ತುಮಕೂರು :
ಶಿರಾ ತಾಲ್ಲೂಕು ಗಾಣದಹುಣಸೆ ಗ್ರಾಮದ ಅರಣ್ಯ ಪ್ರದೇಶದಲ್ಲಿ ನಿಧಿ ಶೋಧಿಸಿ, ಕಳವು ಮಾಡಿಕೊಂಡು ಹೋಗಲು ಪ್ರಯತ್ನ ನಡೆಸುತ್ತಿದ್ದ 10 ಮಂದಿ ಆರೋಪಿಗಳನ್ನು ತಾವರೇಕೆರೆ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಈ ತಿಂಗಳ 6ರಂದು ನಿಧಿ ಶೋಧದ ಸಲುವಾಗಿ ಅರಣ್ಯ ಪ್ರದೇಶದಲ್ಲಿ ಗುಂಡಿ ತೆಗೆದು ಪೂಜಾ ಸಾಮಗ್ರಿಗಳು ಹಾಗೂ ಸ್ಫೋಟಕ ವಸ್ತುಗಳನ್ನು ಉಪಯೋಗಿಸಿದ್ದರು. ಈ ಸಂಬಂಧ ಬುಕ್ಕಾಪಟ್ಟಣ ಹೋಬಳಿ ರಾಜಸ್ವ ನಿರೀಕ್ಷಕರಾದ ಶ್ರೀನಿವಾಸಯ್ಯ ನೀಡಿದ ದೂರಿನ ಮೇರೆಗೆ ತಾವರೇಕೆರೆ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದರು.
ಈ ಪ್ರಕರಣದ ಆರೋಪಿಗಳನ್ನು ಬಂಧಿಸಲು ಶಿರಾ ಗ್ರಾಮಾಂತರ ಸಿಪಿಐ ರವಿಕುಮಾರ್ ನೇತೃತ್ವದಲ್ಲಿ ತಂಡ ರಚಿಸಲಾಗಿತ್ತು. ಆರೋಪಿಗಳಾದ ತಿಪಟೂರಿನ ವಿಜಯಕುಮಾರ್, ಹಗರಿಬೊಮ್ಮನಹಳ್ಳಿಯ ಪರಶುರಾಮ್, ಶಿರಾ ತಾ. ಗುಡ್ಡದಹಟ್ಟಿಯ ಗಿರಿಯಪ್ಪ, ಹೊಸಕೋಟೆಯ ಮಂಜುನಾಥ, ಕೋಲಾರ ಜಿಲ್ಲೆ ಬೈರೇನಹಳ್ಳಿಯ ಸಂತೋಷಕುಮಾರ್, ಅರಸಿಕೆರೆ ತಾ. ತಿರುಪತಿ ಹಳ್ಳಿಯ ಕುಮಾರನಾಯ್ಕ, ಶಿರಾ ತಾ. ಕಲ್ಲುಕೋಟೆಯ ನಾಗಪ್ಪ, ಶಿವಮೊಗ್ಗದ ದೇವದಾಸ್, ಬಾಗೇಪಲ್ಲಿಯ ಶ್ರೀನಿವಾಸ ಹಾಗೂ ಓಬಳರೆಡ್ಡಿಯನ್ನು ಬಂಧಿಸಿ, ಕೃತ್ಯಕ್ಕೆ ಬಳಸಿದ್ದ ಮಾರುತಿ ಸ್ವಿಫ್ಟ್ ಕಾರು, 3 ಬೈಕುಗಳು ಹಾಗೂ ಸ್ಫೋಟಕಗಳನ್ನು ವಶಪಡಿಸಿಕೊಂಡಿದ್ದಾರೆ.
ಡಿವೈಎಸ್ಪಿ ಕುಮಾರಪ್ಪ ಮಾರ್ಗದರ್ಶನದಲ್ಲಿ ಸಿಪಿಐ ರವಿಕುಮಾರ್ ನೇತೃತ್ವದಲ್ಲಿ ಪಿಎಸ್‍ಐಗಳಾದ ಮಹಾಲಕ್ಷ್ಮಮ್ಮ, ಅವಿನಾಶ್, ಸಿಬ್ಬಂದಿಗಳಾದ ಸಿ.ಪಿ.ಕಿರಣ್‍ಕುಮಾರ್, ರೇಣುಕಾ ಕೆ,ಸುರ್ಶನ್, ಪುರುಷೋತ್ತಮ್, ಮಹೇಶ್, ಸಂತೋಷ್‍ಕುಮಾರ್, ಎಸ್ಪಿ ಕಚೇರಿಯ ನರಸಿಂಹರಾಜು, ಜಗದೀಶ್‍ರವನ್ನು ಎಸ್ಪಿ ಡಾ.ವಂಶಿಕೃಷ್ಣ ಅಭಿನಂದಿಸಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ