ಮೈಸೂರು ದಸರಾ ಮಹೋತ್ಸವಕ್ಕೆ ಚಾಲನೆ

ಬೆಂಗಳೂರು

         ವಿಶ್ವ ವಿಖ್ಯಾತ ಮೈಸೂರು ದಸರಾ ಮಹೋತ್ಸವಕ್ಕೆ ಸಾಂಸ್ಕತಿಕ ನಗರಿ ಮೈಸೂರಿನ ಚಾಮುಂಡಿ ಬೆಟ್ಟದಲ್ಲಿ ನಾಡ ದೇವತೆ ಚಾಮುಂಡೇಶ್ವರಿಗೆ ಅಗ್ರ ಪೂಜೆ ಸಲ್ಲಿಸುವುದರೊಂದಿಗೆ ಚಾಲನೆ ನೀಡಲಾಯಿತು.      

         ಇನ್ಫೋಸಿಸ್ ಪ್ರತಿಷ್ಠಾನದ ಅಧ್ಯಕ್ಷರಾದ ಸುಧಾಮೂರ್ತಿ ಚಾಮುಂಡೇಶ್ವರಿಯ ಉತ್ಸವ ಮೂರ್ತಿಗೆ ಪುಷ್ಟಾರ್ಚನೆ ಮಾಡುವ ಮೂಲಕ 409ನೇ ದಸರಾ ಮಹೋತ್ಸವವನ್ನು ಉದ್ಘಾಟಿಸಿದರು.

         ನಂತರ ಮಾತನಾಡಿದ ಅವರು, ಕರ್ನಾಟಕಕ್ಕೆ ಮೈಸೂರು ಅರಸರ ಸಾಂಸ್ಕತಿಕ ಮತ್ತು ಆಡಳಿತಾತ್ಮಕ ಕೊಡುಗೆಗಳನ್ನು ಸ್ಮರಿಸಿದರು.ರಾಜ್ಯದ ಸಮಗ್ರ ಅಭಿವೃದ್ಧಿಗಾಗಿ ಸರ್ಕಾರದ ಕಾರ್ಯಕ್ರಮಗಳೊಂದಿಗೆ ಕೈ ಜೋಡಿಸುವುದು ನಾಗರಿಕರ ಕರ್ತವ್ಯ ಎಂದರು.
ಹೆಬ್ಬಾಳ ಕೆರೆ ಪುನಶ್ಚೇತನಕ್ಕೆ ಇನ್ಫೋಸಿಸ್ ಪ್ರತಿಷ್ಠಾನ 30 ಕೋಟಿ ನೀಡಿದ್ದು, ನೆರೆ ಸಂತ್ರಸ್ಥ ಕೊಡಗಿನ ಜನರಿಗೆ 25 ಕೋಟಿ ರೂ. ವೆಚ್ಚದಲ್ಲಿ ಮನೆ ನಿರ್ಮಾಣ ಮಾಡಿಕೊಡಲಾಗುವುದು ಎಂದು ಪ್ರಕಟಿಸಿದರು.

        ಮುಖ್ಯಮಂತ್ರಿ ಹೆಚ್. ಡಿ. ಕುಮಾರಸ್ವಾಮಿ ಮಾತನಾಡಿ, ನೈಸರ್ಗಿಕವಾಗಿ ಸಂಪತ್ಭರಿತವಾಗಿರುವ ಕರ್ನಾಟಕ ಆರ್ಥಿಕವಾಗಿ ದೇಶದಲ್ಲೇ ಮುಂಚೂಣಿಯಲ್ಲಿದೆ. ಬೊಕ್ಕಸದಲ್ಲಿ ಹಣಕಾಸಿಗೆ ಯಾವುದೇ ಕೊರತೆಯಿಲ್ಲ. ಆದರೆ, ಲಭ್ಯ ಹಣಕಾಸಿನ ಬಳಕೆಯಲ್ಲಿ ಉಂಟಾಗಿರುವ ಲೋಪದೋಷ ಸರಿಪಡಿಸುವುದರತ್ತ ತಮ್ಮ ಸರ್ಕಾರ ಹೆಚ್ಚಿನ ಗಮನ ನೀಡಿದೆ. ರೈತರು ಎಷ್ಟೇ ಸಮಸ್ಯೆ ಎದುರಿಸಿದ್ದರೂ ಆತ್ಮಹತ್ಯೆಗೆ ಮುಂದಾಗದಂತೆ ಕುಮಾರಸ್ವಾಮಿ ಮನವಿ ಮಾಡಿಕೊಂಡರು.

        ಈ ಮಧ್ಯೆ ಕಲಾಮಂದಿರದಲ್ಲಿ ದಸರಾ ಚಲನಚಿತ್ರೋತ್ಸವವನ್ನು ಮುಖ್ಯಮಂತ್ರಿ ಉದ್ಘಾಟಿಸಿ, ಹಲವು ಚಿತ್ರನಟ, ನಟಿಯರನ್ನು ಸನ್ಮಾನಿಸಿದರು. ವಿಜಯ್ ರಾಘವೇಂದ್ರ, ರಿಷಬ್ ಶೆಟ್ಟಿ, ಫಿಲಂ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಚನ್ನೆಗೌಡ, ತಿಥಿ ಖ್ಯಾತಿಯ ಗಡ್ಡಪ್ಪ ಮತ್ತು ಸೆಂಚುರಿಗೌಡ, ನಿರ್ದೇಶಕ ಸತ್ಯ ಪ್ರಕಾಶ್, ನಟಿ ಪಾರುಲ್ ಯಾದವ್, ಹರ್ಷಿಕ ಪೂಣಚ್ಚ, ನಾಗತಿಹಳ್ಳಿ ಚಂದ್ರಶೇಖರ್ ಅವರನ್ನು ಸನ್ಮಾನ ಮಾಡಲಾಯಿತು. ಇಂದಿನಿಂದ 17ನೇ ತಾರೀಖಿನವರೆಗೂ ದಸರಾ ಚಲನಚಿತ್ರೋತ್ಸವ ನಡೆಯಲಿದೆ.

        ದಸರಾ ಮಹೋತ್ಸವ ಜರುಗಲಿರುವ 9 ದಿನಗಳ ಕಾಲವೂ ಮೈಸೂರಿನಲ್ಲಿ ಬಿಗಿ ಬಂದೋಬಸ್ತ್ ಏರ್ಪಡಿಸಲಾಗಿದೆ. ಭದ್ರತೆಗಾಗಿ ಸುಮಾರು 5600 ಕ್ಕೂ ಹೆಚ್ಚು ಪೊಲೀಸರನ್ನು ನಿಯೋಜಿಸಲಾಗಿದೆ. ನಗರದಲ್ಲಿ ವಾಹನ ದಟ್ಟಣೆ ನಿಯಂತ್ರಣೆ ಜೊತೆಗೆ ಪ್ರಮುಖ ಕಡೆಗಳಲ್ಲಿ ಸುಮಾರು 200 ವಿಶೇಷ ಕ್ಯಾಮರಾಗಳನ್ನು ಅಳವಡಿಸಲಾಗಿದೆ. ಮೈಸೂರು ದಸರಾ ವೀಕ್ಷಣೆಗೆ ಆಗಮಿಸುವ ದೇಶ- ವಿದೇಶಗಳ ಪ್ರವಾಸಿಗರ ಅನುಕೂಲಕ್ಕಾಗಿ ರಾಜ್ಯದ ರಾಜಧಾನಿ ಬೆಂಗಳೂರಿನಿಂದ ವಿಶೇಷ ವಿಮಾನ ಹಾಗೂ ಬಸ್ ಸೌಕರ್ಯಗಳನ್ನು ಕಲ್ಪಿಸಲಾಗಿದೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

 

Recent Articles

spot_img

Related Stories

Share via
Copy link
Powered by Social Snap