ತುಮಕೂರು:
ಕಾಪ್‍ರಾಡ್ ಸಂಸ್ಥೆ ನೆರವಿನೊಂದಿಗೆ ನೇತ್ರಕಸಿ ಘಟಕವೂ 4 ತಿಂಗಳಲ್ಲಿ ಆರಂಭ
ರಾಜ್ಯದ ಮೊದಲ ಜಿಲ್ಲಾ ಐ ಬ್ಯಾಂಕ್ ಅನ್ನು ತುಮಕೂರು ಜಿಲ್ಲಾಸ್ಪತ್ರೆಯಲ್ಲಿ ಸ್ಥಾಪಿಸಲು ಅಗತ್ಯ ಸಿದ್ಧತೆಗಳು ನಡೆದಿದ್ದು, ನೇತ್ರಬ್ಯಾಂಕ್‍ನಲ್ಲಿ ನೇತ್ರ ಸಂಗ್ರಹಣೆ ಜೊತೆಗೆ ನೇತ್ರ ಕಸಿ ಘಟಕವನ್ನು ಕೇಂದ್ರ ಸರಕಾರ ಹಾಗೂ ಕಾಪರಾಡ್ ಸಂಸ್ಥೆಯ ಸಿಎಸ್‍ಆರ್ ನೆರವಿನೊಂದಿಗೆ ತೆರೆಯುಲು ಜಿಲ್ಲಾಸ್ಪತ್ರೆಗಳಲ್ಲಿ ಅಗತ್ಯ ಸಿದ್ಧತೆಗಳು ನಡೆಯುತ್ತಿದೆ.
ಪ್ರಸ್ತುತ ನೇತ್ರ ಸಂಗ್ರಹಣಾ ಕೇಂದ್ರ ಮಾತ್ರ ಜಿಲ್ಲಾಸ್ಪತ್ರೆಯಲ್ಲಿ ಕಾರ್ಯನಿರ್ವಹಿಸುತ್ತಿದÀ್ದು, ಮೃತಪಟ್ಟ ನೇತ್ರದಾನಿಗಳ ಕಣ್ಣುಗಳನ್ನು ಸಂಗ್ರಹಿಸಿ ಬೆಂಗಳೂರಿನ ಲಯನ್ಸ್ ಆಸ್ಪತ್ರೆಗೆ ಕಳುಹಿಸಿಕೊಡುವ ಕಾರ್ಯ ಆಗುತ್ತಿದೆ.
ಈ ಹಿನ್ನೆಲೆಯಲ್ಲಿ ಆಸ್ಪತ್ರೆಯಲ್ಲೇ ಮೃತರ ನೇತ್ರ ಸಂಗ್ರಹಿಸಿ ಇಲ್ಲಿಯೇ ಅವಶ್ಯವಿರುವವರಿಗೆ ಅಳವಡಿಸುವ(ಕಸಿ) ವ್ಯವಸ್ಥೆ ಮಾಡಲು ಆರೋಗ್ಯ ಇಲಾಖೆ ಮುಂದಾಗಿದ್ದು, ಕೇಂದ್ರ ಸರಕಾರದ ಕಣ್ಣಿನ ಕಸಿ ಚಿಕಿತ್ಸೆಗೆ ಅಗತ್ಯವಾದ ಯಂತ್ರೋಪಕರಣವನ್ನು ಒದಗಿಸಲಿದೆ.
ಇದಕ್ಕೆ ಪೂರಕವಾದ ಕಟ್ಟಡ, ಒಳಾಂಗಣ ವ್ಯವಸ್ಥೆಯನ್ನು ನಿರ್ಮಿಸಿಕೊಡಲು ರೆಡ್‍ಕ್ರಾಸ್ ಮಾಜಿ ಜಿಲ್ಲಾ ಸಭಾಪತಿ ಎಚ್.ಜಿ.ಚಂದ್ರಶೇಖರ್ ಅವರು ಮುಂದೆಬಂದಿದ್ದು, ತಮ್ಮ ಕಾಪ್‍ರಾಡ್ ಇಂಡಸ್ಟ್ರಿ ಪ್ರೈವೇಟ್ ಲಿಮಿಟೆಡ್‍ನ ಸಿಎಸ್‍ಆರ್ ನಿಧಿಯಲ್ಲಿ ನಿರ್ಮಿಸಿಕೊಡಲು ಒಪ್ಪಿದ್ದಾರೆ. ಹಿರೇಹಳ್ಳಿಯ ಸರಕಾರಿ ಶಾಲೆಯನ್ನು 40 ಲಕ್ಷ ವೆಚ್ಚದಲ್ಲಿ ಅಭಿವೃದ್ಧಿಪಡಿಸಿದ ಹಿರಿಮೆ ಕಾಪರಾಡ್ ಸಂಸ್ಥೆಯದ್ದಾಗಿದೆ.
45 ಲಕ್ಷ ವೆಚ್ಚದಲ್ಲಿ ನಿರ್ಮಾಣ:
ಈ ಕುರಿತು ಗುರುವಾರ ಜಿಲ್ಲಾಶಸ್ತ್ರಚಿಕಿತ್ಸಕ ಡಾ.ವೀರಭದ್ರಯ್ಯ, ನೇತ್ರ ತಜ್ಞರಾದ ಡಾ.ದಿನೇಶ್‍ಕುಮಾರ್ ಅವರೊಂದಿಗೆ ಮೊದಲ ಹಂತದ ಸಮಾಲೋಚಿಸಿದ ಕಾಪ್‍ರಾಡ್ ಸಂಸ್ಥೆಯ ಚಂದ್ರಶೇಖರ್ ಹಾಗೂ ರೋಹಿತ್ ಚಂದ್ರಶೇಖರ್ ಅವರುಗಳು, ನೇತ್ರದಾನ ಅತ್ಯಂತ ಶ್ರೇಷ್ಠ ದಾನವಾಗಿದ್ದು, ದಾನವಾದ ಕಣ್ಣುಗಳು ನಿರುಪಯುಕ್ತವಾಗದೆ ಸಕಾಲದಲ್ಲಿ ಅವಶ್ಯವುಳ್ಳವರಿಗೆ ಅಳವಡಿಸಬೇಕು.
ಇದಕ್ಕೆ ಪೂರವಾದ ವ್ಯವಸ್ಥೆ ನಮ್ಮ ಜಿಲ್ಲಾ ಕೇಂದ್ರದಲ್ಲಿ ಇದ್ದರೆ ರಾಜಧಾನಿಗೆ ಅಲೆದಾಟ ತಪ್ಪುತ್ತದೆ. ಈದಿಸೆಯಲ್ಲಿ ಜಿಲ್ಲಾ ಸರ್ಜನ್ ಡಾ.ವೀರಭದ್ರಯ್ಯ ಅವರು ನಮ್ಮ ಗಮನಕ್ಕೆ ತಂದಿದ್ದರಿಂದ ಕಂಪನಿಯ ಸಿಎಸ್‍ಆರ್‍ನಿಧಿಯಲ್ಲಿ 45 ಲಕ್ಷರೂ. ಬಳಕೆ ಮಾಡಿ ನೇತ್ರ ಸಂಗ್ರಹಣೆ, ಅಂಧರಿಗೆ ಜೋಡಣೆಗೆ ಪೂರಕವಾದ ವ್ಯವಸ್ಥೆ ಮಾಡಲು ಚಿಂತಿಸಿದ್ದೇವೆ.ಜನವರಿಯಲ್ಲಿ ಪ್ರಾರಂಭಿಸಿ ನಾಲ್ಕೈದು ತಿಂಗಳಲ್ಲಿ ಮುಗಿಸಿಕೊಡಲು ತೀರ್ಮಾನಿಸಿದ್ದೇವೆ ಎಂದು ದಾನಿ ಚಂದ್ರಶೇಖರ್ ತಿಳಿಸಿದರು.
ನೇತ್ರತಜ್ಞ ಡಾ.ದಿನೇಶ್‍ಕುಮಾರ್ ಕಟ್ಟಡದ ನಿರ್ಮಾಣ ವಿನ್ಯಾಸದ ಮಾಹಿತಿ ನೀಡಿ, ಅತ್ಯಂತ ಸೂಕ್ಷ್ಮ ಅಂಗವಾದ ಜನರ ಕಣ್ಣಿನ ಆರೋಗ್ಯ ಕಾಳಜಿ ಬಗ್ಗೆ ತುಮಕೂರು ಜಿಲ್ಲಾಸ್ಪತ್ರೆ, ಆರೋಗ್ಯ ಇಲಾಖೆ ಹೆಚ್ಚಿನ ಆಸ್ಥೆ ವಹಿಸಿ ಈ ಯೋಜನೆ ಅನುಷ್ಠಾನಗೊಳಿಸಲಾಗುತ್ತಿದೆ.
ಘಟಕ ಪ್ರಾರಂಭವಾದರೆ ಜಿಲ್ಲೆಯ ದೃಷ್ಟಿಚೇತನರಿಗೆ ಸಾಕಷ್ಟು ಸಹಕಾರಿಯಾಗಲಿದೆ ಎಂದರು. ಕಟ್ಟಡ ನಿರ್ಮಾಣದ ಸ್ಥಳವನ್ನು ಇದೇ ವೇಳೆ ಪರಿಶೀಲಿಸಲಾಯಿತು.
ಸಾಮಾಜಿಕ ಕಳಕಳಿ ಸ್ವಾಗತಾರ್ಹ:
ಪ್ರತಿಕ್ರಿಯಿಸಿದ ಜಿಲ್ಲಾ ಸರ್ಜನ್ ಡಾ.ಟಿ.ಎ.ವೀರಭದ್ರಯ್ಯ ಅವರು ಜಿಲ್ಲಾಸ್ಪತ್ರೆಯಲ್ಲಿ ಈವರೆಗೆ ನೇತ್ರ ಸಂಗ್ರಹಣೆ ಮಾತ್ರ ಮಾಡಲಾಗುತ್ತಿತ್ತು. ಇಲ್ಲಿಯೇ ಸಂಗ್ರಹಿಸಿ, ಇಲ್ಲಿಯೇ ಜೋಡಣೆ ಮಾಡುವ ಉದ್ದೇಶದಿಂದ ಮಾಡ್ಯಲರ್ ಆಪರೇಷನ್ ಥಿಯೇಟರ್ ಅನ್ನು ಸರಕಾರದ ಅನುದಾನದಲ್ಲಿ ನಿರ್ಮಿಸುತ್ತಿದ್ದು, ಕೇಂದ್ರ ಸರಕಾರ ಪೂರಕ ಯಂತ್ರೋಪಕರಣಗಳನ್ನು ಒದಗಿಸಲಿದೆ.
ಕಾಪ್‍ರಾಡ್ ಸಂಸ್ಥೆಯ ಚಂದ್ರಶೇಖರ್ ಅವರು ಸಾಮಾಜಿಕ ಕಳಕಳಿಯೊಂದಿಗೆ ಪೂರಕ ಕಟ್ಟಡ ನಿರ್ಮಿಸಿಕೊಡಲು ಮುಂದೆಬಂದಿರುವುದು ಸ್ವಾಗತಾರ್ಹ ಸಂಗತಿ. ನಿಗದಿತ ಅವಧಿಯಲ್ಲಿ ಐ ಬ್ಯಾಂಕ್ ನಿರ್ಮಾಣ ಪೂರ್ಣಗೊಂಡರೆ ರಾಜ್ಯದ ಮೊದಲ ಜಿಲ್ಲಾಮಟ್ಟದ ಐ ಬ್ಯಾಂಕ್ ಹೊಂದಿದ ಕೀರ್ತಿ ತುಮಕೂರು ಜಿಲ್ಲಾಸ್ಪತ್ರೆಯದ್ದಾಗಲಿದೆ ಎಂದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ