ಪೊಲೀಸ್ ಆಯುಕ್ತರಿಗೆ ರಾಮಲಿಂಗಾರೆಡ್ಡಿ ಪತ್ರ : ಕಾರಣ ಗೊತ್ತಾ….?

ಬೆಂಗಳೂರು

    ಕರ್ತವ್ಯ ನಿರಂತ ಬಿಎಂಟಿಸಿ ಚಾಲಕರು ಹಾಗೂ ನಿರ್ವಾಹಕರ ಮೇಲೆ‌ ಸಾರ್ವಜನಿಕರಿಂದ ಹಲ್ಲೆ ಪ್ರಕರಣಗಳು ನಗರದಲ್ಲಿ ಹೆಚ್ಚಳವಾಗುತ್ತಿವೆ. ಎರಡೇ ತಿಂಗಳಲ್ಲಿ ನಾಲ್ಕು ಘಟನೆಗಳು ನಡೆದಿರುವುದು ಆತಂಕಕ್ಕೆ ಕಾರಣವಾಗಿದೆ. ಹಾಗಾಗಿ ಹಲ್ಲೆ ಮಾಡಿದವ ವಿರುದ್ಧ ಸೂಕ್ತ ಕ್ರಮ ಜರುಗಿಸುವಂತೆ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಬೆಂಗಳೂರು ನಗರ ಪೊಲೀಸ್ ಆಯುಕ್ತ ಬಿ.ದಯಾನಂದ್ ಅವರಿಗೆ ಪತ್ರ ಬರೆದಿದ್ದಾರೆ.

   ನಿನ್ನೆ ಪ್ರಕರಣಗಳ ಮಾಹಿತಿ ಪಡೆದುಕೊಂಡಿದ್ದ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ, ಕೇಸ್ ಮಾಡುವುದು ಮುಖ್ಯವಲ್ಲ, ಶಿಕ್ಷೆ ಆಗಬೇಕು. ಹಾಗಾಗಿ ಬೆಂಗಳೂರು ನಗರ ಪೊಲೀಸ್​ ಕಮಿಷನರ್​​ಗೆ ಪತ್ರ ಬರೆಯುತ್ತೇನೆ ಎಂದು ಹೇಳಿದ್ದರು. ಅದರ ಬೆನ್ನೆಲ್ಲೇ ಇದೀಗ ಪತ್ರ ಬರೆದಿದ್ದಾರೆ. 

   ಇತ್ತೀಚಿನ ದಿನಗಳಲ್ಲಿ ಬಿಎಂಟಿಸಿ ಬಸ್​ಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಚಾಲನಾ ಸಿಬ್ಬಂದಿಗಳ ಮೇಲೆ ಸಾರ್ವಜನಿಕ ಪ್ರಯಾಣಿಕರು ಕ್ಷುಲ್ಲಕ, ವಿನಾ ಕಾರಣ ಹಲ್ಲೆ ಮಾಡುತ್ತಿರುವುದನ್ನು ಗಂಭೀರವಾಗಿ ಪರಿಗಣಿಸಬೇಕಾಗಿದೆ. 

   ಬಿಎಂಟಿಸಿ ಬಸ್​ಗಳು ಬೆಂಗಳೂರು ನಗರದ ಜೀವ ನಾಡಿ. ಆ ಬಸ್​​ಗಳಲ್ಲಿ ಕರ್ತವ್ಯ ನಿರ್ವಹಿಸುವ ನಮ್ಮ ಸಾರಿಗೆ ಸಂಸ್ಥೆಯ ಸಿಬ್ಬಂದಿಗಳು ಹಗಲಿರುಳು ಶ್ರಮವಹಿಸಿ ದುಡಿದು, ಸಾರ್ವಜನಿಕರಿಗೆ ಉತ್ತಮ ಸಾರಿಗೆ ಸೇವೆ ಒದಗಿಸುತ್ತಿದ್ದಾರೆ. ಆದರೆ ಕಳೆದೊಂದು ತಿಂಗಳಿನಲ್ಲಿ ನಮ್ಮ ಚಾಲನಾ ಸಿಬ್ಬಂದಿಗಳ ಮೇಲೆ ನಡೆದ ಹಲ್ಲೆ ಪ್ರಕರಣಗಳು ಸಿಬ್ಬಂದಿಗಳು ನಿರಾತಂಕವಾಗಿ ಕರ್ತವ್ಯ ನಿರ್ವಹಿಸಲು ಸಾಧ್ಯವಾಗದೆ ಭೀತಿಯನ್ನುಂಟು ಮಾಡಿದೆ ಎಂದಿದ್ದಾರೆ.

   ಈ ರೀತಿಯ ಪ್ರಕರಣಗಳು ಮರುಕಳಿಸುವುದರಿಂದ ಸಂಸ್ಥೆಯ ನೌಕರರು ನಿರ್ಭೀತಿಯಿಂದ ಕರ್ತವ್ಯ ನಿರ್ವಹಿಸಲು ಸಾಧ್ಯವಾಗದ ವಾತಾವರಣ ನಿರ್ಮಾಣವಾಗುತ್ತಿರುವುದು ಖೇದಕರ. ಆದ್ದರಿಂದ ಈ ಬಗ್ಗೆ ತಾವು ಗಮನಹರಿಸಿ, ಇಂತಹ ಪ್ರಕರಣಗಳಲ್ಲಿ ತಪ್ಪು ಎಸಗಿರುವ ವ್ಯಕ್ತಿಗಳ ಮೇಲೆ ಕಠಿಣ ಕ್ರಮ ಜರುಗಿಸಿ, ಮುಂದಿನ ದಿನಗಳಲ್ಲಿ ಈ ರೀತಿಯ ಪ್ರಕರಣಗಳು ನಡೆಯದಂತೆ ನಗರದ ಪೋಲಿಸ್ ಠಾಣೆಗಳ ಅಧಿಕಾರಿಗಳಿಗೆ ನಿರ್ದೇಶನ ನೀಡಿ, ಸಾರಿಗೆ ಸಿಬ್ಬಂದಿಗಳು ಒತ್ತಡ ಮುಕ್ತವಾಗಿ ಕರ್ತವ್ಯ ನಿರ್ವಹಿಸಲು ಅನುವು ಮಾಡಿಕೊಡುವಂತೆ ಮನವಿ ಮಾಡಿದ್ದಾರೆ. ಹಲ್ಲೆ ನಡೆದಿರುವ ದಿನಾಂಕ ಹಾಗೂ ಪ್ರಕರಣ ನಡೆದ ಸ್ಥಳ, ಘಟನೆಗಳ ಬಗ್ಗೆ ಪತ್ರದಲ್ಲಿ ಸಚಿವ ರಾಮಲಿಂಗಾರೆಡ್ಡಿ ಉಲ್ಲೇಖಿಸಿದ್ದಾರೆ. 

    ಸಚಿವ ರಾಮಲಿಂಗಾರೆಡ್ಡಿ ಪತ್ರ ಬರೆದಿದ್ದರೆ, ಇತ್ತ ಬಿಎಂಟಿಸಿ ಎಂಡಿ ರಾಮಚಂದ್ರನ್​ ಅವರು ಬೆಂಗಳೂರು ಪೊಲೀಸ್​ ಕಮಿಷನರ್ ಬಿ.ದಯಾನಂದ್​​ರನ್ನು​ ಭೇಟಿಯಾಗಿದ್ದಾರೆ. ಹಲ್ಲೆ ಮಾಡಿದ ಆರೋಪಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಮನವಿ ಮಾಡಿದ್ದಾರೆ.ಹಲ್ಲೆ ವಿಚಾರವಾಗಿ ಕೆಲವು ಠಾಣೆಗಳಲ್ಲಿ ಎಫ್​ಐಆರ್​ ದಾಖಲಾಗಿದೆ. ಆದಷ್ಟು ಬೇಗ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಿ. ಸೂಕ್ತ ಕ್ರಮ ಕೈಗೊಳ್ಳಲು ತನಿಖಾಧಿಕಾರಿಗಳಿಗೆ ನಿರ್ದೇಶನ ನೀಡಬೇಕು ಎಂದು ಎಫ್​ಐಆರ್​ ಕಾಪಿಗಳ ಸಮೇತ ಪೊಲೀಸ್ ಆಯುಕ್ತರಿಗೆ ಮನವಿ ಮಾಡಿದ್ದಾರೆ.

 

Recent Articles

spot_img

Related Stories

Share via
Copy link
Powered by Social Snap