ಶಿರಾ :
ಮೇಲ್ಮನೆಯಲ್ಲಿ ಸಭಾಪತಿಯ ವಿರುದ್ಧ ಅವಿಶ್ವಾಸ ನಿರ್ಣಯ ಮಂಡಿಸುವ ಸಂದರ್ಭದಲ್ಲಿ ಆದ ಘಟನೆಗಳಿಗೆ ಕಾಂಗ್ರೆಸ್ ಪಕ್ಷದ ಪ್ರತಿನಿಧಿಗಳು ಕಾರಣವೇ ಹೊರತು ಮತ್ತಾರೂ ಅಲ್ಲ ಎಂದು ವಿಧಾನಪರಿಷತ್ ಸದಸ್ಯ ಚಿದಾನಂದ್ ಎಂ.ಗೌಡ ಹೇಳಿದರು.
ಶಿರಾ ನಗರದ ಸೇವಾ ಸದನದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪದವೀಧರರ ಆಶೀರ್ವಾದ ಹಾಗೂ ಜನ ಸಾಮಾನ್ಯರು ಹಾಗೂ ಪಕ್ಷದ ಮುಖಂಡರುಗಳ ಸಹಕಾರದಿಂದ ಪ್ರಥಮ ಬಾರಿಗೆ ನಾನು ಮೇಲ್ಮನೆಯನ್ನು ಪ್ರವೇಶಿಸುವ ಮುನ್ನ ಆ ದೇವಾಲಯದ ಹೊಸಿಲಿಗೆ ನಮಸ್ಕರಿಸಿ ಮುನ್ನಡೆದಿದ್ದೇನೆ ಎಂದರು.
ಮೇಲ್ಮನೆಯು ಬುದ್ದಿವಂತರ ಮನೆ ಎಂಬುದು ನಿಜ, ಆದರೆ ಇಂತಹ ಮನೆಯಲ್ಲಿ ಕಾಂಗ್ರೆಸ್ ಸದಸ್ಯರು ಸಂವಿಧಾನದ ರೀತಿ, ನೀತಿಗಳನ್ನೇ ಮರೆತದ್ದು ವಿಪರ್ಯಾಸವೂ ಆಗಿತ್ತು. ಸಭಾಪತಿಗಳೆ ಪಕ್ಷಪಾತ ಮಾಡಿದಾಗ, ನ್ಯಾಯ ಸಿಗದೆ ಹೋದಾಗ ಸದಸ್ಯರು ಪ್ರತಿಭಟಿಸುವುದು ಸಹಜ. ಅದೇ ಕೆಲಸವನ್ನು ಮೇಲ್ಮನೆಯಲ್ಲಿ ನಾವು ಮಾಡಿದ್ದೇವಷ್ಟೆ. ನಮ್ಮ ಹಕ್ಕನ್ನು ನಾವು ಮಂಡಿಸುವುದು ತಪ್ಪಲ್ಲ ಎಂದರು.
ರಾಜ್ಯ ಸರ್ಕಾರವು ಅಪ್ಪರ್ ಭದ್ರಾ ಯೋಜನೆಗೆ ಕ್ರಿಯಾಶೀಲತೆಯನ್ನು ತುಂಬಿದೆ. ಮುಂದಿನ ಎರಡು ವರ್ಷದೊಳಗೆ ಅಪ್ಪರ್ ಭದ್ರಾ ಯೋಜನೆಯ ನೀರು ತುಮಕೂರು ಕೆನಾಲ್ ಮೂಲಕ ಶಿರಾ ತಾಲ್ಲೂಕಿನ 65 ಕೆರೆಗಳಿಗೆ ಹರಿಯುವುದು ಖಚಿತವಾಗಿದೆ ಎಂದರು.
ಉಪ ಚುನಾವಣೆಯಲ್ಲಿ ರಾಜ್ಯ ಬಿ.ಜೆ.ಪಿ. ಸರ್ಕಾರ ಶಿರಾ ಭಾಗದ ಮತದಾರರಿಗೆ ನೀಡಿದ ಭರವಸೆಯಂತೆ ಮದಲೂರು ಕೆರೆಗೆ ಹೇಮಾವತಿಯ ನೀರನ್ನು ಹರಿಸುತ್ತಿದ್ದು, ಈಗಾಗಲೆ ಹಲವು ಹೋಬಳಿಯ ಗ್ರಾಮಗಳಲ್ಲಿ ಅಂತರ್ಜಲವೂ ಹೆಚ್ಚುತ್ತಿದೆ. ಕೇಂದ್ರ ಸರ್ಕಾರ ರೂಪಿಸಿದ ಎ.ಪಿ.ಎಂ.ಸಿ. ಕಾಯಿದೆ, ಭೂಸುಧಾರಣಾ ಕಾಯಿದೆ ಸೇರಿದಂತೆ ಹಲವು ಕಾಯಿದೆಗಳಿಂದ ರೈತರಿಗೆ ಯಾವುದೇ ರೀತಿಯಲ್ಲೂ ಅನ್ಯಾಯವಾಗದು ಎಂದರು.
ಕೇಂದ್ರ ಸರ್ಕಾರವು ರೈತರ ಹಿತಕ್ಕಾಗಿ ರೂಪಿಸಿದ ಕಾಯಿದೆಗಳಿಂದ ಮಧ್ಯವರ್ತಿಗಳ ಹಾವಳಿ ತಪ್ಪುತ್ತದೆ ಎಂಬುದು ಹಗಲಿನಷ್ಟೇ ಸತ್ಯ. ಇಂತಹ ಹಲವು ಕಾಯಿದೆಗಳ ಜಾರಿಯಿಂದ ಈವರೆಗೆ ರೈತರ ಮೇಲೆ ನಡೆಯುತ್ತಿದ್ದ ಶೋಷಣೆಗಳು ತಪ್ಪುತ್ತವೆ. ರೈತರನ್ನು ದಾರಿ ತಪ್ಪಿಸುವ ಕೆಲಸವನ್ನು ಯಾರೂ ಮಾಡಬಾರದು ಎಂದು ಚಿದಾನಂದ್ ಎಂ.ಗೌಡ ಹೇಳಿದರು.
ಬಿ.ಜೆ.ಪಿ. ನಗರ ಮಂಡಲದ ಅಧ್ಯಕ್ಷ ವಿಜಯರಾಜ್, ಬಿ.ಜೆ.ಪಿ. ಜಿಲ್ಲಾ ಕಾರ್ಯದರ್ಶಿ ರವಿಕುಮಾರ್, ನಗರ ಯುವ ಮೋರ್ಚಾ ಅಧ್ಯಕ್ಷ ಯಶವಂತ್, ನಗರ ಪ್ರಧಾನ ಕಾರ್ಯದರ್ಶಿ ದೇವರಾಜು(ಕಾಡಿ), ವಿ.ವಿ. ಸಿಂಡಿಕೇಟ್ ಸದಸ್ಯ ಶ್ರೀನಿವಾಸ್, ಎಂಜಿನಿಯರ್ ರಂಗನಾಥಪ್ಪ ಮುಂತಾದವರು ಹಾಜರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ