‌ರೇಣುಕಾ ಸ್ವಾಮಿ ಕೇಸ್‌ : ಸೆ.5ಕ್ಕೆ ವಿಚಾರಣೆ ಮುಂದೂಡಿದ ಹೈಕೋರ್ಟ್

ಬೆಂಗಳೂರು :

  ರೇಣುಕಾ ಸ್ವಾಮಿ ಕೊಲೆ ಪ್ರಕರಣದಲ್ಲಿ ಪರಪ್ಪನ ಅಗ್ರಹಾರ ಜೈಲಿನಲ್ಲಿ ನ್ಯಾಯಾಂಗ ಬಂಧನದಲ್ಲಿರುವ ನಟ ದರ್ಶನ್, ಆರೋಗ್ಯ ಸಮಸ್ಯೆಯನ್ನು ಕಾರಣವನ್ನಾಗಿ ನೀಡಿ ಮನೆ ಊಟಕ್ಕೆ ಹಾಗೂ ಇತರೆ ಕೆಲವು ವಸ್ತುಗಳಿಗೆ ಬೇಡಿಕೆ ಇರಿಸಿದ್ದರು. ಮನೆ ಊಟ ಹಾಗೂ ಇತರೆ ವಸ್ತುಗಳನ್ನು ಜೈಲಿಗೆ ತರಿಸಿಕೊಳ್ಳಲು ಅನುಮತಿ ಕೋರಿ ಹೈಕೋರ್ಟ್​ಗೆ ರಿಟ್ ಅರ್ಜಿಯನ್ನು ಸಲ್ಲಿಸಿದ್ದರು. ಇಂದು (ಆಗಸ್ಟ್ 20) ಹೈಕೋರ್ಟ್​ನ ಏಕಸದಸ್ಯ ಪೀಠವು ಅರ್ಜಿಯ ವಿಚಾರಣೆ ನಡೆಸಿದ್ದು ಸೆಪ್ಟೆಂಬರ್ 5ಕ್ಕೆ ವಿಚಾರಣೆಯನ್ನು ಮುಂದೂಡಿದೆ.

   ಆರೋಗ್ಯ ಸಮಸ್ಯೆ, ನಿದ್ರಾಹೀನತೆ ಕಾಡುತ್ತಿರುವುದಾಗಿ ಕಾರಣ ನೀಡಿ, ಮನೆ ಊಟ, ಹಾಸಿಗೆ, ಚಮಚ, ತಟ್ಟೆಗಳನ್ನು ತರಸಿಕೊಳ್ಳಲು ಅನುಮತಿ ಕೋರಿ ನಟ ದರ್ಶನ್ ಹೈಕೋರ್ಟ್​ಗೆ ರಿಟ್ ಅರ್ಜಿ ಸಲ್ಲಿಸಿದ್ದರು. ಈ ಹಿಂದೆ ಅರ್ಜಿಯ ವಿಚಾರಣೆ ನಡೆಸಿದ್ದ ಪೀಠವು, ಜೈಲು ಅಧಿಕಾರಿಗಳು ತಮ್ಮ ನಿರ್ಣಯವನ್ನು ನೀಡುವಂತೆ ಹೇಳಿದ್ದರು. ಅಂತೆಯೇ ನಿರ್ಧಾರವನ್ನು ಹೈಕೋರ್ಟ್​ಗೆ ನೀಡಿದ್ದ ಜೈಲು ಅಧಿಕಾರಿಗಳು ದರ್ಶನ್​ಗೆ ಜೈಲು ಊಟ ಸಾಕೆಂದಿದ್ದರು. ಜೈಲಿನ ವೈದ್ಯಾಧಿಕಾರಿ ನೀಡಿದ್ದ ವರದಿಯನ್ನು ಸಹ ನ್ಯಾಯಾಲಯಕ್ಕೆ ಸಲ್ಲಿಸಿದ್ದರು.

   ಇಂದು ಹೈಕೋರ್ಟ್​ನ ಏಕಸದಸ್ಯ ಪೀಠದ ಮುಂದೆ ನಡೆದ ವಿಚಾರಣೆ ವೇಳೆ, ವೈದ್ಯಾಧಿಕಾರಿಗಳು ದರ್ಶನ್​ಗೆ ಮನೆ ಊಟವನ್ನು ನಿರಾಕರಿಸಿದ್ದಾರೆ ಎಂದು ರಾಜ್ಯ ಅಭಿಯೋಜಕ ಬೆಳ್ಳಿಯಪ್ಪ ಹೇಳಿದರು. ಅದಕ್ಕೆ ಸಂಬಂಧಿಸಿದ ದಾಖಲೆಗಳನ್ನು ಸಲ್ಲಿಸಿರುವುದಾಗಿ ತಿಳಿಸಿದರು. ಆದರೆ ದರ್ಶನ್ ಪರ ವಕೀಲರು ವೈದ್ಯಾಧಿಕಾರಿಗಳ ವರದಿ ನೋಡಿ ವಾದಮಂಡನೆಗೆ ಸಮಯ ಬೇಕಾಗುತ್ತದೆಯಾದ್ದರಿಂದ ವಾದ ಮಂಡಿಸಲು ಕಾಲಾವಕಾಶ ನೀಡುವಂತೆ ಮನವಿ ಮಾಡಿದರು. ಅಂತೆಯೇ ನ್ಯಾಯಾಧೀಶರು ವಿಚಾರಣೆಯನ್ನು ಸೆಪ್ಟೆಂಬರ್ 5 ಕ್ಕೆ ಮುಂದೂಡಿದರು. 

   ಆಗಸ್ಟ್ 28 ರವೆರಗೆ ದರ್ಶನ್​ರ ನ್ಯಾಯಾಂಗ ಬಂಧನ ವಿಸ್ತರಿಸಿ ಕಳೆದ ವಾರ ಮ್ಯಾಜಿಸ್ಟ್ರೇಟ್ ನ್ಯಾಯಾಲಯ ಆದೇಶ ನೀಡಿದೆ. ಇದೀಗ ಮನೆ ಊಟದ ಅರ್ಜಿಯ ವಿಚಾರಣೆ ಸೆಪ್ಟೆಂಬರ್ 5ಕ್ಕೆ ಮುಂದೂಡಲಾಗಿದೆ. ಈ ನಡುವೆ ಪ್ರಕರಣದ ನಂಬರ್ 1 ಆರೋಪಿ ಪವಿತ್ರಾ ಗೌಡ ಪರ ವಕೀಲರು ಜಾಮೀನಿಗಾಗಿ ಅರ್ಜಿ ಸಲ್ಲಿಸಿದ್ದು, ಅರ್ಜಿಯ ವಿಚಾರಣೆ ಶೀಘ್ರವೇ ನ್ಯಾಯಾಧೀಶರ ಮುಂದೆ ಬರಲಿದೆ.

   ಪ್ರಕರಣದ ತನಿಖೆ ನಡೆಸುತ್ತಿರುವ ಪೊಲೀಸರು ಪ್ರಕರಣಕ್ಕೆ ಸಂಬಂಧಿಸಿದಂತೆ ಹಲವಾರು ಸಾಕ್ಷ್ಯಗಳನ್ನು ಕಲೆ ಹಾಕಿದ್ದು ಕೆಲವು ಡಿಜಿಟಲ್ ಸಾಕ್ಷ್ಯಗಳ ಎಫ್​ಎಸ್​ಎಲ್ ವರದಿಯಾಗಿ ಕಾಯುತ್ತಿದ್ದಾರೆ. ಹೈದರಾಬಾದ್​ನಿಂದ ಈ ಎಫ್​ಎಸ್​ಎಲ್​ ವರದಿಗಳು ಬರಬೇಕಿದ್ದು ವರದಿಗಳು ಬಂದ ಕೂಡಲೇ ಚಾರ್ಜ್​ ಶೀಟ್ ಸಲ್ಲಿಕೆ ಮಾಡಲಿದ್ದಾರೆ. ಮುಂದಿನ ತಿಂಗಳ ಮೊದಲ ವಾರದಲ್ಲಿ ಪೊಲೀಸರು ಚಾರ್ಜ್​ ಶೀಟ್ ಸಲ್ಲಿಕೆ ಮಾಡುವ ಸಾಧ್ಯತೆ ಇದೆ.

 

Recent Articles

spot_img

Related Stories

Share via
Copy link
Powered by Social Snap