ಗ್ರಾಹಕರ ಜೇಬಿಗೆ ಕತ್ತರಿ ಹಾಕುವ ಬ್ಯಾಂಕುಗಳು (ಭಾಗ-5)

ಎಟಿಎಂ ಶುಲ್ಕವೇ ಹೆಚ್ಚು

ಬ್ಯಾಂಕ್ ಖಾತೆಯಲ್ಲಿರುವ ಹಣವನ್ನು ಅವಶ್ಯಕತೆಗೆ ತಕ್ಕಂತೆ ಉಪಯೋಗಿಸಲು ಸುಲಭ ಸಾಧ್ಯವಿಲ್ಲ. ಹಣವನ್ನು ಯಾವಾಗ ಬೇಕಾದರೂ ಖಾತೆಗೆ ತುಂಬಬಹುದು. ಆದರೆ ತೆಗೆದುಕೊಳ್ಳುವಾಗ ಅಷ್ಟು ಸುಲಭ ವಿಧಾನಗಳಿಲ್ಲ. ನಗದು ನೀಡಲು ಬ್ಯಾಂಕ್‍ಗಳು ನಿರಾಕರಿಸುತ್ತವೆ ಅಥವಾ ಸತಾಯಿಸುತ್ತವೆ. ಎಟಿಎಂ ಮೂಲಕ ಹಣ ಪಡೆದುಕೊಳ್ಳಿ ಎಂದು ಹೇಳುವ ಸಾಧ್ಯತೆಗಳು ಹೆಚ್ಚು. 

ಎಟಿಎಂ ಮೂಲಕ ಮೊದಲ ಐದು ಬಾರಿ ಉಚಿತವಾಗಿ ಹಣ ಪಡೆಯಬಹುದು. ಆರನೇ ಬಾರಿಯಿಂದ ಎಟಿಎಂ ಬಳಸಿ ಹಣ ಪಡೆಯಬೇಕಾದರೆ ಶುಲ್ಕ ಭರಿಸಬೇಕಾಗುತ್ತದೆ. ಅಲ್ಲದೆ ಹೆಚ್ಚುವರಿ ಶುಲ್ಕದ ಹಣ ಬ್ಯಾಂಕ್‍ಗೆ ಸೇರುವುದಿಲ್ಲ. ಬದಲಿಗೆ ನಮಗೆ ನೀಡಲಾದ ಎಟಿಎಂ ಕಾರ್ಡ್ (ವಿಸಾ, ರೂಪೆ, ಮಾಸ್ಟರ್ ಕಾರ್ಡ್) ತಯಾರಿಸುವ ಕಂಪನಿಗೆ ಹೋಗುತ್ತದೆ. ಇದರಿಂದ ಬ್ಯಾಂಕ್‍ಗೂ ಲಾಭವಿಲ್ಲ. ಖಾತೆದಾರನಿಗೂ ಲಾಭವಿಲ್ಲ. ಬದಲಾಗಿ ಮೂರನೇ ವ್ಯಕ್ತಿ ಇದರ ಲಾಭ ಪಡೆಯುತ್ತಿದ್ದಾನೆ. 

ಬಜೆಟ್ ನಂತರದಲ್ಲಿ ಆದ ಬದಲಾವಣೆಗಳ ಪ್ರಕಾರ ಆಯಾ ಬ್ಯಾಂಕ್‍ನ ಎಟಿಎಂ ಮಷಿನ್‍ಗಳಲ್ಲಿ ಹಣ ತೆಗೆದುಕೊಂಡರೆ ಯಾವುದೇ ಶುಲ್ಕ ಭರಿಸಬೇಕಿಲ್ಲ. ಬದಲಾಗಿ ಇತರೆ ಬ್ಯಾಂಕ್ ಎಟಿಎಂಗಳಲ್ಲಿ ಹಣ ಬಿಡಿಸಿಕೊಂಡಾಗ ಮಾತ್ರ ಶುಲ್ಕ ಭರಿಸಬೇಕಾಗುತ್ತದೆ. ಕೆಲ ಖಾತೆದಾರರಿಗೆ ಪ್ಲಾಟಿನಂ ಪ್ಲಾನ್ ಕಾರ್ಡ್‍ದಾರರಿಗೆ ಅನಿಯಮಿತ ಹಣ ಬಿಡಿಸಿಕೊಳ್ಳಬಹುದಾಗಿದೆ. 

   ಎಟಿಎಂ ಕಾರ್ಡ್‍ಗಳು ಅಸ್ತಿತ್ವಕ್ಕೆ ಬಂದ ನಂತರ ಮತ್ತಷ್ಟು ಸಮಸ್ಯೆಗಳು ಎದುರಾಗುತ್ತಿವೆ. ಹಿಂದೆಲ್ಲಾ ಬ್ಯಾಂಕಿಗೆ ತೆರಳಿ ನಿಗದಿತ ನಮೂನೆಯ ಚಲನ್ ಭರ್ತಿ ಮಾಡಿ ನೀಡಬೇಕಿತ್ತು. ಅದಕ್ಕೆ ಒಂದು ಟೋಕನ್ ಕೊಡುತ್ತಿದ್ದರು. ಕೂಗಿ ಕರೆದಾಗ ನಮ್ಮ ಹಣ ಪಾವತಿ ಮಾಡುತ್ತಿದ್ದರು. ಇದು ಬ್ಯಾಂಕ್‍ಗಳಲ್ಲಿ ನಡೆದುಕೊಂಡು ಬಂದಿದ್ದ ಟೋಕನ್ ಸಿಸ್ಟಂ ವ್ಯವಸ್ಥೆ. ಈಗ ಯಾವ ಬ್ಯಾಂಕಿಗೆ ಹೋದರೂ ನೇರವಾಗಿ ನಗದು ನೀಡಲು ನಿರಾಕರಿಸುತ್ತಾರೆ. ನೀವು ಎಟಿಎಂ ಕಾರ್ಡ್ ಮಾಡಿಸಿಲ್ಲವೆ ಎಂದು ಪ್ರಶ್ನಿಸುತ್ತಾರೆ ಇಲ್ಲ ಎಂದರೆ ಬೇಗ ಮಾಡಿಸಿಕೊಳ್ಳಿ ಎನ್ನುತ್ತಾರೆ. ಹೀಗೆ ಎಟಿಎಂ ಕಾರ್ಡ್‍ಗಳನ್ನು ಮಾಡಿಸಲು ಒತ್ತಾಯಪೂರ್ವಕ ಹೊರೆ ಹಾಕುವ ಬ್ಯಾಂಕ್ ಸಿಬ್ಬಂದಿಗಳು ಒಂದು ವೇಳೆ ಎಟಿಎಂ ಕಾರ್ಡ್ ಬಳಕೆಯಲ್ಲಿ ತಾಂತ್ರಿಕ ದೋಷಗಳು ಕಂಡು ಬಂದರೆ ಅಪ್ಪಿತಪ್ಪಿಯೂ ಆ ಬಗ್ಗೆ ಮಾಹಿತಿ ನೀಡುವುದಿಲ್ಲ. ಕಾರ್ಡ್‍ನಲ್ಲಿ ದೋಷವಿರಬಹುದು, ಕಷ್ಟಮರ್‍ಕೇರ್‍ಗೆ ಕರೆ ಮಾಡಿ ಎಂದು ಯಾವುದೋ ಸಬೂಬುಗಳನ್ನು ಹೇಳುತ್ತಾರೆ. 

    ಇಲ್ಲಿ ಎದುರಾಗುವ ಪ್ರಶ್ನೆ ಎಂದರೆ ಎಟಿಎಂ ಕಾರ್ಡ್‍ಗಳನ್ನು ವಿತರಿಸುವವರು ಬ್ಯಾಂಕುಗಳು. ಈ ಕಾರ್ಡ್‍ಗಳು ದೋಷಪೂರಿತವಾದರೆ ಬ್ಯಾಂಕ್‍ಗಳು ಹೊಣೆ ಹೊರಬೇಕು. ಆದರೆ ಅದಕ್ಕೂ ನಮಗೂ ಸಂಬಂಧವಿಲ್ಲ ಎಂಬಂತೆ ವರ್ತಿಸಿದರೆ ಗ್ರಾಹಕರ ಗತಿಯೇನು? 

    ಕಸ್ಟಮರ್‍ಕೇರ್ ಅಥವಾ ಯಾವುದೋ ಸಂಬಂಧಿಸಿದ ನಂಬರ್‍ಗಳಿಗೆ ಕರೆ ಮಾಡಿದರೆ ಇಂಗ್ಲೀಷ್‍ನಲ್ಲೋ ಅಥವಾ ಕನ್ನಡದಲ್ಲೂ ಮಾಹಿತಿ ಸಿಗಬಹುದು. ಗ್ರಾಮೀಣ ಪ್ರದೇಶದ ಜನರಿಗೆ, ವ್ಯವಹಾರ  ಬಾರದ ಜನರು ಏನು ಮಾಡಬೇಕು ಎಂಬ ಪ್ರಶ್ನೆ ಏಳುತ್ತವೆ.  ಗ್ರಾಹಕರ ಈ ದೌರ್ಬಲ್ಯಗಳನ್ನು ಅರಿತೇ ಬ್ಯಾಂಕ್ ಸುತ್ತಾಮುತ್ತಾ ಕಳ್ಳಕಾಕರು ಕಾಯುತ್ತಿರುತ್ತಾರೆ. ಸಹಾಯ ಮಾಡುವವರಂತೆ ನಟಿಸಿ ಹಣ ದೋಚುವ ಸಂದರ್ಭಗಳು ಸೃಷ್ಟಿಯಾಗುತ್ತಿವೆ. ನನ್ನ ಖಾತೆ ಯಾರಿಗೂ ಗೊತ್ತಾಗಬಾರದು ಎಂದು ಈ ಹಿಂದಿನಿಂದಲೂ  ಗ್ರಾಹಕರು ಪ್ರತಿಪಾದಿಸಿಕೊಂಡು ಬಂದಿದ್ದರು. ಈಗ ನೋಡಿದರೆ ಎಲ್ಲವೂ ಬಟಾಬಯಲಾಗುತ್ತಿವೆ. ತಾಂತ್ರಿಕ ದೋಷಗಳು ಏನೆಂಬುದು ಯಾರಿಗೂ ಅರ್ಥವಾಗುವುದಿಲ್ಲ. ಬ್ಯಾಂಕ್ ಒಳಗೆ ಸಿಬ್ಬಂದಿಯ ಜೊತೆ ಮಾತನಾಡಿದರೆ ಸರಿಯಾದ ಉತ್ತರಗಳು ಸಿಗುವುದಿಲ್ಲ. ಮನುಷ್ಯರ ಜೊತೆ ಮಾತನಾಡುವ ಬದಲು ಈಗ  ಯಂತ್ರಗಳ ಜೊತೆ ಮಾತನಾಡ ಬೇಕಿರುವುದರಿಂದ ಅಂತಹ ತಂತ್ರಗಾರಿಕೆ, ನಾವಿನ್ಯತೆ ಎಷ್ಟು ಜನರಿಗೆ ಗೊತ್ತು.  ಏನು ಅರಿಯದ ಅಮಾಯಕರು ಮತ್ಯಾರದೋ ಸಹಾಯಕ್ಕೆ ಮುಂದಾಗಿ ಪಂಗನಾಮ ಹಾಕಿಸಿಕೊಳ್ಳುತ್ತಿರುವ ಪ್ರಕರಣಗಳು ಹೆಚ್ಚುತ್ತಿವೆ. 

ದೈನಂದಿನ ವ್ಯವಹಾರಗಳಲ್ಲಿ ತೊಡಗುವವರಿಗೆ ಎಟಿಎಂ ಬಳಕೆಯ ಜ್ಞಾನವಿದೆ. ಯಾವಾಗಲೋ ಒಮ್ಮೆ ಹಣ ಪಡೆಯುವ ವ್ಯಕ್ತಿಗಳು, ಅನಕ್ಷರಸ್ಥರು, ಅವಿದ್ಯಾವಂತರು, ಕೂಲಿ ಕಾರ್ಮಿಕರಿಗೆ ಈ ಕಾರ್ಡ್‍ಗಳ ಬಳಕೆಯ ಜ್ಞಾನವಿಲ್ಲ. ಎಟಿಎಂ ಮೆಶಿನ್‍ಗಳ ಮುಂದೆ ನಿಂತು ಪರದಾಡುತ್ತಾರೆ. ಹಿಂದೆ ನಿಂತಿರುವವರು ಕಾತರಿಸುತ್ತಾರೆ. ಇಂತಹವರ ಅಜ್ಞಾನವನ್ನೇ ಬಂಡವಾಳ ಮಾಡಿಕೊಳ್ಳುವ ವ್ಯಕ್ತಿಗಳು ಈಗ ಹೆಚ್ಚಾಗುತ್ತಿದ್ದಾರೆ. ಎಟಿಎಂ ಬಳಕೆಯ ಬಗ್ಗೆ ಬ್ಯಾಂಕುಗಳು ಯಾವುದೇ ಮಾಹಿತಿ ನೀಡುವುದಿಲ್ಲ. ಸೆಕ್ಯೂರಿಟಿ ಕೆಲವು ಕಡೆ ಇರುವುದನ್ನು ಹೊರತುಪಡಿಸಿದರೆ ಅಲ್ಲಿನ ತಾಂತ್ರಿಕ ಅಡಚಣೆಗಳ ಬಗ್ಗೆ ಮಾಹಿತಿ ನೀಡುವವರೂ ಇರುವುದಿಲ್ಲ. 

ಎಟಿಎಂ ಕಾರ್ಡ್ ಬಳಕೆದಾರರು ಹಲವು ರೀತಿಯ ಸಂಕಷ್ಟಗಳನ್ನು ಎದುರಿಸುತ್ತಿದ್ದಾರೆ. ಕೆಲವೊಮ್ಮೆ ಹಣ ಮೆಶಿನ್‍ನಲ್ಲಿಯೇ ಸಿಕ್ಕಿ ಹಾಕಿಕೊಂಡು ವಾಪಸ್ ಹೋಗುತ್ತದೆ. ಸ್ಲಿಪ್ ಮಾತ್ರ ಬಂದಿರುತ್ತದೆ. ಇದನ್ನು ಸರಿಪಡಿಸಲು ಮತ್ತೆ ಬ್ಯಾಂಕಿಗೆ ಹೋಗಬೇಕು. 

ಹಳೆಯ ಎಟಿಎಂ ಕಾರ್ಡ್‍ಗಳನ್ನು ನಕಲಿ ಮಾಡಿ ಬಳಸುತ್ತಿದ್ದ ಪ್ರಕರಣಗಳು ಹೆಚ್ಚತೊಡಗಿದಂತೆ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಒಂದು ಸೂಚನೆ ಹೊರಡಿಸಿ ಎಲ್ಲಾ ಬ್ಯಾಂಕುಗಳೂ ಇವಿಎಂ ಚಿಪ್ ಇರುವ ನೂತನ ಕಾರ್ಡ್‍ಗಳನ್ನು ವಿತರಿಸಬೇಕೆಂಬ ಸೂಚನೆ ನೀಡಿತ್ತು. ಈ ಹಿನ್ನೆಲೆಯಲ್ಲಿ ಜನವರಿ 2019 ರಿಂದಲೇ ಹೊಸ ಕಾರ್ಡ್‍ಗಳನ್ನು ವಿತರಿಸಲಾಗಿದೆ. ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ತನ್ನ ಯೋನೋ ಮೊಬೈಲ್ ಆ್ಯಪ್‍ನಿಂದ ನೆರವಿನಿಂದ ಗ್ರಾಹಕರು ಡೆಬಿಟ್ ಕಾರ್ಡ್ ಇಲ್ಲದೆಯೇ ಎಟಿಎಂಗಳಿಂದ ಹಣ ಪಡೆಯುವ ಸೌಲಭ್ಯ ಜಾರಿಗೆ ತಂದಿದೆ. ಕೆನರಾ ಬ್ಯಾಂಕ್ ಸೇರಿದಂತೆ ಇತರೆ ಬ್ಯಾಂಕುಗಳೂ ಸಹ ಈ ಮಾದರಿಯನ್ನು ಅನುಸರಿಸುತ್ತಿವೆ. 

ಎಟಿಎಂಗಳಲ್ಲಿ ಹೆಚ್ಚುತ್ತಿರುವ ವಂಚನೆ ತಡೆಗಟ್ಟಲು ಗ್ರಾಹಕರು ಒಂದು ಬಾರಿ ಹಣ ಪಡೆದ ನಂತರ 6 ರಿಂದ 12 ಗಂಟೆಗಳತನಕ ಎಟಿಎಂ ಬಳಕೆ ಮೇಲೆ ನಿರ್ಬಂಧ ವಿಧಿಸುವ ಬಗ್ಗೆಯೂ ಬ್ಯಾಂಕಿಂಗ್ ವಲಯದಲ್ಲಿ ಈಗ ಚಿಂತನೆಗಳು ನಡೆದಿವೆ. ಇದಕ್ಕೆ ಕಾರಣವೆಂದರೆ, ಯಾವುದೋ ಮೂಲಗಳಿಂದ ಗ್ರಾಹಕರ ಸಂಖ್ಯೆಯನ್ನು ಮತ್ತು ಮಾಹಿತಿಯನ್ನು ಪಡೆದು (ಸಂಬಂಧಿಸಿದ ಗ್ರಾಹಕರಿಂದಲೇ ಪಡೆಯುತ್ತಾರೆ) ಕೆಲವೇ ನಿಮಿಷಗಳ ಅಂತರದಲ್ಲಿ ಮೂರ್ನಾಲ್ಕು ಬಾರಿ ಸಾವಿರಾರು ರೂ.ಗಳನ್ನು ದೋಚುತ್ತಿರುವ ಆನ್‍ಲೈನ್ ವಂಚನೆ ಪ್ರಕರಣಗಳು ಹೆಚ್ಚುತ್ತಿವೆ. ಈ ಹಿನ್ನೆಲೆಯಲ್ಲಿ ಹೊಸ ಹೊಸ ಯೋಜನೆಗಳನ್ನು ಜಾರಿಗೆ ತಂದರೂ ಗ್ರಾಹಕರ ಭಯ ನಿವಾರಣೆಯಾಗಿಲ್ಲ. 

  ಸ್ಥಗಿತಗೊಳ್ಳಲಿವೆ ಎಟಿಎಂಗಳು?

ಇದೊಂದು ಆತಂಕದ ವಿಷಯ. 2021ರ ವೇಳೆಗೆ ಎಟಿಎಂ ಕಾರ್ಡ್‍ಗಳ ಚಲಾವಣೆಯನ್ನು ಸರ್ಕಾರ ಸ್ಥಗಿತಗೊಳಿಸುವ ವರದಿಗಳು ಹರಿದಾಡುತ್ತಿವೆ. ಈಗಾಗಲೇ ಇಂತಹ ಯೋಜನೆಯ ರೂಪುರೇಷೆ ಸರ್ಕಾರಿ ವಲಯದಲ್ಲಿ ಸಿದ್ಧಗೊಂಡಿದೆ. ಅಂದರೆ ಇನ್ನೊಂದು ವರ್ಷ ಕಳೆದರೆ ನಮ್ಮ ಜೇಬಿನಲ್ಲಿ ಎಟಿಎಂ ಕಾರ್ಡ್‍ಗಳು, ಕ್ರೆಡಿಟ್ ಕಾರ್ಡ್‍ಗಳು ಉಳಿಯುವುದಿಲ್ಲ. ಎಲ್ಲವನ್ನು ಆನ್‍ಲೈನ್‍ನಲ್ಲಿಯೇ ವ್ಯವಹರಿಸಿಕೊಳ್ಳಿ ಎಂಬ ಉದ್ದೇಶದಿಂದ ಈ ಕಾರ್ಡ್‍ಗಳಿಗೆ ಮುಕ್ತಿ ನೀಡುವ ಗುರಿ ಹಾಕಿಕೊಳ್ಳಲಾಗಿದೆ. ಒಂದು ವೇಳೆ ಈ ಯೋಜನೆ ಜಾರಿಗೆ ಬಂದದ್ದೆ ಆದರೆ ಅದೇಷ್ಟು ಜನ ಸಂಕಟಕ್ಕೀಡಾಗುತ್ತಾರೋ ನೋಡಬೇಕು. 

      ಈ ಹಿಂದೆ ತುಮಕೂರು ಜಿಲ್ಲಾ ಕೇಂದ್ರ ಸೇರಿದಂತೆ ಶಿರಾ, ಚಿಕ್ಕನಾಯಕನಹಳ್ಳಿ ಮತ್ತಿತರ ತಾಲ್ಲೂಕು ಕೇಂದ್ರಗಳಲ್ಲಿ ಕರೆನ್ಸಿ ಟೆಸ್ಟ್ ಶಾಖೆಗಳಿದ್ದವು. ಈಗ ಅವೆಲ್ಲವೂ ಸ್ಥಗಿತಗೊಂಡಿವೆ. ಅಂದರೆ ಹಂತ ಹಂತವಾಗಿ ನಗದು ವ್ಯವಹಾರ ಸ್ಥಗಿತಗೊಳಿಸಲಾಗುತ್ತಿದ್ದು, ಇದರ ಮುನ್ಸೂಚನೆ ಎಂಬಂತೆ ಈ ಎಲ್ಲಾ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. 

 ಸ್ಥಗಿತಗೊಳ್ಳುವ ಎಟಿಎಂಗಳು

     ಬ್ಯಾಂಕ್‍ಗಳಿಗೆ ಬರುವ ಜನರನ್ನು ಕಡಿಮೆ ಮಾಡಿ ಎಟಿಎಂಗಳಲ್ಲಿ ಹಣ ಪಡೆದುಕೊಳ್ಳುವ ಸಲುವಾಗಿ ಎಲ್ಲಾ ಬ್ಯಾಂಕುಗಳು ತಮ್ಮದೇ ಆದ ಸ್ಥಳಗಳಲ್ಲಿ ಎಟಿಎಂ ಮಿಷನ್ ಅಳವಡಿಸಿವೆ. ಆದರೆ ಬಹಳಷ್ಟು ಎಟಿಎಂಗಳಲ್ಲಿ ಕೆಲವೊಮ್ಮೆ ಹಣ ಇರುವುದಿಲ್ಲ. ನೋ ಕ್ಯಾಶ್ ಫಲಕ ಅಲ್ಲಿ ಕಂಡು ಬರುತ್ತದೆ. ಕೆಲವೊಮ್ಮೆ ಹಣ ಇದ್ದರೂ ತಾಂತ್ರಿಕ ದೋಷಗಳಿಂದ ಎಟಿಎಂಗಳು ಕೆಲಸ ಮಾಡುವುದಿಲ್ಲ. ಗ್ರಾಹಕರು ಇವುಗಳನ್ನು ಹುಡುಕಿಕೊಂಡು ಹೋಗಿ ಹಣ ತರುವ ಪ್ರಯತ್ನಕ್ಕೆ ಮುಂದಾಗಬೇಕು. ಇಲ್ಲಿ ಮತ್ತಷ್ಟು ಸಮಸ್ಯೆಗಳು ಎದುರಾಗುತ್ತವೆ. 

ಎಟಿಎಂ ಕೊರತೆ ಗಮನಕ್ಕೆ ತನ್ನಿ

     ಬ್ಯಾಂಕುಗಳು ನಿರ್ವಹಿಸುವ ಎಟಿಎಂ ದೋಷಗಳ ಬಗ್ಗೆ ನನಗೂ ಹಲವು ದೂರುಗಳು ಬರುತ್ತಿವೆ. ಇಂತಹ ದೂರುಗಳು ಬಂದಾಗ ಸಂಬಂಧಿಸಿದ ಬ್ಯಾಂಕುಗಳಿಗೆ ಮಾಹಿತಿ ನೀಡಿ ಅದನ್ನು ಸರಿಪಡಿಸುವ ಪ್ರಯತ್ನ ಮಾಡಲಾಗುತ್ತಿದೆ. ಗ್ರಾಹಕರ ಸಮಸ್ಯೆಗಳಿಗೆ ಬ್ಯಾಂಕುಗಳು ಸ್ಪಂದಿಸಬೇಕು. ಎಟಿಎಂ ನ್ಯೂನತೆ ಸೇರಿದಂತೆ ಯಾವುದಾದರೂ ಸಮಸ್ಯೆಗಳಿದ್ದಲ್ಲಿ ನನ್ನ ಗಮನಕ್ಕೂ ತರಬಹುದು. 

-ಜ್ಯೋತಿಗಣೇಶ್, ಲೀಡ್ ಬ್ಯಾಂಕ್ ಮ್ಯಾನೇಜರ್.

ವೆರಿಫಿಕೇಶನ್‍ಗೆ ಹಣ

     ಯಾವುದೇ ಸಂಘ ಸಂಸ್ಥೆಗಳಿಂದ ಬ್ಯಾಂಕುಗಳಲ್ಲಿ ಸಾಲ ಸೌಲಭ್ಯ ಪಡೆಯಲು ಅರ್ಜಿ ಹಾಕಿದಾಗ ಅದಕ್ಕೆ ಸಂಬಂಧಪಟ್ಟ ದಾಖಲೆಗಳನ್ನು ನೀಡಿದ್ದರೂ ಅದರ ವೆರಿಫಿಕೇಶನ್ ಮಾಡಲು ಒಮ್ಮೆ ಸಂಸ್ಥೆ ಅಥವಾ ಕಚೇರಿಗೆ ಭೇಟಿ ನೀಡಿದರೆ ಅದಕ್ಕೆ 20 ರಿಂದ 30 ಸಾವಿರ ರೂಗಳ ವರೆಗೆ ಹಣ ಪಡೆಯುತ್ತಾರೆ ಎಂಬುದು ಕೆಲವು ಸಂಸ್ಥೆಯ ಮುಖ್ಯಸ್ಥರಿಂದ ದೊರೆತ ಮಾಹಿತಿ. 

      ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

 

Recent Articles

spot_img

Related Stories

Share via
Copy link
Powered by Social Snap