ಘನತ್ಯಾಜ್ಯ ನಿರ್ವಹಣೆ : ಬನಶಂಕರಿ ದೇವಸ್ಥಾನದಿಂದ ಹೊಸ ಪ್ರಯೋಗ

ಬೆಂಗಳೂರು:

   ಬೆಂಗಳೂರಿನ ಪ್ರಸಿದ್ಧ ಬನಶಂಕರಿ ದೇವಸ್ಥಾನದಲ್ಲಿ ಹೂವುಗಳು ಮತ್ತು ಅಡುಗೆ ಮನೆ ತ್ಯಾಜ್ಯದಿಂದ ತಯಾರಿಸಿದ ಸಾವಯವ ಗೊಬ್ಬರ ಇದೀಗ ಭರ್ಜರಿಯಾಗಿ ಮಾರಾಟವಾಗುತ್ತಿದೆ. 

    ಕಳೆದ ಮೂರು ತಿಂಗಳಿಂದ ದೇವಸ್ಥಾನದಲ್ಲಿ 368 ಕೆಜಿ ಗೊಬ್ಬರವನ್ನು ಮಾರಾಟಮಾಡಲಾಗಿದ್ದು, ಸಾರ್ವಜನಿಕರ ಬೇಡಿಕೆಯನ್ನು ಪೂರೈಸಲು ಸಾಧ್ಯವಾಗುತ್ತಿಲ್ಲ. ಒಂದು ಕೆಜಿ ಗೊಬ್ಬರವನ್ನು 20 ರೂ.ಗೆ ಮಾರಾಟ ಮಾಡಲಾಗುತ್ತಿದ್ದು, ಮುಂಗಡವಾಗಿ ಕಾಯ್ದಿರಿಸಿದವರಿಗೆ ಮಾತ್ರ ದೇವಸ್ಥಾನವು ಗೊಬ್ಬರ ಸರಬರಾಜು ಮಾಡುತ್ತಿದೆ.

    ದೇವಸ್ಥಾನದ ತ್ಯಾಜ್ಯ ಸಂಗ್ರಹಣೆಯ ಉಸ್ತುವಾರಿ ನೋಡಿಕೊಳ್ಳುತ್ತಿರುವ ಬಿಆರ್ ನಾಗೇಂದ್ರ ಮಾತನಾಡಿ, ಈ ಹಿಂದೆ ಹೂವು, ಹಾರ, ಮಾವಿನ ಮತ್ತು ಬಾಳೆ ಎಲೆ, ಬಾಳೆ ದಿಂಡು, ಅಡುಗೆ ಮನೆ ತ್ಯಾಜ್ಯವನ್ನು ಎಸೆಯಲಾಗುತ್ತಿತ್ತು. ಕಳೆದ ಮೂರು ತಿಂಗಳಿನಿಂದ ನಾವು ಅವುಗಳನ್ನು ಸಂಗ್ರಹಿಸಿ ಸಾವಯವ ಗೊಬ್ಬರವಾಗಿ ಪರಿವರ್ತಿಸುತ್ತಿದ್ದೇವೆ ಎನ್ನುತ್ತಾರೆ.

    ದೇವಸ್ಥಾನದಲ್ಲಿ ಪ್ರತಿನಿತ್ಯ ಸರಾಸರಿ 10 ಕೆಜಿ ತ್ಯಾಜ್ಯ ಉತ್ಪತ್ತಿಯಾಗುತ್ತದೆ. ಈ ತ್ಯಾಜ್ಯದಲ್ಲಿ ನಿಂಬೆ ಸಿಪ್ಪೆಗಳು ಮತ್ತು ಗೊಬ್ಬರವಾಗಿ ಪರಿವರ್ತಿಸಲಾಗದ ಇತರ ವಸ್ತುಗಳು ಇರುತ್ತವೆ. ಅಂತಹ ವಸ್ತುಗಳನ್ನು ತೆಗೆದುಹಾಕಲಾಗುತ್ತದೆ ಮತ್ತು ಸಂಗ್ರಹಿಸಿದ ವಸ್ತುಗಳನ್ನು ಕೋಕೋಪಿಟ್ ಜೊತೆಗೆ ದೇವಸ್ಥಾನದ ಆವರಣದಲ್ಲಿನ ಕಾಂಕ್ರೀಟ್ ಹೊಂಡಗಳಿಗೆ ಸುರಿಯಲಾಗುತ್ತದೆ ಎಂದು ನಾಗೇಂದ್ರ ಹೇಳಿದರು.

    ಗೊಬ್ಬರವಾಗಿ ಪರಿವರ್ತಿಸಲು ಇದನ್ನು 40 ದಿನಗಳವರೆಗೆ ಬಿಡಲಾಗುತ್ತದೆ ಮತ್ತು ತಾಜಾ ತ್ಯಾಜ್ಯವನ್ನು ಇತರ ಕಾಂಕ್ರೀಟ್ ಹೊಂಡಗಳಲ್ಲಿ ಸುರಿಯಲಾಗುತ್ತದೆ. ಗೊಬ್ಬರ ತಯಾರಾದ ನಂತರ ಅದನ್ನು ಜರಡಿ ಮಾಡಿ ದೇವಸ್ಥಾನದಲ್ಲಿ ಮಾರಾಟಕ್ಕೆ ಸಿದ್ಧಪಡಿಸಲಾಗುತ್ತದೆ. ಭಕ್ತರೇ ಈ ಗೊಬ್ಬರವನ್ನು ಕೊಂಡುಕೊಳ್ಳುತ್ತಿದ್ದು, ಭಾರಿ ಬೇಡಿಕೆ ಇದೆ ಎನ್ನುತ್ತಾರೆ.

    ‘ನಾನು ನನ್ನ ಛಾವಣಿಯ ತೋಟದಲ್ಲಿ ಮಲ್ಲಿಗೆ ಹೂವುಗಳು, ತುಳಸಿ ಮತ್ತು ಇತರವುಗಳನ್ನು ಬೆಳೆಯುತ್ತಿದ್ದೇನೆ. ಕಳೆದ ಕೆಲವು ವಾರಗಳಿಂದ ದೇವಸ್ಥಾನದ ಗೊಬ್ಬರವನ್ನು ಮಣ್ಣಿನಲ್ಲಿ ಬೆರೆಸಿ ಬಳಸುತ್ತಿದ್ದು, ಉತ್ತಮ ಬೆಳವಣಿಗೆ ಕಾಣುತ್ತಿದ್ದೇನೆ’ ಎನ್ನುತ್ತಾರೆ ಬನಶಂಕರಿ ದೇವಸ್ಥಾನದ ಗೊಬ್ಬರ ಖರೀದಿಸುವ ಕಾಯಂ ಗ್ರಾಹಕಿ ಶಶಿಕಲಾ.

Recent Articles

spot_img

Related Stories

Share via
Copy link
Powered by Social Snap