ವಿಶೇಷ ಲೇಖನ : ಯೋಗೇಶ್ ಮಲ್ಲೂರು
ಭಾರತ ಡಿಜಿಲೀಕರಣಗೊಳ್ಳುತ್ತಿರುವ ಬೆನ್ನಲ್ಲೇ ಬ್ಯಾಂಕಿಂಗ್ ವ್ಯವಸ್ಥೆಯಲ್ಲಿ ಆನ್ ಲೈನ್ ಮೂಲಕ ಹಣ ವರ್ಗಾವಣೆ ಮತ್ತು ಇನ್ನಿತರೆ ಸೇವೆಗಳ ಸೌಲಭ್ಯಕ್ಕೆಂದು ಪೇಮೆಂಟ್ಸ್ ಬ್ಯಾಂಕ್‍ಗಳು ಹುಟ್ಟಿಕೊಂಡವು. ಇದರಲ್ಲಿ ಒಬ್ಬ ಗ್ರಾಹಕ ಸಾಲವೊಂದನ್ನು ಬಿಟ್ಟು ಬ್ಯಾಂಕಿನ ವ್ಯವಹಾರಗಳನ್ನು ಸಲೀಸಾಗಿ ಕುಳಿತಲ್ಲಿಂದಲೆ ಮಾಡಬಹುದಾಗಿದೆ.
ತಾಂತ್ರಿಕ ಜಗತ್ತು ವಿಸ್ತಾರಗೊಂಡಂತೆ ಈ ಡಿಜಿಟಲ್ ಯುಗದಲ್ಲಿ ದಿನವೂ ಏನಾದರೊಂದು ಹೊಸತು ಆವಿಷ್ಕಾರಕ್ಕೆ ಒಳಪಡುತ್ತಲೇ ಇರುತ್ತದೆ. ಅದರಂತೆ ಬ್ಯಾಂಕಿಂಗ್ ಸೌಲಭ್ಯಗಳಲ್ಲಿ ಜನರ ನಡುವಿನ ಹಣಕಾಸು ವಿನಿಮಯ, ಹೂಡಿಕೆ, ಉಳಿತಾಯಗಳಂತಹ ಬ್ಯಾಂಕ್ ಸಂಬಂಧಿತ ವ್ಯವಹಾರಗಳಿಗಾಗಿಯೇ ಎಲ್ಲಾ ಬ್ಯಾಂಕ್‍ಗಳು ಹಾಗೂ ನೆಟ್ವರ್ಕ್ ಸಂಪರ್ಕಗಳು ಪೇಮೆಂಟ್ಸ್ ಬ್ಯಾಂಕ್ ಎನ್ನುವ ನೂತನ ಆವಿಷ್ಕಾರವನ್ನು ಪ್ರಯೋಗಿಸಿವೆ.
ಪೇಮೆಂಟ್ಸ್ ಬ್ಯಾಂಕ್ ಅನ್ನು ತಂದದ್ದೇಕೆ?
ಕಡಿಮೆ ಆದಾಯದ ಕುಟುಂಬಗಳು ಮತ್ತು ಸಂಘಟಿತ ವಲಯದ ಕಾರ್ಮಿಕರಿಗೆ ಪಾವತಿ, ರವಾನೆ ಸೇವೆಗಳನ್ನು ಒದಗಿಸುವ ಮೂಲಕ ಹಣಕಾಸಿನ ಸೇರ್ಪಡೆ ಖಚಿತಪಡಿಸಿಕೊಳ್ಳುವುದು ಪೇಮೆಂಟ್ ಬ್ಯಾಂಕುಗಳ ಮುಖ್ಯ ಉz್ದÉೀಶವಾಗಿದ್ದು, ವಾಣಿಜ್ಯ ಬ್ಯಾಂಕುಗಳಿಗೆ ಹೋಲಿಸಿದರೆ ಪೇಮೆಂಟ್ ಬ್ಯಾಂಕುಗಳು ವಿಭಿನ್ನ ಬ್ಯಾಂಕುಗಳಾಗಿವೆ ಎಂದು ಹೇಳಲಾಗಿದೆ.
ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ದೇಶದಲ್ಲಿ ಪೇಮೆಂಟ್ ಬ್ಯಾಂಕುಗಳನ್ನು ಸ್ಥಾಪಿಸಲು 2014 ರ ನವೆಂಬರ್ 24 ರಂದು ಮಾರ್ಗಸೂಚಿಗಳನ್ನು ಹೊರಡಿಸಿತ್ತು. ಪೇಮೆಂಟ್ ಬ್ಯಾಂಕುಗಳು ಕೆಲವು ನಿರ್ಬಂಧಗಳೊಂದಿಗೆ ಸಾರ್ವಜನಿಕರ ಅಗತ್ಯಗಳನ್ನು ಪೂರೈಸಿ. ಪಾವತಿಗಳಂತೆ ಪ್ರಸ್ತುತ ಮತ್ತು ಉಳಿತಾಯ ಖಾತೆಗಳನ್ನು ತೆರೆಯಲು ಬ್ಯಾಂಕುಗಳಿಗೆ ಅಧಿಕಾರ ನೀಡಲಾಗುವುದು ಆದರೆ ಗ್ರಾಹಕರಿಗೆ ಕ್ರೆಡಿಟï ಕಾರ್ಡ್ ನೀಡಲು ಇದರಿಂದ ಸಾಧ್ಯವಿಲ್ಲ ಎಂಬ ಆಘಾತ ಮಾರ್ಗಸೂಚಿಯೊಂದಿಗೆ ತಂದಿತ್ತು.
ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಅಂಕಿ ಅಂಶಗಳ ಪ್ರಕಾರ, ದೇಶದ ಶೇ.60ರಷ್ಟು ಜನರು ಇನ್ನೂ ಬ್ಯಾಂಕಿಂಗ್ ಕ್ಷೇತ್ರದೊಂದಿಗೆ ಸಂಪರ್ಕ ಹೊಂದಿರಲಿಲ್ಲ. 2014ರಿಂದೀಚೆಗೆ ಪ್ರಧಾನಿಯವರ ಜನ್‍ಧನ್ ಯೋಜನೆಯ ಆಶ್ವಾಸನೆಗಳು ಗ್ರಾಮೀಣ ಪ್ರದೇಶಗಳ ಜನಸಾಮಾನ್ಯರುಗಳಿಗೆ ಖಾತೆ ತೆರೆಯುವ ಮಾರ್ಗವಾಗಿತ್ತು. ಇದರಿಂದ ಅನೇಕ ಕಡಿಮೆ ಆದಾಯದ ಜನರಿಗೂ ಖಾತೆ ತೆರೆಯುವ ಭಾಗ್ಯ ಸಿಕ್ಕಿದ್ದು ಬಿಟ್ಟರೆ ಯೋಜನೆ ಮಾತ್ರ ಈಗಲೂ ದೊಡ್ಡ ಜಿರೋ ಆಗಿಯೇ ಉಳಿದಿದೆ.
ರಾಷ್ಟ್ರೀಕೃತ ಬ್ಯಾಂಕುಗಳು ಪಾಲುದಾರಿಕೆಯಲ್ಲಿ ಪೇಮೆಂಟ್ಸ್ ಬ್ಯಾಂಕ್ ತೆರೆಯುವ ಅಗತ್ಯವೇನಿತ್ತು ?
ಬಹುತೇಕ ರಾಷ್ಟ್ರೀಕೃತ ಬ್ಯಾಂಕುಗಳು ಖಾಸಗಿ ಕಾರ್ಪೋರೇಟ್ ಕಂಪನಿಗಳ ಪಾಲುದಾರರಾಗಿ ಪೇಮೆಂಟ್ಸ್ ಬ್ಯಾಂಕ್ ತೆರೆಯುತ್ತಿರುವುದೇಕೆ ಎನ್ನುವುದು ಭಾರತದಾದ್ಯಂತ ಲಕ್ಷಾಂತರ ಮಂದಿ ಕೇಳುತ್ತಿರುವ ಪ್ರಶ್ನೆಯಾಗಿದೆ. ಹೌದು! ಅದು ನಿಜವೆ, ಜನಸಾಮಾನ್ಯರಿಗೆಂದೇ ದೇಶದಲ್ಲಿ ಹಲವಾರು ರಾಷ್ಟ್ರೀಕೃತ ಬ್ಯಾಂಕುಗಳು, ಖಾಸಗಿ ಬ್ಯಾಂಕುಗಳು, ಕೃಷಿ, ಕೈಗಾರಿಕಾ ಬ್ಯಾಂಕುಗಳು ಸೇರಿದಂತೆ ಹಲವಾರು ಬ್ಯಾಂಕು ಭಾರತದಲ್ಲಿವೆ.
ಅದರಲ್ಲೇ ಹಣದ ವಿನಿಮಯ, ಹೂಡಿಕೆ ಕಾರ್ಯಗಳು ಸರಾಸಗಟಾಗಿ ನಡೆಯುತ್ತಿಲ್ಲ. ಅಲ್ಲದೆ, ದೇಶದ ಆರ್ಥಿಕ ಮಟ್ಟ ದಿನದಿಂದ ದಿನಕ್ಕೆ ಕುಸಿಯುತ್ತಾ ಬರುತ್ತಿದೆ. ಈ ನಡುವೆ ಬಂದಿರುವ ಆನ್‍ಲೈನ್ ವಿನಿಮಯ ಸೌಲಭ್ಯಗಳಾದ ಫೋನ್ ಪೇ, ಗೂಗಲ್ ಪೇ, ಪೇಟಿಯಂ, ಭೀಮ್ ಮತ್ತು ಪೇಮೆಂಟ್ ಬ್ಯಾಂಕ್ ಇವುಗಳು ಕ್ಯಾಶ್‍ಬ್ಯಾಕ್, ರಿವಾರ್ಡ್‍ಗಳೆಂಬ ಆಫರ್‍ಗಳನ್ನು ನೀಡಿ ಜನಸಾಮಾನ್ಯರು ಒಳಗೊಂಡಂತೆ ವಿದ್ಯಾವಂತ ಮಂದಿಯನ್ನೂ ಸೆಳೆಯುತ್ತಿವೆ. ಇವುಗಳ ಬಗ್ಗೆ ಯಾರೊಬ್ಬರಿಗೂ ಸ್ಪಷ್ಟ ಮಾಹಿತಿ ಇಲ್ಲದಂತಾಗಿದೆ. ಗ್ರಾಮೀಣ ಜನರು ಬ್ಯಾಂಕುಗಳಲ್ಲಿಯೇ ಹಣ ಪಡೆಯಲು ಪರದಾಡುವ ಸನ್ನಿವೇಶದಲ್ಲಿ ಇರುವಾಗ ಆನ್‍ಲೈನ್ ವಿನಿಮಯ ಹಾಗೂ ಪೇಮೆಂಟ್ಸ್ ಬ್ಯಾಂಕುಗಳು ನಿಜಕ್ಕೂ ಅರ್ಥವಾಗದ ಕಬ್ಬಿಣದ ಕಡಲೆ.
ಪೇಮೆಂಟ್ಸ್ ಬ್ಯಾಂಕುಗಳು ಬಳಕೆದಾರರಿಗೆ ಆಫರ್‍ಗಳನ್ನು ಹೆಚ್ಚಿಸಿ ಅನಿಮಿಯತ ವಿನಿಮಯಕ್ಕೆ ಸುಲಭ ಮಾರ್ಗವಾಗಿದ್ದರೂ, ದಿನಗಳೆದಂತೆ ಶೇ. ಇಂತಿಷ್ಟು ಎಂದು ಕಡಿತಗೊಳಿಸುವ ಸಾಧ್ಯತೆಗಳೂ ಹೆಚ್ಚಿವೆ. ಇವುಗಳ ಪೂರ್ವ ಹಾಗೂ ನಂತರ ಕಿಂಚಿತ್ತೂ ಮಾಹಿತಿ ಜನರಿಗೆ ಇಲ್ಲದಂತಾಗಿದೆ. ಪಾವತಿ ಬ್ಯಾಂಕು ಹಾಗೂ ಆನ್‍ಲೈನ್ ವಿನಿಮಯಗಳ ಬಳಕೆಯಿಂದ ಬ್ಯಾಂಕುಗಳಲ್ಲಿ ಸಿಬ್ಬಂದಿಗಳ ಉದಾಸೀನತೆ ಹೆಚ್ಚಾಗುತ್ತಿದೆ. ಬ್ಯಾಂಕುಗಳಿಗೆ ಹಣ ಪಾವತಿಗೆಂದು ಹೋದರೆ ಪೇಮೆಂಟ್ಸ್ ಬ್ಯಾಂಕ್ ಇದೆಯಲ್ಲಾ? ಬ್ಯಾಂಕ್‍ಗಳಿಗೇಕೆ ಬರುತ್ತೀರಿ? ಎನ್ನುವ ಲೇವಡಿ ಉತ್ತರಗಳು ಪುನರಾವರ್ತಿಸುತ್ತಿವೆ.
ಮಾಹಿತಿ ಇಲ್ಲದ ಪಾವತಿ (ಪೇಮೆಂಟ್):
ಪೇಮೆಂಟ್ ಬ್ಯಾಂಕುಗಳ ಬಗ್ಗೆ ಎಳ್ಳಷ್ಟೂ ಮಾಹಿತಿ ಇಲ್ಲದ ರೈತರಿಂದ ಪೇಮೆಂಟ್ ಬ್ಯಾಂಕುಗಳು ಲೂಟಿ ಮಾಡಲಾರಂಭಿಸಿವೆ. ರೈತರ ಬೆಳೆ ಪರಿಹಾರ ಹಣ, ವಿಮಾ ಮೊತ್ತ, ಪೆÇ್ರೀತ್ಸಾಹಧನ, ಸಹಾಯಧನ ಸಂಬಂಧಿಸಿದಂತೆ ಕೃಷಿ, ತೋಟಗಾರಿಕೆ ಕಚೇರಿಗಳಲ್ಲಿ ರೈತರು ತಮ್ಮ ಖಾತೆಗೆ ಹಣ ಜಮಾ ವಿಷಯವಾಗಿ ತಕರಾರು ಎತ್ತಿದರೆ ಅಲ್ಲಿನ ಅಧಿಕಾರಿಗಳು ಜಮಾ ಮಾಡಿರುವುದಾಗಿ ದಾಖಲೆ ತೋರುತ್ತಿದ್ದಾರೆ. ಆದರೆ ರೈತನ ನೋವಿನ ಸಂಗತಿಯೇನೆಂದರೆ ತಮ್ಮ ಖಾತೆಯಲ್ಲಿ ನೋಡಿದರೆ ಹಣ ಬಂದಿರುವುದಿಲ್ಲ.
ಅತ್ತ ದಾಖಲೆ ತೋರುವ ಅಧಿಕಾರಿಗಳು, ಇತ್ತ ಖಾಲಿ ಹೊಡೆಯುತ್ತಿರುವ ಖಾತೆಗಳು ಈ ಎರಡರ ನಡುವಿನ ಗೊಂದಲದಲ್ಲಿ ಸಿಲುಕಿರುವ ಸಾವಿರಾರು ರೈತರಿಗೆ ತಮ್ಮ ಪಾಲಿನ ಹಣ ಏರ್‍ಟೆಲ್ ಪೇಮೆಂಟ್ ಬ್ಯಾಂಕ್ ಖಾತೆಯಲ್ಲಿದೆ ಎಂಬುದೇ ಅವರಿಗೆ ಗೊತ್ತಿಲ್ಲ! ಇನ್ನು ಈ ವಿಷಯ ತಿಳಿದ ಕೆಲ ರೈತರಿಗೂ ಹಣ ಪಡೆಯಲು ಕಂಪನಿಯ ನಿಯಮ ಮತ್ತಷ್ಟು ಸಂಕಷ್ಟಕ್ಕೆ ಸಿಲುಕಿಸಿದೆ.
ಪೇಮೆಂಟ್ ಬ್ಯಾಂಕುಗಳಿಂದ ರೈತರು ಕಂಗಾಲು:
ಏರ್‍ಟೆಲ್ ಪೇಮೆಂಟ್ ಬ್ಯಾಂಕ್ ಖಾತೆ ತೆರೆಸುವುದಕ್ಕಾಗಿಯೇ ಕಂಪನಿಯ ಸಿಬ್ಬಂದಿಗಳು ಜನರಿಂದ 10 ರೂಪಾಯಿಗೆ ಸಿಮ್ ಕೊಡ್ತೀವಿ, 20 ರೂಪಾಯಿ ಟಾಕ್‍ಟೈಮ್ ಬರುತ್ತೆ ಎಂದು ಜನರಿಂದ ಕೆಲವು ಫಾರಂಗಳಿಗೆ ಸಹಿ ಹಾಕಿಸಿಕೊಂಡು, ಆಧಾರ್ ಕಾರ್ಡ್ ಜೆರಾಕ್ಸ್ ಮತ್ತು ಬೆರಳಚ್ಚು ಪಡೆದು ಸಿಮ್ ಕೊಡುವ ನೆಪದಲ್ಲಿ ರೈತರಿಗೆ ಸರಿಯಾದ ಮಾಹಿತಿ ನೀಡದೆ ಅವರ ಹೆಸರಲ್ಲಿ ಪೇಮೆಂಟ್ ಬ್ಯಾಂಕ್ ಖಾತೆಗಳನ್ನು ತೆರೆಯುತ್ತಿದ್ದಾರೆ.
ಸರ್ಕಾರದ ಯಾವುದೋ ಹಂತದಲ್ಲಿ ವ್ಯವಹಾರ ನಡೆಸಿ ಆಧಾರ್ ಕಾರ್ಡ್ ಆಧಾರದಲ್ಲಿ ನೇರ ನಗದು ಪ್ರಕ್ರಿಯೆಯಲ್ಲಿ ಜಮಾ ಆಗುವ ಹಣ ತಮ್ಮಲ್ಲಿಯ ಖಾತೆಗೇ ಬರುವಂತೆ ಮಾಡಿಕೊಂಡಿರುವುದರ ಹಿಂದೆ ದೊಡ್ಡ ಜಾಲ ಇರುವ ಶಂಕೆ ಇದೆ. ರೈತರಿಗೆ ಸರ್ಕಾರದಿಂದ ನೀಡಲಾಗುವ ಹಣಗಳು ಇದೀಗ ನೇರವಾಗಿ ಪೇಮೆಂಟ್ ಬ್ಯಾಂಕ್ ಖಾತೆಗೆ ಸೇರುವಂತಾಗಿದೆ. ಇದೇ ರೀತಿ ರಾಜ್ಯಾದ್ಯಂತ ರೈತರ ಹಣ ಪೇಮೆಂಟ್ ಬ್ಯಾಂಕ್ ಖಾತೆಗೆ ಸದ್ದಿಲ್ಲದೆ ಜಮಾ ಆಗುತ್ತಿದೆ. ಈ ಹಣಕ್ಕೆ ರೈತರಿಗೆ ಬಡ್ಡಿಯೂ ಸಿಗುವುದಿಲ್ಲ. ಕಂಪನಿಯ ವಹಿವಾಟಿನ ಗಾತ್ರ ಮಾತ್ರ ಬೆಳೆಯುತ್ತಿದೆ.
ಪೇಮೆಂಟ್ ಬ್ಯಾಂಕ್‍ಗಳಲ್ಲಿ ಯಾವುದೇ ಪಾಸ್‍ಬುಕ್, ಕ್ರೆಡಿಟ್ ಕಾರ್ಡ್‍ಗಳನ್ನೂ ಸಹ ಕೊಡುವುದಿಲ್ಲ. ಪ್ರಶ್ನಸಿದರೆ ನಿಮ್ಮ ಸಿಮ್‍ಗೆ ಮೆಸೇಜ್ ಕಳುಹಿಸಿದ್ದೇವೆ ಎನ್ನುತ್ತಾರೆ. ಬಹುಪಾಲು ರೈತರಿಗೆ ಮೆಸೇಜ್ ಓದಲು ಬರುವುದಿಲ್ಲ. ಹಾಗಾಗಿ, ಏರ್‍ಟೆಲ್ ಬ್ಯಾಂಕ್ ಖಾತೆ ಹೊಂದಿರುವ ವಿಷಯವೇ ಗೊತ್ತಿಲ್ಲ. ಹಲವರು ಯಾವಾಗಲೋ ಸಿಮ್ ಬದಲಿಸಿಕೊಂಡಿರುತ್ತಾರೆ. ಅತಿವೃಷ್ಟಿ, ಪ್ರವಾಹ, ಬರಗಾಲ ಹೀಗೆ ನಾನಾ ಸಮಸ್ಯೆಗೆ ಸಿಲುಕಿ ಸೊರಗಿರುವ ಸಾವಿರಾರು ಗ್ರಾಮೀಣ ರೈತರು ಸರ್ಕಾರ ಕೊಟ್ಟ ಹಣ ಕೈಗೆ ಬಾರದೇ ಪೇಮೆಂಟ್ ಬ್ಯಾಂಕುಗಳ ಪಾಲಾಗುತ್ತಿರುವ ದರಿಂದ ಕಂಗಾಲಾಗುವಂತಾಗಿದೆ.
ಪೇಮೆಂಟ್ ಬ್ಯಾಂಕುಗಳಿಂದ ಹಣ ಪಡೆಯುವುದು ಸುಲಭವಲ್ಲ:
ಜನರ ಆಧಾರ್ ಬೇರೆ ಬ್ಯಾಂಕ್/ಪೇಮೆಂಟ್ ಬ್ಯಾಂಕ್ ಖಾತೆಗೆ ಜೋಡಣೆಯಾಗಿದ್ದಲ್ಲಿ, ಪುನಃ ಮೂಲ ಬ್ಯಾಂಕ್ ಖಾತೆಗೆ ಜೋಡಿಸಿ ಕೊಳ್ಳಬಹುದಾಗಿದೆ. ಅದಕ್ಕಾಗಿ ಮೂಲ ಬ್ಯಾಂಕ್ ಖಾತೆ ಇರುವ ಶಾಖೆಗೆ ಹೋಗಿ, ಈ ಹಿಂದೆ ಜೋಡಿಸಿದ್ದ ಆಧಾರ್ ಸಂಖ್ಯೆಯನ್ನು ಡಿ ಲಿಂಕ್ ಮಾಡಿಸಬೇಕು. 24 ಗಂಟೆ ನಂತರ ಪುನಃ ಅದೇ ಖಾತೆಗೆ ಆಧಾರ್ ಜೋಡಿಸಿಕೊಳ್ಳಬೇಕು. ಆಗ, ಮೂಲ ಬ್ಯಾಂಕ್ ಖಾತೆಯೇ ಇತ್ತೀಚೆಗೆ ಆಧಾರ್ ಜೋಡಣೆ ಆಗಿರುವ ಖಾತೆ ಎಂದಾಗುತ್ತದೆ. ಆ ಖಾತೆಗೆ ನೇರ ನಗದು ಜಮಾ ಆಗುತ್ತದಂತೆ.
ಪರವಾನಗಿ ಕಳೆದುಕೊಂಡ ಆನ್‍ಲೈನ್ ಟ್ರಾನ್ಸಾಕ್ಷನ್‍ಗಳು:
ಪೇಮೆಂಟ್ಸ್ ಬ್ಯಾಂಕ್ ಒಳಗೊಂಡ 11 ಆನ್‍ಲೈನ್ ಹಣಕಾಸು ವಿನಿಮಯ ಸೌಲಭ್ಯಗಳು ಪರವಾನಗಿ ಪಡೆದುಕೊಂಡಿದ್ದವು. ಅವುಗಳಲ್ಲಿ ಕೆಲವು ತೀವ್ರ ನಷ್ಟವನ್ನು ಅನುಭವಿಸಿದ್ದ ಕಾರಣ 6 ಸಂಸ್ಥೆಗಳು ಪರವಾನಗಿ ಕಳೆದುಕೊಂಡವು. ಪೇಮೆಂಟ್ಸ್ ಬ್ಯಾಂಕ್‍ನಿಂದ ಪ್ರತಿ ವರ್ಷಕ್ಕೆ ಸರಿಸುಮಾರು 31ಸಾವಿರ ಕೋಟಿ ಹಣಕಾಸಿನ ವಹಿವಾಟು ನಡೆಯುತ್ತದೆ ಎಂದು ಬಲ್ಲ ಮೂಲಗಳು ಹೇಳುತ್ತವೆ. ಆದರೆ ದಿನಕ್ಕೆ ಮಾತ್ರ ಒಂದು ಲಕ್ಷ ರೂಗಳಷ್ಟೇ!
ಜನರನ್ನು ದಿಕ್ಕು ತಪ್ಪಿಸುವ ಹುನ್ನಾರವೆ?
ದೇಶದಲ್ಲಿ ಖಾಸಗಿ ಮತ್ತು ರಾಷ್ಟ್ರೀಕೃತವೆನ್ನಿಸಿಕೊಂಡ ಬ್ಯಾಂಕುಗಳು ಸಾಕಷ್ಟಿವೆ. ಅವುಗಳಲ್ಲಿ ಜನರು ಸಾಲ ಸೌಲಭ್ಯ, ಹೂಡಿಕೆ, ವಿನಿಮಯಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಅದರಲ್ಲೂ ಜನ ಸಾಮಾನ್ಯರಿಗೆ ವಹಿವಾಟು ಸರಳೀಕೃತಕ್ಕಾಗಿ ಕ್ರೆಡಿಟ್ ಕಾರ್ಡ್ ಹಾಗೂ ಬ್ಯಾಂಕುಗಳಲ್ಲಿ ಸಕಾಲ ಸಹಾಯ ಸಿಬ್ಬಂದಿಗಳನ್ನು ಇಡಲಾಗಿದೆ. ಈ ಎಲ್ಲದರ ನಡುವೆ ಗೊತ್ತು ಗುರಿ ಇಲ್ಲದ, ಪಾಸ್‍ಬುಕ್, ಕ್ರೆಡಿಟ್ ಕಾರ್ಡ್‍ಗಳಂತ ಅಗತ್ಯ ದಾಖಲೆಗಳಿಲ್ಲದ ಪೇಮೆಂಟ್ಸ್ ಬ್ಯಾಂಕುಗಳನ್ನು ತರುವ ಅಗತ್ಯವೇನಿತ್ತು? ಇದರ ಹಿಂದೆ ಜನರನ್ನು ದುಂಬಾಲು ಬೀಳಿಸಿ ಭವಿಷ್ಯದ ದಿನಗಳಲ್ಲಿ ಜನರನ್ನು ದಿಕ್ಕು ತಪ್ಪಿಸುವ ಹುನ್ನಾರವೇನಾದರೂ ಉಂಟೇ!?
ಮುಂದುವರೆಯುತ್ತದೆ……..
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ