ಬೆಂಗಳೂರು:
ಭಾರತದ ಅತಿದೊಡ್ಡ ಗ್ರಾಹಕ ಎಲೆಕ್ಟ್ರಾನಿಕ್ಸ್ ಬ್ರಾಂಡ್ ಆಗಿರುವ ಸ್ಯಾಮ್‌ಸಂಗ್ ಸಂಸ್ಥೆಯು ಇಂದು ಸ್ಯಾಮ್‌ಸಂಗ್ ವ್ಯಾಲೆಟ್ ಮೂಲಕ ಮಹೀಂದ್ರಾ ಎಲೆಕ್ಟ್ರಿಕ್ ಒರಿಜಿನ್ ಎಸ್‌ಯುವಿಗಳಿಗೆ ಡಿಜಿಟಲ್ ಕಾರ್ ಕೀ ವ್ಯವಸ್ಥೆಯನ್ನು ಬಿಡುಗಡೆ ಮಾಡಿದೆ. ಈ ಡಿಜಿಟಲ್ ಕಾರ್ ಕೀ ವ್ಯವಸ್ಥೆಯ ಮೂಲಕ ಗ್ಯಾಲಕ್ಸಿ ಫೋನ್ ಹೊಂದಿರುವ ಕಾರು ಮಾಲೀಕರು ತಮ್ಮ ಗ್ಯಾಲಕ್ಸಿ ಸ್ಮಾರ್ಟ್‌ಫೋನ್‌ಗಳನ್ನು ಬಳಸಿ ಸುಲಭವಾಗಿ ವಾಹನಗಳನ್ನು ಅನ್ ಲಾಕ್ ಮಾಡಬಹುದು, ಲಾಕ್ ಮಾಡಬಹುದು ಮತ್ತು ಸ್ಟಾರ್ಟ್ ಮಾಡಬಹುದು.
ಈ ವ್ಯವಸ್ಥೆಯ ಮೂಲಕ ಗ್ಯಾಲಕ್ಸಿ ಸಾಧನಗಳಲ್ಲಿ ಸ್ಯಾಮ್‌ಸಂಗ್ ವಾಲೆಟ್ ನ ಡಿಜಿಟಲ್ ಕಾರ್ ಕೀ ಹೊಂದಿರುವ ಬಳಕೆದಾರರು ಭೌತಿಕ ಕೀ ಇಲ್ಲದೆಯೇ ವಾಹನವನ್ನು ಲಾಕ್ ಮಾಡುವುದು, ಅನ್ ಲಾಕ್ ಮಾಡುವುದು ಮತ್ತು ಸ್ಟಾರ್ಟ್ ಮಾಡುವುದು ಇತ್ಯಾದಿ ಕೆಲಸ ಮಾಡಬಹುದು. ಬಳಕೆ ದಾರರು ತಮ್ಮ ಡಿಜಿಟಲ್ ಕಾರ್ ಕೀ ಅನ್ನು ಸ್ನೇಹಿತರು ಮತ್ತು ಕುಟುಂಬದವರೊಂದಿಗೂ ಸೀಮಿತ ಅವಧಿಗೆ ಹಂಚಿಕೊಳ್ಳಬಹುದು, ಅಗತ್ಯಕ್ಕೆ ತಕ್ಕಂತೆ ಅವರಿಗೆ ಕಾರು ಪ್ರವೇಶಕ್ಕೆ ಅನುವು ಮಾಡಿ ಕೊಡಬಹುದು.
ಈ ಕುರಿತು ಮಾತನಾಡಿರುವ ಸ್ಯಾಮ್‌ಸಂಗ್ ಇಂಡಿಯಾದ ಸೇವೆಗಳು ಮತ್ತು ಅಪ್ಲಿಕೇಶನ್ ಉದ್ಯಮದ ಹಿರಿಯ ನಿರ್ದೇಶಕ ಮಧುರ್ ಚತುರ್ವೇದಿ , “ಮಹೀಂದ್ರಾ ಇಎಸ್‌ಯುವಿ ಮಾಲೀಕರಿಗೆ ಸ್ಯಾಮ್‌ಸಂಗ್ ವ್ಯಾಲೆಟ್ ಮೂಲಕ ಸ್ಯಾಮ್‌ಸಂಗ್ ಡಿಜಿಟಲ್ ಕೀ ಸೌಲಭ್ಯವನ್ನು ಒದಗಿಸಲು ನಾವು ತುಂಬಾ ಉತ್ಸುಕರಾಗಿದ್ದೇವೆ. ಗ್ಯಾಲಕ್ಸಿ ಪರಿಸರ ವ್ಯವಸ್ಥೆಯಲ್ಲಿ ಸಂಪರ್ಕಿತ ಮತ್ತು ಸುರಕ್ಷಿತ ಅನುಭವಗಳನ್ನು ಒದಗಿಸುವ ನಮ್ಮ ಬದ್ಧತೆಯ ಭಾಗವಾಗಿ ಸ್ಯಾಮ್‌ಸಂಗ್ ಡಿಜಿಟಲ್ ಕಾರ್ ಕೀ ವ್ಯವಸ್ಥೆ ಪರಿಚಯಿಸಲಾಗುತ್ತಿದೆ. ಮಹೀಂದ್ರಾ ಜೊತೆಗಿನ ನಮ್ಮ ಸಹಯೋಗವು ಹೆಚ್ಚಿನ ಗ್ಯಾಲಕ್ಸಿ ಬಳಕೆದಾರರಿಗೆ ಸುಗಮ ಚಾಲನೆ ಮಾಡಲು ನೆರವಾಗಲಿದೆ” ಎಂದು ಹೇಳಿದ್ದಾರೆ.
ಮಹೀಂದ್ರಾ & ಮಹೀಂದ್ರಾ ಲಿಮಿಟೆಡ್ ನ ಆಟೋಮೋಟಿವ್ ವಿಭಾಗದ ಮುಖ್ಯ ಕಾರ್ಯ ನಿರ್ವಾ ಹಕ ಅಧಿಕಾರಿ ಮತ್ತು ಮಹೀಂದ್ರಾ ಎಲೆಕ್ಟ್ರಿಕ್ ಆಟೋಮೊಬೈಲ್ ಲಿಮಿಟೆಡ್ ನ ಕಾರ್ಯ ನಿರ್ವಾಹಕ ನಿರ್ದೇಶಕರಾದ ನಳಿನಿಕಾಂತ್ ಗೊಲ್ಲಗುಂಟ ಮಾತನಾಡಿ, “ನಮ್ಮ ಎಲೆಕ್ಟ್ರಿಕ್ ಒರಿಜಿನ್ ಎಸ್‌ಯುವಿಗಳಾದ ಎಕ್ಸ್ಇವಿ 9ಇ ಮತ್ತು ಬಿಇ 6 ವಾಹನಗಳು ಸುಧಾರಿತ ತಂತ್ರಜ್ಞಾನ ಮತ್ತು ಆಕರ್ಷಕ ವಿನ್ಯಾಸಗಳ ಮೂಲಕ ಹೆಚ್ಚಿನ ಗ್ರಾಹಕರನ್ನು ಆಕರ್ಷಿಸಿವೆ.
ಇದೀಗ ನಾವು ಸ್ಯಾಮ್‌ಸಂಗ್ ಜೊತೆಗಿನ ಸಹಯೋಗದ ಮೂಲಕ ಮತ್ತೊಂದು ಪ್ರಥಮ ದರ್ಜೆಯ ಫೀಚರ್ ಅನ್ನು ಪರಿಚಯಿಸುತ್ತಿದ್ದು, ಸ್ಯಾಮ್‌ಸಂಗ್ ವ್ಯಾಲೆಟ್ ಮೂಲಕ ಡಿಜಿಟಲ್ ಕಾರ್ ಕೀ ಸೌಲಭ್ಯ ಒದಗಿಸಲು ಸಂತೋಷ ಪಡುತ್ತೇವೆ. ಈ ಮೂಲಕ ಪ್ರತೀ ಪ್ರಯಾಣವನ್ನು ಇನ್ನಷ್ಟು ಸುಗಮಗೊಳಿಸುತ್ತಿದ್ದೇವೆ ಮತ್ತು ಅನುಕೂಲಕರಗೊಳಿಸುತ್ತಿದ್ದೇವೆ. ಈ ಹೊಸ ಫೀಚರ್ ಭಾರತದ ಗ್ರಾಹಕರಿಗೆ ಪ್ರೀಮಿಯಂ, ಸ್ಮಾರ್ಟ್ ಎಲೆಕ್ಟ್ರಿಕ್ ಎಸ್‌ಯುವಿಗಳೊಂದಿಗೆ ಅಸಾಧಾರಣ ಮಾಲೀಕತ್ವ ಅನುಭವ ಒದಗಿಸುವ ಮಹೀಂದ್ರಾ ಬದ್ಧತೆಯನ್ನು ತೋರಿಸುತ್ತಿದೆ” ಎಂದು ಹೇಳಿದರು.
ಒಂದು ವೇಳೆ ಡಿಜಿಟಲ್ ಕಾರ್ ಕೀ ಹೊಂದಿರುವ ಸಾಧನ ಕಳೆದುಹೋದರೆ ಅಥವಾ ಕದ್ದು ಹೋದರೆ ಬಳಕೆದಾರರು ಸ್ಯಾಮ್‌ಸಂಗ್ ಫೈಂಡ್ ಸೇವೆ ಮೂಲಕ ತಮ್ಮ ಸಾಧನವನ್ನು ದೂರ ದಿಂದಲೇ ಲಾಕ್ ಮಾಡಬಹುದು ಅಥವಾ ಡಿಜಿಟಲ್ ಕಾರ್ ಕೀ ಸೇರಿದಂತೆ ತಮ್ಮ ಎಲ್ಲಾ ಡೇಟಾವನ್ನು ಅಳಿಸಬಹುದು. ಈ ಮೂಲಕ ತಮ್ಮ ವಾಹನಗಳನ್ನು ಹೆಚ್ಚು ಸುರಕ್ಷಿತ ಗೊಳಿಸ ಬಹುದು. ಬಯೋಮೆಟ್ರಿಕ್ ಅಥವಾ ಪಿನ್ ಆಧರಿತ ಬಳಕೆದಾರ ದೃಢೀಕರಣ ಪ್ರಕ್ರಿಯೆ ಅಗತ್ಯ ವಿರುವುದರಿಂದ ಸ್ಯಾಮ್‌ಸಂಗ್ ವ್ಯಾಲೆಟ್ ವಾಹನವನ್ನು ಯಾವುದೇ ರಾಜಿ ಇಲ್ಲದೆ ರಕ್ಷಿಸುತ್ತದೆ, ಹೆಚ್ಚು ಗೌಪ್ಯತೆ ಮತ್ತು ಸುರಕ್ಷತೆಯನ್ನು ಖಾತ್ರಿಪಡಿಸುತ್ತದೆ.
ಸ್ಯಾಮ್‌ಸಂಗ್ ವ್ಯಾಲೆಟ್ ಒಂದು ಬಹುಮುಖ ವೇದಿಕೆಯಾಗಿದ್ದು, ಗ್ಯಾಲಕ್ಸಿ ಬಳಕೆದಾರರು ಡಿಜಿಟಲ್ ಕೀಗಳು, ಪಾವತಿ ಸೌಕರ್ಯಗಳು, ಗುರುತಿನ ಚೀಟಿಗಳು ಮತ್ತು ಇನ್ನೂ ಹೆಚ್ಚಿನವುಗಳನ್ನು ಒಂದೇ ಸುರಕ್ಷಿತ ಆಪ್ ನಲ್ಲಿ ಹೊಂದಲು ಅನುವು ಮಾಡಿಕೊಡುತ್ತದೆ. ಸ್ಯಾಮ್‌ಸಂಗ್ ವ್ಯಾಲೆಟ್ ಸುಗಮ ಇಂಟರ್‌ಫೇಸ್ ಹೊಂದಿದ್ದು, ಸ್ಯಾಮ್‌ಸಂಗ್ ನಾಕ್ಸ್ ನ ರಕ್ಷಣಾ-ದರ್ಜೆಯ ಸುರಕ್ಷತೆ ಹೊಂದಿದೆ. ಇದು ಗ್ಯಾಲಕ್ಸಿ ಪರಿಸರ ವ್ಯವಸ್ಥೆಯೊಂದಿಗೆ ಸಂಯೋಜನೆಗೊಂಡಿದ್ದು, ಬಳಕೆದಾರರ ದೈನಂದಿನ ಜೀವನಕ್ಕೆ ಹೆಚ್ಚಿನ ಅನುಕೂಲತೆ ಒದಗಿಸುತ್ತದೆ.








