ಬೆಂಗಳೂರು :
ಚಾಲೆಂಜಿಂಗ್ ಸ್ಟಾರ್ ದರ್ಶನ್ ಮತ್ತು ನಿರ್ಮಾಪಕ ರಾಕ್ ಲೈನ್ ವೆಂಕಟೇಶ್ ಕಾಂಬಿನೇಷನ್ ನಲ್ಲಿ ಗಂಡುಗಲಿ ಮದಕರಿ ನಾಯಕ ಚಿತ್ರ ಬರಲಿದೆ ಎಂದು ಹೇಳಲಾಗ್ತಿದೆ. ಇದೀಗ, ಈ ಚಿತ್ರದ ಫಸ್ಟ್ ಲುಕ್ ಅಧಿಕೃತವಾಗಿ ಬಹಿರಂಗವಾಗಿದೆ.
ನಾಳೆ (ಫೆಬ್ರವರಿ 16) ದರ್ಶನ್ ಅವರ ಹುಟ್ಟುಹಬ್ಬವಿರುವ ಕಾರಣ ಒಂದು ದಿನ ಮುಂಚೆಯೇ ನಿರ್ಮಾಪಕ ರಾಕ್ ಲೈನ್ ವೆಂಕಟೇಶ್ ಡಿ ಬಾಸ್ ಗೆ ವಿಶೇಷವಾಗಿ ಶುಭಕೋರಿದ್ದಾರೆ.
ಚಿತ್ರದುರ್ಗ ಪಾಳೇಗಾರ ಮದಕರಿ ನಾಯಕನ ಕಥೆ ಹೇಳಲು ಹೊರಟಿರುವ ದರ್ಶನ್ ಮತ್ತು ರಾಕ್ ಲೈನ್ ಅದ್ಧೂರಿ ವೆಚ್ಚದಲ್ಲಿ ಈ ಸಿನಿಮಾವನ್ನ ತೆರೆಗೆ ತರಲಿದ್ದಾರೆ ಎನ್ನುವುದಕ್ಕೆ ಈ ಪೋಸ್ಟರ್ ಉದಾಹರಣೆಯಾಗಿದೆ. ಕೈಯಲ್ಲಿ ಕತ್ತಿ ಹಿಡಿದು ಉದ್ದನೇಯ ಮೀಸ್ ಬಿಟ್ಟು ಖಡಕ್ ಆಗಿ ಮದಕರಿ ನಾಯಕನಾಗಿ ಪೋಸ್ ಕೊಟ್ಟಿರುವ ದರ್ಶನ್ ಮೇಲೆ ನಿರೀಕ್ಷೆ ಬೆಟ್ಟದಷ್ಟು ಹೆಚ್ಚಿದೆ.
ಇನ್ನುಳಿದಂತೆ ಎಸ್ ವಿ ರಾಜೇಂದ್ರ ಸಿಂಗ್ ಬಾಬು ಈ ಚಿತ್ರವನ್ನ ನಿರ್ದೇಶನ ಮಾಡುತ್ತಿದ್ದು ಬಿ ಎಲ್ ವೇಣು ಅವರು ಕಥೆ ಬರೆದಿದ್ದಾರೆ. ನಾದಬ್ರಹ್ಮ ಹಂಸಲೇಖ ಬಹುದಿನಗಳ ನಂತರ ಬಹುದೊಡ್ಡ ಪ್ರಾಜೆಕ್ಟ್ ಗೆ ಸಂಗೀತ ಸಂಯೋಜನೆ ಮಾಡುತ್ತಿದ್ದಾರೆ.
ಸದ್ಯದ ಮಾಹಿತಿ ಪ್ರಕಾರ ನಾಳೆ ಗಂಡುಗಲಿ ಮದಕರಿ ನಾಯಕ ಸಿನಿಮಾ ಅಧಿಕೃತವಾಗಿ ಸೆಟ್ಟೇರಲಿದೆಯಂತೆ. ಸದ್ಯ ಯಜಮಾನ ಮುಗಿಸಿ ಒಡೆಯ ಶೂಟಿಂಗ್ ಮಾಡ್ತಿರುವ ದರ್ಶನ್, ನಂತರ ರಾಬರ್ಟ್ ಚಿತ್ರವನ್ನ ಆರಂಭಿಸಲಿದ್ದಾರೆ. ಅದು ಮುಗಿದ ತಕ್ಷಣ ಮದಕರಿ ನಾಯಕ ಚಿತ್ರದ ಚಿತ್ರೀಕರಣ ಆರಂಭಿಸಬಹುದು. ಈ ಬಗ್ಗೆ ಅಧಿಕೃತ ಮಾಹಿತಿ ಸದ್ಯಕ್ಕಿಲ್ಲ. ಈ ಕಡೆ ಪುನೀತ್ ಅಭಿನಯದ ನಟಸಾರ್ವಭೌಮ ಸಿನಿಮಾದ ಯಶಸ್ಸಿನಲ್ಲಿರುವ ರಾಕ್ ಲೈನ್, ರಾಧಿಕಾ ಪಂಡಿತ್ ಮತ್ತು ನಿರೂಪ್ ಭಂಡಾರಿ ಕಾಂಬಿನೇಷನ್ ನಲ್ಲಿ ಆದಿಲಕ್ಷ್ಮಿ ಪುರಾಣ ಸಿನಿಮಾ ಮುಗಿಸಿ ಬಿಡುಗಡೆಗೆ ಸಜ್ಜಾಗಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
