ನವದೆಹಲಿ:
ವಿವಾದಿತ ಮದ್ಯದ ದೊರೆ ವಿಜಯ್ ಮಲ್ಯ ಅವರ ಪುತ್ರ ಹಾಗೂ ನಟ ಸಿದ್ಧಾರ್ಥ್ ಮಲ್ಯ ಇತ್ತೀಚೆಗಷ್ಟೇ ವೈವಾಹಿಕ ಜೀವನಕ್ಕೆ ಕಾಲಿಟ್ಟರು. ಇದಕ್ಕೆ ಸಂಬಂಧಿಸಿದ ಫೋಟೋಗಳು ಮತ್ತು ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ. ಇದೀಗ ಸಿದ್ಧಾರ್ಥ್ ಮಲ್ಯ ತಾನು ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ಜೊತೆ ಡೇಟಿಂಗ್ ಮಾಡುತ್ತಿದ್ದೆ ಎಂಬುದನ್ನು ಬಹಿರಂಗಪಡಿಸಿದ್ದಾರೆ.
ಕ್ರಿಕೆಟಿಗ ವಿರಾಟ್ ಕೊಹ್ಲಿ ಪತ್ನಿ ಹಾಗೂ ನಟಿ ಅನುಷ್ಕಾ ಶರ್ಮಾ ವಿಚಾರವಾಗಿ ಚಿತ್ರರಂಗದಲ್ಲಿ ಎದ್ದಿರುವ ವದಂತಿಗಳ ಬಗ್ಗೆ ಪ್ರತಿಕ್ರಿಯಿಸಿದ ಸಿದ್ಧಾರ್ಥ್, ನಾನು ಅನುಷ್ಕಾ ಜೊತೆ ಡೇಟಿಂಗ್ ಮಾಡೇ ಇಲ್ಲ. 2014ರಲ್ಲಿ ಅನುಷ್ಕಾ ಮತ್ತು ವಿರಾಟ್ರನ್ನು ಎರಡು ಬಾರಿ ಪಾರ್ಟಿಗಳಲ್ಲಿ ನೋಡಿದ್ದೆ. ಆ ಸಮಯದಲ್ಲಿ ನಾನು ದೀಪಿಕಾ ಪಡುಕೋಣೆ ಜೊತೆ ಡೇಟಿಂಗ್ ಮಾಡುತ್ತಿದ್ದೆ. ಆದರೆ, ನಾನು ಮತ್ತು ಅನುಷ್ಕಾ ಪ್ರೀತಿಸುತ್ತಿದ್ದೇವೆ ಎಂದು ಹಲವು ವದಂತಿಗಳು ಹಬ್ಬಿದ್ದವು. ನಾನು ದೀಪಿಕಾ ಜೊತೆ ಭಾಗವಹಿಸಿದ್ದ ಪಾರ್ಟಿಗಳಲ್ಲಿ ಅನುಷ್ಕಾ ಸಹ ಇರುತ್ತಿದ್ದರು. ಆದರೆ, ನಾನು ಅನುಷ್ಕಾ ಜತೆ ಡೇಟಿಂಗ್ ಮಾಡಿಲ್ಲ. ಇದು ಸತ್ಯ ಎಂದು ಸಿದ್ಧಾರ್ಥ್ ಹೇಳಿದರು. ಈ ಮೂಲಕ ಹಲವು ವರ್ಷಗಳ ವದಂತಿಗೆ ಸಿದ್ಧಾರ್ಥ್ ತೆರೆಎಳೆದರು.
ಅಂದಹಾಗೆ ಸಿದ್ಧಾರ್ಥ್ ಅವರು ನಟಿ ಮತ್ತು ಮಾಡೆಲ್ ಜಾಸ್ಮಿನ್ ಅವರನ್ನು ಮೊನ್ನೆಯಷ್ಟೇ ಮದುವೆಯಾಗಿದ್ದಾರೆ. ವೈರಲ್ ಆಗಿರುವ ಮದುವೆ ಫೋಟೋಗಳಲ್ಲಿ ಸಿದ್ಧಾರ್ಥ್ ಮಲ್ಯ, ಪಚ್ಚೆ ಹಸಿರು ವೆಲ್ವೆಟ್ ಟುಕ್ಸೆಡೋವನ್ನು ಧರಿಸಿದ್ದಾರೆ. ವಧು ಸುಂದರವಾದ ಬಿಳಿ ಗೌನ್ ಧರಿಸಿದ್ದಾರೆ. ಜಾಸ್ಮಿನ್ ಅವರು ತಮ್ಮ ಮದುವೆಯ ಉಂಗುರಗಳ ಚಿತ್ರವನ್ನು ಇನ್ಸ್ಟಾಗ್ರಾಂನಲ್ಲಿ ಹಂಚಿಕೊಳ್ಳುವ ಮೂಲಕ ತಮ್ಮ ಸಂತೋಷವನ್ನು ವ್ಯಕ್ತಪಡಿಸಿದ್ದಾರೆ.
2023ರ ಹ್ಯಾಲೋವೀನ್ ಆಚರಣೆಯ ಸಂದರ್ಭದಲ್ಲಿ ಸಿದ್ಧಾರ್ಥ್ ಅವರು ಜಾಸ್ಮಿನ್‌ಗೆ ಪ್ರೇಮ ನಿವೇದನೆ ಮಾಡಿದರು. ಜಾಸ್ಮಿನ್ ಮತ್ತು ಸಿದ್ಧಾರ್ಥ್ ಒಂದು ವರ್ಷಕ್ಕೂ ಹೆಚ್ಚು ಕಾಲ ಡೇಟಿಂಗ್ ಮಾಡಿದ್ದು, ಕಳೆದ ನವೆಂಬರ್ನಲ್ಲಿ ನಿಶ್ಚಿತಾರ್ಥ ಮಾಡಿಕೊಂಡಿದ್ದರು. ಆಗಲೂ ಫೋಟೋ ಮತ್ತು ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದವು.
ಅಂದಹಾಗೆ ಸಿದ್ಧಾರ್ಥ್ ಮಲ್ಯ, ಕ್ಯಾಲಿಫೋರ್ನಿಯಾದ ಲಾಸ್ ಏಂಜಲೀಸ್‌ನಲ್ಲಿ ಜನಿಸಿದರು ಮತ್ತು ಲಂಡನ್ ಹಾಗೂ ಯುಎಇಯಲ್ಲಿ ಬೆಳೆದರು. ಲಂಡನ್‌ನ ವೆಲ್ಲಿಂಗ್ಟನ್ ಕಾಲೇಜು ಮತ್ತು ಕ್ವೀನ್ ಮೇರಿ ವಿಶ್ವವಿದ್ಯಾಲಯದಲ್ಲಿ ಅಧ್ಯಯನ ಮಾಡಿದರು ಮತ್ತು ರಾಯಲ್ ಸೆಂಟ್ರಲ್ ಸ್ಕೂಲ್ ಆಫ್ ಸ್ಪೀಚ್ ಅಂಡ್ ಡ್ರಾಮಾದಿಂದ ಪದವಿ ಪಡೆದರು.
ಸಿದ್ಧಾರ್ಥ್ ಮಾಡೆಲ್ ಮತ್ತು ನಟನಾಗಿ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದರು ಮತ್ತು ಅನೇಕ ಚಲನಚಿತ್ರಗಳು ಮತ್ತು ದೂರದರ್ಶನ ಕಾರ್ಯಕ್ರಮಗಳಲ್ಲಿ ಕೆಲಸ ಮಾಡಿದ್ದಾರೆ. ಗಿನ್ನಿಸ್‌ನ ಮಾರ್ಕೆಟಿಂಗ್ ಮ್ಯಾನೇಜರ್ ಆಗಿಯೂ ಕೆಲಸ ಮಾಡಿರುವ ಸಿದ್ಧಾರ್ಥ್, ಐಪಿಎಲ್ ತಂಡದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಮಾಜಿ ನಿರ್ದೇಶಕರಾಗಿದ್ದರು.
