ಬೆಂಗಳೂರು:
ಕನ್ನಡ ಪರ ಹೋರಾಟಗಾರ ರೂಪೇಶ್ ರಾಜಣ್ಣ ಅವರ ವಿರುದ್ಧ ಗಂಭೀರ ಆರೋಪ ಕೇಳಿಬಂದಿದೆ. ಕನ್ನಡ ಸಂಘಟನೆ ಹೆಸರಲ್ಲಿ ಬ್ಲ್ಯಾಕ್ ಮೇಲ್ ಮಾಡುತ್ತಿದ್ದಾರೆ ಎಂದು ಸಚಿವ ಜಮೀರ್ ಅಹ್ಮದ್ ಅವರ ಆಪ್ತ ಕಾರ್ಯದರ್ಶಿ ಸರ್ಫರಾಜ್ ಖಾನ್ ಆರೋಪ ಮಾಡಿದ್ದಾರೆ. ಹೀಗಾಗಿ ಸರ್ಫರಾಜ್ ಖಾನ್ ಆರೋಪಕ್ಕೆ ದಾಖಲೆ ಕೇಳಲು ಜಮೀರ್ ಅಹ್ಮದ್ ನಿವಾಸಕ್ಕೆ ರೂಪೇಶ್ ರಾಜಣ್ಣ ತೆರಳಿದ್ದಾಗ ಅವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಗಾಲ್ಫ್ ಕೋರ್ಸ್ ರಸ್ತೆಯ ಸಚಿವ ಜಮೀರ್ ಅಹ್ಮದ್ ಅವರ ಸರ್ಕಾರಿ ನಿವಾಸಕ್ಕೆ ಮುತ್ತಿಗೆ ಹಾಕಲು ಯತ್ನಿಸಿದಾಗ ಕನ್ನಡಪರ ಹೋರಾಟಗಾರ ರೂಪೇಶ್ ರಾಜಣ್ಣ ಹಾಗೂ ಬೆಂಬಲಿಗರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ವಸತಿ ಇಲಾಖೆಯಲ್ಲಿನ ಅಕ್ರಮಗಳ ಬಗ್ಗೆ ರಾಜ್ಯ ನೀತಿ ಆಯೋಗದ ಉಪಾಧ್ಯಕ್ಷ ಬಿ.ಆರ್. ಪಾಟೀಲ್ ಅವರ ಆಡಿಯೋ ವೈರಲ್ ಆಗಿತ್ತು. ಇದರಲ್ಲಿ ಜಮೀರ್ ಅಹ್ಮದ್ ಖಾನ್ ಅವರ ಆಪ್ತ ಕಾರ್ಯದರ್ಶಿ ಸರ್ಫರಾಜ್ ಖಾನ್ ವಿರುದ್ಧ ಆರೋಪ ಮಾಡಿದ್ದರು. ಇದರ ಬೆನ್ನಲ್ಲೇ ಅವರ ಕಾನೂನು ನಿಯಮ ಗಾಳಿಗೆ ತೂರಿ ಸರ್ಫರಾಜ್ ಖಾನ್ ಅಕ್ರಮವಾಗಿ ರೆಸಾರ್ಟ್ ನಿರ್ಮಾಣ ಮಾಡಿದ ಆರೋಪ ಕೇಳಿ ಬಂದಿತ್ತು. ಈ ಬಗ್ಗೆ ವಿಡಿಯೋದಲ್ಲಿ ಸ್ಪಷ್ಟನೆ ನೀಡಿದ್ದ ಸರ್ಫರಾಜ್ ಖಾನ್, ನನ್ನ ವ್ಯವಹಾರದ ವಿಚಾರದಲ್ಲಿ ಸಚಿವರ ಹೆಸರನ್ನು ತರಬೇಡಿ. ಅಲ್ಲದೇ ಕನ್ನಡ ಪರ ಹೋರಾಟಗಾರ ರೂಪೇಶ್ ರಾಜಣ್ಣ ಕನ್ನಡ ಸಂಘಟನೆ ಹೆಸರಲ್ಲಿ ಬ್ಲ್ಯಾಕ್ ಮೇಲ್ ಮಾಡುತ್ತಿದ್ದಾರೆ ಎಂದು ಗಂಭೀರ ಆರೋಪ ಮಾಡಿದ್ದರು.
ಹೀಗಾಗಿ ರೂಪೇಶ್ ರಾಜಣ್ಣ ಅವರು ಸರ್ಫರಾಜ್ ಖಾನ್ ಆರೋಪಕ್ಕೆ ದಾಖಲೆ ಕೇಳಲು ಇಂದು ಜಮೀರ್ ನಿವಾಸಕ್ಕೆ ಬಂದಿದ್ದರು. ಈ ವೇಳೆ ಪೊಲೀಸರು ಹಾಗೂ ರೂಪೇಶ್ ರಾಜಣ್ಣ ಅವರ ನಡುವೆ ಕೆಲಕಾಲ ವಾಗ್ವಾದ ನಡೆಯಿತು. ಬಳಿಕ ಅವರನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.
ಇದಕ್ಕೂ ಮುನ್ನಾ ಫೇಸ್‌ಬುಕ್‌ನಲ್ಲಿ ಪ್ರತಿಕ್ರಿಯಿಸಿದ್ದ ರೂಪೇಶ್ ರಾಜಣ್ಣ, ಸರ್ಫರಾಜ್ ಖಾನ್ ಅವರು ನನ್ನ ಮೇಲಿನ ಸುಳ್ಳು ಆರೋಪ ಮಾಡಿರುವ ವಿಡಿಯೋ ನೋಡಿದೆ. ಯಾವುದೇ ಕಾರಣಕ್ಕೂ ಸತ್ಯ ತಿಳಿಸದೆ ನಾ ಹಿಂದೆ ಸರಿಯಲ್ಲ . ದಯವಿಟ್ಟು ನನ್ನ ಖಾತೆ ಬ್ಲಾಕ್ ಮಾಡಿರುವುದನ್ನು ತೆಗೆಯಿರಿ. ಹಾಗೂ ನೀವು ಹೇಳಿರೋದು ಸತ್ಯ ಅಂತ ದಾಖಲೆ ಸಮೇತ ನಿರೂಪಿಸಿ. ನಾನು ಸಿದ್ಧ, ತಮ್ಮ ಕಚೇರಿಗೆ ಬರುತ್ತಿರುವೆ ದಯವಿಟ್ಟು ಅಲ್ಲಿಯೇ ಇರಿ” ಎಂದು ಸವಾಲು ಹಾಕಿದ್ದರು.








