ಢಾಕಾ:
ಬಾಂಗ್ಲಾದೇಶದ ಪ್ರಧಾನಿ ಶೇಖ್ ಹಸೀನಾ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದು, ದೇಶ ತೊರೆದಿದ್ದಾರೆ.ಶೇಖ್ ಹಸೀನಾ ದೇಶ ತೊರೆದ ಕೆಲವೇ ಗಂಟೆಗಳಲ್ಲಿ ಹಸೀನಾ ಪುತ್ರ ಅಂತಾರಾಷ್ಟ್ರೀಯ ಮಾಧ್ಯಮ ಸಂಸ್ಥೆ ಬಿಬಿಸಿಯೊಂದಿಗೆ ಮಾತನಾಡಿದ್ದು, ತಮ್ಮ ತಾಯಿ ಕುಟುಂಬದ ಒತ್ತಾಯದ ಹಿನ್ನೆಲೆಯಲ್ಲಿ ಆಕೆಯ ಸುರಕ್ಷತೆಯ ದೃಷ್ಟಿಯಿಂದ ದೇಶ ತೊರೆದಿರುವುದಾಗಿ ಹೇಳಿದ್ದಾರೆ.
ತಮ್ಮ ಸರ್ಕಾರದ ವಿರುದ್ಧ ದೇಶಾದ್ಯಂತ ನಡೆದ ಪ್ರತಿಭಟನೆ ಹಿಂಸಾಚಾರ ತೀವ್ರಗೊಂಡ ಪರಿಣಾಮ ಹಸೀನಾ ಪ್ರಧಾನಿ ಸ್ಥಾನಕ್ಕೆ ರಾಜೀನಾಮೆ ನೀಡಿ ದೇಶ ತೊರೆದಿದ್ದಾರೆ.ಬಿಬಿಸಿ ವರ್ಲ್ಡ್ ಗೆ ನೀಡಿರುವ ಸಂದರ್ಶನದಲ್ಲಿ ಮಾತನಾಡಿರುವ ಶೇಖ್ ಹಸೀನಾ ಪುತ್ರ, ಮಾಜಿ ಅಧಿಕೃತ ಸಲಹೆಗಾರ ಸಜೀಬ್ ವಾಜೀದ್ ಜಾಯ್, ಶೇಖ್ ಹಸೀನಾ ತೀವ್ರವಾಗಿ ನೊಂದಿದ್ದು ಇನ್ನೆಂದೂ ಬಾಂಗ್ಲಾ ರಾಜಕಾರಣಕ್ಕೆ ಮರಳುವುದಿಲ್ಲ ಎಂದು ಹೇಳಿದ್ದಾರೆ.
ಶೇಖ್ ಹಸೀನಾ ಅವರು ಭಾನುವಾರದಿಂದ ರಾಜೀನಾಮೆ ಅಂಶವನ್ನು ಪರಿಗಣಿಸುತ್ತಿದ್ದರು, ಈಗ ರಾಜೀನಾಮೆ ನೀಡಿದ್ದು, ಕುಟುಂಬದ ಒತ್ತಾಯದ ಮೇರೆಗೆ ತಮ್ಮ ಸುರಕ್ಷತೆಗಾಗಿ ದೇಶ ತೊರೆದಿದ್ದಾರೆ ಎಂದು ಸಜೀಬ್ ವಾಜೀದ್ ಜಾಯ್ ಹೇಳಿದ್ದಾರೆ. 15 ವರ್ಷ ಬಾಂಗ್ಲಾದೇಶವನ್ನು ಆಳಿದ ಶೇಖ್ ಹಸೀನಾ, ತಮ್ಮ ಶ್ರಮದ ಹೊರತಾಗಿಯೂ ಒಂದಷ್ಟು ಮಂದಿ ತಮ್ಮ ವಿರುದ್ಧವೇ ಪ್ರತಿಭಟನೆ ನಡೆಸಿದ್ದರಿಂದ ನಿರಾಶೆಗೊಂಡಿದ್ದಾರೆ ಎಂದು ವಾಜೀದ್ ಜಾಯ್ ಹೇಳಿದ್ದಾರೆ.
ಹಸೀನಾ ಅವರ ನಿರಾಶೆಯನ್ನು ವ್ಯಕ್ತಪಡಿಸಿದ ವಾಜೀದ್, “ಅವರು ಬಾಂಗ್ಲಾದೇಶವನ್ನು ಬದಲಿಸಿದ್ದಾರೆ, ಅವರು ಅಧಿಕಾರ ವಹಿಸಿಕೊಂಡಾಗ, ಬಾಂಗ್ಲಾವನ್ನು ವಿಫಲ ರಾಜ್ಯವೆಂದು ಪರಿಗಣಿಸಲಾಗಿತ್ತು. ಇದು ಬಡ ದೇಶವಾಗಿತ್ತು. ಇದು ಇಂದಿನವರೆಗೂ ಏಷ್ಯಾದ ಉದಯೋನ್ಮುಖ ರಾಷ್ಟ್ರಗಳಲ್ಲಿ ಒಂದಾಗಿದೆ. ಅವರು ತುಂಬಾ ನಿರಾಶೆಗೊಂಡಿದ್ದಾರೆ” ಎಂದಿದ್ದಾರೆ.