ಅಚ್ಚರಿಗಳ ಗುಚ್ಚವಾದ ರೇಣುಕಸ್ವಾಮಿ ಕೇಸ್‌ : ಈಗ ಏದುರಾದ ಅಚ್ಚರಿ ಏನು ಗೊತ್ತ…..?

ಬೆಂಗಳೂರು

    ಬೆಂಗಳೂರಿನಲ್ಲಿ ಚಿತ್ರದುರ್ಗದ ಮೂಲದ ರೇಣುಕಾಸ್ವಾಮಿ ಹತ್ಯೆ ನಡೆದಿದೆ. ಪ್ರಕರಣದ ತನಿಖೆ ಮುಂದುವರೆದಿದ್ದು, ನಟ ದರ್ಶನ್ ಪರಿಚಯವೇ ಇಲ್ಲದ ಆರೋಪಿಗಳು ಕೊಲೆ ಪ್ರಕರಣದಲ್ಲಿ ಭಾಗಿಯಾಗಿದ್ದಾರೆ ಎಂಬ ಅಂಶ ಈಗ ಬಹಿರಂಗವಾಗಿದೆ.

    ನಟ ದರ್ಶನ್ ಸೇರಿ ಎಲ್ಲಾ ಆರೋಪಿಗಳನ್ನು ನ್ಯಾಯಾಲಯ ಜೂನ್ 20ರ ತನಕ ಮತ್ತೆ ಪೊಲೀಸರ ವಶಕ್ಕೆ ನೀಡಿದೆ. ಪೊಲೀಸರು ಸ್ಥಳ ಮಹಜರು ಮಾಡುತ್ತಿದ್ದು, ರೇಣುಕಾಸ್ವಾಮಿ ಮೊಬೈಲ್ ಪತ್ತೆಗಾಗಿ ಹುಡುಕಾಟ ನಡೆಸುತ್ತಿದ್ದಾರೆ.

    ಈ ಹತ್ಯೆ ಪ್ರಕರಣದಲ್ಲಿ 17 ಆರೋಪಿಗಳು ಭಾಗಿಯಾಗಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಇವರಲ್ಲಿ 8 ಆರೋಪಿಗಳಿಗೆ ನಟ ದರ್ಶನ್ ಪರಿಚಯವೇ ಇರಲಿಲ್ಲ. ಅವರು ದರ್ಶನ್ ಸ್ನೇಹಿತರೂ ಅಲ್ಲ. ಅವರೆಲ್ಲರೂ ದರ್ಶನ್‌ ಭೇಟಿಯಾಗಿದ್ದು, ಪೊಲೀಸ್ ಠಾಣೆಯಲ್ಲಿಯೇ ಎಂಬ ಅಂಶ ಬೆಳಕಿಗೆ ಬಂದಿದೆ.

    ದರ್ಶನ್ ಭೇಟಿಯೇ ಮಾಡದ, ರೇಣುಕಾಸ್ವಾಮಿ ಯಾರೂ ಎಂದೂ ತಿಳಿಯದ 8 ಆರೋಪಿಗಳು ಈಗ ಪೊಲೀಸರ ವಶದಲ್ಲಿದ್ದಾರೆ. ತಮ್ಮ ಸ್ನೇಹಿತರ ಮಾತು ಕೇಳಿ, ಬೇರೆ-ಬೇರೆ ಕಾರಣಕ್ಕೆ ಈ ಕೊಲೆ ಪ್ರಕರಣದಲ್ಲಿ ಅವರು ಸೇರಿಕೊಂಡಿದ್ದಾರೆ.

    ಹತ್ಯೆ ಬಳಿಕ ಶೆಡ್‌ನಿಂದ ರೇಣುಕಾಸ್ವಾಮಿ ಶವವನ್ನು ತೆಗೆದುಕೊಂಡ ಕಾರನ್ನು ವಾಶ್ ಮಾಡಿಸಿದ್ದ ಹೇಮಂತ್ ಎಂಬ ಆರೋಪಿ ದರ್ಶನ್ ನೋಡಿದ್ದು ಪೊಲೀಸ್ ಠಾಣೆಯಲ್ಲಿ. ಕಾರು ಮಾಲೀಕ ಪುನೀತ್ ಸೂಚನೆಯಂತೆ ಕಾರನ್ನು ಆತ ವಾಶ್ ಮಾಡಿಸಿದ್ದ.

    ಚಿತ್ರದುರ್ಗದಿಂದ ರೇಣುಕಾಸ್ವಾಮಿಯನ್ನು ಅಪಹರಿಸಲು ನೆರವಾದ ಅನಯಕುಮಾರ್, ಕಾರು ಚಾಲಕ ರವಿ, ಲಕ್ಷ್ಮಣ್, ಜಗದೀಶ್ ಇವರೆಲ್ಲ ದರ್ಶನ್‌ನನ್ನು ತೆರೆಯ ಮೇಲೆ ಮಾತ್ರ ನೋಡಿದ್ದರು. ಮತ್ತೆ ನೋಡಿದ್ದು ಅನ್ನಪೂರ್ಣೇಶ್ವರಿ ನಗರ ಪೊಲೀಸ್ ಠಾಣೆಯಲ್ಲಿ.

    ರೇಣುಕಾಸ್ವಾಮಿ ಶವವನ್ನು ಕಾಮಾಕ್ಷಿಪಾಳ್ಯ ಪೊಲೀಸ್ ಠಾಣೆ ವ್ಯಾಪ್ತಿಯ ಮೋರಿಗೆ ಎಸೆದಿದ್ದ ಆರೋಪ ಎದುರಿಸುತ್ತಿರುವ ಕೇಶವ್, ಕಾರ್ತಿಕ್, ನಿಖಿಲ್ ನಾಯಕ್ ಕೂಡಾ ಅಪರಿಚಿತರು ಎಂಬ ಮಾಹಿತಿ ಪೊಲೀಸರ ವಿಚಾರಣೆ ವೇಳೆ ತಿಳಿದುಬಂದಿದೆ.

    ಪ್ರಕರಣದಲ್ಲಿ ಬಂಧಿತರಾಗಿರುವ ಕೆಲವು ಆರೋಪಿಗಳು ಮಾತ್ರ ದರ್ಶನ್ ಸ್ನೇಹಿತರು. ದರ್ಶನ್, ಪವಿತ್ರಾ ಗೌಡ ಪರಿಚಯದವರು. ಉಳಿದ ಆರೋಪಿಗಳು ತಮ್ಮ ಸ್ನೇಹಿತರ ಮಾತು ಕೇಳಿ ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಭಾಗಿಯಾಗಿದ್ದಾರೆ.

    ರೇಣುಕಾಸ್ವಾಮಿ ಹತ್ಯೆಗೂ ಮೊದಲು ದರ್ಶನ್ ಮತ್ತು ಸ್ನೇಹಿತರು ಆರ್. ಆರ್. ನಗರದ ಹೋಟೆಲ್‌ನಲ್ಲಿ ಪಾರ್ಟಿ ಮಾಡಿದ್ದರು. ಆದರೆ ಈ ಪಾರ್ಟಿಯಲ್ಲಿ ಕೊಲೆ ಪ್ರಕರಣದ ಹಲವು ಆರೋಪಿಗಳು ಇರಲಿಲ್ಲ. ನಟ ಚಿಕ್ಕಣ್ಣ ಪಾರ್ಟಿಯಲ್ಲಿದ್ದರು. ಸೋಮವಾರ ಅನ್ನಪೂರ್ಣೇಶ್ವರಿ ನಗರ ಠಾಣೆಗೆ ಆಗಮಿಸಿ ಅವರು ವಿಚಾರಣೆ ಎದುರಿಸಿದ್ದಾರೆ.

    ನಟ ದರ್ಶನ್ ರೇಣುಕಾಸ್ವಾಮಿ ಶವವನ್ನು ಚಿತ್ರದುರ್ಗದ ಬೆಟ್ಟದಲ್ಲಿ ಎಸೆಯುವಂತೆ ಸೂಚನೆ ನೀಡಿದ್ದರು ಎಂದು ಆರೋಪಿಯೊಬ್ಬರ ಪೊಲೀಸರ ಮುಂದೆ ಹೇಳಿದ್ದಾನೆ. ಈ ಕುರಿತು ತನಿಖೆ ನಡೆಯುತ್ತಿದೆ. ರೇಣುಕಾಸ್ವಾಮಿ ಶವವನ್ನು ಎಸೆಯುವಾಗ ಆರೋಪಿಗಳು ತೆಗೆದುಕೊಂಡಿದ್ದ ರೇಣುಕಾಸ್ವಾಮಿಯ ಚಿನ್ನಾಭರಣಗಳನ್ನು ಪೊಲೀಸರು ಸೋಮವಾರ ವಶಕ್ಕೆ ಪಡೆದುಕೊಂಡಿದ್ದಾರೆ.

    ರೇಣುಕಾಸ್ವಾಮಿ ಅಪಹರಣ ನಡೆದ ಚಿತ್ರದುರ್ಗದಲ್ಲಿ ಸ್ಥಳ ಮಹಜರು ಮುಗಿದಿದೆ. ನಟ ದರ್ಶನ್‌ ಮೈಸೂರಿಗೆ ಕರೆದುಕೊಂಡು ಹೋಗಿ ಪೊಲೀಸರು ಸ್ಥಳ ಮಹಜರು ಮಾಡಬೇಕಿದೆ. ಕೊಲೆ ಬಳಿಕ ಮೈಸೂರಿನಲ್ಲಿ ದರ್ಶನ್ ಸ್ನೇಹಿತರ ಮನೆಯ ಪೂಜೆಯಲ್ಲಿ ಪಾಲ್ಗೊಂಡಿದ್ದರು, ಬಳಿಕ ಹೋಟೆಲ್‌ನಲ್ಲಿ ವಾಸ್ತವ್ಯ ಹೂಡಿದ್ದರು. ಜೂನ್ 11ರಂದು ಮೈಸೂರು ನಗರದ ಖಾಸಗಿ ಹೋಟೆಲ್‌ನಲ್ಲಿಯೇ ಪೊಲೀಸರು ಅವರನ್ನು ಬಂಧಿಸಿದ್ದರು.

   ನಟ ದರ್ಶನ್ ಮತ್ತು ಇತರ ಆರೋಪಿಗಳನ್ನು ಈಗಾಗಲೇ ನ್ಯಾಯಾಲಯ ಎರಡು ಬಾರಿ ಪೊಲೀಸರ ವಶಕ್ಕೆ ನೀಡಿದೆ. ಆದ್ದರಿಂದ ಜೂನ್ 20ರಂದು ಕೋರ್ಟ್‌ಗೆ ಹಾಜರುಪಡಿಸಿದಾಗ ನ್ಯಾಯಾಂಗ ಬಂಧನಕ್ಕೆ ನೀಡುವ ಸಾಧ್ಯತೆ ಇದೆ. ಆದ್ದರಿಂದ ಪೊಲೀಸರು ಉಳಿದಿರುವ ಸ್ಥಳ ಮಹಜರು ಪ್ರಕ್ರಿಯೆಯನ್ನು ಎರಡು ದಿನದಲ್ಲಿ ಪೂರ್ಣಗೊಳಿಸಲಿದ್ದಾರೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page SUBSCRIBE ಮಾಡಿ

Recent Articles

spot_img

Related Stories

Share via
Copy link
Powered by Social Snap