ನವದೆಹಲಿ:
ಭಾರತೀಯ ಗಗನಯಾತ್ರಿ ಶುಭಾಂಶು ಶುಕ್ಲಾ ಸೇರಿದಂತೆ ಆಕ್ಸಿಯಮ್-4 ಬಾಹ್ಯಾಕಾಶ ತಂಡದ ನಾಲ್ವರು ಸದಸ್ಯರು, ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿ 18 ದಿನಗಳ ಕಾಲ ಇದ್ದು, ಇಂದು ಭೂಮಿಗೆ ಸೇಫ್ ಲ್ಯಾಂಡಿಂಗ್ ಮಾಡಿದ್ದಾರೆ. ಗಗನಯಾತ್ರಿಗಳು ನಿನ್ನೆ ಸಂಜೆ 4:50ರ ಸುಮಾರಿಗೆ ಭೂಮಿಯತ್ತ ಪ್ರಯಾಣ ಆರಂಭಿಸಿದ್ದರು. ಸುಮಾರು 22 ಗಂಟೆಗಳ ಸುದೀರ್ಘ ಪ್ರಯಾಣದ ನಂತರ ನಾಲ್ವರೂ ಗಗನಯಾತ್ರಿಗಳು ಕ್ಯಾಲಿಫೋರ್ನಿಯಾ ಕರಾವಳಿಯಲ್ಲಿ ಲ್ಯಾಂಡ್ ಆಗಿದ್ದಾರೆ.
ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಿಂದ ಬೇರ್ಪಟ್ಟ ನಂತರ, ಡ್ರಾಗನ್ ನೌಕೆಯು ಭೂಮಿಯ ವಾತಾವರಣಕ್ಕೆ ಪುನಃ ಪ್ರವೇಶಿಸಿ ಕ್ಯಾಲಿಫೋರ್ನಿಯಾ ಕರಾವಳಿಯಲ್ಲಿ ಇಳಿಯಲು 22 ಗಂಟೆ 30 ನಿಮಿಷ ತೆಗೆದುಕೊಂಡಿದೆ. ಎಲ್ಲಾ ಪೂರ್ವ-ನಿರ್ಗಮನ ಪರೀಕ್ಷೆಗಳ ನಂತರ, ಸ್ಪೇಸ್‌ಎಕ್ಸ್ ಡ್ರಾಗನ್ ಕ್ಯಾಪ್ಸೂಲ್ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದ ಹಾರ್ಮನಿ ಮಾಡ್ಯೂಲ್‌ನಿಂದ 4:35ಕ್ಕೆ ಬೇರ್ಪಟ್ಟು ಭೂಮಿಯತ್ತ ಪ್ರಯಾಣ ಬೆಳೆಸಿದೆ.
ಆಕ್ಸಿಯಮ್-4 ವಾಣಿಜ್ಯ ಕಾರ್ಯಾಚರಣೆಯ ನೇತೃತ್ವವನ್ನು ಕಮಾಂಡರ್ ಪೆಗ್ಗಿ ವಿಟ್ಸನ್ ವಹಿಸಿದ್ದು, ಶುಕ್ಲಾ ಮಿಷನ್ ಪೈಲಟ್ ಆಗಿ ಮತ್ತು ಹಂಗೇರಿಯನ್ ಗಗನಯಾತ್ರಿ ಟಿಬೋರ್ ಕಾಪು ಮತ್ತು ಪೋಲಿಷ್ ಗಗನಯಾತ್ರಿ ಸ್ಲಾವೋಸ್ಜ್ ಉಜ್ನಾನ್ಸ್ಕಿ-ವಿಸ್ನಿಯೆವ್ಸ್ಕಿ ಮಿಷನ್ ತಜ್ಞರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಆಕ್ಸಿಯಮ್-4 ಕಾರ್ಯಾಚರಣೆಯು ಅಮೆರಿಕ, ಭಾರತ, ಪೋಲೆಂಡ್, ಹಂಗೇರಿ, ಸೌದಿ ಅರೇಬಿಯಾ, ಬ್ರೆಜಿಲ್, ನೈಜೀರಿಯಾ, ಯುಎಇ ಸೇರಿ 31 ದೇಶಗಳ 60 ವೈಜ್ಞಾನಿಕ ಅಧ್ಯಯನಗಳನ್ನು ಒಳಗೊಂಡಿತ್ತು.
ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಗ್ರೂಪ್ ಕ್ಯಾಪ್ಟನ್ ಶುಭಾಂಶು ಶುಕ್ಲಾ ಅವರ ಬಾಹ್ಯಾಕಾಶ ಪ್ರವಾಸವನ್ನು 2027 ಕ್ಕೆ ನಿಗದಿಪಡಿಸಲಾಗಿರುವ ಭಾರತದ ಮೊದಲ ಮಾನವ ಸಹಿತ ಗಗನಯಾನ ಯೋಜನೆಗೆ ಒಂದು ನಿರ್ಣಾಯಕ ಮೈಲಿಗಲ್ಲು ಎಂದು ಪರಿಗಣಿಸಲಾಗುತ್ತದೆ. ಬಾಹ್ಯಾಕಾಶದಲ್ಲಿ 18 ದಿನಗಳ ಕಾಲ, ಶುಕ್ಲಾ ಪ್ರತಿದಿನ 16 ಸೂರ್ಯೋದಯ ಮತ್ತು ಸೂರ್ಯಾಸ್ತಗಳನ್ನು ಅನುಭವಿಸಿದರು, ಏಕೆಂದರೆ ISS ಭೂಮಿಯಿಂದ ಸುಮಾರು 400 ಕಿ.ಮೀ ಎತ್ತರದಲ್ಲಿ ಗಂಟೆಗೆ 28,000 ಕಿ.ಮೀ ವೇಗದಲ್ಲಿ ಕಕ್ಷೆಯಲ್ಲಿ ಚಲಿಸುತ್ತದೆ. ಇದಕ್ಕಾಗಿ ISRO ಶುಕ್ಲಾ ಅವರ ಪ್ರಯಾಣಕ್ಕಾಗಿ ಅಂದಾಜು 550 ಕೋಟಿ ರೂ. ವೆಚ್ಚವನ್ನು ಭರಿಸಿದೆ ಎಂದು ವರದಿಯಾಗಿದೆ.
ಲಕ್ನೋ ಮೂಲದ 39 ವರ್ಷದ ಶುಕ್ಲಾ, ಕಳೆದ ಗುರುವಾರ ಐಎಸ್‌ಎಸ್‌ಗೆ ಕಾಲಿಟ್ಟ ಮೊದಲ ಭಾರತೀಯರಾಗಿ ಇತಿಹಾಸ ಸೃಷ್ಟಿಸಿದ್ದಾರೆ. 1984ರಲ್ಲಿ ರಾಕೇಶ್ ಶರ್ಮಾ ಅವರ ಬಳಿಕ ಬಾಹ್ಯಾಕಾಶಕ್ಕೆ ತೆರಳಿದ ಎರಡನೇ ಭಾರತೀಯರಾಗಿರುವ ಶುಕ್ಲಾ, ನಭಕ್ಕೆ ತೆರಳಿದ 634ನೇ ಗಗನಯಾತ್ರಿಯಾಗಿದ್ದಾರೆ. ಆಕ್ಸಿಯಮ್ ಸ್ಪೇಸ್‌ನ ಯೋಜನೆ ಮುಂದಾಳತ್ವ ವಹಿಸಿದ ಶುಕ್ಲಾ ಜೂನ್ 25ರಂದು ಫ್ಲೋರಿಡಾದ ನಾಸಾದ ಕೆನಡಿ ಸ್ಪೇಸ್ ಸೆಂಟರ್‌ನಿಂದ ಸ್ಪೇಸ್‌ಎಕ್ಸ್ ಫಾಲ್ಕನ್ 9 ರಾಕೆಟ್‌ನಲ್ಲಿ ಆಕ್ಸಿಯಮ್ ಮಿಷನ್ 4ರ ಮಿಷನ್ ಪೈಲಟ್ ಆಗಿ ತೆರಳಿದ್ದು, 28 ಗಂಟೆಗಳ ಸುಗಮ ಪ್ರಯಾಣದ ಬಳಿಕ ಡ್ರಾಗನ್ ಬಾಹ್ಯಾಕಾಶ ನೌಕೆ ಐಎಸ್‌ಎಸ್‌ಗೆ ಯಶಸ್ವಿಯಾಗಿ ಡಾಕ್ ಆಗಿತ್ತು.








