ರಾಮನಗರ:
ಕೊರೊನಾ ವೈರಸ್ ಹಾಗೂ ಹಕ್ಕಿಜ್ವರದಿಂದಾಗಿ ಚಿಕನ್ ವ್ಯಾಪಾರ ಕುಸಿದಿರುವುದರಿಂದ ಕೋಳಿ ಸಾಕಾಣಿಕೆ ಮಾಡಲಾಗದೆ 17 ಸಾವಿರ ಕೋಳಿಗಳ ಜೀವಂತ ಸಮಾಧಿ ಮಾಡಲಾಗಿದೆ.
ಜಿಲ್ಲೆಯಲ್ಲಿ ಕೊರೊನಾ ವೈರಸ್ ಪರಿಣಾಮವಾಗಿ ಕುಕ್ಕುಟೋದ್ಯಮಕ್ಕೆ ಭಾರೀ ನಷ್ಟ ಉಂಟಾಗಿದೆ. ಚನ್ನಪಟ್ಟಣ ತಾಲ್ಲೂಕಿನ ಸಿಲ್ಕ್ ಫಾರಂ ಹಿಂಭಾಗ ಕೋಳಿಗಳನ್ನು ಜೀವಂತ ಸಮಾಧಿ ಮಾಡಲಾಗಿದ್ದು, ನಾಲ್ಕರಿಂದ ಐದು ಬ್ಯಾಚ್ ಗಳ, 75 ಸಾವಿರ ಕೋಳಿಗಳ ಸಾಕಾಣಿಕೆ ಮಾಡುತ್ತಿದ್ದರು.
ರಿಯಾಜ್ ಅಹಮದ್, ಫಯಾಜ್ ಅಹಮದ್ ಎಂಬುವವರಿಗೆ ಸೇರಿದ ಕೋಳಿ ಫಾರ್ಮ್ ಇದಾಗಿದ್ದು, ಕೆರೆಮ್ಯಾಗಳ ದೊಡ್ಡಿ, ತಗಿಚಕೆರೆ, ಎಂ.ಕೆ ದೊಡ್ಡಿ, ವಂದಾರಗುಪ್ಪೆ, ಮಳೂರು, ಬೇವೂರು ಗ್ರಾಮಗಳಲ್ಲಿ ಕೋಳಿಫಾರ್ಮ್ ಗಳು ಇವೆ. ಒಂದು ಕೆ.ಜಿ ಕೋಳಿ ಮಾಂಸಕ್ಕೆ 2 ರಿಂದ 3 ರುಪಾಯಿಗೆ ಕೇಳುತ್ತಿರುವ ಪೌಲ್ಟ್ರಿ ಸೆಂಟರ್ ನವರು, ನಮಗೆ ಕೋಳಿಗಳ ಸಾಕಣೆ ಮಾಡಲು ಸಾಧ್ಯವಾಗುತ್ತಿಲ್ಲ. ಬೇರೆ ದಾರಿ ಕಾಣದೇ ನಾವು ಕೋಳಿಗಳನ್ನು ಜೀವಂತವಾಗಿ ಮಣ್ಣಿಗೆ ಹಾಕಿ ಮುಚ್ಚುತ್ತಿದ್ದೇವೆ ಎಂದಿದ್ದಾರೆ.
ಸುಮಾರು 80 ಲಕ್ಷ ರುಪಾಯಿ ನಮಗೆ ಸದ್ಯ ನಷ್ಟವಾಗಿದೆ, ಕೋಳಿಗಳಿಗೆ ತಿಂಡಿ ಹಾಕಲೂ ಸಾಧ್ಯವಾಗುತ್ತಿಲ್ಲ. ಸರ್ಕಾರ ಪರಿಹಾರ ಕೊಟ್ಟರೆ ಅನುಕೂಲವಾಗುತ್ತದೆ, ಇಂದು ಮೊದಲ ಹಂತದಲ್ಲಿ 17 ಸಾವಿರ ಕೋಳಿ ಜೀವಂತವಾಗಿ ಮಣ್ಣಲ್ಲಿ ಮುಚ್ಚುತ್ತಿದ್ದೇವೆ ಎಂದು ಕೋಳಿ ಫಾರಂ ಮಾಲೀಕರು ತಿಳಿಸಿದ್ದಾರೆ.
ಕೊರೊನಾ ಭೀತಿಯಿಂದಾಗಿ ಫೌಲ್ಟ್ರಿ ಫಾರಂಗಳನ್ನೇ ನಂಬಿಕೊಂಡಿದ್ದ ಜನತೆ ಆತಂಕದಲ್ಲಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ