ಬೆಂಗಳೂರು:
ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯವೆಸಗಿರುವ ಅಶ್ಲೀಲ ವಿಡಿಯೊ ಪ್ರಕರಣದ ಆರೋಪ ಹೊತ್ತು ಜರ್ಮನಿಯಲ್ಲಿರುವ ಹಾಸನದ ಸಂಸದ ಪ್ರಜ್ವಲ್ ರೇವಣ್ಣ ಕೊನೆಗೂ ಬೆಂಗಳೂರಿಗೆ ಬಂದಿಲ್ಲ. ನಿನ್ನೆ ಕೊನೆ ಕ್ಷಣದಲ್ಲಿ ಅವರು ಟಿಕೆಟ್ ಬುಕ್ ಮಾಡಿ ಮಧ್ಯರಾತ್ರಿ ವಿಮಾನವೇರಿ ಬೆಂಗಳೂರಿಗೆ ಬರಬೇಕಾಗಿತ್ತು.
ಈ ನಿಟ್ಟಿನಲ್ಲಿ ಎಸ್ ಐಟಿ ಅಧಿಕಾರಿಗಳು ಕೆಂಪೇಗೌಡ ಏರ್ ಪೋರ್ಟ್ ನಲ್ಲಿ ಕಾದು ಕುಳಿತಿದ್ದರು. ಆದರೆ ಕೊನೆಗೂ ಅವರು ಕೈಕೊಟ್ಟಿದ್ದು ಇಂದು ಬರುತ್ತಾರೆಂಬ ನಿರೀಕ್ಷೆ ಹುಸಿಯಾಗಿದೆ. ಎರಡು ಬಾರಿ ಟಿಕೆಟ್ ರದ್ದು ಮಾಡಿದ್ದ ಪ್ರಜ್ವಲ್, ಒಮ್ಮೆ ಟಿಕೆಟ್ ಮುಂದೂಡಿಕೆ ಮಾಡಿಕೊಂಡರು. ನಂತರ ಆ ಟಿಕೆಟನ್ನೂ ರದ್ದು ಮಾಡಿದರು. ಇದಾದ ಬಳಿಕ ಇಂದು ಬೆಳಗ್ಗೆ ಮತ್ತೆ LH764 ಲುಫ್ತಾನ್ಸ್ ವಿಮಾನದ ಟಿಕೆಟ್ ಕಾಯ್ದಿರಿಸಿದ್ದರು. ಹೀಗಾಗಿ ಬೆಂಗಳೂರಿಗೆ ಬರುತ್ತಾರೆ ಎಂದು ಎಸ್ಐಟಿ ಅಧಿಕಾರಿಗಳು ಕಾದು ಕುಳಿತಿದ್ದರು. ಆದರೆ ಪ್ರಜ್ವಲ್ ಅವರ ಕಣ್ಣಮುಚ್ಚಾಲೆ ಆಟ ಮುಂದುವರಿದಿದೆ.
ವಿಮಾನ ಹತ್ತದ ಪ್ರಜ್ವಲ್: ಕೊನೆ ಕ್ಷಣದಲ್ಲಿ ಟಿಕೆಟ್ ಬುಕ್ ಆಗಿದ್ದರಿಂದ ಪ್ರಜ್ವಲ್ ಬರಬಹುದು ಎಂಬ ನಿರೀಕ್ಷೆ ಎಸ್ಐಟಿ ಅಧಿಕಾರಿಗಳಲ್ಲಿ ಇತ್ತು. ಆದರೆ, ಜರ್ಮನಿಯ ಕಾಲಮಾನ ಪ್ರಕಾರ 12.20ಕ್ಕೆ ವಿಮಾನ ಟೇಕಾಫ್ ಆಗಿದೆ. ಅತ್ತ ಟೇಕಾಫ್ ಆಗುತ್ತಿದ್ದಂತೆಯೇ ಬೆಂಗಳೂರು ವಿಮಾನ ನಿಲ್ದಾಣಕ್ಕೆ ಪ್ರಯಾಣಿಕರ ಪಟ್ಟಿ ಬಂದಿದೆ. ಏರ್‌ಪೋರ್ಟ್‌ನಲ್ಲೇ ಇದ್ದ ಎಸ್ಐಟಿ ಅಧಿಕಾರಿಗಳು, ಪ್ರಯಾಣಿಕರ ಹೆಸರು ಪರಿಶೀಲಿಸಿದ್ದಾರೆ. ಆದರೆ, ವಿಮಾನದಲ್ಲಿರುವ ಪ್ರಯಾಣಿಕರ ಪಟ್ಟಿಯಲ್ಲಿ ಪ್ರಜ್ವಲ್ ಹೆಸರು ಇರಲಿಲ್ಲ. ಬೆಳಗ್ಗೆ ಟಿಕೆಟ್ ಬುಕ್ ಮಾಡಿದ್ದರೂ ಪ್ರಜ್ವಲ್ ಪ್ರಯಾಣ ಮಾಡಿರಲಿಲ್ಲ.
ಪ್ರಜ್ವಲ್ ಈ ಹಿಂದೆ ಎರಡು ಬಾರಿ ವಿಮಾನ ಟಿಕೆಟ್‌ಗಳನ್ನು ಬುಕ್ ಮಾಡಿದ್ದರು, ಕೊನೆಗೆ ರದ್ದುಗೊಳಿಸಿದರು. ಮೂಲಗಳ ಪ್ರಕಾರ, ಇದು ಎಸ್‌ಐಟಿಯನ್ನು ಹುಸಿಗೊಳಿಸಲು ಅವರು ನಡೆಸಿದ ತಂತ್ರವಾಗಿರಬಹುದು. ಎಡಿಜಿಪಿ (ಸಿಐಡಿ) ಬಿಕೆ ಸಿಂಗ್ ನೇತೃತ್ವದಲ್ಲಿ ಎಸ್‌ಐಟಿ ರಚನೆಯಾದಾಗಿನಿಂದ ಸಂಸದ ಅವರ ಕೈಗೆ ಸಿಗುತ್ತಿಲ್ಲ.
ಅವರು ಏಪ್ರಿಲ್ 27 ರಂದು ಜರ್ಮನಿಗೆ ಹೋಗಿದ್ದರು ಎನ್ನಲಾಗಿದೆ. ರಾಜತಾಂತ್ರಿಕ ಪಾಸ್‌ಪೋರ್ಟ್ ಹೊಂದಿರುವ ಪ್ರಜ್ವಲ್‌ಗೆ ವಿದೇಶ ಪ್ರವಾಸಕ್ಕೆ ಯಾವುದೇ ವೀಸಾ ಅಗತ್ಯವಿಲ್ಲ. ಇವರ ವಿರುದ್ಧ ಎರಡು ರೆಗ್ಯುಲರ್ ನೋಟಿಸ್, ಲುಕ್ ಔಟ್ ನೋಟಿಸ್ ಹಾಗೂ ಬ್ಲೂ ಕಾರ್ನರ್ ನೋಟಿಸ್ ಜಾರಿ ಮಾಡಲಾಗಿದೆ.