ಶಿವಮೊಗ್ಗ:
ಡೀಸೆಲ್ ಪೂರೈಕೆ ಟ್ಯಾಂಕರ್ ನಲ್ಲಿ ಬದಲಾವಣೆ ಮಾಡಿಕೊಂಡು ರಾಜ್ಯ ರಸ್ತೆ ಸಾರಿಗೆ ಸಂಸ್ಥೆಗೆ ವಂಚಿಸಿದ ಪ್ರಕರಣ ಬೆಳಕಿಗೆ ಬಂದಿದೆ.
ಈ ವಂಚನೆಯಲ್ಲಿ ಮುಖ್ಯವಾಗಿ ಮಂಗಳೂರು ಮೂಲದ ಟ್ಯಾಂಕರ್ ಮಾಲೀಕ ಹಾಗೂ ಚಾಲಕ, ಭಾರತ್ ಪೆಟ್ರೋಲಿಯಂ ಹಾಗೂ ಶಿವಮೊಗ್ಗ ಕೆಎಸ್ ಆರ್ ಟಿಸಿ ಅಧಿಕಾರಿಗಳು ಶಾಮೀಲಾಗಿರುವ ಶಂಕೆ ವ್ಯಕ್ತವಾಗಿದೆ.
ಶಿವಮೊಗ್ಗ ಕೆ.ಎಸ್.ಆರ್.ಟಿ.ಸಿ. ಡಿಪೋಗೆ ಮಂಗಳೂರಿನಿಂದ ಡೀಸೆಲ್ ಪೂರೈಕೆಯಾಗುತ್ತಿದ್ದು, ಟ್ಯಾಂಕರ್ ನಲ್ಲಿ 4,000 ಲೀಟರ್ ಸಾಮರ್ಥ್ಯದ 3 ಕಂಪಾರ್ಟ್ ಮೆಂಟ್ ಗಳು ಇವೆ. ಇದರಲ್ಲಿ ಡೀಸೆಲ್ ಅಳತೆ ಮಾಡುವ ಜಾಗದಲ್ಲಿ ಮಾರ್ಪಾಡು ಮಾಡಿದ್ದು, ಟ್ಯಾಂಕರ್ ನಲ್ಲಿ ಕಡಿಮೆ ಡೀಸೆಲ್ ಇದ್ದರೂ ಹೆಚ್ಚು ಅಳತೆ ತೋರಿಸುವಂತೆ ಬದಲಿಸಲಾಗಿದೆ.
ಕಂಪಾರ್ಟ್ ಮೆಂಟ್ ಒಳಗೆ ಹೀಗೆ ಬದಲಾವಣೆ ಮಾಡಿದ್ದರಿಂದ ಕಡಿಮೆ ಡೀಸೆಲ್ ಇದ್ದರೂ ಅಳತೆಗೋಲು ಹಾಕಿದಾಗ ಹೆಚ್ಚು ಡೀಸೆಲ್ ತೋರಿಸುತ್ತಿತ್ತು. ಶಿವಮೊಗ್ಗ ಕೆ.ಎಸ್.ಆರ್.ಟಿ.ಸಿ. ಡಿಪೋಗೆ ಸೋಮವಾರ ಸಂಜೆ ಮಂಗಳೂರಿನಿಂದ ಬಂದ 12,000 ಲೀಟರ್ ಡೀಸೆಲ್ ಸಾಮರ್ಥ್ಯದ ಟ್ಯಾಂಕರ್ ಅಧಿಕಾರಿಗಳು ಪರಿಶೀಲಿಸಿ ಅಳತೆಪಟ್ಟಿ ಹಾಕಿದ್ದು ಟ್ಯಾಂಕರ್ ನಲ್ಲಿದ್ದ ಡೀಸೆಲ್ ಪ್ರಮಾಣ ಪರಿಶೀಲಿಸಿದಾಗ ಬೇರೆ ಬೇರೆ ಅಳತೆ ಕಂಡು ಬಂದಿದೆ.
ಸುಮಾರು 255 ಲೀಟರ್ ಡೀಸೆಲ್ ಕಡಿಮೆ ಇರುವುದು ಗೊತ್ತಾಗಿದ್ದು, ತೂಕ ಮತ್ತು ಅಳತೆ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ನೀಡಲಾಗಿದೆ. ಅಧಿಕಾರಿಗಳು ಲಾರಿಯನ್ನು ವಶಪಡಿಸಿಕೊಂಡು ಪರಿಶೀಲನೆ ನಡೆಸಿದಾಗ ಟ್ಯಾಂಕರ್ ಮಾಲೀಕನ ವಂಚನೆ ಗೊತ್ತಾಗಿದೆ.
ಕೆಎಸ್ ಆರ್ ಟಿಸಿ ನೀಡಿದ ದೂರಿನ ಅನುಸಾರ ಲೀಗಲ್ ಮೆಟ್ರಾಲಜಿ ವಿಭಾಗದವರು ಲಾರಿ ಪರಿಶೀಲನೆ ನಡೆಸಿ, ವಂಚನೆ ನಡೆದಿರುವುದು ಖಚಿತ ಎಂದು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಅಧಿಕಾರಿಗಳು ಮುಂದಿನ ಕ್ರಮ ಕೈಗೊಂಡಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ