ಬೆಂಗಳೂರು:
ರಾಮೇಶ್ವರಂ ಕೆಫೆ ಬಾಂಬ್ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಷ್ಟ್ರೀಯ ತನಿಖಾ ದಳ ಸೋಮವಾರ ಆರೋಪಿಗಳನ್ನು ಕೃತ್ಯ ನಡೆದ ಸ್ಥಳಕ್ಕೆ ಕರೆ ತಂದು ಸ್ಥಳ ಮಹಜರು ನಡೆಸಿದೆ.ಕುಂದಲಹಳ್ಳಿಯಲ್ಲಿರುವ ರಾಮೇಶ್ವರಂ ಕೆಫೆಗೆ ಆರೋಪಿಗಳಾದ ಮಸ್ಸಾವೀರ್, ಅಬ್ಧುಲ್ ಮತೀನ್ ತಹಾ ಅವರನ್ನು ಕರೆದುಕೊಂಡ ಬಂದ ಎನ್‌ಐಎ ಅಧಿಕಾರಿಗಳು, ಸ್ಥಳ ಮಹಜರು ಪ್ರಕ್ರಿಯೆ ನಡೆಸಿದೆ.
ರಾಮೇಶ್ವರಂ ಕೆಫೆ ಬಾಂಬ್ ಸ್ಫೋಟ ಪ್ರಕರಣದ ತನಿಖೆಯನ್ನು ಬಹುತೇಕ ಅಂತಿಮ ಹಂತಕ್ಕೆ ತಂದಿರುವ ಎನ್‌ಐಎ ಅಧಿಕಾರಿಗಳು ಮುಂಜಾನೆ ಬಾಂಬ್ ಇರಿಸಿದ ಭಯೋತ್ಪಾದಕರನ್ನು ಕೆಫೆಗೆ ಕರೆತಂದು ಮಾರ್ಚ್ 1 ರಂದು ನಡೆದಿದ್ದ ಸ್ಫೋಟ ಮರುಸೃಷ್ಟಿ ನಡೆಸಿ, ಹೇಳಿಕೆ ದಾಖಲಿಸಿಕೊಂಡಿದ್ದಾರೆ.
ಮರುಸೃಷ್ಟಿಯ ಹಿನ್ನೆಲೆಯಲ್ಲಿ ರಾಮೇಶ್ವರಂ ಕೆಫೆಯ ಸುತ್ತಮುತ್ತಲಿನ ಪ್ರದೇಶವನ್ನು ಇಂದು ಸಾರ್ವಜನಿಕರಿಗೆ ಬಂದ್ ಮಾಡಿ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಿ ಸ್ಫೋಟವನ್ನು ಮರು ಸೃಷ್ಟಿ ಮಾಡಿಸಲಾಯಿತು.
ಆರೋಪಿ ಮುಜಾವೀರ್ ಹುಸೇನ್ ಶಾಜಿಬ್ ಕೃತ್ಯದ ದಿನ ಎಲ್ಲಿಂದ, ಹೇಗೆ ನಡೆದುಕೊಂಡು ಬಂದ, ಕೆಫೆಯ ಒಳಗಡೆ ಎಲ್ಲೆಲ್ಲಿ ಸುತ್ತಾಡಿದ್ದ, ಎಲ್ಲಿ ಬ್ಯಾಗ್ ಇಟ್ಟಿದ್ದ, ನಂತರ ತೆರಳಿದ್ದು ಹೇಗೆ, ಇದೆಲ್ಲವನ್ನೂ ಉಗ್ರನಿಂದಲೇ ರಿಕ್ರಿಯೆಟ್ ಮಾಡಿಸಿ ವಿಡಿಯೋ ಮಾಡಿಕೊಳ್ಳಲಾಯಿತು. ಕೃತ್ಯ ನಡೆಸಿದ ಸಂದರ್ಭದಲ್ಲಿ ಆತ ಧರಿಸಿದ್ದ ಬಟ್ಟೆ ಹಾಗೂ ಕ್ಯಾಪ್ ಅನ್ನು ಆತನಿಗೆ ತೊಡಿಸಲಾಗಿದೆ. ಅವತ್ತಿನ ರೀತಿ ಬ್ಲಾಕ್ ಬ್ಯಾಗ್ ಹೆಗಲಿಗೆ ಹಾಕಿಕೊಂಡು ವಿಡಿಯೋ ಮರುಸೃಷ್ಟಿ ಮಾಡಿಸಲಾಗಿದೆ. ಎಲ್ಲವನ್ನೂ ಎನ್‌ಐಎ ಅಧಿಕಾರಿಗಳು ವಿಡಿಯೋ ರೆಕಾರ್ಡ್ ಮಾಡಿಕೊಂಡಿದ್ದಾರೆ.
ಕೆಫೆಗೆ ಸಮೀಪದ ಬಸ್ ನಿಲ್ದಾಣದಲ್ಲಿಯೂ ಚಿತ್ರಣವನ್ನು ಚಿತ್ರೀಕರಿಸಲಾಗಿದೆ. ಬಸ್ ಗಾಗಿ ಎಷ್ಟು ಹೊತ್ತು, ಎಲ್ಲಿ ಕುಳಿತು ಕಾದಿದ್ದ ಎಂಬುದನ್ನೂ ವಿಡಿಯೋ ಮಾಡಿಕೊಳ್ಳಲಾಗಿದೆ.
ಕಳೆದ ಮಾರ್ಚ್ 1, 2024ರ 12:56ಕ್ಕೆ ಬಾಂಬ್ ಸ್ಫೋಟಿಸಲಾಗಿತ್ತು. ಘಟನೆಯಲ್ಲಿ ಮೂವರು ಹೋಟೆಲ್ ಸಿಬ್ಬಂದಿ ಸೇರಿ ಹತ್ತು ಜನರಿಗೆ ಗಾಯವಾಗಿತ್ತು. ಆರಂಭದಲ್ಲಿ ಬೆಂಗಳೂರು ಸಿಸಿಬಿ ಪೊಲೀಸರಿಂದ ತನಿಖೆ ನಡೆದಿದ್ದು, ಮಾರ್ಚ್ 3ರಂದು ಪ್ರಕರಣ ಎನ್‌ಐಎಗೆ ವರ್ಗಾವಣೆಯಾಗಿತ್ತು.
ಮಾರ್ಚ್ 5ರಂದು ಎನ್‌ಐಎನಿಂದ ಶಂಕಿತ ಆರೋಪಿಗಳ ಸುಳಿವು ನೀಡಿದರೆ 10 ಲಕ್ಷ ರೂ. ಬಹುಮಾನ ಘೋಷಣೆಯಾಗಿತ್ತು .ಮಾರ್ಚ್ 15ರಂದು ಪರಪ್ಪನ ಅಗ್ರಹಾರ ಜೈಲಿನಲ್ಲಿ ಮಾಜ್ ಮುನೀರ್ ಆಹಮ್ಮದ್‌ನನ್ನು, ಮಾರ್ಚ್ 28ರಂದು ಚಿಕ್ಕಮಗಳೂರಿನಲ್ಲಿ ಮುಜಾಮಿಲ್ ಷರೀಪ್ ಎನನ್ನು ಬಂಧಿಸಿ ವಿಚಾರಣೆ ನಡೆಸಲಾಗಿತ್ತು.
ಮಾರ್ಚ್ 29ರಂದು ಪ್ರಮುಖ ಆರೋಪಿಗಳಾದ ಮುಸಾವೀರ್ ಹಾಗೂ ಅಬ್ದುಲ್ ಮತೀನ್ ತಾಹ ಇಬ್ಬರ ಫೋಟೋ ಬಿಡುಗಡೆ ಮಾಡಲಾಗಿತ್ತು. ಏಪ್ರಿಲ್ 12ರಂದು ಮುಸಾವೀರ್ ಹುಸೇನ್ ಶಾಜೀಬ್ ಹಾಗೂ ಅಬ್ದುಲ್ ಮತೀನ್ ತಾಹರನ್ನು ಪಶ್ಚಿಮ ಬಂಗಾಳದಲ್ಲಿ ಎನ್‌ಐಎ ಬಂಧಿಸಿತ್ತು.ಮೇ 21ರಂದು ಈ ಪ್ರಕರಣದ ಸಂಬಂಧಿಸಿ ಎನ್ಐಎ ದೇಶಾದ್ಯಂತ 29 ಕ್ಕೂ ಹೆಚ್ಚು ಸ್ಥಳಗಳಲ್ಲಿ ವ್ಯಾಪಕ ಶೋಧ ನಡೆಸಿತ್ತು. ಮೇ 24 ಪ್ರಕರಣದಲ್ಲಿ ಐದನೇ ಆರೋಪಿಯಾಗಿ ಶೋಯೆಬ್ ಅಹಮ್ಮದ್ ಮಿರ್ಜಾ ಎಂಬುವನನ್ನು ಬಂಧಿಸಲಾಗಿತ್ತು.