ನವದೆಹಲಿ:
ಮುಂಬರುವ 2026ರ ಐಸಿಸಿ ಟಿ20 ವಿಶ್ವಕಪ್ ಟೂರ್ನಿಯ ವೇಳಾಪಟ್ಟಿಯನ್ನು ಅಂತಾರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ ಮಂಗಳವಾರ ಪ್ರಕಟಿಸಿದೆ. ಭಾರತ ಹಾಗೂ ಶ್ರೀಲಂಕಾ ಜಂಟಿ ಆತಿಥ್ಯದಲ್ಲಿ ಟಿ20 ವಿಶ್ವಕಪ್ ಟೂರ್ನಿಯು ಫೆಬ್ರವರಿ 7 ರಿಂದ ಮಾರ್ಚ್ 8 ರಂದು ನಡೆಯಲಿದೆ. ಭಾರತ ತಂಡದ ಹಿರಿಯ ಬ್ಯಾಟ್ಸ್ಮನ್ ರೋಹಿತ್ ಶರ್ಮಾ ಅವರನ್ನು ಟಿ20 ವಿಶ್ವಕಪ್ ಟೂರ್ನಿಗೆ ರಾಯಭಾರಿಯನ್ನಾಗಿ ನೇಮಿಸಲಾಗಿದೆ ಎಂದು ಐಸಿಸಿ ಅಧ್ಯಕ್ಷ ಜಯ ಶಾ ಘೋಷಣೆ ಮಾಡಿದ್ದಾರೆ. ರೋಹಿತ್ ಶರ್ಮಾ ನಾಯಕತ್ವದಲ್ಲಿ ಭಾರತ ತಂಡ 2024ರ ಐಸಿಸಿ ಟಿ20 ವಿಶ್ವಕಪ್ ಅನ್ನು ಮುಡಿಗೇರಿಸಿಕೊಂಡಿತ್ತು. ಇದಾದ ಬಳಿಕ ಅವರು ಟಿ20ಐ ವೃತ್ತಿ ಜೀವನಕ್ಕೆ ವಿದಾಯ ಹೇಳಿದ್ದರು.
ಎಂಎಸ್ ಧೋನಿ ನಾಯಕತ್ವದಲ್ಲಿ 2007ರ ಐಸಿಸಿ ಟಿ20 ವಿಶ್ವಕಪ್ ಗೆದ್ದಿದ್ದ ಭಾರತ ತಂಡದಲ್ಲಿ ರೋಹಿತ್ ಶರ್ಮಾ ಕೂಡ ಆಡಿದ್ದರು. ಇದಾದ ಬಳಿಕ ಅವರು ಪ್ರತಿಯೊಂದು ಟಿ20 ವಿಶ್ವಕಪ್ ಟೂರ್ನಿಯಲ್ಲಿಯೂ ಆಡಿದ್ದಾರೆ. 2024ರ ಐಸಿಸಿ ಟಿ20 ವಿಶ್ವಕಪ್ ಟೂರ್ನಿಯಲ್ಲಿ ರೋಹಿತ್ ನಾಯಕತ್ವದಲ್ಲಿ ಭಾರತ ಚಾಂಪಿಯನ್ ಆಗಿತ್ತು. ವೆಸ್ಟ್ ಇಂಡೀಸ್ನ ಬಾರ್ಬಡೋಸ್ನ ಕೆನ್ಸಿಂಗ್ಟನ್ ಟೌನ್ ಓವಲ್ನಲ್ಲಿ ನಡೆದಿದ್ದ ಫೈನಲ್ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಭಾರತ ತಂಡ ಗೆಲುವು ಪಡೆಯುವ ಮೂಲಕ ಎರಡನೇ ಬಾರಿ ಟಿ20 ವಿಶ್ವಕಪ್ ಮುಡಿಗೇರಿಸಿಕೊಂಡಿತ್ತು.
ರೋಹಿತ್ ಶರ್ಮಾ ಅವರು ಎರಡು ಐಸಿಸಿ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಚಾಂಪಿಯನ್ ಆಗಿದ್ದಾರೆ. ಎಂಎಸ್ ಧೋನಿ ಬಳಿಕ ಎರಡು ಐಸಿಸಿ ಟ್ರೋಫಿ ಎತ್ತಿ ಹಿಡಿದ ಎರಡನೇ ಭಾರತೀಯ ನಾಯಕ ಆಗಿದ್ದಾರೆ. ಟೂರ್ನಿಯ ರಾಯಭಾರಿಯಾಗಿ ನೇಮಕಗೊಂಡ ನಂತರ ಮಾತನಾಡಿದ ರೋಹಿತ್ ಶರ್ಮಾ, ಐಸಿಸಿ ರಾಯಭಾರಿಯಾಗಿ ನೇಮಕಗೊಂಡ ಮೊದಲ ಸಕ್ರಿಯ ಕ್ರಿಕೆಟಿಗ ಎಂಬ ಸೌಭಾಗ್ಯವನ್ನು ಅನುಭವಿಸುತ್ತಿದ್ದೇನೆ ಎಂದು ಹೇಳಿದ್ದಾರೆ.
“ಎಲ್ಲರಿಗೂ ಶುಭ ಸಂಜೆ. ನನ್ನ ಹೃದಯದಾಳದಿಂದ, ನಾನು ಐಸಿಸಿ ಮತ್ತು ಜಯ ಶಾ ಅವರಿಗೆ ಧನ್ಯವಾದ ಹೇಳಲು ಬಯಸುತ್ತೇನೆ. ಐಸಿಸಿ ಕಾರ್ಯಕ್ರಮವೊಂದರ ರಾಯಭಾರಿಯಾಗಿರುವುದು ಒಂದು ದೊಡ್ಡ ಗೌರವ. ಯಾವುದೇ ಸಕ್ರಿಯ ಆಟಗಾರನನ್ನು ಐಸಿಸಿ ರಾಯಭಾರಿಯಾಗಿ ಘೋಷಿಸಲಾಗಿಲ್ಲ ಎಂದು ನನಗೆ ತಿಳಿಸಲಾಯಿತು, ಆದ್ದರಿಂದ ಇದು ನನಗೆ ಒಂದು ದೊಡ್ಡ ಸವಲತ್ತು ಮತ್ತು ಒಂದು ದೊಡ್ಡ ಗೌರವವಾಗಿದೆ. ನಾನು ತುಂಬಾ ಕೃತಜ್ಞನಾಗಿದ್ದೇನೆ ಮತ್ತು ತುಂಬಾ ಚಿರ ಋಣಿಯಾಗಿದ್ದೇನೆ,” ಎಂದು ರೋಹಿತ್ ಶರ್ಮಾ ಸಂತಸ ವ್ಯಕ್ತಪಡಿಸಿದ್ದಾರೆ.
“ಕಳೆದ ವರ್ಷ ನಾವು ಸೃಷ್ಟಿಸಿದ ಅದೇ ಮ್ಯಾಜಿಕ್ ಅನ್ನು ನಾವು ಸೃಷ್ಟಿಸಬಹುದು ಎಂದು ಆಶಿಸುತ್ತೇವೆ, ಆದರೆ ಈ ಬಾರಿ ಅದು ಬೇರೆ ಹುಡುಗರ ಗುಂಪಿನೊಂದಿಗೆ ಇರುತ್ತದೆ,” ಎಂದು ಹೇಳಿದ್ದಾರೆ.








