ಕೆಕೆಆರ್‌-ಲಕ್ನೋ ಪಂದ್ಯದ ದಿನಾಂಕ ಮರು ನಿಗದಿ!

ಕೋಲ್ಕತಾ: 

    ಈಡನ್‌ಗಾರ್ಡನ್ಸ್ ಕ್ರೀಡಾಂಗಣದಲ್ಲಿ ಎ. 6ರಂದು ನಿಗದಿಯಾಗಿರುವ ಐಪಿಎಲ್‌ನ ಕೋಲ್ಕತಾ ನೈಟ್ ರೈಡರ್ಸ್ ಹಾಗೂ ಲಕ್ನೊ ಸೂಪರ್ ಜಯಂಟ್ಸ್  ತಂಡಗಳ ನಡುವಿನ ಪಂದ್ಯವನ್ನು ಮುಂದೂಡುವಂತೆ ಕೋಲ್ಕತಾ ಪೊಲೀಸರು ಬಂಗಾಳ ಕ್ರಿಕೆಟ್ ಸಂಸ್ಥೆಗೆ(ಸಿಎಬಿ)ತಿಳಿಸಿದ್ದಾರೆ. ಅದೇ ದಿನ ರಾಮನವಮಿ  ಆಚರಣೆ ಇರುವ ಕಾರಣ ಭದ್ರತೆ ದೃಷ್ಟಿಯಿಂದ ಪೊಲೀಸರು ಈ ಮನವಿ ಮಾಡಿದ್ದಾರೆ. ಕಳೆದ ವರ್ಷ ಕೂಡ ಇದೇ ಕಾರಣದಿಂದ ಕೋಲ್ಕತಾ-ರಾಜಸ್ಥಾನ ರಾಯಲ್ಸ್ ಪಂದ್ಯವು ಮರು ನಿಗದಿಯಾಗಿತ್ತು. ಹೀಗಾಗಿ ಈ ಬಾರಿಯೂ ಪಂದ್ಯ ಮರು ನಿಗದಿಯಾಗುವುದು ಖಚಿತ.

    ರಾಮನವಮಿಯ ದಿನದಂದು ಪಶ್ಚಿಮ ಬಂಗಾಳದಲ್ಲಿ ಸುಮಾರು 20 ಸಾವಿರಕ್ಕೂ ಹೆಚ್ಚು ಮೆರವಣಿಗೆ ನಡೆಯಲಿದೆ ಎಂದು ಬಿಜೆಪಿ ಮುಖಂಡ ಸುವೇಂದು ಅಧಿಕಾರಿ ಘೋಷಿಸಿದ್ದಾರೆ. ಹೀಗಾಗಿ ಈ ಮೆರವಣಿಗೆ ಮತ್ತು ಪಂದ್ಯಕ್ಕೆ ಬಿಗಿ ಭದ್ರತೆ ನೀಡುವುದು ಅಸಾಧ್ಯ. ಹೀಗಾಗಿ ಪಂದ್ಯವನ್ನು ಮುಂದೂಡಿ ಬೇರೆ ದಿನ ನಡೆಸಬೇಕು ಎಂದು ಸಿಎಬಿಗೆ ಮನವಿ ಮಾಡಿ ಪತ್ರ ಬರೆದಿದ್ದೇವೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

    ಪೊಲೀಸರ ನೆರವಿಲ್ಲದೆ ಪಂದ್ಯವನ್ನು ನಡೆಸುವುದು, 65,000 ಪ್ರೇಕ್ಷಕರ ನಿರ್ವಹಣೆ, ರಕ್ಷಣೆ ಖಂಡಿತ ಸಾಧ್ಯವಾಗದು. ಇದನ್ನು ನಾವು ಬಿಸಿಸಿಐ ಗಮನಕ್ಕೆ ತಂದಿದ್ದೇವೆ. ಪಂದ್ಯವನ್ನು ಮರು ನಿಗದಿಪಡಿಸಲು ಇನ್ನೂ ಸಾಕಷ್ಟು ಕಾಲಾವಕಾಶವಿದೆ ಎಂದು ಬಂಗಾಳ ಕ್ರಿಕೆಟ್‌ ಮಂಡಳಿ ಅಧ್ಯಕ್ಷ ಸ್ನೇಹಶಿಷ್‌ ಗಂಗೂಲಿ ಮಾಧ್ಯಮಗಳಿಗೆ ತಿಳಿಸಿದ್ದಾರೆ. 

    18ನೇ ಆವೃತ್ತಿಗೆ ಮಾರ್ಚ್​ 22ರ ಶನಿವಾರದಂದು ಕೋಲ್ಕತಾದ ಈಡನ್​ ಗಾರ್ಡನ್ಸ್​ ಸ್ಟೇಡಿಯಂನಲ್ಲಿ  ಚಾಲನೆ ಸಿಗಲಿದ್ದು, ಹಾಲಿ ಚಾಂಪಿಯನ್​ ಕೋಲ್ಕತ ನೈಟ್​ರೈಡರ್ಸ್​ ಮತ್ತು ಆರ್​ಸಿಬಿ  ನಡುವೆ ಉದ್ಘಾಟನಾ ಪಂದ್ಯ ನಡೆಯಲಿದೆ.

    ಈ ಬಾರಿ ಐಪಿಎಲ್ ಟೂರ್ನಿ ದೇಶದ ವಿವಿಧ 13 ನಗರಗಳಲ್ಲಿ ಒಟ್ಟು 74 ಪಂದ್ಯಗಳು ನಡೆಯಲಿವೆ. 10 ಐಪಿಎಲ್ ತಂಡಗಳು ತಮ್ಮ ತವರಿನ ಮೈದಾನದಲ್ಲಿ ಕ್ರಿಕೆಟ್ ಆಡುವುದು ಮಾತ್ರವಲ್ಲದೇ ತಮ್ಮ ತವರಿನಾಚೆ ಅಂದರೆ ವಿಶಾಖಪಟ್ಟಣಂ, ಗುವಾಹಟಿ ಹಾಗೂ ಧರ್ಮಶಾಲಾ ಮೈದಾನದಲ್ಲಿಯೂ ಕೆಲವು ಐಪಿಎಲ್ ಪಂದ್ಯಗಳನ್ನು ಆಡಲಿವೆ. ಡೆಲ್ಲಿ ಕ್ಯಾಪಿಟಲ್ಸ್, ಪಂಜಾಬ್ ಕಿಂಗ್ಸ್ ಹಾಗೂ ರಾಜಸ್ಥಾನ ರಾಯಲ್ಸ್ ತಂಡಗಳು ತಮ್ಮ ಪಾಲಿನ ಕೆಲವು ಪಂದ್ಯಗಳನ್ನು ಈ ಮೂರು ಸ್ಟೇಡಿಯಂನಲ್ಲಿ ಐಪಿಎಲ್ ಪಂದ್ಯಗಳನ್ನು ಆಡಲಿವೆ.