ಥಾಪನೆಗೆ ರಾಜ್ಯ ಸರ್ಕಾರವು ಈಗಾಗಲೇ ಭೂಮಿ ಮಂಜೂರು ಮಾಡಿದೆ. ಪಾಲಿಟ್ರಾಮಾ ಕೇಂದ್ರದ ವಿನ್ಯಾಸವನ್ನು ಒಳಗೊಂಡ ಪ್ರಸ್ತಾವವನ್ನು ಹಲವು ಬಾರಿ ಪರಿಷ್ಕರಿಸಲಾಗಿದೆ. ಅದಕ್ಕೆ ಸಂಸ್ಥೆಯ ಆಡಳಿತ ಮಂಡಳಿಯೂ ಒಪ್ಪಿಗೆ ನೀಡಿದೆ. ವಿಸ್ತೃತ ಯೋಜನಾ ವರದಿಯನ್ನು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯಕ್ಕೆ ಈಗಾಗಲೇ ಸಲ್ಲಿಸಲಾಗಿದೆ. ಈ ಪ್ರಸ್ತಾವಕ್ಕೆ ಶೀಘ್ರವೇ ಅನುಮೋದನೆ ನೀಡಬೇಕು ಎಂದು ಅವರು ಮನವಿ ಮಾಡಿದ್ದಾರೆ. ರಾಜ್ಯ ಸರ್ಕಾರ ಈಗಾಗಲೇ ಈ ಕೇಂದ್ರ ಸ್ಥಾಪನೆಗಾಗಿ ಸುಮಾರು 37 ಎಕರೆ ಭೂಮಿಯನ್ನು ಮಂಜೂರು ಮಾಡಿದೆ ಎಂದು ಹೇಳಿದ್ದಾರೆ.

Recent Articles

spot_img

Related Stories

Share via
Copy link
Powered by Social Snap