ನವದೆಹಲಿ:
ಜಮ್ಮು ಕಾಶ್ಮೀರದ ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕ ದಾಳಿ ಬಳಿಕ ಭಾರತ ಪಾಕಿಸ್ತಾನದ ವಿರುದ್ಧ ಹಲವು ಕಠಿಣ ಕ್ರಮಗಳನ್ನು ಕೈಗೊಂಡಿದೆ. ಇದೀಗ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಭಾರತದ ಮೇಲೆ ಕೆಟ್ಟ ಕಣ್ಣು ಹಾಕುವವರಿಗೆ “ಸೂಕ್ತ ಉತ್ತರ” ನೀಡುವುದು ಮತ್ತು ಸಶಸ್ತ್ರ ಪಡೆಗಳೊಂದಿಗೆ ಕೆಲಸ ಮಾಡುವುದು ತಮ್ಮ ಜವಾಬ್ದಾರಿ ಎಂದು ಹೇಳಿದ್ದಾರೆ. ಈಗಾಗಲೇ ಮೂರು ಸೇನಾ ಪಡೆಗಳ ಜೊತೆ ಜಂಟಿ ಮಾತುಕತೆ ನಡೆಸಿರುವ ಪ್ರಧಾನಿ ಮೋದಿ ಹಾಗೂ ರಾಜನಾಥ್ ಸಿಂಗ್ ಸೇನಾ ಪಡೆಗಳಿಗೆ ಸಂಪೂರ್ಣ ಅಧಿಕಾರವನ್ನು ನೀಡಿದ್ದಾರೆ. ಸಮಯ ಹಾಗೂ ಸ್ಥಳ ನೋಡಿ ನಿರ್ಧಾರ ಕೈಗೊಳ್ಳಿ ಎಂಬ ಸೂಚನೆಯನ್ನು ನೀಡಿದ್ದಾರೆ.
ದೆಹಲಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ದಾಳಿ ಕುರಿತು ಮಾತನಾಡಿರುವ ರಕ್ಷಣಾ ಸಚಿವ ಭಯೋತ್ಪಾದನೆಯನ್ನು ಬುಡ ಸಮೇತ ಕಿತ್ತು ಹಾಕಲು ನಾವು ಪಣ ತೊಟ್ಟಿದ್ದೇವೆ. ಪ್ರಧಾನಿ ಮೋದಿಯವರ ನಾಯಕತ್ವದಲ್ಲಿ, ನೀವು ಬಯಸುವುದು ಖಂಡಿತವಾಗಿಯೂ ಸಂಭವಿಸುತ್ತದೆ ಎಂದು ನಾನು ನಿಮಗೆ ಭರವಸೆ ನೀಡಲು ಬಯಸುತ್ತೇನೆ. ರಕ್ಷಣಾ ಸಚಿವನಾಗಿ, ನನ್ನ ಸೈನಿಕರೊಂದಿಗೆ ಕೆಲಸ ಮಾಡುವುದು ಮತ್ತು ದೇಶದ ಗಡಿಗಳ ರಕ್ಷಣೆಯನ್ನು ಖಚಿತಪಡಿಸಿಕೊಳ್ಳುವುದು ನನ್ನ ಜವಾಬ್ದಾರಿಯಾಗಿದೆ. ಮತ್ತು ನಮ್ಮ ದೇಶದ ಮೇಲೆ ಕೆಟ್ಟ ಕಣ್ಣು ಹಾಕುವವರಿಗೆ ಸಶಸ್ತ್ರ ಪಡೆಗಳೊಂದಿಗೆ ಕೆಲಸ ಮಾಡುವ ಮೂಲಕ ಸೂಕ್ತ ಉತ್ತರವನ್ನು ನೀಡುವುದು ನನ್ನ ಜವಾಬ್ದಾರಿಯಾಗಿದೆ ಎಂದು ಅವರು ಹೇಳಿದ್ದಾರೆ.
ಪ್ರಧಾನಿ ನರೇಂದ್ರ ಮೋದಿಯವರನ್ನು ಜನರು ಚೆನ್ನಾಗಿ ತಿಳಿದಿದ್ದಾರೆ ಮತ್ತು ಅವರ ಕಾರ್ಯಶೈಲಿ, ದೃಢನಿಶ್ಚಯ ಮತ್ತು ಅವರು ಕೊಟ್ಟ ಮಾತನ್ನು ಹೇಗೆ ನಿಭಾಯಿಸುತ್ತಾರೆ ಎಂದು ಎಲ್ಲರಿಗೂ ತಿಳಿದಿದೆ. ನಮ್ಮವರನ್ನು ಕೊಂದವರನ್ನು ಮೋದಿ ಸುಮ್ಮನೆ ಬಿಡುವುದಿಲ್ಲ ಎಂದು ಹೇಳಿದ್ದಾರೆ.
ಕಳೆದ ಹತ್ತು ದಿನಗಳಿಂದ LOC ಅಲ್ಲಿ ಪಾಕಿಸ್ತಾನ ಕದನ ವಿರಾಮ ಉಲ್ಲಂಘನೆ ಮಾಡುತ್ತಲೇ ಇದೆ. ಭದ್ರತಾ ಪಡೆಗಳು ಪ್ರತ್ಯುತ್ತರವಾಗಿ ಪಾಕ್ ಸೇನೆ ಮೇಲೆ ಗುಂಡಿನ ದಾಳಿ ನಡೆಸಿವೆ. ಈಗಾಗಲೇ ಭಾರತದಲ್ಲಿರುವ ಪಾಕಿಸ್ತಾನಿ ಪ್ರಜೆಗಳನ್ನು ದೇಶದಿಂದ ಹೊರ ಹಾಕಲಾಗುತ್ತಿದೆ. ಸಿಂಧೂ ಜಲ ಒಪ್ಪಂದವನ್ನು ತಡೆಹಿಡಿದು ಪಾಕಿಸ್ತಾನಕ್ಕೆ ಭಾರತ ಡೊಡ್ಡ ಶಾಕ್ ನೀಡಿದೆ. ಭಾರತೀಯ ಬಂದರುಗಳಲ್ಲಿ ಪಾಕಿಸ್ತಾನದ ಹಡಗುಗಳಿಗೆ ನಿರ್ಬಂಧ ಹೇರಲಾಗಿದೆ. ಅಷ್ಟೇ ಅಲ್ಲದೆ ಅಟ್ಟಾರಿ ವಾಘಾ ಗಡಿಯನ್ನು ಮುಚ್ಚಿದ್ದು, ಪಾಕಿಸ್ತಾನದಿಂದ ಆಮದಾಗುವ ವಸ್ತುಗಳಿಗೆ ನಿಷೇಧ ಹೇರಲಾಗಿದೆ. ಭಾರತೀಯ ಅಂಚೆ ಸೇವೆಯನ್ನು ಪಾಕಿಸ್ತಾನದಲ್ಲಿ ಬಂದ್ ಮಾಡಲು ಆದೇಶ ಹೊರಡಿಸಲಾಗಿದೆ.








