ಬೆಂಗಳೂರು :
ಕೇಂದ್ರ ಸರ್ಕಾರದ ಕೃಷಿ ಕಾಯ್ದೆ ವಿರೋಧಿಸಿ ರೈತರು ಕರೆ ನೀಡಿರುವ ಹೆದ್ದಾರಿ ಬಂದ್ ಪ್ರತಿಭಟನೆ ರಾಜ್ಯಾದ್ಯಂತ ತೀವ್ರ ಸ್ವರೂಪ ಪಡೆದುಕೊಂಡಿದ್ದು, ಅನ್ನದಾತರು ಹೆದ್ದಾರಿಗೆ ಲಗ್ಗೆಯಿಟ್ಟು ಚಕ್ಕಾಜಾಮ್ ಪ್ರತಿಭಟನೆ ನಡೆಸುತ್ತಿದ್ದಾರೆ.
ಬೆಂಗಳೂರಿನ ದೇವನಹಳ್ಳಿ, ಯಲಹಂಕ, ನೈಸ್ ರಸ್ತೆ, ಮೈಸೂರು ರಸ್ತೆಗಳಲ್ಲಿ ಪ್ರತಿಭಟನೆ ನಡೆಸಿರುವ ರೈತರು ರಸ್ತೆ ತಡೆ ನಡೆಸಿದ್ದಾರೆ. ರಸ್ತೆ ತಡೆಯಿಂದಾಗಿ ವಾಹನ ಸಂಚಾರಕ್ಕೆ ಅಡ್ದಿಯಾಗಿದ್ದು, ರಸ್ತೆಗಳಲ್ಲಿ ಸಾವಿರಾರು ವಾಹನಗಳು ಕಿಲೋಮೀಟರ್’ಗಟ್ಟಲೇ ಸಾಲು ಸಾಲಾಗಿ ನಿಂತಿವೆ.
ಕೋಲಾರ-ಬಂಗಾರಪೇಟೆ ಹೆದ್ದಾರಿ, ದಾವಣಗೆರೆ ಬಳಿ ಪುಣೆ-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ, ಬೆಂಗಳೂರು-ಮೈಸೂರು, ಬಿಡದಿ-ಮಂಡ್ಯ ರಾಜ್ಯ ಹೆದ್ದಾರಿ ರಾಯಚೂರು ಅಸ್ಕಿಹಾಲ್, ತುಮಕೂರು, ಕೊಪ್ಪಳ ಬಳಿ ರಸ್ತೆ ತಡೆ ನಡೆಸಿದ್ದಾರೆ. ಇನ್ನು ಹಂಚಾಳ ಗೇಟ್ ಬಳಿ ರಾಜ್ಯ ಹೆದ್ದಾರಿಯಲ್ಲಿ ಮುಳ್ಳು ತಂತಿ ಹಾಕಿ ರೈತರು ರಸ್ತೆ ತಡೆ ನಡೆಸಿದ್ದು, ಕೇಂದ್ರ ಸರ್ಕಾರದ ವಿರುದ್ಧ ಧಿಕ್ಕಾರ ಕೂಗಿದ್ದಾರೆ.
ರಾಜ್ಯದ ಬಹುತೇಕ ಭಾಗಗಳಲ್ಲಿ ವಾಹನ ಸಂಚಾರಕ್ಕೆ ಅಡ್ಡಿಯಾಗಿದ್ದು, ವಾಹನಗಳು ಸಾಲುಗಟ್ಟಿ ನಿಂತಿವೆ. ಬೆಂಗಳೂರಿನ ಯಲಹಂಕ, ಸಾದಹಳ್ಳಿ, ತುಮಕೂರು, ಕೊಪ್ಪಳ, ಬೆಳಗಾವಿ ಸೇರಿದಂತೆ ಹಲವೆಡೆ ರಸ್ತೆ ತಡೆ ನಡೆಸಿದ ರೈತರನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ