ಹಸುಗಳನ್ನು ಮಾರಾಟ ಮಾಡದಂತೆ ವಿಶೇಷ ಚಿಪ್ !!!?

ಬೆಂಗಳೂರು

      ರಾಜ್ಯಾದ್ಯಂತ ಹಾಲು ಕೊಡುವ ಹಸುಗಳಿಗೆ ಕಾಲು-ಬಾಯಿ ರೋಗ ವ್ಯಾಪಿಸಿದರೆ ಮತ್ತು ಪಶುಭಾಗ್ಯ ಯೋಜನೆಯಡಿ ನೀಡುವ ಹಸುಗಳನ್ನು ಮಾರಾಟ ಮಾಡದಂತೆ ತಡೆಗಟ್ಟಲು ದೇಶದಲ್ಲೇ ಮೊದಲು ಬಾರಿ ವಿಶೇಷ ಚಿಪ್ ಅನ್ನು ಸರ್ಕಾರ ಅಳವಡಿಸುತ್ತಿದೆ ಎಂದು ಪಶುಸಂಗೋಪನೆ ಮತ್ತು ಮೀನುಗಾರಿಕಾ ಸಚಿವ ವೆಂಕಟರಾವ್ ನಾಡಗೌಡ ಹೇಳಿದ್ದಾರೆ. 

      ತಮ್ಮನ್ನು ಭೇಟಿ ಮಾಡಿದ ಸುದ್ದಿಗಾರರ ಜತೆ ಮಾತನಾಡಿದ ಅವರು, ತಲಾ 6.20 ರೂಗೆ ಒಂದರಂತೆ ಖರೀದಿ ಮಾಡಲಾಗಿರುವ ಚಿಪ್‍ಗಳನ್ನು ಈಗಾಗಲೇ ರಾಜ್ಯದಲ್ಲಿರುವ ಐವತ್ತಾರು ಲಕ್ಷ ಹಸುಗಳಿಗೆ ಅಳವಡಿಸಲಾಗಿದೆ ಎಂದು ವಿವರಿಸಿದರು.

       ರಾಜ್ಯದಲ್ಲಿ 1.3 ಕೋಟಿ ಹಸುಗಳಿದ್ದು ಈ ಪೈಕಿ ಎಪ್ಪತ್ತೊಂದು ಲಕ್ಷ ಹಸುಗಳು ಹಾಲು ನೀಡುತ್ತಿವೆ. ಹೀಗೆ ಹಾಲು ನೀಡುತ್ತಿರುವ ಹಸುಗಳಿಗೆ ಚಿಪ್ ಅಳವಡಿಕೆ ಮಾಡಲಾಗುತ್ತಿದ್ದು ಪ್ರಾಯೋಗಿಕ ಯಶಸ್ಸಿನ ನಂತರವೇ ಚಿಪ್ ಅಳವಡಿಕೆ ಕಾರ್ಯ ಆರಂಭವಾಗಿದೆ ಎಂದರು.

      ಈ ಚಿಪ್ ಅಳವಡಿಕೆಯಿಂದ ಹಸುಗಳಿಗೆ ಕಾಲು-ಬಾಯಿ ರೋಗ ಬಂದರೆ ಮಾಹಿತಿ ಸಿಗಲಿದೆ. ಅದೇ ರೀತಿ ಪಶುಭಾಗ್ಯ ಯೋಜನೆಯಡಿ ಒದಗಿಸಲಾದ ಹಸುಗಳನ್ನು ಮಾರಾಟ ಮಾಡಿಕೊಳ್ಳುವ ಪ್ರವೃತ್ತಿಗಳಿಗೂ ಕಡಿವಾಣ ಬೀಳಲಿದೆ ಎಂದರು.

      ಪಶುಭಾಗ್ಯ ಯೋಜನೆಯಡಿ ನೀಡುವ ಹಸುಗಳನ್ನು ಆಕ್ರಮವಾಗಿ ಮಾರಾಟ ಮಾಡಿಕೊಳ್ಳಲಾಗುತ್ತಿದೆ ಎಂಬ ದೂರುಗಳಿದ್ದವು. ಈಗ ಚಿಪ್ ಅಳವಡಿಕೆಯ ನಂತರ ಹಸುಗಳು ರೈತನ ಬಳಿಯೇ ಇವೆಯೋ? ಯಾರಿಗಾದರೂ ಮಾರಾಟವಾಗಿದೆಯೋ?ಎಂಬುದು ತಿಳಿಯುತ್ತದೆ ಅಂತ ವಿವರಿಸಿದರು.

       ಈ ಮಧ್ಯೆ ಮಾಜಿ ಸಚಿವ ವಿನಯ್ ಕುಲಕರ್ಣಿ ಅವರ ಧಾರವಾಡದ ಫಾರಂನಲ್ಲಿದ್ದ ಹಸುಗಳಿಗೆ ಹೆಚ್ಚಿನ ಪ್ರಮಾಣದಲ್ಲಿ ಕಾಲು-ಬಾಯಿ ರೋಗ ಬಂದಿದ್ದು ಪತ್ತೆಯಾಗಿತ್ತು.ತಜ್ಞರ ತಂಡವನ್ನು ಕಳಿಸಿ ಸೂಕ್ತ ಚಿಕಿತ್ಸೆ ನೀಡಿಸಲಾಗಿದೆ ಎಂದು ಅವರು ಹೇಳಿದರು.

        ಕಾಲು-ಬಾಯಿ ರೋಗ ವಿಪರೀತ ಎನ್ನುವಷ್ಟು ಹರಡದಿದ್ದರೂ ಕೃಷಿ ಮೇಳಗಳಂತಹ ಜಾಗಗಳಲ್ಲಿ ಜಾನುವಾರುಗಳ ಪ್ರದರ್ಶನ ನಡೆದಾಗ ಹೊರರಾಜ್ಯಗಳಿಂದ ಬರುವ ಜಾನುವಾರುಗಳಲ್ಲಿದ್ದ ರೋಗ ಇಲ್ಲಿನ ಜಾನುವಾರುಗಳಿಗೂ ಹರಡಿದೆ ಎಂದರು.

ಮೇವು ರಫ್ತಿಗೆ ನಿರ್ಭಂಧ

         ಮುಂಬರುವ ಬೇಸಿಗೆಯಲ್ಲಿ ಜಾನುವಾರಿಗಳಿಗೆ ಮೇವಿನ ಕೊರತೆ ಆಗದಂತೆ ನೋಡಿಕೊಳ್ಳಲು ಈಗಿನಿಂದಲೇ ಮೇವು ಸಂಗ್ರಹ ಕಾರ್ಯವನ್ನು ಆರಂಭಿಸಲು ಈಗಾಗಲೇ ಸೂಚನೆ ನೀಡಲಾಗಿದ್ದು ಯಾವ ಕಾರಣಕ್ಕೂ ಹೊರರಾಜ್ಯಗಳಿಗೆ ಮೇವು ರಫ್ತಾಗದಂತೆ ನೋಡಿಕೊಳ್ಳಲು ಜಿಲ್ಲಾಧಿಕಾರಿಗಳಿಗೆ ಆದೇಶ ನೀಡಲಾಗಿದೆ ಎಂದರು.

         ಜಾನುವಾರುಗಳಿಗಾಗಿ ಮೇವು ಬೆಳೆಯುವ ಕಾರ್ಯವೂ ಪ್ರಗತಿಯಲ್ಲಿದ್ದು ಈಗಾಗಲೇ ಮೇವು ಬೆಳೆಯಲು ಪೂರಕವಾಗಿ ಹದಿನೈದು ಕೋಟಿ ರೂ ಬೆಲೆ ಬಾಳುವ ಬೀಜಗಳನ್ನು ರೈತರಿಗೆ ಒದಗಿಸಲಾಗಿದೆ ಎಂದು ಅವರು ಹೇಳಿದರು.

         ಎಲ್ಲಿ ಮೇವು ಲಭ್ಯವಾಗಲಿದೆಯೋ?ಅದನ್ನು ಸದರಿ ಜಿಲ್ಲೆಗಳಲ್ಲೇ ಸಂಗ್ರಹ ಮಾಡಲಾಗುವುದು.ಕೊರತೆ ಇರುವ ಕಡೆಗಳಿಂದ ಬೇಡಿಕೆ ಬಂದರೆ ಪೂರೈಕೆ ಮಾಡಲಾಗುವುದು ಎಂದು ವಿವರಿಸಿದರು.

ಮೆಕ್ಕೆ ಜೋಳಕ್ಕೆ ಬೆಂಬಲಬೆಲೆ

         ರಾಜ್ಯಾದ್ಯಂತ ಮೆಕ್ಕೆ ಜೋಳವನ್ನು ಕ್ವಿಂಟಾಲ್‍ಗೆ 1450 ರೂಗಳಂತೆ ಬೆಂಬಲ ಬೆಲೆ ನೀಡಿ ಖರೀದಿ ಮಾಡಲು ತೀರ್ಮಾನಿಸಲಾಗಿದ್ದು ಈಗಾಗಲೇ ಮುಖ್ಯಮಂತ್ರಿಗಳಿಗೆ ಈ ಕುರಿತು ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಹೇಳಿದರು.

          ಕಳೆದ ವರ್ಷ ಮೆಕ್ಕೆ ಜೋಳಕ್ಕೆ 1350 ರೂ ಬೆಂಬಲ ಬೆಲೆ ನೀಡಿ ಖರೀದಿ ಮಾಡಲಾಗಿತ್ತು.ಆದರೆ ಈಗ ಮಾರುಕಟ್ಟೆಯಲ್ಲಿ ಮೆಕ್ಕೆ ಜೋಳಕ್ಕೆ ಕ್ವಿಂಟಾಲ್‍ಗೆ 1400 ರೂ ಬೆಲೆಯಿದ್ದು ನಾವೀಗ ಐವತ್ತು ರೂ ಬೆಲೆಯನ್ನು ಹೆಚ್ಚಾಗಿ ನೀಡುವುದರಿಂದ ಮಾರುಕಟ್ಟೆಯಲ್ಲಿ ಮೆಕ್ಕೆ ಜೋಳದ ಬೆಲೆ ಹೆಚ್ಚಾಗಲಿದೆ.ರೈತರಿಗೆ ಅನುಕೂಲವಾಗಲಿದೆ.

         ಇನ್ನು ಬತ್ತಕ್ಕೆ ಬೆಂಬಲ ಬೆಲೆ ನೀಡಲು ನಿರ್ಧರಿಸಲಾಗಿದ್ದು ಎಪ್ಪತ್ತೈದು ಕೆಜಿ ಬತ್ತಕ್ಕೆ 1700 ರೂಗಳಂತೆ ಬೆಲೆ ನೀಡಲಾಗುವುದು ಎಂದು ಇದೇ ಸಂದರ್ಭದಲ್ಲಿ ಅವರು ವಿವರಿಸಿದರು.

ವಿಶೇಷ ಕುರಿ ಉತ್ಪಾದನೆ

         ರಾಜ್ಯದಲ್ಲಿ ಮಾಂಸದ ಬೇಡಿಕೆಯನ್ನು ಸಮರ್ಪಕವಾಗಿ ಪೂರೈಕೆ ಮಾಡುವ ದೃಷ್ಟಿಯಿಂದ ವಿಶೇಷ ತಳಿಯ ಕುರಿಯನ್ನು ಅಭಿವೃದ್ಧಿಪಡಿಸಲಾಗುತ್ತಿದ್ದು ನಾರಿ ಸುವರ್ಣ ಎಂಬ ಹೆಸರಿನ ಈ ಕುರಿಗೆ ಐದು ಬಗೆಯ ವಿಶೇಷ ಜೀನ್ಸ್‍ಗಳನ್ನು ಅಳವಡಿಸಲಾಗಿದೆ ಎಂದರು.

         ಮೊದಲನೆಯದಾಗಿ ಈ ತಳಿ ಒಂದು ಕುರಿಯ ಬದಲು,ಅವಳಿ ಕುರಿ ಮರಿಗಳಿಗೆ ಜನ್ಮ ನೀಡುತ್ತದೆ . ಎರಡನೆಯದಾಗಿ , ಬನ್ನೂರು ಕುರಿಯ ಸ್ವಾದ ಇರಲಿದ್ದು,ಮೂರನೆಯದಾಗಿ,ಇಸ್ರೇಲ್ ಮಾದರಿಯಲ್ಲಿ ಹೆಚ್ಚು ಹಾಲನ್ನು ನೀಡುತ್ತದೆ.ನಾಲ್ಕನೆಯದಾಗಿ ಹೆಚ್ಚಿನ ತೂಕವನ್ನು ಹೊಂದಿರುತ್ತದೆ ಎಂದು ಅವರು ಹೇಳಿದರು.

         ಹತ್ತರಿಂದ ಇಪ್ಪತ್ತು ಕುರಿಗಳನ್ನು ಹೊಂದಿರುವ ರೈತರು ಈ ತಳಿಯ ಗಂಡು ಕುರಿಯನ್ನು ತಲಾ ಐದು ಸಾವಿರ ರೂಗಳಿಗೆ ಪೂರೈಕೆ ಮಾಡಲಾಗುವುದು.ಉಳಿದಂತೆ ಇಪ್ಪತ್ತು ಸಾವಿರ ರೂಗಳನ್ನು ಸರ್ಕಾರವೇ ಭರಿಸಲಿದೆ ಎಂದು ಅವರು ಹೇಳಿದರು.

          ಕೆಎಂಎಫ್ ಈಗ ಸುಧಾರಣೆಯ ಹಾದಿಯತ್ತ ನಡೆದಿದ್ದು ಈ ಹಿಂದೆ ಅದರ ಬಗ್ಗೆ ರೇವಣ್ಣ ವ್ಯಕ್ತಪಡಿಸುತ್ತಿದ್ದ ಅಸಮಾಧಾನ ಸಹಜವಾದುದು.ಅದು ಈ ಮಟ್ಟಕ್ಕೆ ಬೆಳೆಯಲು ರೇವಣ್ಣ ಅವರ ಕೊಡುಗೆ ದೊಡ್ಡದು.ಸಹಜವಾಗಿಯೇ ಅದು ಹಾಳಾಗುತ್ತಿದೆ ಎಂದಾಗ ಅವರು ಬೇಸರ ವ್ಯಕ್ತಪಡಿಸುತ್ತಾರೆ ಎಂದು ಹೇಳಿದರು.

         ಜಿ.ಎಸ್.ಟಿ ಜಾರಿಗೆ ಬಂದ ಮೇಲೆ ಹೊರ ರಾಜ್ಯಗಳಿಂದ ಬರುವ ಯಾವುದೇ ಹಾಲನ್ನು ನಿರ್ಭಂಧ ಮಾಡಲು ಸಾಧ್ಯವಿಲ್ಲ.ಬದಲಿಗೆ ನಮಗಿರುವ ಮಾರುಕಟ್ಟೆಯನ್ನೇ ಬೆಳೆಸಿಕೊಂಡು ನಂದಿನಿ ಹಾಲು ಹೆಚ್ಚು ಮಾರಾಟವಾಗುವಂತೆ ನೋಡಿಕೊಳ್ಳಲಾಗುತ್ತಿದೆ ಎಂದು ಇದೇ ಸಂದರ್ಭದಲ್ಲಿ ಪ್ರಶ್ನೆಯೊಂದಕ್ಕೆ ಹೇಳಿದರು.

         ಸ್ಪರ್ಧಾತ್ಮಕ ದರದಲ್ಲಿ ಹಾಲು ಪೂರೈಕೆ ಕ್ರಮವಾದರೆ ನಂದಿನಿ ಹಾಲನ್ನು ಮತ್ತಷ್ಟು ಹೆಚ್ಚು ಮಾರಾಟ ಮಾಡಬಹುದು.ವರ್ಷದ ಮೂರು ತಿಂಗಳ ಕಾಲ ಹಾಲಿನ ಉತ್ಪಾದನೆ ವಿಪರೀತವಾಗುತ್ತದೆ.ಆನಂತರ ಸಹಜ ಸ್ಥಿತಿಗೆ ಮರಳುತ್ತಿದೆ.ಹೀಗೆ ಹಾಲು ಹೆಚ್ಚಾಗಿ ಲಭ್ಯವಾದ ಕಾಲದಲ್ಲಿ ಅದನ್ನು ಪೌಡರ್ ಮಾಡಲಾಗುತ್ತಿದೆ ಎಂದು ಅವರು ಹೇಳಿದರು.

        ತುಮಕೂರು ಜಿಲ್ಲೆಯ ಶಿರಾದಲ್ಲಿ ಕುರಿ,ಮೇಕೆ ಮಾಂಸ ಪೂರೈಕೆಗೆ ಪೂರಕವಾಗಿ ಕಸಾಯಿಖಾನೆಯೊಂದನ್ನು ಪ್ರಾರಂಭಿಸಲು ಸರ್ಕಾರ ನಿರ್ಧರಿಸಿದ್ದು ಹಂತ ಹಂತವಾಗಿ ವಿಭಾಗೀಯ ಮಟ್ಟದಲ್ಲಿ ವಿಸ್ತರಿಸಲಾಗುವುದು ಎಂದು ಹೇಳಿದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap