ಬೆಂಗಳೂರು:
ತಮಿಳುನಾಡಿನ ರಾಮನಾಥಪುರಂಗೆ 19 ಉಗ್ರರು ತಲುಪಿದ್ದು, ಕರ್ನಾಟಕ ಸೇರಿದಂತೆ ದಕ್ಷಿಣ ರಾಜ್ಯಗಳ ಮೇಲೆ ದಾಳಿ ನಡೆಸಲು ಸಂಚು ರೂಪಿಸಿದ್ದಾರೆ ಎಂದು ಸುಳ್ಳು ಕರೆ ಮಾಡಿದ್ದ ಮಾಜಿ ಸೈನಿಕನನ್ನು ಆವಲಹಳ್ಳಿ ಪೊಲೀಸರು ಬಂಧಿಸಿದ್ದಾರೆ.
ಲಾರಿ ಚಾಲಕ ಸುಂದರಮೂರ್ತಿ ಎಂಬಾತ ಬೆಂಗಳೂರು ಪೊಲೀಸ್ ನಿಯಂತ್ರಣ ಕೊಠಡಿಗೆ ಕರೆ ಮಾಡಿ, ಉಗ್ರರು ದಾಳಿ ಮಾಡಲು ಸಂಚು ರೂಪಿಸಿದ್ದಾರೆ ಎಂದು ಹೇಳಿದ್ದ. ಕರೆ ಬಂದ ನಂತರ ಪೊಲೀಸರು ಸುಂದರ್‌ಮೂರ್ತಿಯನ್ನು ಹುಡುಕಲು ಪ್ರಾರಂಭಿಸಿದ್ದರು. ಕಳೆದ ರಾತ್ರಿ 9 ಗಂಟೆ ಸುಮಾರಿಗೆ ಅವಲಹಳ್ಳಿ ಪೊಲೀಸರು ಮುನಿವೆಂಕಟೇಶ್ವರ ಲೇಔಟ್ ಮನೆಯಲ್ಲಿ ಸುಂದರ್‌ಮೂರ್ತಿಯನ್ನು ಬಂಧಿಸಿದ್ದಾರೆ.
ವಿಚಾರಣೆ ವೇಳೆ ಆರೋಪಿ ಸುಂದರ ಮೂರ್ತಿ, ನಾನು ಧ್ಯಾನ ಮಾಡುತ್ತೇನೆ. ಧ್ಯಾನ ಮಾಡಿದಾಗ ನನಗೆ 19 ಜನ ಉಗ್ರರು ಬಂದಿದ್ದಾರೆ ಎನ್ನುವುದು ತಿಳಿಯಿತು. ರಾಮನಾಥಪುರಂನಲ್ಲಿ ಬ್ಲಾಸ್ಟ್ ಮಾಡುತ್ತಾರೆ ಎನ್ನುವುದು ಗೊತ್ತಾಯಿತು. ಅದಕ್ಕಾಗಿ ಎಚ್ಚರಿಕೆ ನೀಡಲು ಕರೆ ಮಾಡಿದೆ ಎಂದು ಸುಂದರ್ ವಿಚಾರಣೆ ವೇಳೆ ಹೇಳಿಕೊಂಡಿದ್ದಾನೆ.
ಘಟನೆ ಬಗ್ಗೆ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಡಿಜಿಪಿ ನೀಲಮಣಿ ಎನ್.ರಾಜು ಅವರಿಂದ ಮಾಹಿತಿ ಪಡೆದಿದ್ದಾರೆ. ಇದೊಂದು ಸುಳ್ಳು ಕರೆ ಎಂದು ಇಲಾಖೆ ಹೇಳಿದ್ದರೂ ಕಟ್ಟೆಚ್ಚರದಿಂದ ಇರುವಂತೆ ಮುಖ್ಯಮಂತ್ರಿ ಸೂಚನೆ ನೀಡಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
