ಶ್ರೀರಂಗಪಟ್ಟಣದಲ್ಲಿ ಜಾಮಿಯಾ ಮಸೀದಿ- ಹನುಮ ಮಂದಿರ ವಿವಾದ ಮತ್ತೆ ಮುನ್ನೆಲೆಗೆ

ಮಂಡ್ಯ

      ಇಂದು ಹನುಮ ಜಯಂತಿ  ಆಚರಣೆ ಎಲ್ಲೆಡೆ ನಡೆಯುತ್ತಿದ್ದು, ಮಂಡ್ಯ  ಜಿಲ್ಲೆಯ ಶ್ರೀರಂಗಪಟ್ಟಣದಲ್ಲಿ  ತುಸು ಬಿಗು ವಾತಾವರಣ ಸೃಷ್ಟಿಯಾಗಿದೆ. ಹಿಂದೂ ಸಂಘಟನೆಗಳ ನೇತೃತ್ವದಲ್ಲಿ ಇಂದು ಶ್ರೀರಂಗಪಟ್ಟಣದಲ್ಲಿ ಹನುಮ ಮಾಲಾಧಾರಿಗಳ ಬೃಹತ್ ಸಂಕೀರ್ತನಾ ಯಾತ್ರೆ ನಡೆಯಲಿದೆ. ಮೂಡಲ ಬಾಗಿಲು ಶ್ರೀ ಆಂಜನೇಯಸ್ವಾಮಿ ದೇಗುಲ ಮರು ಸ್ಥಾಪನೆ ಸಂಕಲ್ಪದೊಂದಿಗೆ, ನಿಮಿಷಾಂಬ ದೇಗುಲದಿಂದ ಜಾಮಿಯಾ ಮಸೀದಿ  ಮುಂಭಾಗದ ರಂಗನಾಥಸ್ವಾಮಿ ದೇಗುಲದ ತನಕ ಯಾತ್ರೆ ನಡೆಯಲಿದೆ.

       ಮಂಡ್ಯ, ಮೈಸೂರು, ಕೊಡಗು, ಹಾಸನ, ರಾಮನಗರ ಜಿಲ್ಲೆಗಳಿಂದಲೂ ಹನುಮ ಮಾಲಾಧಾರಿಗಳು ಬರುತ್ತಿದ್ದಾರೆ. ಬಿಜೆಪಿ-ಜೆಡಿಎಸ್‌ ನಾಯಕರೂ ಯಾತ್ರೆಯಲ್ಲಿ ಭಾಗಿಯಾಗುತ್ತಿದ್ದಾರೆ. ಹೀಗಾಗಿ, ಬಿಗಿ ಪೊಲೀಸ್‌ ಬಂದೋಬಸ್ತ್ ಕೈಗೊಳ್ಳಲಾಗಿದೆ. ದಾರಿ ಉದ್ದಕ್ಕೂ ಸಿಸಿ ಕ್ಯಾಮರಾ ಕಣ್ಗಾವಲು ಹಾಕಲಾಗಿದೆ. ಮುಂಜಾಗ್ರತಾ ಕ್ರಮವಾಗಿ 1,000ಕ್ಕೂ ಹೆಚ್ಚು ಪೊಲೀಸರು ಯಾತ್ರೆ ತೆರೆಳುವ ದಾರಿಯುದ್ದಕ್ಕೂ ಮಂಗಳವಾರ ಪಥಸಂಚಲನ ನಡೆಸಿದ್ದಾರೆ. 

      ಶ್ರೀರಂಗಪಟ್ಟಣದಲ್ಲಿ ಇರುವ ಜಾಮಿಯಾ ಮಸೀದಿ ಜಾಗದಲ್ಲಿ ಹಿಂದೆ ಮೂಡಲ ಬಾಗಿಲು ಆಂಜನೇಯಸ್ವಾಮಿ ದೇವಸ್ಥಾನ ಇತ್ತು. ಆ ದೇವಸ್ಥಾನವನ್ನು ಕೆಡವಿ ಟಿಪ್ಪು ಸುಲ್ತಾನ್ ಜಾಮಿಯಾ ಮಸೀದಿ ನಿರ್ಮಾಣ ಮಾಡಿದ್ದ ಎನ್ನಲಾಗುತ್ತಿದೆ. ಈ ಪ್ರತಿಪಾದನೆಗೆ ಇಲ್ಲಿರುವ ಕಲ್ಯಾಣಿ, ನಾಗರ ಕಲ್ಲುಗಳು ಸೇರಿದಂತೆ ಇತರ ಕುರುಹುಗಳೇ ಸಾಕ್ಷಿಯಾಗಿವೆ. ಹೀಗಾಗಿ ಜಾಮಿಯಾ ಮಸೀದಿಯನ್ನು ಕೆಡವಿ ಮೂಡಲ ಬಾಗಿಲು ಆಂಜನೇಯಸ್ವಾಮಿ ದೇವಸ್ಥಾನವನ್ನು ಮರು ಸ್ಥಾಪನೆ ಮಾಡಲೇಬೇಕೆಂದು ಸಂಕಲ್ಪ ಮಾಡಿ ಹಲವು ವರ್ಷಗಳಿಂದ ಹಿಂದೂ ಜಾಗರಣ ವೇದಿಕೆ ಹಾಗೂ ಹಿಂದೂ ಪರ ಸಂಘಟನೆಗಳು ಹನುಮ ಮಾಲಾಧಾರಿಗಳ ಬೃಹತ್ ಸಂಕೀರ್ತನಾ ಯಾತ್ರೆಯನ್ನು ಮಾಡಿಕೊಂಡು ಬಂದಿವೆ. 

       ಅದೇ ರೀತಿ ಇಂದೂ ಸಹ ಶ್ರೀರಂಗಪಟ್ಟಣದಲ್ಲಿ ಬೃಹತ್ ಸಂಕೀರ್ತನಾ ಯಾತ್ರೆಯನ್ನು ಹಮ್ಮಿಕೊಳ್ಳಲಾಗಿದೆ. ಪ್ರತಿ ವರ್ಷದಂತೆ ಇಂದೂ ಸಹ ಮೂಡಲ ಬಾಗಿಲು ಆಂಜನೇಯಸ್ವಾಮಿ ದೇವಸ್ಥಾನ ಮರು ಸ್ಥಾಪನೆಗೆ ಸಂಕಲ್ಪ ಮಾಡಿ ಹನುಮ ಮಾಲಾಧಾರಿಗಳ ಬೃಹತ್ ಸಂಕೀರ್ತನಾ ಯಾತ್ರೆ ಜರುಗುತ್ತಿದೆ. ಪ್ರತಿವರ್ಷವೂ ಹನುಮ ಜಯಂತಿ ಸಂದರ್ಭದಲ್ಲಿ ಈ ವಿಚಾರ ತುಸು ಉಲ್ಬಣಿಸುತ್ತದೆ. ಇಲ್ಲಿ ಸರ್ವೇಕ್ಷಣೆ ಕೈಗೊಳ್ಳಬೇಕು ಎಂದು ಆಗ್ರಹಿಸಿ ಹೈಕೋರ್ಟ್‌ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಹ ಸಲ್ಲಿಸಲಾಗಿದೆ.

Recent Articles

spot_img

Related Stories

Share via
Copy link