ವಿದ್ಯಾರ್ಥಿಗಳಿಗೆ ಜೀವನಾನುಭವದ ಪಾಠ ಅವಶ್ಯ-ಶ್ರೀಬಸವಪ್ರಭು ಸ್ವಾಮೀಜಿ ಅಭಿಮತ

 ಚಿತ್ರದುರ್ಗ:

      ಶಾಲಾ-ಕಾಲೇಜುಗಳಲ್ಲಿ ಓದಿ ಪದವಿ ಪಡೆಯುವುದಕ್ಕಿಂತ ಜೀವನ, ಅನುಭವದ ಪಾಠ ಇಂದಿನ ಮಕ್ಕಳಿಗೆ ಬೇಕಾಗಿದೆ ಎಂದು ಮುರುಘಾಮಠ ದಾವಣಗೆರೆ ಶಾಖೆಯ ಬಸವಪ್ರಭು ಸ್ವಾಮೀಜಿ ಹೇಳಿದರು.

      ಚಿಕ್ಕಗೊಂಡನಹಳ್ಳಿ ಸರ್ಕಾರಿ ಪ್ರೌಢಶಾಲೆ ಸುವರ್ಣ ಸಂಭ್ರಮದ ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದ ಸ್ವಾಮೀಜಿ ಶಾಲಾ-ಕಾಲೇಜುಗಳು ಮಕ್ಕಳಿಗೆ ಪದವಿ ನೀಡುವ ಕಾರ್ಖಾನೆಗಳಾಗುವ ಬದಲು ಒಳ್ಳೆಯ ಶಿಕ್ಷಣ, ಬದುಕನ್ನು ಯಾವ ರೀತಿ ಸಾರ್ಥಕಪಡಿಸಿಕೊಳ್ಳಬೇಕೆನ್ನುವ ಮಾರ್ಗದರ್ಶನದ ಶಿಕ್ಷಣ ಕೊಡಬೇಕಿದೆ. ಕೇವಲ ಪದವಿ ಪಡೆಯುವುದು ಮಾತ್ರ ಶಿಕ್ಷಣವಲ್ಲ. ಮಾನವೀಯತೆ, ಸಂಸ್ಕಾರ, ಮೌಲ್ಯಯುತ ಶಿಕ್ಷಣವನ್ನು ಪ್ರಾಥಮಿಕ ಹಂತದಲ್ಲಿಯೇ ಶಿಕ್ಷಕರುಗಳು ಮಕ್ಕಳಿಗೆ ಕಲಿಸಬೇಕಾಗಿದೆ ಎಂದು ತಿಳಿಸಿದರು.

      ಇಂಜಿನಿಯರಿಂಗ್, ಮೆಡಿಕಲ್ ಪದವಿ ಪಡೆದವರು ಹಣ ಸಂಪಾದನೆಗಾಗಿ ದೊಡ್ಡ ದೊಡ್ಡ ನಗರ ಹೊರ ದೇಶಗಳಿಗೆ ಹೋಗಿ ಅಪ್ಪ-ಅಮ್ಮಂದಿರನ್ನು ಕಡೆಗಣಿಸಿ ವೃದ್ದಾಶ್ರಮ, ಅನಾಥಾಶ್ರಮಗಳಿಗೆ ಸೇರಿಸುತ್ತಿರುವುದು ನೋವಿನ ಸಂಗತಿ. ಲಕ್ಷಗಟ್ಟಲೆ ಹಣ ಖರ್ಚು ಮಾಡಿ ಮನೆಯಲ್ಲಿ ನಾಯಿ ಬೆಕ್ಕುಗಳನ್ನು ಸಾಕುವವರು ತಂದೆ ತಾಯಿಗಳನ್ನು ಸಲಹುತ್ತಿಲ್ಲ. ಶಿಕ್ಷಣ ಪಡೆದ ಮಾತ್ರಕ್ಕೆ ಸಾಲದು, ದುವ್ರ್ಯಸನಿ, ದುರಾಚಾರಿ, ಭ್ರಷ್ಟಾಚಾರಿಗಳಾಗಬಾರದು. ಬುದ್ದಿವಂತರು, ವಿಚಾರವಂತರು, ವಿದ್ಯಾವಂತರಾಗಿ ಸದ್ಗುಗಣಗಳನ್ನು ಜೀವನದಲ್ಲಿ ಯಾರು ಅಳವಡಿಸಿಕೊಳ್ಳುತ್ತಾರೋ ಅವರುಗಳೇ ನಿಜವಾದ ಪದವೀದರರು ಎಂದರು.

      ವಿದ್ಯಾವಂತರುಗಳಿಂದಲೆ ಸಮಾಜದಲ್ಲಿ ಹೆಚ್ಚು ಶೋಷಣೆ, ಜಾತಿ ಪ್ರಬಲವಾಗುತ್ತಿರುವುದು ವಿಷಾಧಕರ. ಮಕ್ಕಳಲ್ಲಿ ಶಿಕ್ಷಣದ ಜೊತೆ ಜಾತ್ಯಾತೀತ ಮನೋಭಾವನೆಯನ್ನು ಬಿತ್ತಬೇಕಾಗಿದೆ. ಶಿಕ್ಷಣ ಸಂಸ್ಥೆಗಳು ಪದವೀಧರರನ್ನು ತಯಾರು ಮಾಡುವ ಕಾರ್ಖಾನೆಗಳಗಾಗುವ ಬದಲು ಸದೃಢ ಭಾರತ ಕಟ್ಟುವಂತ ಪ್ರಜೆಗಳನ್ನು ತಯಾರು ಮಾಡುವ ಜವಾಬ್ದಾರಿ ಶಿಕ್ಷಕರುಗಳ ಮೇಲಿದೆ. ಎಷ್ಟೆ ಉನ್ನತ ಹುದ್ದೆಗೆ ಹೋಗಿ ನೀವುಗಳು ಓದಿದ ಶಾಲೆ-ಕಾಲೇಜು, ಗುರು-ಹಿರಿಯರು, ಹುಟ್ಟಿದ ಊರನ್ನು ಎಂದಿಗೂ ಮರೆಯಬೇಡಿ ಎಂದು ಚಿಕ್ಕಗೊಂಡನಹಳ್ಳಿ ಸರ್ಕಾರಿ ಪ್ರೌಢಶಾಲೆ ಹಳೆ ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.

      ರಾಜನಹಳ್ಳಿ ವಾಲ್ಮೀಕಿ ಗುರುಪೀಠದ ಪ್ರಸನ್ನಾನಂದಪುರಿ ಸ್ವಾಮೀಜಿ ಆಶೀರ್ವಚನ ನೀಡಿ ಭಾರತೀಯ ಗುರುಪರಂಪರೆ ಅತ್ಯಂತ ಪ್ರಾಚೀನ ಪುರಾತನವಾದುದು. ಹನ್ನೆರಡನೆ ಶತಮಾನದಲ್ಲಿಯೇ ಅಲ್ಲಮಪ್ರಭುಗಳು ಗುರು ಪರಂಪರೆಯನ್ನು ವ್ಯಾಖ್ಯಾನಿಸಿದ್ದಾರೆ. ಹಿಂದಿನ ಕಾಲದಲ್ಲಿ ಗುರುಗಳು ಶಿಷ್ಯರನ್ನು ದಂಡಿಸಿ ಬುದ್ದಿ ಹೇಳುತ್ತಿದ್ದರು. ಕಲಿಯುಗದಲ್ಲಿ ಗುರುಗಳು ಶಿಷ್ಯರನ್ನು ಒಳ್ಳೆ ದಾರಿಗೆ ತರಲು ಉಪದೇಶವನ್ನೂ ಮಾಡುವಂತಿಲ್ಲ. ಎಲ್ಲರ ಬದುಕು ಗಾಳಿಗಿಟ್ಟ ದೀಪದಂತಾಗಿದೆ. ಹುಟ್ಟು-ಸಾವಿನ ನಡುವೆ ಬದುಕನ್ನು ಸಾರ್ಥಕಪಡಿಸಿಕೊಳ್ಳಬೇಕಾದರೆ ಗುರುವಿನ ಮಾರ್ಗದರ್ಶನ ಅತ್ಯವಶ್ಯಕ ಎಂದರು.

      ಚಿಕ್ಕಗೊಂಡನಹಳ್ಳಿ ಸರ್ಕಾರಿ ಪ್ರೌಢಶಾಲೆಯ ಸುವರ್ಣ ಸಂಭ್ರಮ ಕಾರ್ಯಕ್ರಮ ಬೇರೆ ಊರು ಹಳ್ಳಿಗಳಿಗೆ ಮಾದರಿಯಾಗಿದೆ. ಉತ್ತರ ಕರ್ನಾಟಕದಲ್ಲಿ ಜನ ನೆರೆ ಹಾವಳಿಯಿಂದ ಸಂತ್ರಸ್ಥರಾಗಿದ್ದಾರೆ. ಇಂತಹ ಕಷ್ಟದ ಪರಿಸ್ಥಿತಿಯಲ್ಲಿ ಅವರಿಗೆ ನೆರವಾಗುವ ಕೈಗಳು ಮುಂದೆ ಬರಬೇಕು ಎಂದು ವಿನಂತಿಸಿದರು.

      ಚಿತ್ರದುರ್ಗ ಲೋಕಸಭಾ ಸದಸ್ಯ ಎ.ನಾರಾಯಣಸ್ವಾಮಿ ಮಾತನಾಡಿ ಶಿಷ್ಯರ ಬೆಳವಣಿಗೆಯಿಂದ ಗುರುಗಳಿಗೆ ಸಿಗುವ ಆನಂದ ಅಷ್ಟಿಷ್ಟಲ್ಲ. ವಿದ್ಯಾರ್ಥಿಗಳ ನಡುವೆ ಸಂವೇದನೆ, ಚರ್ಚೆಯಾದಾಗ ಮಾತ್ರ ಜ್ಞಾನ ವೃದ್ದಿಯಾಗುತ್ತದೆ. ಶಿಕ್ಷಣ, ಪುಸ್ತಕದಿಂದ ಮಕ್ಕಳಿಗೆ ಜ್ಞಾನ ಸಿಗುವುದಿಲ್ಲ. ಬದುಕಿನಲ್ಲಾಗುವ ಅನುಭವ ಜೀವನದಲ್ಲಿ ಅನೇಕ ಬದಲಾವಣೆಗಳಾಗುತ್ತವೆ. ಶಿಕ್ಷಣದಲ್ಲಿ ಏಕಾಗ್ರತೆಯಿದ್ದಾಗ ಮಾತ್ರ ಏನನ್ನಾದರೂ ಸಾಧಿಸಬಹುದು ಎಂದು ತಿಳಿಸಿದರು.

      ಶಿಕ್ಷಣ ಅಕ್ಷರ ಪಡೆಯಬೇಕಾದರೆ ಶಾಲೆ ಮತ್ತು ಮನೆಯಲ್ಲಿ ಒಳ್ಳೆಯ ಪರಿಸರವಿರಬೇಕು. ಶಿಕ್ಷಕರ ನಡೆ, ನುಡಿ, ರೀತಿ, ನೀತಿಯೂ ಶುದ್ದವಾಗಿರಬೇಕು. ಆಗ ಮಾತ್ರ ಸಂಸ್ಕಾರವುಳ್ಳ ಜೀವನ ರೂಪಿಸಿಕೊಳ್ಳಲು ಸಾಧ್ಯ ಎಂದು ನುಡಿದರು.

      ಆಗ್ನೇಯ ಪದವೀಧರ ಕ್ಷೇತ್ರ ವಿಧಾನಪರಿಷತ್ ಸದಸ್ಯ ಚೌಡರೆಡ್ಡಿ ಆರ್.ತೂಪಲ್ಲಿ ಮಾತನಾಡುತ್ತ ಶಿಕ್ಷಣ ರಂಗದಲ್ಲಿಯೂ ಹಲವಾರು ಸಮಸ್ಯೆಗಳಿವೆ. ಗುಣ ಮಟ್ಟದ ಶಿಕ್ಷಣ ನೀಡಿ ದೇಶದಲ್ಲಿ ಉತ್ತಮ ಪ್ರಜೆಗಳನ್ನು ರೂಪಿಸಿ ಸದೃಢ ಭಾರತ ಕಟ್ಟುವ ಹೊಣೆಗಾರಿಕೆ ಶಿಕ್ಷಕರುಗಳ ಮೇಲಿದೆ. ಸ್ಪರ್ಧಾತ್ಮಕ ಯುಗದಲ್ಲಿ ಶಿಕ್ಷಣದ ಜೊತೆ ಕೌಶಲ್ಯ, ಮಾನವೀಯತೆಯುಳ್ಳ ಶಿಕ್ಷಣ ಮಕ್ಕಳಿಗೆ ಸಿಗಬೇಕಾಗಿದೆ. ಸರ್ಕಾರಿ ಶಾಲೆಗಳನ್ನು ಉಳಿಸಿ ಬೆಳೆಸುವುದು ಕಷ್ಟವಾಗಿರುವ ಈ ಕಾಲದಲ್ಲಿ ಚಿಕ್ಕಗೊಂಡನಹಳ್ಳಿ ಸರ್ಕಾರಿ ಪ್ರೌಢಶಾಲೆ ಸುವರ್ಣ ಸಂಭ್ರಮ ಆಚರಿಸಿಕೊಳ್ಳುತ್ತಿರುವುದು ಅತ್ಯಂತ ಸಂತಸದ ಸಂಗತಿ. ಮುಂದೆ ವಜ್ರ ಮಹೋತ್ಸವ ಆಚರಿಸಿಕೊಳ್ಳಲಿ ಎಂದು ಶುಭ ಹಾರೈಸಿದರು.
ಚಳ್ಳಕೆರೆ ಶಾಸಕ ಟಿ.ರಘುಮೂರ್ತಿ ಅಧ್ಯಕ್ಷತೆ ವಹಿಸಿದ್ದರು.

      ಜಿ.ಪಂ.ಅಧ್ಯಕ್ಷೆ ವಿಶಾಲಾಕ್ಷಿ ನಟರಾಜ್, ತಾ.ಪಂ.ಅಧ್ಯಕ್ಷ ನಿಂಗರಾಜು, ಚಿಕ್ಕಗೊಂಡನಹಳ್ಳಿ ಗ್ರಾ.ಪಂ.ಅಧ್ಯಕ್ಷೆ ಕೋಮಲ, ಹಾಸನ ಜಿಲ್ಲಾ ವಾಲ್ಮೀಕಿ ಸಮಾಜದ ಅಧ್ಯಕ್ಷ ಜಿ.ಓ.ಮಹಾಂತಪ್ಪ, ಜಿ.ಪಂ.ಮಾಜಿ ಸದಸ್ಯ ಜಿ.ಟಿ.ಬಾಬುರೆಡ್ಡಿ, ನಿವೃತ್ತ ಡಿ.ಡಿ.ಪಿ.ಐ.ಗಳಾದ ನಾಗೇಂದ್ರಪ್ಪ, ಮಂಜುನಾಥ್, ಕ್ಷೇತ್ರ ಶಿಕ್ಷಣಾಧಿಕಾರಿ ಎಸ್.ನಾಗಭೂಷಣ್ ಇನ್ನು ಮುಂತಾದವರು ವೇದಿಕೆಯಲ್ಲಿದ್ದರು.

      ಶಿಕ್ಷಕ ಗಂಗಾಧರ್ ಪ್ರಾರ್ಥಿಸಿದರು. ಡಾ.ಎಂ.ಸಿ.ಯರ್ರಿಸ್ವಾಮಿ ಸ್ವಾಗತಿಸಿದರು. ವಾಣಿಜ್ಯ ತೆರಿಗೆ ಅಧಿಕಾರಿ ಆರ್.ಮುರಳಿಕೃಷ್ಣ ವಂದಿಸಿದರು. ವಿಜಯನಗರ ಬಸವಕೇಂದ್ರದ ಅಧ್ಯಕ್ಷ ಡಿ.ಟಿ.ಅರುಣ್‍ಕುಮಾರ್ ನಿರೂಪಸಿದರು.

 

Recent Articles

spot_img

Related Stories

Share via
Copy link
Powered by Social Snap