ವಿಶೇಷ ಲೇಖನ : ಸಾ.ಚಿ.ರಾಜಕುಮಾರ

     ಮಹಿಳಾ ಸಬಲೀಕರಣಕ್ಕೆ ಮತ್ತೊಂದು ಮಹತ್ವದ ಹೆಜ್ಜೆ ಆಗಸ್ಟ್ 11 ರಂದು ಸುಪ್ರೀಂಕೋರ್ಟ್ ನೀಡಿದ ಹೆಣ್ಣು ಮಕ್ಕಳ ಆಸ್ತಿಯ ಹಕ್ಕು ತೀರ್ಪು. ಈ ತೀರ್ಪಿನಿಂದಾಗಿ ಈವರೆಗೆ ಇದ್ದ ಹಲವು ಗೊಂದಲಗಳು ನಿವಾರಣೆಯಾಗಿ ಹಿಂದೂ ಕುಟುಂಬದ ಆಸ್ತಿಯಲ್ಲಿ ಗಂಡು ಮಕ್ಕಳಂತೆಯೇ ಹೆಣ್ಣು ಮಕ್ಕಳೂ ಸಹ ಹುಟ್ಟಿನಿಂದಲೇ ಆಸ್ತಿಯ ಆಜನ್ಮಸಿದ್ಧ ಹಕ್ಕಿಗೆ ಪ್ರಾಪ್ತರಾಗುತ್ತಾರೆ.

    1956 ರ ಹಿಂದೂ ಉತ್ತರಾಧಿಕಾರ ಕಾಯ್ದೆಗೆ 2005 ರಲ್ಲಿ ಕೇಂದ್ರ ಸರ್ಕಾರವು ತಿದ್ದುಪಡಿ ತಂದು ಹೆಣ್ಣು ಮಕ್ಕಳಿಗೂ ತಂದೆಯ ಆಸ್ತಿಯಲ್ಲಿ ಸಮಾನ ಹಕ್ಕಿದೆ ಎಂದು ಪ್ರತಿಪಾದಿಸಿತು. ಈ ತೀರ್ಪಿನ ನಂತರ ರಾಷ್ಟ್ರದ ಉದ್ದಗಲಕ್ಕೂ ನ್ಯಾಯಾಲಯಗಳಲ್ಲಿ ಜಮೀನಿಗೆ ಸಂಬಂಧಿಸಿದ ದಾವೆಗಳ ಸಲ್ಲಿಕೆ ಹೆಚ್ಚಾದದ್ದಷ್ಟೇ ಅಲ್ಲ, ಒಂದೊಂದು ನ್ಯಾಯಾಲಯದಲ್ಲಿ ಒಂದೊಂದು ರೀತಿಯ ತೀರ್ಪುಗಳು ಹೊರಬಿದ್ದವು. ವಿವಿಧ ರಾಜ್ಯಗಳ ಹೈಕೋರ್ಟ್‍ಗಳು ಹೆಣ್ಣು ಮಕ್ಕಳ ಆಸ್ತಿಯ ಹಕ್ಕು ಕುರಿತು ವಿಭಿನ್ನ ನಿಲುವಿನ ತೀರ್ಪು ನೀಡಿದ್ದವು. ಇದನ್ನು ಪ್ರಶ್ನಿಸಿ ಸಾಕಷ್ಟು ಅರ್ಜಿಗಳು ಸುಪ್ರೀಂಕೋರ್ಟ್‍ನಲ್ಲಿ ದಾಖಲಾಗಿದ್ದವು.

     1956 ರ ಮೂಲ ಕಾಯ್ದೆ ಹಾಗೂ 2005 ರಲ್ಲಿ ತಂದಿರುವ ತಿದ್ದುಪಡಿ ಕಾಯ್ದೆ ಎರಡನ್ನೂ ಅವಲೋಕಿಸಿ ಕಾಯ್ದೆಯ ಮೂಲ ಉದ್ದೇಶವನ್ನು ಸುಪ್ರೀಂಕೋರ್ಟ್ ವಿಶಾಲ ತಳಹದಿಯ ಮೇಲೆ ತೀರ್ಪು ನೀಡಿದೆ. ಅಲ್ಲದೆ, ಈ ವಿಷಯದಲ್ಲಿ ಯಾವುದೇ ಗೊಂದಲ ಇಲ್ಲದಂತೆಯೂ ಸಮಾನ ಹಕ್ಕು ಪ್ರಾಪ್ತಿಯನ್ನು ಪ್ರತಿಪಾದಿಸಿದೆ. 2005ರ ತಿದ್ದುಪಡಿ ಕಾಯ್ದೆ ಪೂರ್ವಾನ್ವಯವಾಗಲಿದೆ ಎಂದು ಸುಪ್ರೀಂಕೋರ್ಟ್ ಸ್ಪಷ್ಟಪಡಿಸಿರುವುದರಿಂದ ತಿದ್ದುಪಡಿ ಕಾಯ್ದೆಗೆ ಮುನ್ನ ಅಥವಾ ಆನಂತರ ತಂದೆ ಜೀವಂತ ಇಲ್ಲದಿದ್ದರೂ ಮಗಳು ಆಸ್ತಿಯಲ್ಲಿ ಸಮಾನ ಪಾಲು ಪಡೆಯಲು ಅರ್ಹಳಾಗುತ್ತಾಳೆ. ಒಂದು ವೇಳೆ ಮಗಳು ಜೀವಂತವಾಗಿ ಇಲ್ಲದೆ ಹೋದರೂ ಆಕೆಯ ಮಕ್ಕಳು ತನ್ನ ತಾಯಿಗೆ ಸಿಗಬೇಕಾದ ಹಕ್ಕುಗಳನ್ನು ಕೇಳಬಹುದಾಗಿದೆ.

     ನಮ್ಮ ಭಾರತೀಯ ಕೌಟುಂಬಿಕ ವ್ಯವಸ್ಥೆಯಲ್ಲಿ ಅವಿಭಕ್ತ ಕುಟುಂಬಗಳ ವ್ಯವಸ್ಥೆ ಪರಂಪರಾನುಗತವಾಗಿ ಬೆಳೆದುಕೊಂಡು ಬಂದಿದೆ. ಅದೇ ರೀತಿ ಆಸ್ತಿಗೆ ಸಂಬಂಧಿಸಿದ ಉತ್ತರಾಧಿಕಾರ (ಕೋಪಾರ್ಸನರ್) ವ್ಯವಸ್ಥೆಯೂ ಹಿಂದಿನಿಂದ ಜಾರಿಯಲ್ಲಿದೆ. ಒಂದು ಕುಟುಂಬದ ಆಸ್ತಿ ಹೇಗೆ ತಂದೆಯಿಂದ ಮಕ್ಕಳಿಗೆ, ಮೊಮ್ಮಕ್ಕಳಿಗೆ ಸಹಜವಾಗಿ ಹಸ್ತಾಂತರವಾಗುತ್ತದೆ ಎಂಬುದು ನಿರೂಪಿತವಾಗಿದೆ. ಇದಕ್ಕೆ ತಕ್ಕಂತೆಯೇ ಕಾನೂನು ರೂಪಿತವಾಗಿತ್ತು. ಆದರೆ ಕಾಲ ಕ್ರಮೇಣ ಮಹಿಳಾ ಸಮಾನತೆಯ ಪರಿಕಲ್ಪನೆ ಹೆಚ್ಚಿ, ಮಹಿಳಾ ಶೋಷಣೆ ತಡೆಗಟ್ಟುವ ಸಲುವಾಗಿ ತರಲಾದ ಅನೇಕ ತಿದ್ದುಪಡಿಗಳು ಮತ್ತು ಕಾನೂನುಗಳ ಪರಿಣಾಮವಾಗಿ ಆಸ್ತಿಯಲ್ಲಿ ಹಕ್ಕು ಪ್ರಾಪ್ತವಾಗಿದೆ.

     2005 ರಲ್ಲಿ ಅಂದಿನ ಕೇಂದ್ರ ಸರ್ಕಾರ ಕಾಯ್ದೆಯ ಕಲಂ 6ಕ್ಕೆ ತಿದ್ದುಪಡಿ ತಂದಾಗ ಪಿತ್ರಾರ್ಜಿತ ಆಸ್ತಿಗೆ ಹೆಣ್ಣು ಮಕ್ಕಳು ಸಮಾನ ಉತ್ತರಾಧಿಕಾರಿಗಳು ಎಂಬ ನಿಯಮ ರೂಪಿಸಿತು. ಆದರೆ ಕೆಲವು ನ್ಯಾಯಾಲಯಗಳಲ್ಲಿ ತಿದ್ದುಪಡಿ ಆಗುವುದಕ್ಕಿಂತ ಮೊದಲು ಜನಿಸಿದ ಹೆಣ್ಣು ಮಕ್ಕಳಿಗೆ ಹಕ್ಕು ಇಲ್ಲ ಎಂಬಂತಹ ತೀರ್ಪುಗಳು ಹೊರಬಿದ್ದಿದ್ದವು. ಈ ದ್ವಂದ್ವಗಳನ್ನು ಸುಪ್ರೀಂಕೋರ್ಟ್ ನ್ಯಾಯಮೂರ್ತಿಗಳಾದ ಅರುಣ್ ಮಿಶ್ರಾ, ಎಸ್.ನಜೀಬ್ ಹಾಗೂ ಎಂ.ಆರ್. ಷಾ ಅವರನ್ನೊಳಗೊಂಡ ಪೀಠವು ಸ್ಪಷ್ಟವಾಗಿ ನಿವಾರಿಸಿದ್ದು 2005ಕ್ಕಿಂತ ಮೊದಲು ಜನಿಸಿದ ಹೆಣ್ಣು ಮಕ್ಕಳಿಗೂ ಪಿತ್ರಾರ್ಜಿತ ಆಸ್ತಿಯ ಮೇಲೆ ಸಮಾನ ಹಕ್ಕು ಮತ್ತು ಬಾಧ್ಯತೆ ಇದೆ ಎಂಬುದನ್ನು ಉಲ್ಲೇಖಿಸಿದರು.

     ತಿದ್ದುಪಡಿ ಕಾಯ್ದೆಯ ಕಲಂ 6ರ ಉಪ ಚ್ಚೇದಗಳಿಗೆ ಗಂಡು ಮಕ್ಕಳು ಹುಟ್ಟಿದ ಕೂಡಲೇ ಹೇಗೆ ಆಸ್ತಿಯ ಹಕ್ಕು ಪ್ರಾಪ್ತವಾಗುವುದೋ ಹಾಗೆ, ಗಂಡು ಮಕ್ಕಳು ಹೇಗೆ ಹಕ್ಕು ಹೊಂದುತ್ತಾರೆಯೋ ಅದೇ ರೀತಿಯಲ್ಲಿ ಹೆಣ್ಣು ಮಕ್ಕಳು ಪಿತ್ರಾರ್ಜಿತ ಆಸ್ತಿಯಲ್ಲಿ ಹಕ್ಕು ಹೊಂದುತ್ತಾರೆ ಎಂದು ಸ್ಪಷ್ಟವಾಗಿ ಹೇಳಲಾಗಿದೆ. ಆದರೆ ಇದರ ವ್ಯಾಖ್ಯಾನದಲ್ಲಿ ಸ್ವಲ್ಪ ವಿಭಿನ್ನ ನಿಲುವುಗಳು ವ್ಯಕ್ತವಾಗಿದ್ದವು. ಗಂಡು ಮಕ್ಕಳಿಗೆ ಇರುವಷ್ಟೇ ಹಕ್ಕನ್ನು ಹೆಣ್ಣು ಮಕ್ಕಳಿಗು ನೀಡುವ ಉದ್ದೇಶದಿಂದಲೇ ಕಾಯ್ದೆಗೆ ತಿದ್ದುಪಡಿ ತರಲಾಗಿದೆ ಎಂಬುದನ್ನು ನ್ಯಾಯಪೀಠ ವಿವರಿಸಿದೆ.

    ಸುಪ್ರೀಂಕೋರ್ಟ್ ಈ ತೀರ್ಪು ಪ್ರಕಟಿಸುವ ಮುನ್ನ ಕೆಲವು ರಾಜ್ಯಗಳ ನ್ಯಾಯಾಲಯಗಳು 2005 ರ ತಿದ್ದುಪಡಿ ಕಾಯ್ದೆಗೂ ಮುನ್ನ ಕುಟುಂಬದ ಹಿರಿಯ ಅಥವಾ ತಂದೆ ನಿಧನರಾಗಿದ್ದರೆ ಅಂತಹ ಹೆಣ್ಣು ಮಕ್ಕಳು ಆಸ್ತಿಯಲ್ಲಿ ಪಾಲು ಪಡೆಯಲು ಅರ್ಹರಿಲ್ಲ ಎಂಬ ತೀರ್ಪುಗಳೂ ಸಹ ಹೊರ ಬಂದಿದ್ದವು. ಇದನ್ನೂ ಸಹ ಸುಪ್ರೀಂಕೋರ್ಟ್ ನಿವಾರಿಸಿದ್ದು, ಕಾಯ್ದೆ ಜಾರಿಗೆ ಬರುವ ಮೊದಲು ತಂದೆ ನಿಧನರಾಗಿದ್ದರೂ ಆಸ್ತಿಯ ಮೇಲೆ ಹಕ್ಕಿದೆ ಎಂದು ತೀರ್ಪು ನೀಡಿದೆ.

     ಒಟ್ಟಾರೆ ಆಗಸ್ಟ್ 11 ರ ಈ ತೀರ್ಪು ಭಾರತೀಯ ಕಾನೂನು ಇತಿಹಾಸದಲ್ಲಿ ಒಂದು ಹೊಸ ಮೈಲಿಗಲ್ಲು ಆಗಿದ್ದು, ಇದಕ್ಕಾಗಿ ಹಲವು ದಶಕಗಳ ಕಾಲ ಹೋರಾಡಿದ್ದ ಸಂಘಟನೆಗಳು, ಕಾನೂನು ತಜ್ಞರ ಬಯಕೆ ಈಡೇರಿದಂತಾಗಿದೆ. ಇಲ್ಲಿ ಗಮನಿಸಬೇಕಾದ ವಿಷಯವೆಂದರೆ 2005 ರಲ್ಲಿ ಕೇಂದ್ರ ಸರ್ಕಾರ ಈ ಕಾನೂನು ತರುವ ಮುನ್ನವೇ ಕರ್ನಾಟಕ ಸರ್ಕಾರವು 1994 ರಲ್ಲಿ ಮಹಿಳೆಗೆ ಆಸ್ತಿ ಹಕ್ಕು ನೀಡುವ ಕರ್ನಾಟಕ ಕಾಯ್ದೆ ಜಾರಿಗೊಳಿಸಿತ್ತು. 2005ರ ಕೇಂದ್ರ ಶಾಸನದಿಂದಾಗಿ ಇಡೀ ಭಾರತದಾದ್ಯಂತ ಈ ಕಾನೂನು ಜಾರಿಯಲ್ಲಿದೆ. ಹೆಣ್ಣು ಮಕ್ಕಳು ಎನ್ನುವ ಕಾರಣಕ್ಕೆ ಅವರನ್ನು ತಾತ್ಸಾರ ಮಾಡುವ, ಆಸ್ತಿಹಕ್ಕು ನಿರಾಕರಿಸುವ ಪ್ರಮೇಯ ಇನ್ನು ಮುಂದೆ ಉದ್ಭವಿಸುವುದಿಲ್ಲ.

ಕೊನೆಯದಾಗಿ ಒಂದು ಮಾತು

    ಅನಿವಾರ್ಯ ಮತ್ತು ಸಂಕಷ್ಟ ಸಂದರ್ಭಗಳಲ್ಲಿ ಮಹಿಳೆಯರಿಗೆ ಅನುಕೂಲವಾಗಲಿ, ಆಕೆ ಶೋಷಣೆಯಿಂದ ಹೊರ ಬಂದು ಪುರುಷರಷ್ಟೇ ಸಮಾನತೆಯ ಜೀವನ ಸಾಗಿಸಲಿ ಎಂಬುದು ಕಾನೂನಿನ ಆಶಯ. ಹೀಗಾಗಿ ಅಗತ್ಯ ಮತ್ತು ಅನಿವಾರ್ಯತೆ ಇರುವ ಪ್ರಕರಣಗಳಲ್ಲಿ ಸಹೋದರರು ಅಥವಾ ಕುಟುಂಬಸ್ಥರು ಒಪ್ಪಿಗೆಯ ಮೇರೆಗೆ ಆಸ್ತಿ ಪಾಲು ಇತ್ಯರ್ಥಪಡಿಸಿಕೊಳ್ಳುವುದು ಒಳಿತು. ಎಲ್ಲರೂ ಕಾನೂನಿನ ಅಸ್ತ್ರವನ್ನೇ ಬಳಸುತ್ತಾ ಹೋದರೆ ಸಂಬಂಧಗಳು ಹಳಸುವ ಅಪಾಯವೂ ಇರುತ್ತದೆ. ಈ ವಿಷಯದಲ್ಲಿ ಒಂದಷ್ಟು ಎಚ್ಚರಿಕೆಯ ನಡೆಯೂ ಇರಲಿ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ