ಡಿಕೆಶಿ ವಿರುದ್ಧ ಸಿಬಿಐಗೆ ರಾಶಿ ರಾಶಿ ದಾಖಲೆ ಸಲ್ಲಿಸುತ್ತಿರುವ ಯೋಗೇಶ್ವರ್‌!?

ರಾಮನಗರ:
      ದೆಹಲಿಯ ತಿಹಾರ್ ಜೈಲಿನಿಂದ ಬಿಡುಗಡೆಯಾದ ಮಾಜಿ ಸಚಿವ ಡಿ.ಕೆ. ಶಿವಕುಮಾರ್ ಅವರಿಗೆ ಮತ್ತೊಂದು ಕಂಟಕ ಶುರುವಾಗಿದೆ.

       ಡಿ.ಕೆ. ಶಿವಕುಮಾರ್ ಇಡಿ ಬಂಧನದಿಂದ ಬಿಡುಗಡೆಯಾಗುತ್ತಿದ್ದಂತೆ ಮತ್ತೆ ಅವರನ್ನು ಬಂಧಿಸಲು ಸಿಬಿಐ ದಾಖಲೆಗಳನ್ನು ಸಿದ್ಧಪಡಿಸಿಕೊಳ್ಳುತ್ತಿರುವ ಇದೇ ದಿನಗಳಲ್ಲಿ ಡಿಕೆಶಿ ವಿರುದ್ಧ ಸಿ.ಪಿ.ಯೋಗೇಶ್ವರ್ ರಾಶಿ ರಾಶಿ ದಾಖಲೆಗಳನ್ನು ಸಿಬಿಐ ಅಧಿಕಾರಿಗಳಿಗೆ ನೀಡುತ್ತಿದ್ದಾರೆ ಎಂದು ತಿಳಿದುಬಂದಿದೆ.

      ಕಳೆದ ಬಿಜೆಪಿ ಸರ್ಕಾರದಲ್ಲಿ ಯೋಗೇಶ್ವರ್ ಅರಣ್ಯ ಮಂತ್ರಿಯಾಗಿ ಸೇವೆ ಸಲ್ಲಿಸಿದ್ದರು. ಈ ವೇಳೆ ಕನಕಪುರ ಕ್ಷೇತ್ರದಲ್ಲಿ ಡಿಕೆಶಿ ಒಡೆತನದ ಕಲ್ಲುಗಣಿಗಾರಿಕೆಗಳ ಮೇಲೆ ಸಾಕಷ್ಟು ದಾಳಿ ನಡೆಸಿದ್ದರು. ಅಲ್ಲದೆ, ಕಾನೂನು ಬಾಹೀರವಾಗಿ ಕಾರ್ಯನಿರ್ವಹಿಸುತ್ತಿದ್ದ ಹಲವು ಕಲ್ಲುಗಣಿಗಾರಿಕೆಗಳನ್ನ ಸ್ಥಗಿತಗೊಳಿಸಿದ್ದರು. ಈ ಪ್ರಕರಣದ ಕುರಿತು ಎಲ್ಲಾ ದಾಖಲೆಗಳು ಯೋಗೇಶ್ವರ್ ಅವರ ಬಳಿ ಇದ್ದು, ಕೇಂದ್ರ ಬಿಜೆಪಿ ನಾಯಕರ ಮೂಲಕ ಈ ದಾಖಲೆಗಳನ್ನು ಅವರು ಜಾರಿ ನಿರ್ದೇಶನಾಲಯ ಮತ್ತು ಸಿಬಿಐ ಅಧಿಕಾರಿಗಳಿಗೆ ನೀಡಿದ್ದಾರೆ ಎನ್ನಲಾಗುತ್ತಿದೆ.

      2006ರಲ್ಲಿ ಬಿಜೆಪಿ-ಜೆಡಿಎಸ್ ಸಮ್ಮಿಶ್ರ ಸರ್ಕಾರದಲ್ಲಿ ಹೆಚ್.ಡಿ. ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದಾಗ ಕನಕಪುರದಲ್ಲಿ ಅಕ್ರಮ ಕಲ್ಲು ಗಣಿಗಾರಿಕೆ ಮತ್ತು ಅರಣ್ಯಭೂಮಿ ಒತ್ತೂವರಿಯನ್ನು ಪತ್ತೆಮಾಡುವ ಸಲುವಾಗಿ ಯು.ವಿ.ಸಿಂಗ್ ಆಯೋಗವನ್ನು ರಚಿಸಿದ್ದರು. ಆದರೆ, ಯು.ವಿ.ಸಿಂಗ್ ವರದಿಯನ್ನ ನಂತರ ಅಧಿಕಾರ ನಡೆಸಿದ ಸರ್ಕಾರಗಳು ಪರಿಗಣಿಸಿರಲಿಲ್ಲ.
      ಈಗ ರಾಜ್ಯ ಹೈಕೋರ್ಟ್‌ನಿಂದ ನವೆಂಬರ್ 30 ರೊಳಗೆ ಯು.ವಿ.ಸಿಂಗ್ ವರದಿ ಒಪ್ಪಿಸುವಂತೆ ಸೂಚನೆ ನೀಡಲಾಗಿದೆ. ಈ ವಿಚಾರವಾಗಿ ಸಿ.ಪಿ. ಯೋಗೇಶ್ವರ್ ತುಂಬ ಸಕ್ರಿಯರಾಗಿದ್ದು, ಅಕ್ರಮ ಅರಣ್ಯ ಭೂಮಿ ಒತ್ತುವರಿ, ಕನಕಪುರದ ಅಕ್ರಮ ಕಲ್ಲುಗಣಿಗಾರಿಕೆ ಬಗ್ಗೆ ಸಂಗ್ರಹಿಸಿರುವ ಮಾಹಿತಿಯನ್ನು ಕೇಂದ್ರ ಬಿಜೆಪಿ ನಾಯಕರ ಸಹಾಯದಿಂದ ಸಂಬಂಧ ಪಟ್ಟ ಅಧಿಕಾರಿಗಳಿಗೆ ಸಲ್ಲಿಸುತ್ತಿದ್ದಾರೆ.
      ಒಟ್ಟಿನಲ್ಲಿ ಡಿಕೆಶಿಗೆ ಒಂದು ಕಾಲದ ಗೆಳೆಯನಾಗಿದ್ದ ಮಾಜಿ ಶಾಸಕ ಸಿ.ಪಿ. ಯೋಗೇಶ್ವರ್ ಮತ್ತೆ ಮಗ್ಗಲ ಮುಳ್ಳಾಗುವ ಎಲ್ಲಾ ಲಕ್ಷಣಗಳು ಗೋಚರಿಸುತ್ತಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link