ಎಸ್‌ಐಟಿ ಪ್ರಶ್ನೆಗಳಿಗೆ ಪರದಾಡಿದ ಸಮೀರ್‌…..!

ಮಂಗಳೂರು:

   ಧರ್ಮಸ್ಥಳದಲ್ಲಿ  ‘ನೂರಾರು ಮಹಿಳೆಯರ ಅತ್ಯಾಚಾರ ಮತ್ತು ಕೊಲೆ’ ಎಂದು ಅರೋಪಿಸಿ ಎಐ ಮೂಲಕ ಕತೆ ಕಟ್ಟಿ ವಿಡಿಯೋ ಮಾಡಿದ ಯೂಟ್ಯೂಬರ್‌ ಮೊಹಮ್ಮದ್‌ ಸಮೀರ್​  ನಿನ್ನೆ ಹಾಗೂ ಮೊನ್ನೆ ಎಸ್‌ಐಟಿ ವಿಚಾರಣೆಯಲ್ಲಿ ಅಧಿಕಾರಿಗಳು ಹಾಕಿದ ಪ್ರಶ್ನೆಗಳಿಗೆ ಉತ್ತರಿಸಲಾಗದೆ ಪರದಾಡಿದ್ದಾನೆ. ಎಐ ತಂತ್ರಜ್ಞಾನ ಬಳಸಿ ವಿಡಿಯೋ ಮಾಡಿದಷ್ಟು ಸುಲಭವಾಗಿ ಎಸ್‌ಐಟಿ ಪ್ರಶ್ನೆಗಳನ್ನು ಎದುರಿಸಲು ಆತನಿಂದ ಸಾಧ್ಯವಾಗಿಲ್ಲ. ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಕಳೆದ ಎರಡು ದಿನಗಳಲ್ಲಿ ಒಟ್ಟು 14 ಗಂಟೆಗಳ ಕಾಲ ತೀವ್ರ ವಿಚಾರಣೆಗೆ ಒಳಗಾಗಿರುವ ಸಮೀರ್‌ಗೆ ಮತ್ತೊಮ್ಮೆ ಠಾಣೆಗೆ ಹಾಜರಾಗುವಂತೆ ತನಿಖಾಧಿಕಾರಿಗಳು ಸೂಚಿಸಿದ್ದಾರೆ.

   ಈ ಬಾರಿ, ಸಮೀರ್​​ಗೆ ದಾಖಲೆ ಸಮೇತ ಹಾಜರಾಗುವಂತೆ ಪೊಲೀಸರು ಸೂಚನೆ ನೀಡಿದ್ದಾರೆ. ವಿಚಾರಣೆ ಇನ್ನೂ ಮುಗಿದಿಲ್ಲ, ಮತ್ತೆ ಕರೆದಾಗ ವಿಚಾರಣೆಗೆ ಹಾಜರಾಗಬೇಕು, ಮತ್ತು ನಾವು ಕೇಳಿದ ಎಲ್ಲಾ ದಾಖಲೆಗಳನ್ನು ಸಿದ್ಧಪಡಿಸಿ ತರಬೇಕು ಎಂದು ಸೂಚನೆ ನೀಡಿದ್ದಾರೆ. ಯೂಟ್ಯೂಬ್ ಆದಾಯದ ದಾಖಲೆಗಳು, ಕಳೆದ ಮೂರು ತಿಂಗಳ ಬ್ಯಾಂಕ್ ವಿವರಗಳು, ಲ್ಯಾಪ್‌ಟಾಪ್ ಮತ್ತು ಮೊಬೈಲ್‌ನೊಂದಿಗೆ ಬರಲು ಆದೇಶಿಸಲಾಗಿದೆ. ಈ ದಾಖಲೆಗಳನ್ನು ಸಿದ್ಧಪಡಿಸಲು ಸಮೀರ್ ಸಮಯಾವಕಾಶ ಕೇಳಿದ್ದು, ಪೊಲೀಸರು ಮತ್ತೊಮ್ಮೆ ನೋಟಿಸ್ ಜಾರಿಗೊಳಿಸಲಿದ್ದಾರೆ. ಮತ್ತೆ ನೋಟಿಸ್​​ ನೀಡಿದಾಗ ಸಮೀರ್​​ ದಾಖಲೆ ಸಮೇತ ವಿಚಾರಣೆಗೆ ಹಾಜರಾಗಬೇಕಿದೆ.

   ಧರ್ಮಸ್ಥಳದ ವಿರುದ್ಧ ಸುಳ್ಳು ಆರೋಪಗಳನ್ನು ಮಾಡಿ ಸಾಮಾಜಿಕ ಜಾಲತಾಣದಲ್ಲಿ ಗಲಾಟೆ ಸೃಷ್ಟಿಸಿದ ಆರೋಪದ ಮೇಲೆ ಸಮೀರ್‌ನನ್ನು ಬೆಳ್ತಂಗಡಿ ಪೊಲೀಸರು ವಿಚಾರಣೆಗೆ ಕರೆದಿದ್ದರು. ಆಗಸ್ಟ್ 24ರಂದು 4.5 ಗಂಟೆ ಹಾಗೂ ಆಗಸ್ಟ್ 25ರಂದು 9.5 ಗಂಟೆ, ಒಟ್ಟು 14 ಗಂಟೆಗಳ ವಿಚಾರಣೆ ನಡೆಸಲಾಗಿದೆ. ಈ ವೇಳೆ ಸಮೀರ್‌ನ ಹೇಳಿಕೆಯನ್ನು ದಾಖಲಿಸಲಾಗಿದ್ದು, ತನಿಖಾಧಿಕಾರಿಗಳು ಆತನಿಗೆ ತಮ್ಮ ಯೂಟ್ಯೂಬ್ ಚಾನಲ್ ‘Dootha’ನ ಆದಾಯದ ಮೂಲಗಳಿಗೆ ಸಂಬಂಧಿಸಿದ ದಾಖಲೆಗಳನ್ನು ಸಲ್ಲಿಸಲು ಸೂಚಿಸಿದ್ದಾರೆ.

   ಕಳೆದ ಮೂರು ತಿಂಗಳ ಬ್ಯಾಂಕ್ ವಿವರಗಳು, ಯೂಟ್ಯೂಬ್ ಮಾನಿಟೈಸೇಶನ್ ಖಾತೆಯ ದಾಖಲೆಗಳು, ವಿಡಿಯೋ ಅಪ್‌ಲೋಡ್ ಮಾಡಿದ ಲ್ಯಾಪ್‌ಟಾಪ್ ಮತ್ತು ಮೊಬೈಲ್‌ನೊಂದಿಗೆ ಮತ್ತೊಮ್ಮೆ ವಿಚಾರಣೆಗೆ ಹಾಜರಾಗಿ ಎಂದು ತನಿಖಾಧಿಕಾರಿಗಳು ಆದೇಶಿಸಿದ್ದಾರೆ. ಸಮೀರ್ ತಾನು ವಿಡಿಯೋ ಅಪ್‌ಲೋಡ್ ಮಾಡಿದ ಲ್ಯಾಪ್‌ಟಾಪ್ ಬೆಂಗಳೂರಿನಲ್ಲಿದೆ ಎಂದು ತಿಳಿಸಿದ್ದಾನೆ. ಯೂಟ್ಯೂಬ್ ಆದಾಯದ ಬ್ಯಾಂಕ್ ದಾಖಲೆಗಳನ್ನು ಸಿದ್ಧಪಡಿಸಲು ಸಮಯಾವಕಾಶ ಕೇಳಿದ್ದಾನೆ. ತನಿಖಾಧಿಕಾರಿಗಳು ಎಲ್ಲವನ್ನೂ ಸಿದ್ಧಪಡಿಸಿಕೊಂಡು ಬಂದು ವಿಚಾರಣೆಗೆ ಹಾಜರಾಗಿ ಎಂದು ಸೂಚಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಸಮೀರ್‌ಗೆ ಮತ್ತೊಮ್ಮೆ ನೋಟಿಸ್ ಜಾರಿಯಾಗಲಿದೆ.

  ಸಮೀರ್‌ನ ಯೂಟ್ಯೂಬ್ ಚಾನಲ್ ‘Dootha’ನ ಆದಾಯದ ಮೂಲಗಳು ಈ ಪ್ರಕರಣದ ತನಿಖೆಯ ಕೇಂದ್ರಬಿಂದುವಾಗಿವೆ. ಹೆಚ್ಚಿನ ಆದಾಯಕ್ಕಾಗಿ ಸಮೀರ್ ತಪ್ಪು ಮತ್ತು ಸುಳ್ಳು ವಿಷಯವನ್ನು ಹಂಚಿಕೊಂಡಿದ್ದಾನೆಯೇ ಎಂಬುದನ್ನು ದೃಢಪಡಿಸಲು ಪೊಲೀಸರು ಆತನ ಖಾತೆಯ ವಿವರಗಳು, ಬ್ಯಾಂಕ್ ಖಾತೆಗೆ ಟ್ರಾನ್ಸ್‌ಫರ್ ಆದ ಹಣದ ದಾಖಲೆಗಳು ಮತ್ತು ಯಾವುದೇ ಥರ್ಡ್-ಪಾರ್ಟಿ ಸ್ಪಾನ್ಸರ್‌ಶಿಪ್‌ಗಳ ಬಗ್ಗೆ ಮಾಹಿತಿ ಸಂಗ್ರಹಿಸುತ್ತಿದ್ದಾರೆ. 2025ರ ಜುಲೈನಲ್ಲಿ ವಿವಾದಾತ್ಮಕ ವಿಡಿಯೋ ಅಪ್‌ಲೋಡ್ ಆದ ಬಳಿಕ ಆದಾಯದಲ್ಲಿ ಏರಿಕೆಯಾಗಿದೆಯೇ ಎಂಬುದನ್ನೂ ಪರಿಶೀಲಿಸಲಾಗುತ್ತಿದೆ. ಇದರ ಜೊತೆಗೆ, ಚಾನಲ್‌ಗೆ ಯಾವುದೇ ರಾಜಕೀಯ ಅಥವಾ ಸಾಮಾಜಿಕ ಸಂಘಟನೆಗಳಿಂದ ಹಣಕಾಸಿನ ಸಹಾಯ ಸಿಕ್ಕಿದೆಯೇ ಎಂಬುದನ್ನೂ ತನಿಖೆಗೊಳಪಡಿಸಲಾಗಿದೆ.

Recent Articles

spot_img

Related Stories

Share via
Copy link