ಪ್ರಕಾಶ್ ರಾಜ್, ಸೇರಿ 25 ಕ್ಕೂ ಹೆಚ್ಚು ಸೆಲೆಬ್ರಿಟಿಗಳ ವಿರುದ್ಧ FIR!

ಹೈದರಾಬಾದ್‌:

    ತೆಲಂಗಾಣದಲ್ಲಿ ಅಕ್ರಮ ಬೆಟ್ಟಿಂಗ್ ಆ್ಯಪ್‌ಗಳನ್ನು ಪ್ರಚಾರ ಮಾಡಿದ ಆರೋಪದ ಮೇಲೆ ಟಾಲಿವುಡ್‌ ನಟರಾದ ರಾಣಾ ದಗ್ಗುಬಾಟಿ, ಪ್ರಕಾಶ್ ರಾಜ್, ವಿಜಯ್ ದೇವರಕೊಂಡ ಮತ್ತು ಮಂಚು ಲಕ್ಷ್ಮಿ, ಪ್ರಕಾಶ್‌ ರೈ ಸೇರಿದಂತೆ 25 ಸೆಲೆಬ್ರಿಟಿಗಳು ಮತ್ತು ಸಾಮಾಜಿಕ ಮಾಧ್ಯಮ ಪ್ರಭಾವಿಗಳ ವಿರುದ್ಧ ತೆಲಂಗಾಣ ಪೊಲೀಸರು ಎಫ್‌ಐಆರ್‌ ದಾಖಲಿಸಿದ್ದಾರೆ. 32 ವರ್ಷದ ಉದ್ಯಮಿ ಫಣೀಂದ್ರ ಶರ್ಮಾ ಅವರ ಅರ್ಜಿಯ ಮೇರೆಗೆ ಹೈದರಾಬಾದ್‌ನ ಮಿಯಾಪುರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ತಿಳಿದು ಬಂದಿದೆ. ಇಂತಹ ಬೆಟ್ಟಿಂಗ್‌ ಅಪ್ಲಿಕೇಶನ್‌ಗಳಲ್ಲಿ ಜನರು ಸಿಲುಕಿ ಹಣ ಕಳೆದುಕೊಳ್ಳುತ್ತಿದ್ದಾರೆ ಎಂದು ತಿಳಿದುಬಂದಿದೆ.

   ನಟಿಯರಾದ ಪ್ರಣಿತಾ ಮತ್ತು ನಿಧಿ ಅಗರ್ವಾಲ್, ಅನನ್ಯ, ಶ್ರೀಮುಖಿ, ಸಿರಿ ಹನುಮಂತು, ಶ್ಯಾಮಲಾ, ವರ್ಷಿಣಿ, ಶೋಭಾ, ನೇಹಾ, ಪಾಂಡು, ಪದ್ಮಾವತಿ, ಇಮ್ರಾನ್ ಖಾನ್, ವಿಷ್ಣು ಪ್ರಿಯಾ, ಹರ್ಷ ಸಾಸಾಯಿ, ಸನ್ನಿ ಯಾದವ್, ಟೇಸ್ಟಿ ತೇಜಾ ಮತ್ತು ರಿತು ಅವರನ್ನೂ ದೂರಿನಲ್ಲಿ ಹೆಸರಿಸಲಾಗಿದೆ. ಎಫ್‌ಐಆರ್‌ ಪ್ರಕಾರ ಆರೋಪಿಗಳ ವಿರುದ್ಧ ಭಾರತ್ ನ್ಯಾಯ ಸಂಹಿತಾ ಸೆಕ್ಷನ್ 318(4), 112 ಮತ್ತು 49 ರ ಅಡಿಯಲ್ಲಿ, ತೆಲಂಗಾಣ ರಾಜ್ಯ ಗೇಮಿಂಗ್ ಕಾಯ್ದೆ (ಟಿಎಸ್‌ಜಿಎ) ಸೆಕ್ಷನ್ 4 ಮತ್ತು ಮಾಹಿತಿ ತಂತ್ರಜ್ಞಾನ ಕಾಯ್ದೆಯ ಸೆಕ್ಷನ್ 66-ಡಿ ಅಡಿಯಲ್ಲಿ ಆರೋಪ ಹೊರಿಸಲಾಗಿದೆ. 

   ಜಂಗ್ಲೀ ರಮ್ಮಿಯ ಪ್ರಚಾರಕ್ಕೆ ಸಂಬಂಧಿಸಿದಂತೆ ರಾಣಾ ದಗ್ಗುಬಾಟಿ ಮತ್ತು ಪ್ರಕಾಶ್ ರಾಜ್ ವಿರುದ್ಧ ಪ್ರಕರಣ ದಾಖಲಾದರೆ, ವಿಜಯ್ ದೇವರಕೊಂಡ A23 ಗೆ, ಮಂಚು ಲಕ್ಷ್ಮಿ ಯೋಲೋ 247 ಗೆ, ಪ್ರಣಿತಾ ಫೇರ್‌ಪ್ಲೇಗೆ ಮತ್ತು ನಿಧಿ ಅಗರ್ವಾಲ್ ಜೀತ್ ವಿನ್‌ ಪ್ರಚಾರ ಮಾಡಿದ್ದಾರೆ ಹಾಗೂ ಜಾಹೀರಾತಿನಲ್ಲಿ ಕಾಣಿಸಿಕೊಂಡಿದ್ದಾರೆ. ಸೆಲೆಬ್ರಿಟಿಗಳು ಮತ್ತು ಪ್ರಭಾವಿಗಳು ಆಕರ್ಷಕ ಕಮಿಷನ್‌ಗಳಿಗಾಗಿ ಈ ಅಪ್ಲಿಕೇಶನ್‌ಗಳನ್ನು ಪ್ರಚಾರ ಮಾಡುತ್ತಾರೆ. ಇದು ಜನರನ್ನು, ವಿಶೇಷವಾಗಿ ಹಣದ ಅವಶ್ಯಕತೆಯಿರುವವರನ್ನು, ಅಪ್ಲಿಕೇಶನ್‌ಗಳಲ್ಲಿ ಹಣ ಹೂಡಲು ಮತ್ತು ವ್ಯಸನಕ್ಕೆ ಬೀಳಲು ಪ್ರೇರೇಪಿಸುತ್ತದೆ ಎನ್ನಲಾಗಿದೆ.