ನವದೆಹಲಿ:
ಕುಸ್ತಿಪಟುಗಳಾದ ವಿನೇಶ್ ಫೋಗಟ್ ಮತ್ತು ಬಜರಂಗ್ ಪುನಿಯಾ ಅವರ ರಾಜೀನಾಮೆಯನ್ನು ತಕ್ಷಣದಿಂದಲೇ ಜಾರಿಗೆ ಬರುವಂತೆ ಭಾರತೀಯ ರೈಲ್ವೆ ಸೋಮವಾರ ಅಂಗೀಕರಿಸಿದೆ ಎಂದು ಅಧಿಕಾರಿಗಳು ಸೋಮವಾರ ತಿಳಿಸಿದ್ದಾರೆ.ಇಂದು ಹೊರಡಿಸಿದ ಪ್ರತ್ಯೇಕ ನೋಟೀಸ್‌ನಲ್ಲಿ, ಸೆಪ್ಟೆಂಬರ್ 6 ರಂದು ಸಲ್ಲಿಸಲಾದ ಕುಸ್ತಿಪಟುಗಳ ರಾಜೀನಾಮೆಗಳನ್ನು “ತಕ್ಷಣದಿಂದ ಜಾರಿಗೆ ಬರುವಂತೆ ಸಕ್ಷಮ ಪ್ರಾಧಿಕಾರವು ಅಂಗೀಕರಿಸಿದೆ” ಎಂದು ಉತ್ತರ ರೈಲ್ವೆ ಹೇಳಿದೆ.
ಪುನಿಯಾ ಮತ್ತು ಫೋಗಟ್ ಇಬ್ಬರೂ ಇತ್ತೀಚೆಗೆ ಕಾಂಗ್ರೆಸ್ ಸೇರಿದ್ದಾರೆ. ಫೋಗಟ್‌ಗೆ ಹರಿಯಾಣ ವಿಧಾನಸಭಾ ಚುನಾವಣೆಯಲ್ಲಿ ಜೂಲಾನಾ ಕ್ಷೇತ್ರದಿಂದ ಸ್ಪರ್ಧಿಸಲು ಪಕ್ಷದ ಟಿಕೆಟ್ ನೀಡಲಾಗಿದೆ. ಉತ್ತರ ರೈಲ್ವೆಯು ಅವರ ಪ್ರಕರಣಗಳಲ್ಲಿ ಮೂರು ತಿಂಗಳ ನೋಟಿಸ್ ಅವಧಿಯ ನಿಬಂಧನೆಯನ್ನು ಸಡಿಲಗೊಳಿಸಿದೆ. ನೋಟೀಸ್ ಅವಧಿಯ ಮಾನದಂಡದ ದೃಷ್ಟಿಯಿಂದ ಫೋಗಟ್ ಅವರು ಚುನಾವಣೆಯಲ್ಲಿ ಸ್ಪರ್ಧಿಸಲು ಸಾಧ್ಯವಾಗದಿರಬಹುದು ಎಂಬ ಊಹಾಪೋಹಗಳು ಹರಡಿದ್ದವು.
ಚುನಾವಣಾ ನಿಯಮಗಳ ಪ್ರಕಾರ, ಅಕ್ಟೋಬರ್ 5 ರ ಚುನಾವಣೆಯಲ್ಲಿ ಸ್ಪರ್ಧಿಸಲು ಅರ್ಹತೆ ಪಡೆಯಲು ಅವರು ರೈಲ್ವೆಯಿಂದ ಅಧಿಕೃತವಾಗಿ ಬಿಡುಗಡೆ ಪಡೆಯಬೇಕಾಗಿತ್ತು. ಇದೀಗ, ರೈಲ್ವೆಯು ಇಬ್ಬರು ಒಲಿಂಪಿಯನ್‌ಗಳನ್ನು ಅವರ ಸೇವೆಯಿಂದ ಬಿಡುಗಡೆ ಮಾಡಿರುವುದರಿಂದ, ಫೋಗಟ್ ಚುನಾವಣೆಯಲ್ಲಿ ಸ್ಪರ್ಧಿಸಬಹುದು
ವಿನೇಶ್ ಫೋಗಟ್ ಕಾಂಗ್ರೆಸ್ ಸೇರುವ ಮುನ್ನ ಲೋಕಸಭೆ ಪ್ರತಿಪಕ್ಷ ನಾಯಕ ರಾಹುಲ್ ಗಾಂಧಿಯನ್ನು ಭೇಟಿಯಾದ ನಂತರ ರೈಲ್ವೆ ಅವರಿಗೆ ಶೋಕಾಸ್ ನೋಟಿಸ್ ನೀಡಿತ್ತು. ಅವರು ಸರ್ಕಾರಿ ನೌಕರರಾಗಿರುವುದರಿಂದ ಶೋಕಾಸ್ ನೋಟಿಸ್ ಸೇವಾ ನಿಯಮದ ಭಾಗವಾಗಿದೆ ಎಂದು ರೈಲ್ವೆ ಹೇಳಿತ್ತು. ನೋಟಿಸ್ ನೀಡಿದ ನಂತರ ಇಬ್ಬರೂ ರೈಲ್ವೆಗೆ ರಾಜೀನಾಮೆ ನೀಡಿದ್ದರು.