ಬಾಲ್ಯ ವಿವಾಹ ಇನ್ನೂ ಜೀವಂತ..!

     ಬಾಲ್ಯ ವಿವಾಹಗಳನ್ನು ಕಡ್ಡಾಯವಾಗಿ ನಿಷೇಧಿಸುವ ನಿಟ್ಟಿನಲ್ಲಿ ಯೋಜನೆಗಳು ರೂಪುಗೊಳ್ಳುತ್ತಲೇ ಇದ್ದು, ಕಾನೂನಿನಲ್ಲಿಯೂ ಸಾಕಷ್ಟು ಮಾರ್ಪಾಟುಗಳನ್ನು ಮಾಡಲಾಗಿದೆ. 2006 ರ ಬಾಲ್ಯ ವಿವಾಹ ನಿಷೇಧ ಅಧಿನಿಯಮಕ್ಕೆ 2018 ರಲ್ಲಿ ತಿದ್ದುಪಡಿ ತರಲಾಗಿದೆ. ಆ ಮೂಲಕ ಶಿಕ್ಷೆಯ ಸ್ವರೂಪವನ್ನು ಬದಲಾಯಿಸಿದ್ದು, ಕೆಲವೊಂದು ಅಧಿಕಾರಿ ವರ್ಗಕ್ಕೆ ವಿಶೇಷ ಅಧಿಕಾರಗಳನ್ನು ನೀಡಲಾಗಿದೆ.
    ಜಿಲ್ಲೆಯ ಕೆಲವು ಪ್ರದೇಶಗಳಲ್ಲಿ ಹಾಗೂ ಸಮುದಾಯಗಳಲ್ಲಿ ಇಂದಿಗೂ ಜೀವಂತ ಇರುವ ಅಪ್ರಾಪ್ತ ವಯಸ್ಸಿನ ವಿವಾಹಗಳ ಆಚರಣೆ ಕುರಿತಾಗಿ ವಿಶ್ಲೇಷಣೆ ಮತ್ತು ಬದಲಾವಣೆಯ ಕಾನೂನು ಏನು ಎಂಬ ಬಗ್ಗೆ ಒಂದು ಸಂಕ್ಷಿಪ್ತ ನೋಟ ಇಲ್ಲಿದೆ.ಈ ವಾರದ `ಪ್ರಗತಿ’ ವಾಹಿನಿಯ ಗುರುವಾರದ ಕಾನೂನು ಮಾಲಿಕೆಯಲ್ಲಿ ಮೂಡಿಬಂದ ಬಾಲ್ಯ ವಿವಾಹ ನಿಷೇಧ ಮತ್ತು ಬದಲಾದ ಕಾನೂನುಗಳು ಕುರಿತ ಮಾಲಿಕೆಯಲ್ಲಿ ವಕೀಲರು ಈ ಕೆಳಕಂಡಂತೆ ಕಾನೂನಿನ ಅಂಶಗಳನ್ನು ವಿವರಿಸಿದರು.
     2006ರ ಬಾಲ್ಯ ವಿವಾಹ ನಿಷೇಧ ಒಂದು ವಿಶೇಷ ಕಾಯಿದೆ. ಇದು ಎಲ್ಲ ಧರ್ಮಕ್ಕೂ ಒಳಗೊಳ್ಳುವಂತಹ ಅಧಿನಿಯಮ. ಹಿಂದೂ, ಮುಸ್ಲಿಂ, ಕ್ರೈಸ್ತರು ಹೀಗೆ ಭಾರತದಲ್ಲಿರುವ ಎಲ್ಲ ವರ್ಗಕ್ಕೂ ಇದು ಅನ್ವಯಿಸುತ್ತದೆ. ಯಾವುದೇ ಧರ್ಮ ಮತ್ತು ಜಾತಿಯ ಜನ ನಮಗೆ ವಯಕ್ತಿಕ ಕಾನೂನು ಬೇರೆಯೇ ಇದೆ ಎಂದು ಪ್ರತಿಪಾದಿಸುವಂತಿಲ್ಲ. 18 ವರ್ಷದ ಒಳಗಿನ ಬಾಲಕಿಯರು, 21 ವರ್ಷದೊಳಗಿನ ಬಾಲಕರು ವಿವಾಹವಾಗುವುದನ್ನು ಈ ಅಧಿನಿಯಮ ನಿಷೇಧಿಸಿದೆ. ಒಂದು ವೇಳೆ ಕಾನೂನು ಉಲ್ಲಂಘಿಸಿದ್ದೇ ಆದಲ್ಲಿ ಕಾನೂನು ತನ್ನದೇ ಆದ ಕ್ರಮ ಕೈಗೊಳ್ಳುತ್ತದೆ. 
     ಈ ಹಿಂದಿನ ಕಾನೂನಿನಲ್ಲಿ ಒಂದು ವರ್ಷ ಜೈಲು ಶಿಕ್ಷೆ ಇತ್ತು. ಬದಲಾದ ತಿದ್ದುಪಡಿ ಕಾನೂನಿನಲ್ಲಿ ಒಂದು ವರ್ಷದಿಂದ 2 ವರ್ಷಗಳವರೆಗೆ ವಿಸ್ತರಿಸಬಹುದಾದ ಕಠಿಣ ಕಾರಾಗೃಹ ವಾಸ ಅಥವಾ ಒಂದು ಲಕ್ಷ ರೂ.ಗಳವರೆಗೆ ವಿಸ್ತರಿಸಬಹುದಾದ ದಂಡ ಅಥವಾ ಅವೆರಡನ್ನೂ ವಿಧಿಸಬಹುದಾದ ಶಿಕ್ಷೆ ಒಳಗೊಂಡಿದೆ. ಅದೇ ರೀತಿ ಬಾಲ್ಯ ವಿವಾಹ ನಿಷೇಧ ಅಧಿಕಾರಿಗಳಿಗೂ ವಿಶೇಷ ಬಲ ತಂದುಕೊಟ್ಟಿದೆ. ಇದು ಯಾವುದೇ ಒಂದು ಇಲಾಖೆಗೆ ಅನ್ವಯಿಸುವ ಕಾರ್ಯವಲ್ಲ. ತಿದ್ದುಪಡಿ ಕಾನೂನಿನ ಪ್ರಕಾರ ಪೊಲೀಸರೇ ನೇರವಾಗಿ ಸ್ವಯಂ ಪ್ರೇರಿತವಾಗಿ ದೂರು ದಾಖಲಿಸಬಹುದು. ಖಚಿತ ಮಾಹಿತಿ ಆಧರಿಸಿ ನ್ಯಾಯಾಲಯವೇ ದೂರು ದಾಖಲಿಸಿಕೊಳ್ಳಬಹುದು. ಹೀಗಾಗಿ ಕಾನೂನಿನ ಅಸ್ತ್ರದಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲದಂತಹ ಅಂಶಗಳನ್ನು ಅಳವಡಿಕೆ ಮಾಡಲಾಗಿದೆ.
    ಬಾಲ್ಯ ವಿವಾಹ ನಿಷೇಧ ಕಾಯ್ದೆ 2006ರ ಅನ್ವಯ ಇಂತಹ ವಿವಾಹಗಳನ್ನು ಮಾಡಿಕೊಳ್ಳುವ ವ್ಯಕ್ತಿ, ನೆರವೇರಿಸುವವರು, ಪ್ರೇರೇಪಿಸುವವರು, ಸಹಕರಿಸುವವರು, ಪುರೋಹಿತರು, ಲಗ್ನಪತ್ರಿಕೆ ಮುದ್ರಿಸುವವರು, ಛತ್ರಗಳ ಮಾಲೀಕರು ಇತ್ಯಾದಿಯಾಗಿ ಎಲ್ಲರೂ ಶಿಕ್ಷಾರ್ಹ ವ್ಯಕ್ತಿಗಳಾಗುತ್ತಾರೆ. ಬಾಲ್ಯ ವಿವಾಹ ಎಂದು ಗೊತ್ತಿದ್ದೂ ಮದುವೆಯಲ್ಲಿ ಭಾಗವಹಿಸುವ ಎಲ್ಲರ ಮೇಲೆಯೂ ಕಾನೂನಿನ ತೂಗುಗತ್ತಿ ಇದ್ದೇ ಇರುತ್ತದೆ. 
   ಒಂದೇ ಬಾರಿಗೆ ಕಾನೂನಿನ ಅಸ್ತ್ರ ಝಳಪಿಸುವ ಮುನ್ನ ಮೂರು ಹಂತದ ಅನುಬಂಧಗಳನ್ನು ಕಾಯಿದೆ ನೀಡಿದೆ. ಮೊದಲನೆಯ ದಾಗಿ ವಿವಾಹಗಳನ್ನು ತಡೆಯುವುದು. ಇಲ್ಲಿಯಾದರು ಬಾಲ್ಯ ವಿವಾಹಗಳು ನಡೆಯುತ್ತಿವೆ ಎಂದು ಗೊತ್ತಾದರೆ ಅಂತಹ ಕಡೆ ತೆರಳಿ ಅವರ ಮನವೊಲಿಸುವ ಕೆಲಸವನ್ನು ಬಾಲ್ಯ ವಿವಾಹ ನಿಷೇಧ ಅಧಿಕಾರಿಗಳು ಜರುಗಿಸುತ್ತಾರೆ. ವಿವಾಹ ನಡೆಯುತ್ತಿದ್ದರೆ ಅಲ್ಲಿಗೂ ತೆರಳಿ ಮದುವೆಯನ್ನು ನಿಲ್ಲಿಸುತ್ತಾರೆ.
   ಅವರ ಕಡೆಯಿಂದ ಒಂದು ಮುಚ್ಚಳಿಕೆ ಪತ್ರವನ್ನು ಬರೆಯಿಸಿಕೊಂಡು ಎಚ್ಚರಿಕೆ ನೀಡಿ ಬರಲಾಗುತ್ತದೆ. ಈ ಸಂದರ್ಭದಲ್ಲಿ ಬಾಲಕಿಗೆ ತೊಂದರೆಯಾಗುವ ಸಂಭವ ಕಂಡುಬಂದಲ್ಲಿ ಆಕೆಯ ರಕ್ಷಣೆಗೂ ಅಧಿಕಾರಿಗಳು ಸಲಹೆ ನೀಡುತ್ತಾರೆ. ಕೊನೆಯ ಹಂತವೇ ಕಾನೂನಿನ ಕ್ರಮ ಜರುಗಿಸುವುದು. ಮುಚ್ಚಳಿಕೆ ಬರೆದುಕೊಟ್ಟು ಅದನ್ನು ಉಲ್ಲಂಘಿಸಿದರೆ ಅಥವಾ ಈಗಾಗಲೇ ವಿವಾಹ ನಡೆದು ಹೋಗಿದ್ದರೆ ಕಾನೂನಿನ ಪ್ರಕಾರ ಎಫ್.ಐ.ಆರ್. ದಾಖಲಾಗುತ್ತದೆ. 
    ಒಮ್ಮೆ ಎಫ್.ಐ.ಆರ್. ದಾಖಲಾದರೆ ಅದರಲ್ಲಿ ಬಾಲ್ಯ ವಿವಾಹ ನಿಷೇಧ ಕಾಯ್ದೆಯ ಕಲಂ ಸೇರಿದಂತೆ ಐಪಿಸಿ ಕಲಂ 366 ಎ ಹಾಗೂ ಪೋಕ್ಸೋ ಕಾಯ್ದೆಯ ಕಲಂಗಳು ಸಹ ಸೇರ್ಪಡೆಯಾಗುತ್ತವೆ. ಇದು ಆಯಾ ಪ್ರಕರಣಗಳಿಗೆ ಸಂಬಂಧಿಸಿದಂತೆ. ಜಾಮೀನಿಯವಲ್ಲದ, ಗುರುತರ ಅಪರಾಧಗಳು ಇವಾಗಿರುವ ಕಾರಣ ಬಾಲ್ಯ ವಿವಾಹಗಳಲ್ಲಿ ಭಾಗವಹಿಸುವವರು ತುಂಬಾ ಎಚ್ಚರಿಕೆಯ ಹೆಜ್ಜೆ ಇಡಬೇಕಾದ ಅಗತ್ಯವಿದೆ.
    ಅಂದರೆ, ಯಾರೇ ಆಗಲಿ ವಿವಾಹಗಳಿಗೆ ಹೋಗುವ ಮುನ್ನ ಇಂತಹ ವಿವಾಹಕ್ಕೆ ಒಳಗಾಗುತ್ತಿರುವವರು ಪ್ರಾಪ್ತ ವಯಸ್ಕರಾಗಿದ್ದಾರೆಯೇ ಎಂಬ ಮಾಹಿತಿಯನ್ನು ತಿಳಿದುಕೊಳ್ಳಬೇಕು. ಅದು ಸಂಬಂಧಿಕರಾಗಿರಲಿ ಅಥವಾ ಸ್ನೇಹಿತರಾಗಿರಲಿ ಕಾನೂನಾತ್ಮಕವಾಗಿಯೇ ನಡೆದುಕೊಳ್ಳುವುದು ಒಳ್ಳೆಯದು. 
     ತಿದ್ದುಪಡಿ ಕಾನೂನಿನ ಮತ್ತೊಂದು ಮುಖ್ಯ ಅಂಶವೆಂದರೆ, ಅಪ್ತಾಪ್ತ ವಯಸ್ಸಿನ ವಿವಾಹಗಳನ್ನು ಕಾನೂನು ಶೂನ್ಯಗೊಳಿಸಿದೆ. ಅಂದರೆ, ಇಂತಹ ವಿವಾಹಗಳಿಗೆ ಯಾವುದೇ ಮಾನ್ಯತೆ ಇರುವುದಿಲ್ಲ. ದಂಪತಿಗಳ ಹಕ್ಕು ರಕ್ಷಣೆಗಾಗಿ ಮುಂದೆ ನ್ಯಾಯಾಲಯದಲ್ಲಿ ಹೋರಾಡಲು ಅವಕಾಶವಿರುವುದಿಲ್ಲ. ಇಂತಹ ಹಲವಾರು ಸಮಸ್ಯೆಗಳಿಗೆ ಸಿಲುಕಬೇಕಾಗುತ್ತದೆ. ಆರೋಗ್ಯದ ದೃಷ್ಟಿಯಿಂದ ಹೇಗೆ ಇಂತಹ ವಿವಾಹಗಳು ಮಾರಕವೋ ಕಾನೂನಿನ ದೃಷ್ಟಿಯಿಂದಲೂ ಅಷ್ಟೇ ಎಚ್ಚರಿಕೆಯ ಸಂದೇಶವನ್ನು ನೀಡಲಾಗಿದೆ. `ಪ್ರಗತಿ’ ವಾಹಿನಿ ಈ ವಿಶೇಷ ಚರ್ಚೆಯಲ್ಲಿ ವಕೀಲರಾದ ಎಸ್.ವಿ.ರವೀಂದ್ರನಾಥ ಠಾಗೂರ್ ಹಾಗೂ ಕವಿತಾ ಅವರುಗಳು ಪಾಲ್ಗೊಂಡಿದ್ದರು.
ಸಾ.ಚಿ.ರಾಜಕುಮಾರ.
ಪ್ರಜಾಪ್ರಗತಿ ತುಮಕೂರು
   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap