ಮೈಸೂರು:
ಮೈಸೂರಿನ ಚಾಮುಂಡಿಬೆಟ್ಟದಲ್ಲಿ ಇಂದು ದಸರಾ ಕಾರ್ಯಕ್ರಮದ ಉದ್ಘಾಟನಾ ಕಾರ್ಯಕ್ರಮಕ್ಕೆ ಬಂದಿದ್ದ ಕೇಂದ್ರ ಸಚಿವ ಸದಾನಂದಗೌಡರವರು ಪೊಲೀಸರ ಮೇಲೆ ಗರಂ ಆಗಿದ್ದಾರೆ.
ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಸಚಿವ ಡಿ.ವಿ.ಸದಾನಂದಗೌಡರು ಸ್ವಲ್ಪ ತಡವಾಗಿ ದಸರಾಗೆ ಆಗಮಿಸಿದ್ದರು. ಕಾರು ಇಳಿದು ವೇದಿಕೆ ಕಾರ್ಯಕ್ರಮದತ್ತ ಬರುವಾಗ ಭದ್ರತಾ ಸಿಬ್ಬಂದಿಗಳು ಅವರನ್ನು ತಡೆದರು.
ತಪಾಸಣೆ ನೆಪದಲ್ಲಿ ತಮ್ಮನ್ನು ತಡೆದರು ಎಂಬ ಕಾರಣಕ್ಕಾಗಿ ಭದ್ರತಾ ಸಿಬ್ಬಂದಿ ವರ್ತನೆಯಿಂದ ಅಸಮಾಧಾನಗೊಂಡ ಸದಾನಂದ ಗೌಡರು ಸಿಟ್ಟಾಗಿದ್ದು, ಕೆಲವು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡು ವಾಪಸ್ ತೆರಳಲು ಮುಂದಾದರು. ತಕ್ಷಣವೇ ಅಲ್ಲಿದ್ದ ಸಿಎಂ ಆಪ್ತ ಸಂತೋಷ್ ಮತ್ತು ಶಾಸಕ ನಾಗೇಂದ್ರ ಅವರು ಸದಾನಂದಗೌಡರನ್ನು ಸಮಾಧಾನಪಡಿಸಿ ವೇದಿಕೆಗೆ ಕರೆದುಕೊಂಡು ಹೋದರು. ಆದರೂ ಸ್ವಲ್ಪ ಸಮಯ ಇದ್ದು, ಅರ್ಧ ಕಾರ್ಯಕ್ರಮದಲ್ಲೇ ನಿರ್ಗಮಿಸಿದರು.
ಪ್ರಗತಿಪರರು ಮಹಿಷಾ ದಸರಾ ಆಚರಣೆಗೆ ಮುಂದಾಗಿದ್ದರು. ಅದಕ್ಕೆ ಜಿಲ್ಲಾಡಳಿತ ಅಡ್ಡಿಪಡಿಸಿ ಅವಕಾಶ ನಿರಾಕರಿಸಿತ್ತು.ಅದನ್ನು ವಿರೋಧಿಸಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸೇರಿದಂತೆ ಎಲ್ಲಾ ಗಣ್ಯರಿಗೂ ಘೇರಾವ್ ಹಾಕುವುದಾಗಿ ಪ್ರತಿಭಟನಾಕಾರರು ಎಚ್ಚರಿಕೆ ನೀಡಿದ್ದರು. ಮುಖ್ಯಮಂತ್ರಿ ಯಡಿಯೂರಪ್ಪ, ಮೂವರು ಡಿಸಿಎಂಗಳು, ಕೇಂದ್ರ ಸಚಿವರು ಹಾಗೂ ರಾಜ್ಯ ಸಂಪುಟದ ಎಲ್ಲಾ ಸಚಿವರು ದಸರಾದಲ್ಲಿ ಭಾಗವಹಿಸಿದ್ದರು. ಈ ಹಿನ್ನೆಲೆಯಲ್ಲಿ ಮೈಸೂರು ದಸರಾಗೆ ಭಾರೀ ಬಿಗಿ ಬಂದೋಬಸ್ತ್ ಆಯೋಜಿಸಲಾಗಿತ್ತು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ